RBI MPC Meeting: ಆರ್​ಬಿಐ ಹಣಕಾಸು ನೀತಿ ಸಮಿತಿ ಸಭೆ ಇಂದಿನಿಂದ; ರೆಪೊ ದರ 25 ಮೂಲಾಂಶ ಹೆಚ್ಚಳ ಸಾಧ್ಯತೆ

|

Updated on: Feb 06, 2023 | 10:24 AM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿ ಸಭೆ (MPC) ಇಂದಿನಿಂದ ಬುಧವಾರದ ವರೆಗೆ ನಡೆಯಲಿದ್ದು, ರೆಪೊ ದರವನ್ನು 25 ಮೂಲಾಂಶದಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

RBI MPC Meeting: ಆರ್​ಬಿಐ ಹಣಕಾಸು ನೀತಿ ಸಮಿತಿ ಸಭೆ ಇಂದಿನಿಂದ; ರೆಪೊ ದರ 25 ಮೂಲಾಂಶ ಹೆಚ್ಚಳ ಸಾಧ್ಯತೆ
RBI repo rate hike Best time to book your fixed deposits FDs know interest rates here
Image Credit source: PTI
Follow us on

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಹಣಕಾಸು ನೀತಿ ಸಮಿತಿ ಸಭೆ (MPC) ಇಂದಿನಿಂದ ಬುಧವಾರದ ವರೆಗೆ ನಡೆಯಲಿದ್ದು, ರೆಪೊ ದರವನ್ನು (Repo Rate) 25 ಮೂಲಾಂಶದಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚಿಲ್ಲರೆ ಹಣದುಬ್ಬರ ಕಳೆದ ಎರಡು ತಿಂಗಳುಗಳಿಂದ ಆರ್​​ಬಿಐಯ ಸಹನೆಯ ಮಿತಿಯಡಿ ಬಂದಿದ್ದರೂ ಒಟ್ಟಾರೆ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಆರ್​ಬಿಐ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರ ಹೆಚ್ಚಳದ ವೇಗ ತಗ್ಗಿಸುವ ನಿರೀಕ್ಷೆ, ಒಟ್ಟಾರೆ ಹಣದುಬ್ಬರ ಇತ್ಯಾದಿ ಎಲ್ಲ ಅಂಶಗಳನ್ನೂ ಹಣಕಾಸು ನೀತಿ ಸಮಿತಿ ಪರಿಗಣನೆಗೆ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಚಿಲ್ಲರೆ ಹಣದುಬ್ಬರವನ್ನು ಶೇ 4ರ ಸುಮಾರಿಗೆ ಇಳಿಕೆ ಮಾಡಬೇಕೆಂಬುದು ಆರ್​​ಬಿಐ ಗುರಿಯಾಗಿದೆ. 2022ರ ಜನವರಿಯಿಂದ ಆರಂಭಗೊಂಡು ಸತತ ಮೂರು ತ್ರೈಮಾಸಿಕಗಳಲ್ಲಿ ಚಿಲ್ಲರೆ ಹಣದುಬ್ಬರವನ್ನು ಸಹನೆಯ ಮಟ್ಟವಾದ ಶೇ 6ರ ಕೆಳಗೆ ತರುವುದು ಆರ್​​ಬಿಐಗೆ ಸಾಧ್ಯವಾಗಿರಲಿಲ್ಲ. ನವೆಂಬರ್​ ಮತ್ತು ಡಿಸೆಂಬರ್​​​ನಲ್ಲಿ ಚಿಲ್ಲರೆ ಹಣದುಬ್ಬರ ಸಹನೆಯ ಮಟ್ಟವಾದ ಶೇ 6ಕ್ಕಿಂತ ಕೆಳಗೆ ಬಂದಿದ್ದರೂ ಒಟ್ಟಾರೆ ಹಣದುಬ್ಬರದ ಬಗ್ಗೆ ಆರ್​ಬಿಐ ತೃಪ್ತಿ ಹೊಂದಿಲ್ಲ ಎನ್ನಲಾಗಿದೆ.

