RBI update: ರೈತರಿಗೆ ಖುಷಿ ಸುದ್ದಿ; ಅಡಮಾನರಹಿತ ಕೃಷಿಸಾಲದ ಮಿತಿ 2 ಲಕ್ಷ ರೂಗೆ ಏರಿಕೆ
Collateral-free agriculture loan: ಅಡಮಾನರಹಿತ ಕೃಷಿ ಸಾಲ ಮಿತಿಯನ್ನು 1.6 ಲಕ್ಷ ರೂನಿಂದ 2 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಆರ್ಬಿಐ ಎಂಪಿಸಿಯಲ್ಲಿ ತೆಗೆದುಕೊಳ್ಳಲಾದ ಈ ನಿರ್ಧಾರದಿಂದ ಸಣ್ಣ ರೈತರಿಗೆ ಅನುಕೂಲವಾಗಲಿದೆ. ಇದೇ ವೇಳೆ, ಫಾರೀನ್ ಕರೆನ್ಸಿ ನಾನ್ ರೆಸಿಡೆಂಟ್ (ಎಫ್ಸಿಎನ್ಆರ್) ಠೇವಣಿಗಳಿಗೆ ಬಡ್ಡಿದರದ ಮಿತಿಯನ್ನು 200 ಮೂಲಾಂಕಗಳಷ್ಟು ಹೆಚ್ಚಿಸಲಾಗಿದೆ.
ನವದೆಹಲಿ, ಡಿಸೆಂಬರ್ 6: ಭಾರತೀಯ ರಿಸರ್ವ್ ಬ್ಯಾಂಕ್ ಅಡಮಾನರಹಿತ ಕೃಷಿ ಸಾಲದ ಮಿತಿಯನ್ನು (collateral-free loan) 2 ಲಕ್ಷ ರೂಗೆ ಏರಿಸಿದೆ. ಆರ್ಬಿಐನ ಮಾನಿಟರಿ ಪಾಲಿಸಿ ಸಮಿತಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಂದು ಶುಕ್ರವಾರ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ನಿರ್ಧಾರವನ್ನು ಪ್ರಕಟಿಸಿದರು. ಸದ್ಯ ಅಡಮಾನರಹಿತ ಕೃಷಿ ಸಾಲದ ಮಿತಿ 1.6 ಲಕ್ಷ ರೂ ಇದೆ. ಇದನ್ನು ಎರಡು ಲಕ್ಷ ರೂಗೆ ಏರಿಸಲಾಗಿದೆ. ಅಂದರೆ, ಒಬ್ಬ ವ್ಯಕ್ತಿ ಯಾವುದೇ ಅಡಮಾನ ಇಡುವ ಅಗತ್ಯ ಇಲ್ಲದೇ 2 ಲಕ್ಷ ರೂವರೆಗೆ ಕೃಷಿ ಸಾಲ ಪಡೆಯಲು ಅವಕಾಶ ಇರುತ್ತದೆ.
ಆರ್ಬಿಐನ ಈ ನಿರ್ಧಾರವು ಸಣ್ಣ ರೈತರಿಗೆ ಅನುಕೂಲವಾಗಲಿದೆ. ಹೆಚ್ಚು ಸಾಲ ಪಡೆದು ಕೃಷಿ ಚಟುವಟಿಕೆಗೆ ಉಪಯೋಗಿಸಿಕೊಳ್ಳಬಹುದು.
