ನವದೆಹಲಿ, ಡಿಸೆಂಬರ್ 6: ಗೃಹಸಾಲ ಪಡೆದಿರುವವರು ಕಳೆದ ಎರಡು ವರ್ಷಗಳಿಂದಲೂ ರಿಪೋ ದರ ಇಳಿಕೆಗೆ ಬಕಪಕ್ಷಿಗಳಂತೆ ಕಾಯುತ್ತಿರುವುದುಂಟು. ಈ ಬಾರಿ ಆರ್ಬಿಐನ ಎಂಪಿಸಿ ಸಭೆಯಲ್ಲೂ ರಿಪೋ ದರ ಇಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಸಾಲ ಪಡೆದಿರುವವರು ಇನ್ನಷ್ಟು ತಿಂಗಳು ಕಾಯಬೇಕಾಗಬಹುದು. ಆದರೆ, ರಿಪೋ ದರ ಇಳಿಸದೇ ಇದ್ದರೂ ಸಾಲದ ದರ ಕಡಿಮೆ ಆಗುವಂತಹ ಉಪಾಯವನ್ನು ಆರ್ಬಿಐ ಕಂಡುಕೊಂಡಿದೆ. ಅದು ಸಿಆರ್ಆರ್ ಕಡಿತ. ಬ್ಯಾಂಕ್ನ ಕ್ಯಾಷ್ ರಿಸರ್ವ್ ರೇಶಿಯೋವನ್ನು ಶೇ. 4.5ರಿಂದ ಶೇ. 4ಕ್ಕೆ ಇಳಿಸಿದೆ. ಇದರಿಂದ ಬ್ಯಾಂಕುಗಳಿಂದ ಹಣದ ಹರಿವು ಹೆಚ್ಚಾಗಿ ಆ ಮೂಲಕ ಸಾಲದ ದರ ಕಡಿಮೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆರ್ಥಿಕ ತಜ್ಞರ ಪ್ರಕಾರ ಮುಂಬರುವ ಎಂಪಿಸಿ ಸಭೆಗಳಲ್ಲಿ ಬಡ್ಡಿದರ ಇಳಿಸುವ ಬಗ್ಗೆ ನಿರ್ಧಾರಗಳಾಗಬಹುದು. 2025ರ ಕ್ಯಾಲಂಡರ್ ವರ್ಷದಲ್ಲಿ ರಿಪೋ ದರ 50ರಿಂದ 100 ಮೂಲಾಂಕಗಳಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ. ಸದ್ಯ ಶೇ. 6.50ರಲ್ಲಿರುವ ರಿಪೋ ದರ ಅಥವಾ ಬಡ್ಡಿದರ ಮುಂದಿನ ವರ್ಷ ಶೇ. 5.5ರವರೆಗೂ ಇಳಿಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಸಿಆರ್ಆರ್ 50 ಮೂಲಾಂಕಗಳಷ್ಟು ಇಳಿಕೆ; ಶೇ. 4ಕ್ಕೆ ಇಳಿದ ಕ್ಯಾಷ್ ರಿಸರ್ವ್ ರೇಶಿಯೋ; ಆರ್ಥಿಕತೆಗೆ ಪುಷ್ಟಿ ಸಿಗುವ ನಿರೀಕ್ಷೆ
ಜಿಡಿಪಿ ಈ ಆರ್ಥಿಕ ವರ್ಷದ ಎರಡನೇ ಕ್ವಾರ್ಟರ್ನಲ್ಲಿ ನಿರೀಕ್ಷಿಗಿಂತ ಬಹಳ ಕಡಿಮೆಗೊಂಡಿದೆ. ಈ ಕಾರಣಕ್ಕೆ ಬಡ್ಡಿದರ ಇಳಿಸಬೇಕು ಎನ್ನುವ ಒತ್ತಾಯ ಮತ್ತು ಒತ್ತಡ ಆರ್ಬಿಐ ಮೇಲಿದೆ. ಆದರೂ ಕೂಡ ಹಣದುಬ್ಬರ ಹೆಚ್ಚಿನ ಮಟ್ಟದಲ್ಲಿರುವುದರಿಂದ ಆರ್ಬಿಐ ರಿಪೋ ದರ ಇಳಿಸುವ ಗೋಜಿಗೆ ಹೋಗಿಲ್ಲ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, ರಿಪೋ ದರ ಈಗ ಇಳಿಸಿದರೆ ರುಪಾಯಿ ಕರೆನ್ಸಿಗೆ ಮತ್ತಷ್ಟು ಹಿನ್ನಡೆಯಾಗಬಹುದು ಎಂದು ವಾದ ಮುಂದಿಟ್ಟರು.
ಮುಂದಿನ ಎಂಪಿಸಿ ಸಭೆಳು ಫೆಬ್ರುವರಿ ಮತ್ತು ಏಪ್ರಿಲ್ನಲ್ಲಿ ನಡೆಯಲಿದೆ. ಆ ವೇಳೆಗೆ ಆಹಾವವಸ್ತುಗಳ ಬೆಲೆ ಕಡಿಮೆಗೊಂಡು ಹಣದುಬ್ಬರವೂ ಸಮಾಧಾನಕರ ಸ್ಥಿತಿಗೆ ಇಳಿಯುವ ಸಾಧ್ಯತೆ ಇದೆ. ಇದು ರಿಪೋ ದರ ಕಡಿತಕ್ಕೆ ಎಡೆ ಮಾಡಿಕೊಡಬಹುದು.
ಇದನ್ನೂ ಓದಿ: RBI update: ರೈತರಿಗೆ ಖುಷಿ ಸುದ್ದಿ; ಅಡಮಾನರಹಿತ ಕೃಷಿಸಾಲದ ಮಿತಿ 2 ಲಕ್ಷ ರೂಗೆ ಏರಿಕೆ
ಎಚ್ಎಸ್ಬಿಸಿ ರಿಸರ್ಚ್ನ ವರದಿಯೊಂದರ ಪ್ರಕಾರ 2025ರ ಫೆಬ್ರುವರಿ ಮತ್ತು ಏಪ್ರಿಲ್ ತಿಂಗಳ ಎಂಪಿಸಿ ಸಭೆಗಳಲ್ಲಿ ತಲಾ 25 ಮೂಲಾಂಕಗಳಂತೆ ಒಟ್ಟು 50 ಮೂಲಾಂಕಗಳಷ್ಟು ಬಡ್ಡಿದರ ಕಡಿತಗೊಳ್ಳಬಹುದು. ಜಪಾನ್ನ ಇನ್ವೆಸ್ಟ್ಮೆಂಟ್ ಬ್ಯಾಂಕ್ ಆದ ನೊಮುರಾ ಪ್ರಕಾರ 2025ರಲ್ಲಿ 100 ಮೂಲಾಂಕಗಳಷ್ಟು ಬಡ್ಡಿದರ ಕಡಿಮೆಗೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