ಸಾವಿರಾರು ರೂ ಮೌಲ್ಯದ ಎಐ ಮಾಡಲ್​ಗಳನ್ನು ಭಾರತೀಯರಿಗೆ ಉಚಿತವಾಗಿ ಕೊಡುತ್ತಿರುವುದು ಯಾಕೆ? ಇಲ್ಲಿದೆ ಮರ್ಮ

Google, OpenAI, Perplexity providing free AI to Indians: ಚ್ಯಾಟ್​ಜಿಪಿಟಿ ಗೋನಂತಹ ಸುಧಾರಿತ ಎಐ ಮಾಡಲ್​ಗಳನ್ನು ಭಾರತೀಯರಿಗೆ ಉಚಿತವಾಗಿ ನೀಡಲಾಗುತ್ತಿದೆ. ಇವುಗಳ ಸಬ್​ಸ್ಕ್ರಿಪ್ಷನ್​ಗೆ ಹಲವು ಸಾವಿರ ರೂ ಆಗುತ್ತದೆ. ಈ ಉಚಿತ ಎಐ ಹಂಚಿಕೆಯ ತಂತ್ರದ ಹಿಂದೆ ಬೇರೆ ಉದ್ದೇಶ ಇದೆ. ಭಾರತದಲ್ಲಿ ನಿರ್ಮಾಣವಾಗುವ ಅಗಣಿತ ದತ್ತಾಂಶವು ಎಐ ಮಾಡಲ್​ಗಳನ್ನು ಮತ್ತಷ್ಟು ಟ್ರೈನ್ ಮಾಡಲು ಬಳಕೆಯಾಗುತ್ತದೆ.

ಸಾವಿರಾರು ರೂ ಮೌಲ್ಯದ ಎಐ ಮಾಡಲ್​ಗಳನ್ನು ಭಾರತೀಯರಿಗೆ ಉಚಿತವಾಗಿ ಕೊಡುತ್ತಿರುವುದು ಯಾಕೆ? ಇಲ್ಲಿದೆ ಮರ್ಮ
ಎಐ

Updated on: Nov 10, 2025 | 12:55 PM

ಚ್ಯಾಟ್​ಜಿಪಿಟಿ, ಪರ್ಪ್ಲೆಕ್ಸಿಟಿ, ಗೂಗಲ್ ಜೆಮಿನಿ ಇತ್ಯಾದಿ ಎಐ ಚ್ಯಾಟ್​ಬೋಟ್​ಗಳನ್ನು (AI Models) ಭಾರತೀಯರು ಉಚಿತವಾಗಿ ಅನುಭವಿಸುತ್ತಿದ್ದಾರೆ. ಅಡ್ವಾನ್ಸ್ಡ್ ವರ್ಷನ್​ಗಳೂ ಕೂಡ ಉಚಿತವಾಗಿ ಲಭ್ಯವಿವೆ. ಈ ಸುಧಾರಿತ ಆವೃತ್ತಿಯ ಎಐ ಮಾಡಲ್​ಗಳನ್ನು ಸಬ್​ಸ್ಕ್ರೈಬ್ ಮಾಡಬೇಕೆಂದರೆ ವರ್ಷಕ್ಕೆ 10-30 ಸಾವಿರ ರೂ ತೆರಬೇಕು. ಇದನ್ನು ಕಂಪನಿಗಳು ಉಚಿತವಾಗಿ ಹಂಚುತ್ತಿವೆ. ಚ್ಯಾಟ್​ಜಿಪಿಟಿಯ ಸುಧಾರಿತ ಆವೃತ್ತಿಯಾದ ಚ್ಯಾಟ್​ಜಿಪಿಟಿ ಗೋ ಪ್ಲಾನ್ ಅನ್ನು ಒಂದು ವರ್ಷ ಉಚಿತ ಕೊಡಲಾಗುತ್ತಿದೆ.

ಹೊಸ ಸೇವೆಗಳನ್ನು ಈ ರೀತಿ ಆರಂಭದಲ್ಲಿ ಉಚಿತವಾಗಿ ನೀಡುವುದು ಬ್ಯುಸಿನೆಸ್ ಸ್ಟ್ರಾಟಿಜಿ. ಜನರು ಇವುಗಳಿಗೆ ಒಗ್ಗಿಕೊಂಡ ಬಳಿಕ ಹಂತ ಹಂತವಾಗಿ ದರ ಹೇರಿಕೆ ಮತ್ತು ಏರಿಕೆ ಮಾಡುತ್ತಾ ಹೋಗಲಾಗುತ್ತದೆ. ಜಿಯೋ ಟೆಲಿಕಾಂ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆ ಊರಲು ಇದೇ ತಂತ್ರ ಅನುಸರಿಸಿತ್ತು. ಈ ಜಾಗತಿಕ ಎಐ ಕಂಪನಿಗಳೂ ಇದೇ ತಂತ್ರ ಅನುಸರಿಸುತ್ತಿರಬಹುದು ಎಂದು ಮೇಲ್ನೋಟಕ್ಕೆ ತೋರುತ್ತದೆ.

