ಇನ್ಮುಂದೆ ನೋಟುಗಳು ಹರಿಯಲ್ಲ, ನೀರಿಗೆ ನೆನೆಯಲ್ಲ: 200 ಕೋಟಿ ಪ್ಲಾಸ್ಟಿಕ್ ನೋಟು ಮುದ್ರಣ; ಕಾಗದದ ನೋಟುಗಳು ಬಂದ್ ಆಗುತ್ತಾ?

ಆರ್‌ಬಿಐ ದೇಶದಲ್ಲಿ ಪ್ರಥಮ ಬಾರಿಗೆ 10, 20 ರೂ. ಮುಖಬೆಲೆಯ ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಪ್ರಾಯೋಗಿಕವಾಗಿ ಚಲಾವಣೆಗೆ ತರುತ್ತಿದೆ. ಇವು ಕಾಗದದ ನೋಟುಗಳಿಗಿಂತ 2-6 ಪಟ್ಟು ಹೆಚ್ಚು ಬಾಳಿಕೆ ಬರುತ್ತವೆ, ಸುಲಭವಾಗಿ ಹರಿಯುವುದಿಲ್ಲ ಮತ್ತು ನಕಲಿಸುವುದು ಕಷ್ಟ. ಇದು ಆರ್.ಬಿ.ಐ.ಗೆ ದೀರ್ಘಾವಧಿಯಲ್ಲಿ ವೆಚ್ಚ ಉಳಿತಾಯ ಮಾಡಲಿದೆ. ಅಸ್ತಿತ್ವದಲ್ಲಿರುವ ಕಾಗದದ ನೋಟುಗಳೊಂದಿಗೆ ಇವು ಸಮಾಂತರವಾಗಿ ಚಲಾವಣೆಯಲ್ಲಿರುತ್ತವೆ.

ಇನ್ಮುಂದೆ ನೋಟುಗಳು ಹರಿಯಲ್ಲ, ನೀರಿಗೆ ನೆನೆಯಲ್ಲ: 200 ಕೋಟಿ ಪ್ಲಾಸ್ಟಿಕ್ ನೋಟು ಮುದ್ರಣ; ಕಾಗದದ ನೋಟುಗಳು ಬಂದ್ ಆಗುತ್ತಾ?
ಸಾಂದರ್ಭಿಕ ಚಿತ್ರ

Updated on: Jul 29, 2026 | 2:56 PM

ದೆಹಲಿ, ಜು.29: ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದಲ್ಲಿ ಪ್ರಥಮ ಬಾರಿಗೆ ಪ್ಲಾಸ್ಟಿಕ್ (ಪಾಲಿಮರ್) ಕರೆನ್ಸಿ ನೋಟುಗಳನ್ನು ಪ್ರಾಯೋಗಿಕವಾಗಿ ಚಲಾವಣೆಗೆ ತರಲು ಮಹತ್ವದ ಹೆಜ್ಜೆ ಇಟ್ಟಿದೆ. 10 ಹಾಗೂ 20 ರೂ. ಮುಖಬೆಲೆಯ ಒಟ್ಟು 200 ಕೋಟಿ (2 ಬಿಲಿಯನ್) ಪ್ಲಾಸ್ಟಿಕ್ ನೋಟುಗಳನ್ನು ಪ್ರಾಯೋಗಿಕ ಪರೀಕ್ಷೆಗೆ (Field Trials) ಮುದ್ರಿಸುವ ಆರ್‌ಬಿಐ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅಂಕಿತ ನೀಡಿದೆ ಎಂದು ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

100 ಕೋಟಿ (1 ಬಿಲಿಯನ್) 10 ರೂ. ಮುಖಬೆಲೆ ನೋಟಗಳನ್ನು ಹಾಗೂ 100 ಕೋಟಿ 20 ರೂ. ಮುಖಬೆಲೆಯ ಪ್ಲಾಸ್ಟಿಕ್ ನೋಟುಗಳ ಮುದ್ರಣ ಮಾಡಲಾಗುತ್ತದೆ. ಈ ಪ್ರಾಯೋಗಿಕ ಪರೀಕ್ಷೆಗಳು (Field Trials) ಯಶಸ್ವಿಯಾದ ನಂತರವಷ್ಟೇ ಇವುಗಳನ್ನು ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕ ಚಲಾವಣೆಗೆ ನೀಡಲಾಗುತ್ತದೆ.

ಕಾಗದದ ನೋಟುಗಳು ಬಂದ್ ಮಾಡಲಾಗುತ್ತಾ?

ಕಾಗದದ ನೋಟುಗಳನ್ನು ಸಂಪೂರ್ಣವಾಗಿ ಹಿಂಪಡೆಯುವ ಅಥವಾ ಬಂದ್ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಹೊಸ ಪ್ಲಾಸ್ಟಿಕ್ ನೋಟುಗಳು ಮತ್ತು ಚಾಲ್ತಿಯಲ್ಲಿರುವ ಕಾಗದದ ನೋಟುಗಳು ಮಾರುಕಟ್ಟೆಯಲ್ಲಿ ಒಟ್ಟಿಗೇ (ಸಮಾಂತರವಾಗಿ) ಚಲಾವಣೆಯಲ್ಲಿರಲಿವೆ.

