Elon Musk: ಟ್ವಿಟ್ಟರ್ ಖರೀದಿ ಒಪ್ಪಂದ ರದ್ದು ಮಾಡಿದ ಎಲಾನ್ ಮಸ್ಕ್; ಕೊರ್ಟ್ನಲ್ಲೇ ಕೊನೆಯಾಗುತ್ತದೆಯೇ 44 ಬಿಲಿಯನ್ ಡಾಲರ್ ಡೀಲ್!
ಟ್ವಿಟ್ಟರ್ನಿಂದ ನೀಡಿರುವ ಮಾಹಿತಿ ತಪ್ಪಾಗಿದೆ ಎಂದು ಆರೋಪಿಸಿ ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ ಅವರು ಆ ಕಂಪೆನಿಯ ಖರೀದಿ ಒಪ್ಪಂದವನ್ನು ರದ್ದು ಮಾಡಿರುವುದಾಗಿ ಘೋಷಿಸಿದ್ದಾರೆ.
ಟ್ವಿಟ್ಟರ್ ಕಂಪೆನಿ ಖರೀದಿ ವ್ಯವಹಾರ ಒಪ್ಪಂದವನ್ನು ರದ್ದುಗೊಳಿಸುತ್ತಿರುವುದಾಗಿ ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ (Elon Musk) ಹೇಳಿದ್ದಾರೆ. ಈ ಕಂಪೆನಿಯ ಷೇರುಗಳನ್ನೆಲ್ಲ ಸಾರ್ವಜನಿಕರಿಂದ ಖರೀದಿಸಿ, ಖಾಸಗಿ ಸಂಸ್ಥೆಯಾಗಿ ಮಾಡಿಕೊಳ್ಳಬೇಕೆಂಬ ಇರಾದೆ ಮಸ್ಕ್ಗೆ ಇತ್ತು. ಆದರೆ ಟ್ವಿಟ್ಟರ್ ಕಂಪೆನಿಯು ಸ್ಪಾಮ್ ಬಾಟ್ಸ್ (ನಕಲ ಖಾತೆಗಳ) ಸಂಖ್ಯೆಯನ್ನು ಸರಿಯಾಗಿ ನೀಡದೆ ದಾರಿ ತಪ್ಪಿಸಿದೆ ಎಂಬ ಕಾರಣಕ್ಕೆ ಈ ಒಪ್ಪಂದವನ್ನು ರದ್ದು ಮಾಡಿಕೊಳ್ಳುವುದಾಗಿ ಅವರು ಕಾರಣವನ್ನು ಸಹ ನೀಡಿದ್ದಾರೆ. ಅಂದಹಾಗೆ ಈ ಖರೀದಿ ಒಪ್ಪಂದವು 4400 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ್ದಾಗಿತ್ತು. ಒಪ್ಪಂದದಂತೆ ಟ್ವಿಟ್ಟರ್ ಅದರ ಜವಾಬ್ದಾರಿಯನ್ನು ಒಗ್ಗೂಡಿಸಿಲ್ಲ. ಸೋಷಿಯಲ್ ಮೀಡಿಯಾ ಸೇವೆಯಲ್ಲಿ ಬಾಟ್ಸ್ ಹೇಗೆ ಮೌಲ್ಯಮಾಪನ ಮಾಡುತ್ತದೆ ಎಂದು ಮಾಹಿತಿ ನೀಡಿಲ್ಲ ಎಂದು ಎಲಾನ್ ಮಸ್ಕ್ ಅವರು ಶುಕ್ರವಾರದಂದು ಟ್ವಿಟ್ಟರ್ಗೆ ಪತ್ರ ಬರೆದಿದ್ದಾರೆ. ಇದು ನಿಯಂತ್ರಕರ ಫೈಲಿಂಗ್ ಭಾಗವಾಗಿ ಬರೆದ ಪತ್ರವಾಗಿದೆ.
