Nandini Milk Price: ಮದರ್ ಡೈರಿ ಹಾಲಿನ ದರವೂ ಹೆಚ್ಚಳ; ಏರಿಕೆಯಾಗುತ್ತಾ ನಂದಿನಿ ಹಾಲಿನ ಬೆಲೆ?

ನಂದಿನಿ ಹಾಲಿನ ದರವನ್ನು ಕೆಎಂಎಫ್​​​ ಕಳೆದ ವರ್ಷ ಆಗಸ್ಟ್​ನಲ್ಲಿ ಹೆಚ್ಚಿಸಿತ್ತು. ಇದೀಗ ದೇಶದ ಇತರ ಸಹಕಾರಿ ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಳ ಘೋಷಣೆ ಮಾಡಿವೆ. ಅಮುಲ್ ಮತ್ತು ಮದರ್ ಡೈರಿ ಹಾಲಿನ ದರ ಹೆಚ್ಚಿಸಿವೆ. ಹೀಗಾಗಿ ನಂದಿನಿ ಕೂಡ ದರ ಹೆಚ್ಚಳ ಮಾಡಲಿದೆಯೇ? ಈ ಬಗ್ಗೆ ಕೆಎಂಎಫ್ ಅಧಿಕಾರಿಗಳು ಹೇಳಿದ್ದೇನು? ತಿಳಿಯಲು ಮುಂದೆ ಓದಿ.

Nandini Milk Price: ಮದರ್ ಡೈರಿ ಹಾಲಿನ ದರವೂ ಹೆಚ್ಚಳ; ಏರಿಕೆಯಾಗುತ್ತಾ ನಂದಿನಿ ಹಾಲಿನ ಬೆಲೆ?
ಮದರ್ ಡೈರಿ ಹಾಲಿನ ದರವೂ ಹೆಚ್ಚಳ; ಏರಿಕೆಯಾಗುತ್ತಾ ನಂದಿನಿ ಹಾಲಿನ ಬೆಲೆ?

Updated on: Jun 03, 2024 | 12:53 PM

ಬೆಂಗಳೂರು, ಜೂನ್ 3: ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ಅಮುಲ್​ (Amul Milk Price) ಇಂದಿನಿಂದಲೇ ಜಾರಿಗೆ ಬರುವಂತೆ ಹಾಲಿನ ದರ ಹೆಚ್ಚಳ ಮಾಡಿದ್ದು, ಇದರ ಬೆನ್ನಲ್ಲೇ ದೆಹಲಿಯಲ್ಲಿ ಮದರ್ ಡೈರಿ ಕೂಡ ಹಾಲಿನ ಬೆಲೆ ಏರಿಕೆ (Mother Dairy Milk Price Hike) ಮಾಡಿದೆ. ಇದೀಗ ಕರ್ನಾಟಕದಲ್ಲಿ ನಂದಿನಿ ಹಾಲಿನ (Nandini Milk) ಬೆಲೆ ಕೂಡ ಏರಿಕೆಯಾಗಬಹುದೇ ಎಂಬ ಆತಂಕ ಗ್ರಾಹಕರಲ್ಲಿ ಮೂಡಿದೆ. ದೇಶದಾದ್ಯಂತ ಸಹಕಾರಿ ಹಾಲು ಒಕ್ಕೂಟಗಳು ಬೆಲೆ ಏರಿಕೆಗೆ ಮುಂದಾಗಿರುವುದೇ ಇದಕ್ಕೆ ಕಾರಣ.

ಮದರ್ ಡೈರಿಯು ದೆಹಲಿ-ಎನ್‌ಸಿಆರ್‌ನಲ್ಲಿ ಹಾಲಿನ ದರದಲ್ಲಿ ಲೀಟರ್‌ಗೆ 2 ರೂಪಾಯಿ ಹೆಚ್ಚಳ ಮಾಡಿದೆ. ದೆಹಲಿ-ಎನ್‌ಸಿಆರ್ ಮತ್ತು ಇತರ ಮಾರುಕಟ್ಟೆಗಳಲ್ಲಿ ಸೋಮವಾರದಿಂದಿಂದಲೇ (ಜೂನ್ 3) ಹಾಲಿನ ಎಲ್ಲಾ ವಿಧಗಳ ಮೇಲೆ ಬೆಲೆ ಏರಿಕೆ ಅನ್ವಯಿಸುತ್ತದೆ ಎಂದು ಕಂಪನಿ ತಿಳಿಸಿದೆ. ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಒಂದು ದಿನ ಮುಂಚಿತವಾಗಿಯೇ ಈ ನಿರ್ಧಾರ ಪ್ರಕಟವಾಗಿದೆ.

