
ನವದೆಹಲಿ, ಅಕ್ಟೋಬರ್ 5: ಆರ್ಬಿಐನ ಈ ಬಾರಿಯ ಎಂಪಿಸಿ ಸಭೆಯಲ್ಲಿ ರೆಪೋ ದರ ಏರಿಸುವ ಮಹತ್ವದ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಬಹಳ ಪರಿಣಿತರು ನಿರೀಕ್ಷಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ನ (RBI) ಹಣಕಾಸು ನೀತಿ ಸಮಿತಿ (MPC) ಸಭೆ ಇವತ್ತು ಚಾಲನೆಗೊಂಡಿದೆ. ದ್ವೈಮಾಸಿಕವಾಗಿ ನಡೆಯುವ ಈ ಸಭೆ ಅಕ್ಟೋಬರ್ 7ರವರೆಗೂ ನಡೆಯಲಿದೆ. ಬುಧವಾರ ಆರ್‌ಬಿಐ ಗವರ್ನರ್ ಅವರು ಪತ್ರಿಕಾಗೋಷ್ಠಿಯಲ್ಲಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ತಜ್ಞರ ನಿರೀಕ್ಷೆ ಪ್ರಕಾರ ಶೇ. 5.25ರಷ್ಟಿರುವ ರೆಪೋ ದರವನ್ನು 25 ಮೂಲಾಂಕಗಳಷ್ಟು ಏರಿಸಬಹುದು. ಅಂದರೆ, ಬಡ್ಡಿದರ ಶೇ. 5.25ರಿಂದ ಶೇ. 5.50ಕ್ಕೆ ಏರಬಹುದು ಎನ್ನಲಾಗುತ್ತಿದೆ. ಇದೇನಾದರೂ ಹೌದಾದಲ್ಲಿ ಕಳೆದ ಮೂರು ವರ್ಷದಲ್ಲೇ ಮೊದಲ ಬಾರಿಗೆ ರೆಪೋದರ ಏರಿಕೆಯಾಗಲಿದೆ.
ಆರ್‌ಬಿಐ ಕೊನೆಯ ಬಾರಿಗೆ ಫೆಬ್ರವರಿ 2023 ರಲ್ಲಿ ರೆಪೋ ದರವನ್ನು ಏರಿಸಿತ್ತು. ತದನಂತರ ದರ ಕಡಿತ ಹಾಗೂ ಸ್ಥಿರತೆಯನ್ನು ಕಾಯ್ದುಕೊಂಡಿದ್ದ ಬ್ಯಾಂಕ್, ಇತ್ತೀಚಿನ ತಿಂಗಳುಗಳಲ್ಲಿ ಕಂಡು ಬಂದ ಕೆಲ ಬೆಳವಣಿಗೆಗಳು ಅದರ ನಿಲುವನ್ನು ಬದಲಿಸುವಂತೆ ಮಾಡಬಹುದು. ಆಗಸ್ಟ್ ತಿಂಗಳ ರೀಟೇಲ್ ಹಣದುಬ್ಬರವು ಶೇ. 4.82 ಕ್ಕೆ ಏರಿಕೆಯಾಗಿರುವುದರಿಂದ ಮತ್ತು ಜಾಗತಿಕವಾಗಿ ಅಮೆರಿಕದ ಫೆಡರಲ್ ರಿಸರ್ವ್ ಸೇರಿದಂತೆ ಪ್ರಮುಖ ಬ್ಯಾಂಕ್‌ಗಳು ಬಡ್ಡಿದರ ಹೆಚ್ಚಿಸಿರುವುದರಿಂದ ಆರ್‌ಬಿಐ ಈ ಕಠಿಣ ನಿರ್ಧಾರಕ್ಕೆ ಮುಂದಾಗಬಹುದು ಎಂದು ಅಂದಾಜಿಸಲಾಗಿದೆ.
