Inflation: ಈ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಹಣದುಬ್ಬರ ದರ ಕಡಿಮೆ ಆಗುವ ನಿರೀಕ್ಷೆಯಿದೆ ಎಂದ ಆರ್ಬಿಐ ಗವರ್ನರ್
2022-23ರ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಹಣದುಬ್ಬರ ದರ ಸುಧಾರಿಸುವ ನಿರೀಕ್ಷೆ ಇದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷ 2022-23ರ ದ್ವಿತೀಯಾರ್ಧದಲ್ಲಿ ಭಾರತದ ಹಣದುಬ್ಬರ ದರ ಕ್ರಮೇಣ ಕಡಿಮೆ ಆಗುತ್ತಾ ಬರುತ್ತದೆ ಎಂಬ ನಿರೀಕ್ಷೆಯಿದೆ. ಬಿಗುವಾದ ಹಣಕಾಸು ನೀತಿಯ ಹಿನ್ನೆಲೆಯಲ್ಲಿ ಇಂಥದ್ದೊಂದು ಬೆಳವಣಿಗೆ ಆಗಲಿದೆ ಎಂದು ಆರ್ಬಿಐ (RBI) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋಥ್ ಆಯೋಜಿಸಿದ್ದ ಕೌಟಿಲ್ಯ ಎಕನಾಮಿಕ್ ಕಾನ್ಕ್ಲೇವ್ನಲ್ಲಿ ದಾಸ್ ಅವರು ಈ ಮಾತನ್ನು ಹೇಳಿದ್ದಾರೆ. ಸದ್ಯಕ್ಕೆ ಚಿಲ್ಲರೆ ಹಣದುಬ್ಬರ ದರವು ಸತತ ಐದನೇ ತಿಂಗಳು ಆರ್ಬಿಐನ ಮೇಲ್ಸ್ತರದ ಸಹಿಷ್ಣುತಾ ದರವಾದ ಶೇ 6ಕ್ಕಿಂತ ಹೆಚ್ಚಿದೆ. ಇದರ ಹೊರತಾಗಿ ದೇಶೀಯ ಸಗಟು ದರ ಸೂಚ್ಯಂಕ ಹಣದುಬ್ಬರವು ಒಂದು ವರ್ಷದಿಂದ ಎರಡಂಕಿಯಲ್ಲಿದೆ. ಸದ್ಯಕ್ಕೆ ಆರ್ಬಿಐಗೆ ಸೂಚನೆ ನೀಡಿರುವಂತೆ ಚಿಲ್ಲರೆ ಹಣದುಬ್ಬರ ದರವನ್ನು 4 ಪರ್ಸೆಂಟ್ನ ಆಚೀಚೆ ಮೇಲ್ಸ್ತರದ 2 ಹಾಗೂ ಕೆಳಸ್ತರದ 2 ಪರ್ಸೆಂಟ್ ಅಂದರೆ, ಎರಡೂ ಬದಿಯಲ್ಲಿ 200 ಬೇಸಿಸ್ ಪಾಯಿಂಟ್ಸ್ನಲ್ಲಿ ನಿರ್ವಹಿಸುವಂತೆ ಸೂಚಿಸಲಾಗಿದೆ.
2021ರ ಏಪ್ರಿಲ್ನಿಂದ ಜೂನ್ ಮಧ್ಯೆ ಭಾರತವು ಬಹಳ ತೀಕ್ಷ್ಣ ಸ್ವರೂಪದ ಕೊವಿಡ್-19 ಎರಡನೇ ಅಲೆಯನ್ನು ಅನುಭವಿಸಿತು. ಇದರಿಂದಾಗಿ ಸ್ಥಳೀಯ ಲಾಕ್ಡೌನ್ ಮಾಡಬೇಕಾಯಿತು. ಅದರಿಂದಾಗಿ ಪೂರೈಕೆ ಜಾಲಕ್ಕೆ ಸಮಸ್ಯೆಯಾಯಿತು. ರೀಟೇಲ್ ಮಾರ್ಜಿನ್ಸ್ ಹೆಚ್ಚಳವಾಗಿ, ಅದರ ಪರಿಣಾಮ ಎಂಬಂತೆ 2021ರ ಮೇ- ಜೂನ್ ತಿಂಗಳಲ್ಲಿ ಹಣದುಬ್ಬರ ದರವು ಶೇ 6ಕ್ಕಿಂತ ಮೇಲೇರಿತು. ಇನ್ನು ಈಗಿನ ಜಾಗತಿಕ ಪದಾರ್ಥಗಳ ಬೆಲೆ ಏರಿಕೆ ಸಹ ಹಣದುಬ್ಬರದ ಮೇಲೆ ಒತ್ತಡ ಹೇರಿತು. 2020-21ರ ಮೊದಲ ತ್ರೈಮಾಸಿಕದಲ್ಲಿ ರಿಯಲ್ ಜಿಡಿಪಿ ಶೇ 23.8ರಷ್ಟು ಭಾರೀ ಪ್ರಮಾಣದಲ್ಲಿ ನೆಲ ಕಚ್ಚಿತು. ಒಟ್ಟಾರೆ ನೋಡಿದಾಗ 2020-21ರ ಹಣಕಾಸು ವರ್ಷದಲ್ಲಿ ಪೂರ್ತಿ ವರ್ಷಕ್ಕೆ ಶೇ 6.6ರಷ್ಟು ಇಳಿಕೆಯಾಯಿತು.
ಆಹಾರ ಬೆಲೆಗಳ ಬಗ್ಗೆ ಮಾತನಾಡಿದ ದಾಸ್, ಜಾಗತಿಕ ಮಟ್ಟದಲ್ಲೇ ಮಾರ್ಚ್ನಲ್ಲಿ ಐತಿಹಾಸಿಕ ಎತ್ತರವನ್ನು ತಲುಪಿತು. ಆ ಪರಿಣಾಮವನ್ನು ಖಾದ್ಯ ತೈಲ, ದೇಶೀ ಗೋಧಿ ಬೆಲೆ ಮತ್ತಿತರದರಲ್ಲಿ ಕಾಣಿಸಿತು ಎಂದು ಹೇಳಿದ್ದಾರೆ. ಹಣದುಬ್ಬರ ಒತ್ತಡ ಸಾಮಾನ್ಯವಾಗಿರುವುದರಿಂದ ಹಣಕಾಸು ನೀತಿ ಸಮಿತಿಯು ಏಪ್ರಿಲ್ ಮತ್ತು ಜೂನ್ ಸಭೆಯಲ್ಲಿ 2022-23ರ ಹಣದುಬ್ಬರ ಪರಿಷ್ಕೃತ ದರವನ್ನು ಶೇ 6.7 ಎಂದಿದೆ. ಇದರ ಜತೆಗೆ ರೆಪೋ ದರವನ್ನು ಮೇ ಹಾಗೂ ಜೂನ್ನಲ್ಲಿ ಕ್ರಮವಾಗಿ 40 ಮತ್ತು 50 ಬೇಸಿಸ್ ಪಾಯಿಂಟ್ಸ್ ಏರಿಕೆ ಮಾಡಲಾಗಿದೆ.