‘ಅಡಮಾನರಹಿತ ಕೃಷಿ ಸಾಲದ ಮಿತಿಯನ್ನು ಕೊನೆಯದಾಗಿ ಪರಿಷ್ಕರಿಸಿದ್ದು 2019ರಲ್ಲಿ. ಅಲ್ಲಿಂದೀಚೆಗೆ ಮಿತಿ ಪರಿಷ್ಕರಿಸಲಾಗಿರಲಿಲ್ಲ. ಕೃಷಿ ವೆಚ್ಚದಲ್ಲಿ ಏರಿಕೆ ಆಗಿರುವುದು ಹಾಗು ಒಟ್ಟಾರೆ ಹಣದುಬ್ಬರ ಹೆಚ್ಚಳ ಆಗಿರುವುದನ್ನು ಪರಿಗಣಿಸಿ, ಅಡಮಾನರಹಿತ ಕೃಷಿ ಸಾಲಗಳ ಮಿತಿಯನ್ನು 1.6 ಲಕ್ಷ ರೂನಿಂದ 2 ಲಕ್ಷ ರೂಗೆ ಏರಿಸಲು ನಿರ್ಧರಿಸಲಾಗಿದೆ. ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಹೆಚ್ಚು ಸಾಲದ ಅವಕಾಶ ಸಿಗುತ್ತದೆ’ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದನ್ನೂ ಓದಿ: RBI MPC Updates: ರಿಪೋ ದರ ಇಳಿಸದ ಆರ್ಬಿಐ; ಶೇ. 6.50ರಲ್ಲೇ ಬಡ್ಡಿದರ ಮುಂದುವರಿಕೆ
ಎಫ್ಸಿಎನ್ಆರ್ ಬಡ್ಡಿಮಿತಿ ಹೆಚ್ಚಳ
ಬ್ಯಾಂಕುಗಳಿಗೆ ವಿದೇಶೀ ಹೂಡಿಕೆಗಳು ಹರಿದು ಬರುವಂತೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್ಬಿಐ ಕ್ರಮ ತೆಗೆದುಕೊಂಡಿದೆ. ಎಫ್ಸಿಎನ್ಆರ್ ಠೇವಣಿಗಳಿಗೆ ನಿಗದಿ ಮಾಡಲಾಗಿದ್ದ ಬಡ್ಡಿದರ ಮಿತಿಯನ್ನು ಹೆಚ್ಚಿಸಲು ಆರ್ಬಿಐನ ಎಂಪಿಸಿ ನಿರ್ಧರಿಸಿದೆ.
ಎಫ್ಸಿಎನ್ಆರ್ ಎಂದರೆ ಫಾರೀನ್ ಕರೆನ್ಸಿ ನಾನ್ ರೆಸಿಡೆಂಟ್ ಡೆಪಾಸಿಟ್ಗಳು. ಅನಿವಾಸಿಗಳ ಫಾರೀನ್ ಕರೆನ್ಸಿ ಠೇವಣಿಗಳಿವು. ಒಂದರಿಂದ ಮೂರು ವರ್ಷದಲ್ಲಿ ಮೆಚ್ಯೂರಿಟಿ ಆಗುವ ಇಂಥ ಠೇವಣಿಗಳಿಗೆ ಬಡ್ಡಿದರ ಮಿತಿಯನ್ನು 200 ಅಂಕಗಳಷ್ಟು ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಸಿಆರ್ಆರ್ 50 ಮೂಲಾಂಕಗಳಷ್ಟು ಇಳಿಕೆ; ಶೇ. 4ಕ್ಕೆ ಇಳಿದ ಕ್ಯಾಷ್ ರಿಸರ್ವ್ ರೇಶಿಯೋ; ಆರ್ಥಿಕತೆಗೆ ಪುಷ್ಟಿ ಸಿಗುವ ನಿರೀಕ್ಷೆ
ಈಗ ಈ ದರವು ಎಆರ್ಆರ್+200 ಬೇಸಿಸ್ ಪಾಯಿಂಟ್ ಇದೆ. ಇದನ್ನು ಎಆರ್ಆರ್+400 ಬೇಸಿಸ್ ಪಾಯಿಂಟ್ಗಳಿಗೆ ಏರಿಸಲಾಗಿದೆ. ಈ ಕ್ರಮದಿಂದ ವಿದೇಶೀ ಡೆಪಾಸಿಟ್ಗಳನ್ನು ಬ್ಯಾಂಕುಗಳು ಆಕರ್ಷಿಸಲು ಸಾಧ್ಯವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