ಒಂದು ವರ್ಷದಿಂದ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಹಾಲಿನ ಬೆಲೆಗಳನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸಲಾಗುತ್ತಿದೆ ಎಂದು ಮದರ್ ಡೈರಿ ಹೇಳಿದೆ.

ಅಮುಲ್​ ಕಂಪನಿಯು ಎಲ್ಲ ರೀತಿಯ ಹಾಲಿನ ಬೆಲೆಯನ್ನು ಲೀಟರ್​ಗೆ 2 ರೂ.ಗಳಷ್ಟು ಹೆಚ್ಚಿಸಿ ಸೋಮವಾರ ಬೆಳಗ್ಗೆ ಪ್ರಕಟಣೆ ಹೊರಡಿಸಿತ್ತು. ಈ ಬೆಲೆ ಏರಿಕೆ ಇಂದಿನಿಂದಲೇ ಜಾರಿಯಾಗಲಿದೆ ಎಂದು ತಿಳಿಸಿತ್ತು.

ನಂದಿನಿ ಹಾಲಿನ ಬೆಲೆ ಏರಿಕೆಯಾಗಲಿದೆಯೇ?

ಕರ್ನಾಟಕದಲ್ಲಿ ನಂದಿನಿ ಹಾಲಿನ ದರವನ್ನು ಕೆಎಂಎಫ್​​​ ಕಳೆದ ವರ್ಷ ಆಗಸ್ಟ್​ನಲ್ಲಿ ಪ್ರತಿ ಲೀಟರ್​ಗೆ 3 ರೂ. ಹೆಚ್ಚಳ ಮಾಡಿತ್ತು. ಬೆಲೆ ಏರಿಕೆ ನಂತರ ಒಂದು ಲೀಟರ್‌ ಟೋನ್ಡ್ ಹಾಲಿಗೆ 42 ರೂ., ಹೋಮೋಜೆನೈಸ್ಡ್ ಹಾಲಿಗೆ 43 ರೂ., ಪಾಶ್ಚರೀಕರಿಸಿದ ಹಾಲಿಗೆ 46 ರೂ. ಮತ್ತು ಶುಭಂ ವಿಶೇಷ ಹಾಲಿಗೆ 48 ರೂ. ದರ ನಿಗದಿಯಾಗಿತ್ತು. ಸದ್ಯ ಇದೇ ದರದಲ್ಲಿ ನಂದಿನಿ ಬ್ರ್ಯಾಂಡ್ ಹಾಲು ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: ಅಮುಲ್ ದರ ಏರಿಕೆ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಂದಿನಿ ಹಾಲಿನ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ

ನಂದಿನಿ ಹಾಲಿನ ದರ ಹೆಚ್ಚಳ ಪ್ರಸ್ತಾಪ ಸದ್ಯಕ್ಕೆ ನಮ್ಮ ಮುಂದೆ ಇಲ್ಲ ಎಂದು ಕೆಎಂಎಫ್​ನ ಮಾರುಕಟ್ಟೆ ಅಧಿಕಾರಿ ರಘುನಂದನ್ ‘ಟಿವಿ9 ಕನ್ನಡ ಡಿಜಿಟಲ್’ ವಿಭಾಗಕ್ಕೆ ತಿಳಿಸಿದ್ದಾರೆ. ಹೀಗಾಗಿ ಸದ್ಯದ ಮಟ್ಟಿಗೆ ನಂದಿನಿ ಗ್ರಾಹಕರು ನಿರಾಳರಾಗುವಂತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us