ಇಂದಿನಿಂದ ಆರ್​ಬಿಐ ಎಂಪಿಸಿ ಸಭೆ; ಡಿ. 5ಕ್ಕೆ ಪಾಲಿಸಿ ನಿರ್ಧಾರ ಪ್ರಕಟ; ಬಡ್ಡಿದರ ಮತ್ತಷ್ಟು ಇಳಿಯುತ್ತಾ?

RBI MPC meet from today: ಭಾರತೀಯ ರಿಸರ್ವ್ ಬ್ಯಾಂಕ್​ನ ಎಂಪಿಸಿ ಸಭೆ ಇಂದು ಡಿಸೆಂಬರ್ 3ರಿಂದ ಆರಂಭವಾಗಿದೆ. ಡಿ. 5ರಂದು ಸಭೆಯ ನಿರ್ಧಾರವನ್ನು ಆರ್​ಬಿಐ ಗವರ್ನರ್ ಪ್ರಕಟಿಸುತ್ತಾರೆ. ರಿಪೋದರ ಅಥವಾ ಬಡ್ಡಿದರವನ್ನು ಎಂಪಿಸಿ ಸಭೆಯಲ್ಲಿ ಪರಿಷ್ಕರಿಸಲು ನಿರ್ಧರಿಸಲಾಗುತ್ತದಾ ಎಂಬುದು ಕುತೂಹಲದ ಸಂಗತಿ. ಆರ್ಥಿಕತೆ, ಹಣದುಬ್ಬರ, ಬಾಹ್ಯ ವಾತಾವರಣ, ಹಣದ ಹರಿವು ಇತ್ಯಾದಿ ಹಲವು ಅಂಶಗಳನ್ನು ಎಂಪಿಸಿ ಸಭೆಯಲ್ಲಿ ಅವಲೋಕಿಸಲಾಗುತ್ತದೆ.

ಇಂದಿನಿಂದ ಆರ್​ಬಿಐ ಎಂಪಿಸಿ ಸಭೆ; ಡಿ. 5ಕ್ಕೆ ಪಾಲಿಸಿ ನಿರ್ಧಾರ ಪ್ರಕಟ; ಬಡ್ಡಿದರ ಮತ್ತಷ್ಟು ಇಳಿಯುತ್ತಾ?
ಆರ್​ಬಿಐ

Updated on: Dec 03, 2025 | 11:50 AM

ನವದೆಹಲಿ, ಡಿಸೆಂಬರ್ 3: ಭಾರತೀಯ ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿಯ (RBI MPC Meeting) ದ್ವೈಮಾಸಿಕ ಸಭೆ ಇಂದು ಆರಂಭಗೊಂಡಿದೆ. ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ಎಂಪಿಸಿಯ ಆರು ಸದಸ್ಯರು ಎರಡು ದಿನಗಳ ಕಾಲ ಸಮಗ್ರವಾಗಿ ಚರ್ಚೆ ನಡೆಸಿ ನೀತಿ ಪರಿಷ್ಕರಣೆ ಕುರಿತು ನಿರ್ಧಾರ ತಳೆಯಲಿದ್ದಾರೆ. ಇವತ್ತು ಮತ್ತು ನಾಳೆ ಗುರುವಾರ ಎರಡು ದಿನ ಪೂರ್ಣವಾಗಿ ಚರ್ಚೆಗಳಾಗಲಿವೆ. ಶುಕ್ರವಾರ ಆರ್​ಬಿಐ ಗವರ್ನರ್ ಅವರು ಸುದ್ದಿಗೋಷ್ಠಿಯಲ್ಲಿ ಎಂಪಿಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ.

ಎಂಪಿಸಿ ಸಭೆಯಲ್ಲಿ ಚರ್ಚೆಯಾಗುವ ಪ್ರಮುಖ ವಿಚಾರಗಳೇನು?

ದೇಶದ ಆರ್ಥಿಕತೆ ಮತ್ತು ಹಣದುಬ್ಬರದ ಪರಿಸ್ಥಿತಿಗೆ ಅನುಗುಣವಾಗಿ ಹಣಕಾಸು ಹೇಗಿದ್ದರೆ ಸೂಕ್ತ ಎಂಬುದನ್ನು ಎಂಪಿಸಿ ಸದಸ್ಯರು ಚರ್ಚಿಸುತ್ತಾರೆ. ಹಾಗೆಯೇ ಆರ್ಥಿಕ ಪರಿಸ್ಥಿತಿ ಹೇಗಿದೆ, ಜಿಡಿಪಿ ಮುಂದಿನ ಒಂದು ವರ್ಷ ಹೇಗೆ ಬೆಳೆಯಬಹುದು, ಹಣದುಬ್ಬರ ಎಷ್ಟು ಹೆಚ್ಚಾಗಬಹುದು ಎಂಬುದನ್ನು ಅವಲೋಕಿಸಿ ಒಂದು ಅಂದಾಜಿಗೆ ಬರಲಾಗುತ್ತದೆ.

