ಜೂನ್ 5ರಿಂದ ಆರ್​ಬಿಐ ಎಂಪಿಸಿ ಸಭೆ; ಡಿಸೆಂಬರ್​ವರೆಗೂ ಬಡ್ಡಿದರ ಇಳಿಕೆ ಇಲ್ಲವಾ?

|

Updated on: Jun 03, 2024 | 12:07 PM

RBI MPC Meeting Updates: ಆರ್​ಬಿಐನ ಹಣಕಾಸು ನೀತಿ ಸಮಿತಿಯ ಸಭೆ ಜೂನ್ 5ರಂದು ಆರಂಭವಾಗಲಿದ್ದು, ಜೂನ್ 7ಕ್ಕೆ ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ. ಎಂಪಿಸಿ ಸಭೆಯಲ್ಲಿ ಹಣದುಬ್ಬರ, ಜಿಡಿಪಿ ಬಗ್ಗೆ ಅವಲೋಕನ ಮಾಡುವುದಲ್ಲದೆ, ಬಹಳ ಮುಖ್ಯವಾದ ರೆಪೋ ಇತ್ಯಾದಿ ದರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಕಳೆದ ಹಲವು ಬಾರಿಯಿಂದಲೂ ಬಡ್ಡಿದರ ಶೇ. 6.5ರಲ್ಲೇ ಮುಂದುವರಿಯುತ್ತಿದ್ದು ಈ ಬಾರಿಯೂ ಯಥಾಸ್ಥಿತಿ ಉಳಿಸುವ ಸಾಧ್ಯತೆ ಇದೆ.

ಜೂನ್ 5ರಿಂದ ಆರ್​ಬಿಐ ಎಂಪಿಸಿ ಸಭೆ; ಡಿಸೆಂಬರ್​ವರೆಗೂ ಬಡ್ಡಿದರ ಇಳಿಕೆ ಇಲ್ಲವಾ?
ಆರ್​ಬಿಐ
Follow us on

ನವದೆಹಲಿ, ಜೂನ್ 3: ಭಾರತೀಯ ರಿಸರ್ವ್ ಬ್ಯಾಂಕ್ ದ್ವೈಮಾಸಿಕವಾಗಿ ನಡೆಸುವ ಮಾನಿಟರಿ ಪಾಲಿಸಿ ಕಮಿಟಿ ಸಭೆ (Monetary policy committee) ಇದೇ ಬುಧವಾರ (ಜೂನ್ 5) ಆರಂಭವಾಗಲಿದೆ. ಎರಡು ದಿನಗಳ ಸಭೆ ಬಳಿಕ ಜೂನ್ 7ರಂದು ಸಭೆಯ ನಿರ್ಣಯಗಳನ್ನು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಪ್ರಕಟಿಸಲಿದ್ದಾರೆ. ಈ ಸಭೆಯಲ್ಲಿ ಎಲ್ಲರ ಚಿತ್ತ ಹೆಚ್ಚಾಗಿ ಬ್ಯಾಂಕ್ ಬಡ್ಡಿದರ ವಿಚಾರದ ಬಗ್ಗೆ ನೆಟ್ಟಿರುತ್ತದೆ. ಜೊತೆಗೆ, ಜಿಡಿಪಿ ಮತ್ತು ಹಣದುಬ್ಬರದ ಬಗ್ಗೆ ಆರ್​ಬಿಐ ಮಾಡುವ ಅಂದಾಜು ಕುರಿತೂ ಕುತೂಹಲ ಇರುತ್ತದೆ.

ಕಳೆದ ಬಾರಿಯ ಎಂಪಿಸಿ ಸಭೆ ಏಪ್ರಿಲ್ ತಿಂಗಳಲ್ಲಿ ನಡೆದಿತ್ತು. ಈ ಹಣಕಾಸು ವರ್ಷದಲ್ಲಿ ಇದು ಎರಡನೇ ಸಭೆಯಾಗಲಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸೇರಿದಂತೆ ಆರು ಜನರು ಮಾನಿಟರಿ ಪಾಲಿಸಿ ಕಮಿಟಿಯಲ್ಲಿ ಇದ್ದಾರೆ. ಇವರ ಪೈಕಿ ಮೂವರು ಆರ್​ಬಿಐಯೊಳಗೆಯೇ ಇರುವ ಅಧಿಕಾರಿಗಳಾದರೆ ಇನ್ನೂ ಮೂವರು ಹೊರಗಿನ ಸದಸ್ಯರಾಗಿರುತ್ತಾರೆ. ನಿಯಮಗಳ ಪ್ರಕಾರ ಆರ್​ಬಿಐನ ಎಂಪಿಸಿ ಒಂದು ವರ್ಷದಲ್ಲಿ ಕನಿಷ್ಠ ನಾಲ್ಕು ಬಾರಿ ಸಭೆ ನಡೆಸಬೇಕು. ಸಾಮಾನ್ಯವಾಗಿ ಎರಡು ತಿಂಗಳಿಗೊಮ್ಮೆ ಎಂಪಿಸಿ ಸಭೆ ನಡೆಯುತ್ತದೆ. ಅಂದರೆ ವರ್ಷದಲ್ಲಿ ಆರು ಬಾರಿ ಸಭೆ ನಡೆಯುತ್ತಿದೆ.

