2023-24ರಲ್ಲಿ ರೀಟೇಲ್ ಹಣದುಬ್ಬರ ಶೇ. 5.4 ಸಾಧ್ಯತೆ; ಹೆಡ್ಲೈನ್ ಇನ್ಫ್ಲೇಶನ್ ಬಗ್ಗೆ ಆರ್ಬಿಐ ಸಮಾಧಾನ
Inflation of India: ಈ ಹಣಕಾಸು ವರ್ಷದಲ್ಲಿ ಭಾರತದ ಹಣದುಬ್ಬರ ಶೇ. 5.4ರಷ್ಟು ಇರಬಹುದು ಎಂದು ಆರ್ಬಿಐ ತನ್ನ ಹಿಂದಿನ ಅಂದಾಜನ್ನು ಮುಂದುವರಿಸಿದೆ. ಕಳೆದ ವರ್ಷ ಹೆಚ್ಚಿನ ಮಟ್ಟದಲ್ಲಿದ್ದ ಹೆಡ್ಲೈನ್ ಇನ್ಫ್ಲೇಶನ್ ಈಗ ಸಾಕಷ್ಟು ಕಡಿಮೆ ಆಗಿದೆ ಎಂದು ಆರ್ಬಿಐ ಸಮಾಧಾನಪಟ್ಟಿದೆ. ಭಾರತದ ಫಾರೆಕ್ಸ್ ರಿಸರ್ವ್ಸ್ ಡಿಸೆಂಬರ್ 1ರಂದು ಅಂತ್ಯಗೊಂಡ ವರದಲ್ಲಿ 604 ಬಿಲಿಯನ್ ಡಾಲರ್ ತಲುಪಿದೆ.
ನವದೆಹಲಿ, ಡಿಸೆಂಬರ್ 8: ಈ ಹಣಕಾಸು ವರ್ಷಕ್ಕೆ ಹಣದುಬ್ಬರ (India Inflation) ಶೇ. 5.4ರಷ್ಟಿರಬಹುದು ಎಂದು ಈ ಹಿಂದೆ ಮಾಡಿದ್ದ ಅಂದಾಜನ್ನು ಆರ್ಬಿಐ ಪುನರುಚ್ಚರಿಸಿದೆ. ಆದರೆ, ಆಹಾರವಸ್ತುಗಳ ಬೆಲೆ ಏರಿಕೆ ಆಗದೇ ಹೋಗಿದ್ದರೆ ಹಣದುಬ್ಬರ ದರ ಕಡಿಮೆ ಆಗುವ ಸಾಧ್ಯತೆ ಇತ್ತು ಎಂಬುದನ್ನು ಆರ್ಬಿಐ (RBI MPC Meeting) ಪರೋಕ್ಷವಾಗಿ ತಿಳಿಸಿದೆ. ಆಹಾರ ಬೆಲೆ, ಕಚ್ಛಾ ತೈಲ ಬೆಲೆಗಳಲ್ಲಿ ಅನಿಶ್ಚಿತ ಪರಿಸ್ಥಿತಿ ಇದೆ. ಆಂತರಿಕವಾಗಿ ಆರ್ಥಿಕತೆ ವಿಸ್ತರಿಸುತ್ತಿದೆ. ಈ ಅಂಶಗಳು ಹಣದುಬ್ಬರದ ಮೇಲೆ ಒತ್ತಡ ಬೀರಬಹುದು ಎಂಬುದು ಆರ್ಬಿಐ ಆತಂಕ. ಆದರೂ ಕೂಡ ರೆಪೋ ದರವನ್ನು ಏರಿಸದೇ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ.