ಇದನ್ನೂ ಓದಿ: ನಿರೀಕ್ಷೆಮೀರಿಸುತ್ತದಾ ಭಾರತದ ಈ ವರ್ಷದ ಆರ್ಥಿಕ ಬೆಳವಣಿಗೆ?; ವಿ ಅನಂತನಾಗೇಶ್ವರನ್ ವಿಶ್ವಾಸ

ಆದರೆ, ಈ ಉಚಿತ ಕೊಡುಗೆಯ ಹಿಂದೆ ಎಐ ಕಂಪನಿಗಳಿಗೆ ಇದಕ್ಕಿಂತಲೂ ಇನ್ನೂ ದೊಡ್ಡ ಉದ್ದೇಶ ಇದೆ ಎಂದು ತಜ್ಞರು ಭಾವಿಸಿದ್ದಾರೆ. ಅವರ ಪ್ರಕಾರ, ಎಐ ಮಾಡಲ್​ಗಳ ಬೆಳವಣಿಗೆಗೆ ಈಗ ಹೆಚ್ಚೆಚ್ಚು ದತ್ತಾಂಶಗಳು ಬೇಕು. ಭಾರತ ಈಗ ದತ್ತಾಂಶಗಳ ಭವ್ಯ ಭಂಡಾರವೇ ಆಗಿದೆ.

ಭಾರತದಲ್ಲಿ 70 ಕೋಟಿ ಇಂಟರ್ನೆಟ್ ಬಳಕೆದಾರರಿದ್ದಾರೆ. ಸ್ಮಾರ್ಟ್​ಫೋನ್ ಬಳಸುವವರ ಸಂಖ್ಯೆ ಬಹಳ ದೊಡ್ಡದಿದೆ. ಇಲ್ಲಿ ಡಾಟಾ ದರ ಕಡಿಮೆ ಇದೆ. ಹೀಗಾಗಿ, ಇಂಟರ್ನೆಟ್ ಬಳಕೆ ಬಹಳ ಅಧಿಕ ಇದೆ. ಇವರೆಲ್ಲರೂ ಕೂಡ ಮನಸೋಯಿಚ್ಛೆ ಎಐ ಮಾಡಲ್​ಗಳ ಸೇವೆ ಬಳಸಿಬಿಟ್ಟರೆ ಅಗಣಿತವಾದ ದತ್ತಾಂಶವೇ ನಿರ್ಮಾಣವಾಗುತ್ತದೆ. ಎಐ ಕಂಪನಿಗಳಿಗೆ ಇದುವೇ ಬಹಳ ದೊಡ್ಡ ನಿಧಿ.

ಇದನ್ನೂ ಓದಿ: ಸ್ಕ್ರ್ಯಾಪ್​ಗಳನ್ನು ಮಾರಿ ಒಂದೇ ತಿಂಗಳಲ್ಲಿ 800 ಕೋಟಿ ರೂ ಗಳಿಸಿದ ಸರ್ಕಾರ; 4 ವರ್ಷದಲ್ಲಿ ಬಂದ ಆದಾಯ 4,000 ಕೋಟಿ ರೂಗೂ ಹೆಚ್ಚು

ಎಐ ಮಾಡಲ್​ಗಳನ್ನು ಮತ್ತಷ್ಟು ಹರಿತವಾಗಿ ಟ್ರೈನ್ ಮಾಡಲು ಈ ದತ್ತಾಂಶ ಬಹಳ ಅಗತ್ಯ. ಭಾರತದಲ್ಲಿ ಎಐ ಮಾರುಕಟ್ಟೆ 2027ರಷ್ಟರಲ್ಲಿ 17 ಬಿಲಿಯನ್ ಡಾಲರ್ ದಾಟುವ ನಿರೀಕ್ಷೆ ಇದೆ. ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಎಐ ಮಾರುಕಟ್ಟೆ ಭಾರತದ್ದು. ಅಲ್ಲದೆ ಭಾರತವು ವಿಶ್ವದ ಬೋಟ್ ಟ್ರೈನಿಂಗ್ ರಾಜಧಾನಿಯಾಗುವತ್ತ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಎಐ ಮಾಡಲ್​ಗಳನ್ನು ಉಚಿತವಾಗಿ ನೀಡಲು ಕಂಪನಿಗಳು ಮುಂದಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