ಮಾರುಕಟ್ಟೆಯ ಹೆಚ್ಚಿನ ಆರ್ಥಿಕ ತಜ್ಞರು ಶೇ. 0.25 ರಷ್ಟು ಬಡ್ಡಿದರ ಏರಿಕೆಯನ್ನು ನಿರೀಕ್ಷಿಸುತ್ತಿದ್ದರೆ, ಲಾರ್ಸನ್ & ಟೂಬ್ರೊ (L&T) ಗ್ರೂಪ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಸಚ್ಚಿದಾನಂದ ಶುಕ್ಲಾ ಅವರಂತಹ ಕೆಲವು ತಜ್ಞರು “ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಆಧಾರಿತ ಹಣದುಬ್ಬರ ಇನ್ನು ತೀವ್ರಗೊಂಡಿಲ್ಲದಿರುವುದರಿಂದ ಆರ್‌ಬಿಐ ಪ್ರಸ್ತುತ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಬಹುದು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಥರ ಮತ್ತೊಂದು ನಗರ ಇಲ್ಲ; ಕಂಪನಿ ಶಿಫ್ಟ್ ಮಾಡಿದ್ದು ಒಳ್ಳೇದಾಯ್ತು: ಬ್ಯುಸಿನೆಸ್ಮ್ಯಾನ್ ಹರೀಶ್ ವರದರಾಜನ್
ಕೆಲ ಆರ್ಥಿಕ ತಜ್ಞರು ಅಕ್ಟೋಬರ್ನಲ್ಲಿ 25 ಮೂಲಾಂಕ ಮತ್ತು ಡಿಸೆಂಬರ್ನಲ್ಲಿ 25 ಮೂಲಾಂಕಗಳಷ್ಟು ಬಡ್ಡಿ ಏರಿಕೆ ಮಾಡಬಹುದು ಎಂದು ನಿರೀಕ್ಷಿಸಿದ್ದಾರೆ.
ರಿಸರ್ವ್ ಬ್ಯಾಂಕ್ಗೆ ತತಕ್ಷಣದ ದೊಡ್ಡ ಗುರಿ ಎಂದರೆ ಹಣದುಬ್ಬರವನ್ನು ಶೇ. 4 ಅನ್ನು ಮೀರದಂತೆ ನೋಡಿಕೊಳ್ಳುವುದು. ಜಿಡಿಪಿ ನಿರೀಕ್ಷೆಮೀರಿ ಬೆಳವಣಿಗೆ ಹೊಂದುತ್ತಿರುವುದು ಆರ್‌ಬಿಐ ಮೇಲೆ ಒತ್ತಡ ಕಡಿಮೆ ಮಾಡಿದೆ. ಹಣದುಬ್ಬರಕ್ಕೆ ಕಡಿವಾಣ ಹಾಕಲು ಹೆಚ್ಚು ನಿರ್ಭೀಡೆಯಿಂದ ಅದು ಅಡಿ ಇಡಲು ಸಾಧ್ಯ. ಹೀಗಾಗಿ, ರೆಪೋ ದರವನ್ನು ಏರಿಸಿದರೆ ಅಚ್ಚರಿ ಇರುವುದಿಲ್ಲ.
ಇದನ್ನೂ ಓದಿ: ‘ಕಷ್ಟ ಕಾಲ ಬರ್ತಿದೆ, ಸಾಲ ಬೇಡ, ಮೂರು ವರ್ಷದ ಎಮರ್ಜೆನ್ಸಿ ಫಂಡ್ ಇಡಿ’; ರಾಹುಲ್ ಗಾಂಧಿ ಸಲಹೆಗಾರನ ಪೋಸ್ಟ್ ವೈರಲ್
ಅಕ್ಟೋಬರ್ 7 ರಂದು ಆರ್‌ಬಿಐ ಗವರ್ನರ್ ನೇತೃತ್ವದ ಸಮಿತಿಯು ತನ್ನ ಅಂತಿಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಲಿದೆ. ಅಂದು ಆರ್‌ಬಿಐ ಗವರ್ನರ್ ಅವರು ಬ್ಯಾಂಕ್ ದರಗಳನ್ನು ಪ್ರಕಟಿಸುತ್ತಾರೆ. ಜಿಡಿಪಿ, ಹಣದುಬ್ಬರಗಳು ಮುಂದಿನ ವರ್ಷದವರೆಗೆ ಹೇಗಿರಬಹುದು ಎಂಬ ಅಂದಾಜು ನೀಡಲಿದ್ದಾರೆ. ಒಟ್ಟಾರೆ ದೇಶ ವಿದೇಶಗಳ ಆರ್ಥಿಕ ವಾತಾವರಣ, ಹಾಗು ಅದರ ಅಪಾಯ ಭಾರತದ ಆರ್ಥಿಕತೆ ಮೇಲೆ ಎಷ್ಟಾಗಬಹುದು ಎಂಬುದನ್ನು ವಿಶ್ಲೇಷಿಸಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