ಇದನ್ನೂ ಓದಿ: ರಿಸಲ್ಟ್ ಬರುವ ಮುನ್ನವೇ ಉಬ್ಬಿ ನಿಂತ ಷೇರುಪೇಟೆ; ನಿಫ್ಟಿ, ಸೆನ್ಸೆಕ್ಸ್ ಸೇರಿ ಪ್ರಮುಖ ಸೂಚ್ಯಂಕಗಳು ಮೇಲಕ್ಕೆ

ಏಪ್ರಿಲ್ 5ರಂದು ಆರ್​ಬಿಐ ಬಡ್ಡಿದರವನ್ನು ಶೇ. 6.50ರಲ್ಲಿ ಮುಂದುವರಿಸಲು ನಿರ್ಧರಿಸಿದೆ. ಎಂಪಿಸಿಯಲ್ಲಿರುವ ಆರು ಸದಸ್ಯರಲ್ಲಿ ಐವರು ಬಡ್ಡಿದರ ಯಥಾಸ್ಥಿತಿ ಉಳಿಸುವ ಪರವಾಗಿ ಮತ ಹಾಕಿದ್ದಾರೆ. ಒಬ್ಬರಿಂದ ಮಾತ್ರವೇ ವಿರುದ್ಧ ಮತ ಬಂದಿದೆ. ಈ ಬಾರಿಯೂ 5:1 ಮತಗಳ ಬೆಂಬಲದಲ್ಲಿ ಬಡ್ಡಿದರ ಮುಂದುವರಿಸುವ ನಿರ್ಧಾರ ಬರಬಹುದು.

ಡಿಸೆಂಬರ್​ವರೆಗೂ ರೆಪೋ ದರ ಕಡಿತ ಇಲ್ಲ?

ರೆಪೋ ದರ ಎಂಬುದು ಬ್ಯಾಂಕುಗಳಿಗೆ ಆರ್​ಬಿಐನಿಂದ ಕೊಡಲಾಗುವ ಫಂಡಿಂಗ್​ಗೆ ವಿಧಿಸುವ ಬಡ್ಡಿದರವಾಗಿದೆ. ಇದಕ್ಕೆ ಅನುಗುಣವಾಗಿ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಬಡ್ಡಿದರ ವಿಧಿಸಬಹುದು. ಹಣದುಬ್ಬರ ಮೇಲ್ಮಟ್ಟದಲ್ಲೇ ಇದ್ದರೆ ರೆಪೋ ದರವನ್ನೂ ಮೇಲ್ಮಟ್ಟದಲ್ಲೇ ಉಳಿಸಲಾಗುತ್ತದೆ. ಹಣದುಬ್ಬರ ನಿಯಂತ್ರಣಕ್ಕೆ ರೆಪೋ ಒಂದು ಅಸ್ತ್ರವಾಗಿದೆ.

ಇದನ್ನೂ ಓದಿ: ಕಳೆದ 10 ವರ್ಷದಲ್ಲಿ ಒಮ್ಮೆಯೂ ನೆಗಟಿವ್ ರಿಟರ್ನ್ಸ್ ಕೊಟ್ಟಿಲ್ಲ 36 ಈಕ್ವಿಟಿ ಮ್ಯೂಚುವಲ್ ಫಂಡ್ಸ್

ಭಾರತದಲ್ಲಿ ಹಣದುಬ್ಬರ ಇನ್ನೂ ಕೂಡ ಶೇ. 4ಕ್ಕಿಂತ ಮೇಲ್ಮಟ್ಟದಲ್ಲೇ ಉಳಿದಿದೆ. ಹೀಗಾಗಿ, ಸದ್ಯಕ್ಕೆ ಬಡ್ಡಿದರ ಇಳಿಸುವ ಮನಸ್ಸಿನಲ್ಲಿ ಆರ್​ಬಿಐ ಇಲ್ಲ. ತಜ್ಞರ ಪ್ರಕಾರ ಡಿಸೆಂಬರ್​ವರೆಗೂ ರೆಪೋ ದರವನ್ನು ಕಡಿತಗೊಳಿಸುವ ಸಾಧ್ಯತೆ ಬಹಳ ಕಡಿಮೆ. 2024ರ ಜನವರಿ ಬಳಿಕ ಬಡ್ಡಿದರ ಕಡಿಮೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