ಡಿಜಿಟಲ್ ಪಾವತಿ (UPI) ಮೇಲಾಗುವ ಪರಿಣಾಮ:

ಪ್ರಸ್ತುತ ಈ ಯೋಜನೆ ಆರಂಭಿಕ ಹಂತದಲ್ಲಿದೆ. ಪ್ಲಾಸ್ಟಿಕ್ ನೋಟುಗಳು ಪೂರ್ಣಪ್ರಮಾಣದಲ್ಲಿ ಜಾರಿಯಾದ ಮೇಲಷ್ಟೇ ಡಿಜಿಟಲ್ ಪಾವತಿಗಳ ಮೇಲಾಗುವ ಪರಿಣಾಮವನ್ನು ಅಳೆಯಬಹುದು. ನಗದು ಹಣ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗಳು ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸರ್ಕಾರ ತಿಳಿಸಿದೆ.

ಪ್ಲಾಸ್ಟಿಕ್ (ಪಾಲಿಮರ್) ನೋಟುಗಳ ವಿಶೇಷತೆ ಏನು?

ಪ್ರಸ್ತುತ ಬಳಸಲಾಗುವ ಕಾಗದದ ನೋಟುಗಳಿಗೆ ಹೋಲಿಸಿದರೆ ಪ್ಲಾಸ್ಟಿಕ್ (ಪಾಲಿಮರ್) ನೋಟುಗಳು 2ರಿಂದ 6 ಪಟ್ಟು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಇವು ನೀರಿಗೆ ನೆನೆಯುವುದಿಲ್ಲ, ಸುಲಭವಾಗಿ ಹರಿಯುವುದಿಲ್ಲ ಹಾಗೂ ಕೊಳೆಯಾಗುವುದಿಲ್ಲ. ಪ್ಲಾಸ್ಟಿಕ್ ನೋಟುಗಳ ಆರಂಭಿಕ ಮುದ್ರಣ ವೆಚ್ಚ ಹೆಚ್ಚಿದ್ದರೂ, ಇವು ದೀರ್ಘಕಾಲ ಬಾಳಿಕೆ ಬರುವುದರಿಂದ ಹೊಸ ನೋಟುಗಳನ್ನು ಪದೇ ಪದೇ ಮುದ್ರಿಸುವ, ರವಾನಿಸುವ ಹಾಗೂ ಹಳೆಯ ನೋಟುಗಳನ್ನು ನಾಶಪಡಿಸುವ ಆರ್‌ಬಿಐನ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ. ಪಾಲಿಮರ್ ನೋಟುಗಳಲ್ಲಿ ಆಧುನಿಕ ಭದ್ರತಾ ವೈಶಿಷ್ಟ್ಯಗಳು (ಪಾರದರ್ಶಕ ವಿಂಡೋ ಇತ್ಯಾದಿ) ಇರುವುದರಿಂದ ನಕಲಿ ನೋಟುಗಳನ್ನು ತಡೆಯಲು ನೆರವಾಗಲಿದೆ.

ಸ್ತುತ ಭಾರತದ ಕರೆನ್ಸಿ ನೋಟುಗಳನ್ನು ಹೇಗೆ ತಯಾರಿಸಲಾಗುತ್ತದೆ?

ಭಾರತದಲ್ಲಿ ಪ್ರಸ್ತುತ ಚಲಾವಣೆಯಲ್ಲಿರುವ ಕಾಗದದ ನೋಟುಗಳನ್ನು ಮರಗಳ ಜಜ್ಜಿದ ಕಚ್ಚಾವಸ್ತುವಿನಿಂದ ತಯಾರಿಸುವುದಿಲ್ಲ. ಬದಲಾಗಿ, 100% ಶುದ್ಧ ಹತ್ತಿ ದಾರಗಳಿಂದ (Cotton Fibres) ತಯಾರಿಸಲಾಗುತ್ತದೆ. ಹೀಗಾಗಿ ಭಾರತೀಯ ನೋಟುಗಳ ತಯಾರಿಕೆಯಿಂದ ಸಾಂಪ್ರದಾಯಿಕ ಮರಗಳ ನಾಶವಾಗುವುದಿಲ್ಲ.

ಇದನ್ನೂ ಓದಿ: ಮೊಬೈಲ್‌ನಲ್ಲೇ ವಿದ್ಯುತ್ ಬಿಲ್ ಪಾವತಿಸುವುದು ಹೇಗೆ?: ಸರಳ ಮತ್ತು ಸುಲಭ ವಿಧಾನ

ಜಾಗತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ನೋಟುಗಳ ಬಳಕೆ:

1988ರಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಪೂರ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಿತು. ಪ್ರಸ್ತುತ ಬ್ರಿಟನ್ (UK), ಕೆನಡಾ, ನ್ಯೂಜಿಲೆಂಡ್, ಸಿಂಗಾಪುರ್, ಮಲೇಶಿಯಾ ಹಾಗೂ ಥೈಲ್ಯಾಂಡ್ ಸೇರಿದಂತೆ ವಿಶ್ವದ ೬೦ಕ್ಕೂ ಹೆಚ್ಚು ದೇಶಗಳು ಪಾಲಿಮರ್ ಕರೆನ್ಸಿಯನ್ನು ಯಶಸ್ವಿಯಾಗಿ ಬಳಸುತ್ತಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us