
ನವದೆಹಲಿ, ಸೆಪ್ಟೆಂಬರ್ 29: ಭಾರತೀಯ ರಿಸರ್ವ್ ಬ್ಯಾಂಕ್ನ (RBI) ಮೂರು ದಿನಗಳ ಮಾನಿಟರಿ ಪಾಲಿಸಿ ಕಮಿಟಿ ಸಭೆ ಇಂದು ಸೋಮವಾರ ಆರಂಭವಾಗಿದೆ. ಅಮೆರಿಕದ ಆಮದು ಸುಂಕ (US tariffs) ಹಾಗೂ ಜಾಗತಿಕ ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತ ಸ್ಥಿತಿ ಹೊರತಪಡಿಸಿ ಉಳಿದಂತೆ ಭಾರತದ ಆರ್ಥಿಕ ಅಂಶಗಳು ಉತ್ತಮವಾಗಿರುವ ಈ ಹೊತ್ತಿನಲ್ಲಿ ಆರ್ಬಿಐ ಎಂಪಿಸಿ ತಳೆಯುವ ನಿಲುವು ಮತ್ತು ನಿರ್ಧಾರಗಳೇನು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಅದರಲ್ಲೂ ಮುಖ್ಯವಾಗಿ ಬಡ್ಡಿದರ ಪರಿಷ್ಕರಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಆರ್ಬಿಐ ಫೆಬ್ರುವರಿ, ಎಪ್ರಿಲ್ ಮತ್ತು ಜೂನ್ನಲ್ಲಿ ಮೂರು ಬಾರಿ ಸತತವಾಗಿ ರಿಪೋ ದರವನ್ನು ಇಳಿಸಿದೆ. ಶೇ. 6.50ರಷ್ಟಿದ್ದ ರಿಪೋ ದರ ಈಗ ಶೇ. 5.50ಕ್ಕೆ ಇಳಿದೆ. ಆರು ತಿಂಗಳಲ್ಲಿ 100 ಬೇಸಿಸ್ ಪಾಯಿಂಟ್ಗಳಷ್ಟು ಬಡ್ಡಿದರ ಇಳಿದಿದೆ. ಆಗಸ್ಟ್ನಲ್ಲಿ ನಡೆದಿದ್ದ ಎಂಪಿಸಿ ಸಭೆಯಲ್ಲಿ ದರ ಯಥಾಸ್ಥಿತಿ ಉಳಿಸಲಾಗಿದೆ. ಈಗ ಅಕ್ಟೋಬರ್ 1ರಂದು ಎಂಪಿಸಿ ರಿಪೋದರ ಇಳಿಸುತ್ತಾ ಅಥವಾ ಯಥಾಸ್ಥಿತಿ ಮುಂದುವರಿಸುತ್ತಾ ನೋಡಬೇಕು.
ಇದನ್ನೂ ಓದಿ: 11,000ಕ್ಕೂ ಅಧಿಕ ಉದ್ಯೋಗಿಗಳನ್ನು ಲೇ ಆಫ್ ಮಾಡಿದ ಅಕ್ಸೆಂಚರ್; ಸಿಇಒ ಜೂಲೀ ಸ್ವೀಟ್ ಬಿಚ್ಚಿಟ್ಟ ಕಾರಣ ಇದು
ಕೆಲ ಆರ್ಥಿಕ ತಜ್ಞರು ರಿಪೋ ದರವನ್ನು ಇಳಿಸಬಹುದು ಎಂದು ಅಂದಾಜಿಸಿದ್ದಾರೆ. ಹೆಚ್ಚಿನವರು ಯಥಾಸ್ಥಿತಿ ಮುಂದುವರಿಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕವಾಗಿ ಆರ್ಥಿಕ ಅನಿಶ್ಚಿತ ಪರಿಸ್ಥಿತಿ ಮುಂದುವರಿದಿದೆ. ಅಮೆರಿಕದ ಸುಂಕದ ಪರಿಣಾಮ ಮುಂದಿನ ದಿನಗಳಲ್ಲಿ ನಿಚ್ಚಳವಾಗಿ ಗೊತ್ತಾಗುತ್ತದೆ. ಈ ಹಂತದಲ್ಲಿ ಭಾರತದೊಳಗಿನ ಆರ್ಥಿಕತೆಗೆ ಪುಷ್ಟಿ ಕೊಡುವ ಅಗತ್ಯ ಇದೆ. ಬಡ್ಡಿ ದರ ಮತ್ತಷ್ಟು ಇಳಿಸುವುದರಿಂದ ಇದನ್ನು ಸಾಧಿಸಬಹುದು. ಹಣದುಬ್ಬರವೂ ಕೂಡ ಕಡಿಮೆ ಮಟ್ಟದಲ್ಲೇ ಇದೆ. ಹೀಗಾಗಿ, ಬಡ್ಡಿದರ ಇಳಿಸುವ ನಿರ್ಧಾರ ಸರಿಯಾಗಬಹುದು ಎಂಬುದು ಕೆಲವರ ವಾದ.