ಕಳೆದ ಕೆಲ ತಿಂಗಳಿಂದ ಮಸ್ಕ್ ಈ ಬಗ್ಗೆ ದೂರನ್ನು ಮಾಡುತ್ತಲೇ ಬಂದಿದ್ದಾರೆ. ಈ ಸಾಮಾಜಿಕ ಮಾಧ್ಯಮದ ಬಳಕೆದಾರರ ಪಟ್ಟಿಯಲ್ಲಿ ಬಾಟ್ಸ್ಗಳನ್ನು ಸೇರಿಸಲಾಗಿದೆ ಎನ್ನುತ್ತಿದ್ದರು. ಆದರೆ ಕಂಪೆನಿಯಿಂದ ಇದನ್ನು ನಿರಾಕರಿಸುತ್ತಾ ಬರಲಾಗಿತ್ತು. ಒಟ್ಟಾರೆ ಬಳಕೆದಾರರಲ್ಲಿ ಬಾಟ್ಸ್ ಪ್ರಮಾಣ ಶೇ 5ಕ್ಕಿಂತ ಕಡಿಮೆ ಇದೆ ಎನ್ನುತ್ತಿದೆ. ಈಚೆಗೆ ಪತ್ರಿಕಾ ಹೇಳಿಕೆಯಲ್ಲೂ ಟ್ವಿಟ್ಟರ್ ಅಧಿಕಾರಿಗಳು ಇದೇ ಮಾತನ್ನೇ ಹೇಳಿದ್ದರು. ತಾವು ನೀಡಿದ ಮಾಹಿತಿ ನಿಖರವಾಗಿದೆ ಎಂದಿದ್ದರು.
ಬಾಟ್ಸ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡುವಂತೆ ಎಲಾನ್ ಮಸ್ಕ್ ಮತ್ತು ಅವರ ತಂಡ ಹಲವು ಸಲ ಕೇಳಿದ ಹೊರತಾಗಿಯೂ ಟ್ವಿಟ್ಟರ್ನಿಂದ ಸಮಾಧಾನಕರವಾದ ಉತ್ತರ ಸಿಕ್ಕಿಲ್ಲ. ಸ್ವತಃ ಎಲಾನ್ ಮಸ್ಕ್ಗೆ ಬಾಟ್ಸ್ ಪ್ರಮಾಣ ಶೇ 5ಕ್ಕಿಂತ ಹೆಚ್ಚಿದೆ ಎಂಬ ಬಲವಾದ ನಂಬಿಕೆ ಇದ್ದು, ಅವರಿಗೆ ಹೀಗೆ ಎನಿಸಲು ಏನು ಕಾರಣ ಎಂಬುದಕ್ಕೆ ಮಾತ್ರ ಸಾಕ್ಷ್ಯ ನೀಡಿಲ್ಲ. ಜತೆಗೆ ಟ್ವಿಟ್ಟರ್ ತನ್ನ ಸಾಮಾನ್ಯ ವ್ಯವಹಾರವನ್ನು ಸಹ ಮುನ್ನಡೆಸಲು ವಿಫಲವಾಗಿದೆ ಎಂಬುದು ಮಸ್ಕ್ ವಾದ. ಟ್ವಿಟ್ಟರ್ನಿಂದ ಈಗ ನೇಮಕಾತಿಯನ್ನೂ ನಿಲ್ಲಿಸಲಾಗಿದೆ. ಜತೆಗೆ ಕೆಲವು ಹಿರಿಯ ನಾಯಕತ್ವ ಸ್ಥಾನದಲ್ಲಿದ್ದವರು ಮತ್ತು ಹಿರಿಯ ಅಧಿಕಾರಿಗಳನ್ನು ಉದ್ಯೋಗಿಗಳಿಂದ ತೆಗೆಯಲಾಗಿದೆ.