ಇದನ್ನೂ ಓದಿ: ನವೆಂಬರ್​ನ ಯುಪಿಐ ಧಮಾಕ; 20 ಬಿಲಿಯನ್ ಸಂಖ್ಯೆ, 26 ಟ್ರಿಲಿಯನ್ ರೂ ಮೌಲ್ಯದ ವಹಿವಾಟು

ರಿಪೋ ದರ ಹೆಚ್ಚಿಸಬೇಕಾ ಅಥವಾ ಇಳಿಸಬೇಕಾ, ಪಾಲಿಸಿ ನಿಲುವು ತಟಸ್ಥವಾಗಿರಬೇಕಾ ಅಥವಾ ಬಿಗಿಯಾಗಿರಬೇಕಾ ಅಥವಾ ಸುಲಭವಾಗಿರಬೇಕಾ ಎಂಬಿತ್ಯಾದಿ ಕ್ರಮಗಳನ್ನು ಅವಲೋಕಿಸಲಾಗುತ್ತದೆ. ಆರ್ಥಿಕತೆಗೆ ಪೂರಕವಾಗುವಂತಹ ಕ್ರಮವನ್ನು ಆಯ್ದುಕೊಳ್ಳಲಾಗುತ್ತದೆ.

ರಿಪೋ ದರ ಈ ಬಾರಿ ಬದಲಾವಣೆ ಆಗೊಲ್ಲವಾ?

ಈ ಬಾರಿ ಆರ್​ಬಿಐನ ಎಂಪಿಸಿ ರಿಪೋ ದರ ಅಥವಾ ಬಡ್ಡಿದರಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಎಂದು ಬಹಳಷ್ಟು ಆರ್ಥಿಕತ ತಜ್ಞರು ಊಹಿಸಿದ್ದಾರೆ. ಅದಕ್ಕೆ ಕಾರಣಗಳೂ ಇವೆ. ಪ್ರಮುಖ ಕಾರಣವೆಂದರೆ, ಬಡ್ಡಿದರ ಇಳಿಸುವಂತಹ ಸಂದರ್ಭ ಸದ್ಯಕ್ಕೆ ಬಂದಿಲ್ಲ. ಮತ್ತೊಂದು ಕಾರಣವೆಂದರೆ, ಬಡ್ಡಿದರ ಇಳಿಸಿದರೆ ಬ್ಯಾಂಕುಗಳಿಗೆ ಇಕ್ಕಟ್ಟಿನ ಸ್ಥಿತಿ ಏರ್ಪಡಬಹುದು.

ಇದನ್ನೂ ಓದಿ: GST collections: ಜಿಎಸ್​ಟಿ ದರ ಕಡಿತದ ಪರಿಣಾಮ, ನವೆಂಬರ್​ನಲ್ಲಿ ತೆರಿಗೆ ಸಂಗ್ರಹ ಕುಂಠಿತ

ಜುಲೈನಿಂದ ಸೆಪ್ಟೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ಶೇ. 8.2ರಷ್ಟು ಹೆಚ್ಚಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅದಕ್ಕೂ ಹಿಂದಿನ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 7.8ರಷ್ಟು ಹೆಚ್ಚಿತ್ತು. ಈ ಹಣಕಾಸು ವರ್ಷದ ಮೊದಲೆರಡು ಕ್ವಾರ್ಟರ್​ನಲ್ಲಿ ಆರ್ಥಿಕತೆಯು ನಿರೀಕ್ಷೆಮೀರಿದ ರೀತಿಯಲ್ಲಿ ಬೆಳೆದಿದೆ.

ಇನ್ನು, ಹಣದುಬ್ಬರ ಕೂಡ ನಿರೀಕ್ಷೆಮೀರಿದ ರೀತಿಯಲ್ಲಿ ಕಡಿಮೆಗೊಳ್ಳುತ್ತಿದೆ. ಹಣದುಬ್ಬರ ಶೇ. 0.25ಕ್ಕೆ ಇಳಿದಿದೆ. ಇದು ಹಲವು ವರ್ಷಗಳಲ್ಲೇ ಕಂಡು ಬಂದಿರುವ ಅತ್ಯಂತ ಕಡಿಮೆ ಹಣದುಬ್ಬರ ಎನಿಸಿದೆ. ಹಣದುಬ್ಬರ ಇಷ್ಟು ಕಡಿಮೆ ಇರುವಾಗ ಮತ್ತು ಜಿಡಿಪಿ ಉತ್ತಮವಾಗಿ ಬೆಳೆಯುತ್ತಿರುವಾಗ ಬಡ್ಡಿದರ ಇಳಿಸುವ ಅವಶ್ಯಕತೆ ಇಲ್ಲ ಎಂಬುದು ತಜ್ಞರ ಅನಿಸಿಕೆ. ಈ ಹಿನ್ನೆಲೆಯಲ್ಲಿ ರಿಪೋ ದರ ಶೇ. 5.50ರಲ್ಲೇ ಮುಂದುವರಿಯುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