ವಾರದ ಹಿಂದಷ್ಟೇ ಕೇಂದ್ರ ಸರ್ಕಾರ ಜಿಎಸ್ಟಿ ಸುಧಾರಣೆಗಳನ್ನು ಕೈಗೊಂಡಿದೆ. ಬಹಳಷ್ಟು ಸರಕುಗಳ ಮೇಲಿನ ಜಿಎಸ್ಟಿ ಇಳಿಕೆ ಆಗಿದೆ. ಈ ಮಹತ್ವದ ಕ್ರಮದ ಬಳಿಕ ನಡೆಯುತ್ತಿರುವ ಮೊದಲ ಎಂಪಿಸಿ ಸಭೆ ಇದು. ಜಿಎಸ್ಟಿ ದರ ಇಳಿಕೆಯಿಂದ ಆರ್ಥಿಕತೆಗೆ ಉತ್ತೇಜನ ಸಿಗುವ ನಿರೀಕ್ಷೆ ಇದೆ. ಇತ್ತೀಚಿನ ಜಿಡಿಪಿ ಬೆಳವಣಿಗೆ ಕೂಡ ಆಶಾದಾಯಕವಾಗಿದೆ. ಅಲ್ಲದೇ ಹಣದುಬ್ಬರ ಜುಲೈನಲ್ಲಿ ಶೇ. 1.6ರಷ್ಟು ಇದ್ದದ್ದು ಆಗಸ್ಟ್ನಲ್ಲಿ ಶೇ. 2.1ಕ್ಕೆ ಏರಿದೆ. ಜಿಡಿಪಿ ನಿರೀಕ್ಷೆಗಿಂತ ಉತ್ತಮ ಬೆಳವಣಿಗೆ ದಾಖಲಿಸಿದೆ. ಈ ಹಂತದಲ್ಲಿ ಬಡ್ಡಿದರ ಇಳಿಸುವ ಪ್ರಮೇಯ ಯಾವುದೂ ಇಲ್ಲ. ಯಥಾಸ್ಥಿತಿ ಮುಂದುವರಿಸುವುದು ಉತ್ತಮ ಎನ್ನುವುದು ಮತ್ತೊಂದು ಗುಂಪಿನ ವಾದ.
ಇದನ್ನೂ ಓದಿ: ಪಾಕಿಸ್ತಾನ, ಚೀನಾ ಗಡಿಭಾಗದಲ್ಲಿ ದೇಶದ ರಕ್ಷಣೆಗೆ ಅನಂತ್ ಶಸ್ತ್ರ ಕ್ಷಿಪಣಿ: ಬಿಇಎಲ್ಗೆ ಗುತ್ತಿಗೆ
ಇವತ್ತು (ಸೆ. 29) ಆರಂಭಗೊಂಡಿರುವ ಆರ್ಬಿಐ ಎಂಪಿಸಿ ಸಭೆ ನಾಳೆಯೂ ಮುಂದುವರಿಯುತ್ತದೆ. ಅಕ್ಟೋಬರ್ 1, ಬುಧವಾರದಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಪತ್ರಿಕಾಗೋಷ್ಠಿಯಲ್ಲಿ ಸಭೆಯ ನಿರ್ಧಾರಗಳನ್ನು ಪ್ರಕಟಿಸುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