ವಿಲೀನ ಒಪ್ಪಂದದ ವಾಸ್ತವ ಉಲ್ಲಂಘನೆಯನ್ನು ಟ್ವಿಟ್ಟರ್ ಮಾಡಿದೆ ಅಂತಲೂ ಟ್ವಿಟ್ಟರ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಅಂದಹಾಗೆ ಮಸ್ಕ್ ಮತ್ತು ಟ್ವಿಟ್ಟರ್ ಮಧ್ಯೆ ಆಗಿರುವ ಒಪ್ಪಂದದಲ್ಲಿ ಒಂದು ಷರತ್ತು ಸಹ ಇದೆ. ಅದರ ಪ್ರಕಾರವಾಗಿ ಯಾವ ಕಡೆಯಿಂದ ಒಪ್ಪಂದ ರದ್ದಾಗುತ್ತದೋ ಅವರು ಕೆಲವು ಸನ್ನಿವೇಶದಲ್ಲಿ ರದ್ದತಿ ಶುಲ್ಕವಾಗಿ 100 ಕೋಟಿ ಅಮೆರಿಕನ್ ಡಾಲರ್ ನೀಡಬೇಕಾಗುತ್ತದೆ. ಇದೀಗ ಬಾಟ್ಸ್ ಕಾರಣ ನೀಡಿ ಒಪ್ಪಂದವನ್ನು ರದ್ದು ಮಾಡಿಕೊಂಡಿದ್ದಾರೆ ಮಸ್ಕ್. ಇಷ್ಟು ಕಾರಣ ಸಾಕಾಗುತ್ತದೆಯೇ ಎಂಬ ಬಗ್ಗೆ ಕಾನೂನು ತಜ್ಞರು ಚರ್ಚೆ ನಡೆಸುತ್ತಿದ್ದಾರೆ.
ಆದರೆ, ರದ್ದತಿ ಶುಲ್ಕ ಅಂತ ಪಾವತಿಸಿಯೂ ಹಾಗೇ ಒಪ್ಪಂದದಿಂದ ಹೊರಬೀಳುವುದಕ್ಕೆ ಎಲಾನ್ ಮಸ್ಕ್ಗೆ ಸಾಧ್ಯವಿಲ್ಲ. ಏಕೆಂದರೆ ವಿಲೀನ ಒಪ್ಪಂದದಲ್ಲಿ ಕೆಲವು ಪರ್ಫಾರ್ಮೆನ್ಸ್ ನಿಯಮಾವಳಿಗಳು ಇದ್ದು, ಅದರ ಪ್ರಕಾರವಾಗಿ ಈ ಖರೀದಿ ವ್ಯವಹಾರ ಮಾಡಲೇಬೇಕೆಂದು ಮಸ್ಕ್ ಅವರನ್ನು ಟ್ವಿಟ್ಟರ್ ಒತ್ತಡ ಹಾಕಬಹುದು. ಇದರ ಒಟ್ಟಾರೆ ಸಾರಾಂಶ ಏನೆಂದರೆ, ಈ ಒಪ್ಪಂದವು ಬಹುತೇಕ ಕೋರ್ಟ್ ಮೆಟ್ಟಿಲೇರುವುದು ಖಾತ್ರಿ ಎಂಬಂತಾಗಿದೆ.
ಈಗಿನ ಸನ್ನಿವೇಶದಲ್ಲಿ ಟ್ವಿಟ್ಟರ್ಗೆ ಒಪ್ಪಂದ ರದ್ದತಿ ಶುಲ್ಕವಾಗಿ 100 ಕೋಟಿ ಅಮೆರಿಕನ್ ಡಾಲರ್ ಬರುವುದಕ್ಕಿಂತ ಹೆಚ್ಚಾಗಿ ಮಸ್ಕ್ ಕಂಪೆನಿಯನ್ನು ಖರೀದಿಸುವುದು ಬೇಕಾಗಿದೆ.