ಈ ಬಾರಿಯ ಹಣಕಾಸು ನೀತಿ ಸಮಿತಿ ಸಭೆಯಲ್ಲಿಯೂ ರೆಪೊ ದರ ಹೆಚ್ಚಳದ ತನ್ನ ನಿರ್ಧಾರಕ್ಕೆ ಆರ್​​ಬಿಐ ಬದ್ಧವಾಗಿರುವ ಸಾಧ್ಯತೆ ಇದೆ. ಆ ನಂತರ ಬಡ್ಡಿ ಹೆಚ್ಚಳಕ್ಕೆ ವಿರಾಮ ನೀಡಬಹುದು ಎಂದು ‘ಹೌಸಿಂಗ್ ಡಾಟ್​ ಕಾಂ’ನ ಸಿಇಒ ಧ್ರುವ ಅಗರ್ವಾಲ್ ಅಭಿಪ್ರಾಯಪಟ್ಟಿದ್ದಾರೆ.

ಡಿಸೆಂಬರ್​​ 7ರಂದು ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು 35 ಮೂಲಾಂಶ ಹೆಚ್ಚಿಸಿತ್ತು. ಇದರೊಂದಿಗೆ ಪರಿಷ್ಕೃತ ರೆಪೊ ದರ ಶೇಕಡಾ 6.25 ಆಗಿತ್ತು. ಇದರೊಂದಿಗೆ, ಒಟ್ಟಾರೆಯಾಗಿ 23ನೇ ಹಣಕಾಸು ವರ್ಷದಲ್ಲಿ ಆರ್​ಬಿಐ 225 ಮೂಲಾಂಶದಷ್ಟು ರೆಪೊ ದರ ಹೆಚ್ಚಿಸಿದಂತಾಗಿತ್ತು. ಪರಿಣಾಮವಾಗಿ ಸಾಲಗಳ ಮೇಲಿನ ಬಡ್ಡಿ ದರ, ಎಫ್​ಡಿ ಸೇರಿದಂತೆ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರಗಳನ್ನೂ ಬ್ಯಾಂಕ್​ಗಳು ಹೆಚ್ಚಿಸಿದ್ದವು.

ಇದನ್ನೂ ಓದಿ: Repo Rate: ಮತ್ತೆ ರೆಪೊ ದರ ಹೆಚ್ಚಳದ ಶಾಕ್ ನೀಡುತ್ತಾ ಆರ್​ಬಿಐ? ಇಲ್ಲಿದೆ ತಜ್ಞರ ಅಭಿಪ್ರಾಯ

ಈ ಬಾರಿ ಆರ್​ಬಿಐ ರೆಪೊ ದರವನ್ನು ಮತ್ತೆ 25 ಮೂಲಾಂಶ ಹೆಚ್ಚಿಸಿ ಶೇ 6.50ಕ್ಕೆ ನಿಗದಿಪಡಿಸುವ ನಿರೀಕ್ಷೆ ಇದೆ ಎಂದು ‘ರಾಯಿಟರ್ಸ್​​’ ಸುದ್ದಿ ಸಂಸ್ಥೆಯ ಸಮೀಕ್ಷಾ ವರದಿ ಕಳೆದ ವಾರ ತಿಳಿಸಿತ್ತು. ಅರ್ಥಶಾಸ್ತ್ರಜ್ಞರನ್ನು ಸಮೀಕ್ಷೆಗೆ ಒಳಪಡಿಸಿ ಸುದ್ದಿ ಸಂಸ್ಥೆ ವರದಿ ಸಿದ್ಧಪಡಿಸಲಾಗಿತ್ತು. 2023ರ ಅಂತ್ಯದ ವರೆಗೂ ರೆಪೊ ದರವನ್ನು ಆರ್​ಬಿಐ ಶೇ 6.50 ಮಟ್ಟದಲ್ಲಿ ಇರಿಸುವ ಸಾಧ್ಯತೆ ಇದೆ ಎಂದೂ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ, ಈ ಬಾರಿ ರೆಪೊ ದರ ಹೆಚ್ಚಳವಾದರೂ ಬ್ಯಾಂಕ್​ಗಳು ಎಫ್​ಡಿ ಹಾಗೂ ಇತರ ಉಳಿತಾಯ ಖಾತೆಗಳ ಬಡ್ಡಿ ದರವನ್ನು ತಕ್ಷಣವೇ ಹೆಚ್ಚಿಸುವ ಸಾಧ್ಯತೆ ಇಲ್ಲ ಎಂಬ ಅಭಿಪ್ರಾಯವೂ ತಜ್ಞರ ವಲಯದಿಂದ ಕೇಳಿಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:22 am, Mon, 6 February 23