‘ಕಳೆದ ವರ್ಷ ಹೆಚ್ಚಿನ ಮಟ್ಟದಲ್ಲಿದ್ದ ಸಮಗ್ರ ಹಣದುಬ್ಬರ (ಹೆಡ್ಲೈನ್ ಇನ್ಫ್ಲೇಶನ್) ಇದೀಗ ಕಡಿಮೆ ಆಗಿದೆ. ಹೆಚ್ಚಿನ ದೇಶಗಳಲ್ಲಿ ಇದು ಗುರಿಗಿಂತ ಮೇಲೆಯೇ ಇದೆ,’ ಎಂದೂ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: RBI MPC Meet: ಶೇ. 6.5ರಷ್ಟು ಬಡ್ಡಿದರ ಮುಂದುವರಿಸಿದ ಆರ್ಬಿಐ; ಸತತ ಆರನೇ ಬಾರಿ ಬಡ್ಡಿದರ ಯಥಾಸ್ಥಿತಿ
2023-24ರಲ್ಲಿ ಗ್ರಾಹಕ ಬೆಲೆ ಅನುಸೂಚಿ (ಸಿಪಿಐ) ಆಧಾರಿತ ಹಣದುಬ್ಬರ ಶೇ. 5.4ರಷ್ಟು ಇರಬಹುದು ಎಂದು ಆರ್ಬಿಐ ಭವಿಷ್ಯ ನುಡಿದಿದೆ. ಸಿಪಿಐ ಹಣದುಬ್ಬರ ಎಂದರೆ ರೀಟೇಲ್ ಇನ್ಫ್ಲೇಶನ್. ಆಹಾರವಸ್ತು ಸೇರಿದಂತೆ ಗ್ರಾಹಕ ಬಳಕೆಯ ವಸ್ತುಗಳು ಮತ್ತು ಸರಕುಗಳ ಬೆಲೆಯಲ್ಲಿ ಒಂದು ವರ್ಷದಲ್ಲಿ ಆಗಿರುವ ವ್ಯತ್ಯಾಸವೇ ರೀಟೇಲ್ ಹಣದುಬ್ಬರ.
ಇನ್ನು, ಹೆಡ್ಲೈನ್ ಇನ್ಫ್ಲೇಶನ್ ಅಥವಾ ಸಮಗ್ರ ಹಣದುಬ್ಬರವು ಒಟ್ಟಾರೆ ಆರ್ಥಿಕತೆಯ ಹಣದುಬ್ಬರ ಅಳತೆಯಾಗಿದೆ. ಆಹಾರ ಮತ್ತು ಇಂಧನ ವಸ್ತುಗಳ ಬೆಲೆಯೂ ಇದರಲ್ಲಿ ಒಳಗೊಂಡಿರುತ್ತದೆ.
ಇದನ್ನೂ ಓದಿ: GDP forecast: ಈ ಹಣಕಾಸು ವರ್ಷ ಭಾರತದ ಜಿಡಿಪಿ ಶೇ. 7ರಷ್ಟಾಗಬಹುದು: ನಿರೀಕ್ಷೆ ಹೆಚ್ಚಿಸಿದ ಆರ್ಬಿಐ
604 ಬಿಲಿಯನ್ ಡಾಲರ್ ಮುಟ್ಟಿದ ಫಾರೆಕ್ಸ್ ರಿಸರ್ವ್ಸ್
ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (ಫಾರೆಕ್ಸ್ ರಿಸರ್ವ್ಸ್) ಡಿಸೆಂಬರ್ 1ರಂದು ಅಂತ್ಯಗೊಂಡ ವಾರದಲ್ಲಿ 2.54 ಬಿಲಿಯನ್ ಡಾಲರ್ನಷ್ಟು ಏರಿಕೆ ಆಗಿದೆ. ಇದರೊಂದಿಗೆ ಫಾರೆಕ್ಸ್ ರಿಸರ್ವ್ಸ್ 604 ಬಿಲಿಯನ್ ಡಾಲರ್ ಮುಟ್ಟಿದೆ. 2022ರಲ್ಲಿ ಇದು 645 ಬಿಲಿಯನ್ ಡಾಲರ್ನಷ್ಟು ಗರಿಷ್ಠ ಮಟ್ಟ ಮುಟ್ಟಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