
ಬೆಂಗಳೂರು, ನವೆಂಬರ್ 13: ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯಿಂದ ಜಾರಿಗೆ ತಂದ ಉಡಾನ್ ಯೋಜನೆಯಿಂದ ಸಣ್ಣ ಸಣ್ಣ ಪಟ್ಟಣಗಳಿಗೆ ವೈಮಾನಿಕ ಸಂಪರ್ಕ ಹೆಚ್ಚಬಹುದು ಎನ್ನುವ ನಿರೀಕ್ಷೆ ವಿಫಲಗೊಳ್ಳುತ್ತಿರುವಂತೆ ತೋರುತ್ತಿದೆ. ಕೆಲ ಮಾರ್ಗಗಳಲ್ಲಿ ಫ್ಲೈಟ್ಗಳೇ ನಿಂತು ಹೋಗಿವೆ. ಎರಡು ವರ್ಷದ ಹಿಂದೆ ಸಾಕಷ್ಟು ವಿಮಾನಗಳು ಮತ್ತು ಪ್ರಯಾಣಿಕರನ್ನು ಕಾಣುತ್ತಿದ್ದ ಏರ್ಪೋರ್ಟ್ಗಳು ಈಗ ಬಹುತೇಕ ಬಣಗುಡುತ್ತಿವೆ. ಕರ್ನಾಟಕದ ಶಿವಮೊಗ್ಗ, ಕಲಬುರ್ಗಿ ವಿಮಾನ ನಿಲ್ದಾಣಗಳು ಸೇರಿದಂತೆ ದೇಶದ ಕೆಲ ಏರ್ಪೋರ್ಟ್ಗಳು ಮುಚ್ಚಿ ಹೋಗುವ ಪರಿಸ್ಥಿತಿ ಎದುರಾಗಿದೆ.
ಸರ್ಕಾರದಿಂದ ಸಬ್ಸಿಡಿ ಸಿಗುವವರೆಗೂ ಮಾತ್ರ ಏರ್ಲೈನ್ಗಳು ಚಾಲನೆಯಲ್ಲಿ ಇರುವಂತಹ ಸ್ಥಿತಿ ಇದೆ. ಸಂಸತ್ನಲ್ಲಿ ಸರ್ಕಾರವೇ ನೀಡಿದ ಮಾಹಿತಿ ಪ್ರಕಾರ ಉಡಾನ್ ಯೋಜನೆಯಲ್ಲಿ ಆರಂಭಗೊಂಡಿದ್ದ ಏರ್ಪೋರ್ಟ್ಗಳ ಪೈಕಿ 26 ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟ ನಿಂತಿದೆ. ಅದರಲ್ಲಿ ಕಲಬುರ್ಗಿ, ಶಿಮ್ಲಾ ಇತ್ಯಾದಿ ಪ್ರಮುಖ ಪಟ್ಟಣಗಳೂ ಒಳಗೊಂಡಿವೆ.
ಕರ್ನಾಟಕದ ಶಿವಮೊಗ್ಗ ವಿಮಾನ ನಿಲ್ದಾಣವು ಪ್ರಮುಖ ಸವಾಲನ್ನು ಎದುರಿಸುತ್ತಿದ್ದು, ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ (UDAN) ಸಿಕ್ಕಿದ್ದ ಸಬ್ಸಿಡಿ (Viability Gap Funding) ಅವಧಿಯು ಮುಗಿಯುತ್ತಿರುವುದು ವಿಮಾನಯಾನ ಸೇವೆಗಳ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ.
ಇದನ್ನೂ ಓದಿ: ‘2030ರ ವೇಳೆಗೆ 7.5 ಲಕ್ಷ ಕೋಟಿ ಹೂಡಿಕೆ, 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ’: ಸಿಎಂ ಡಿಕೆ ಶಿವಕುಮಾರ್
ಇಂಡಿಗೋ ಮತ್ತು ಸ್ಪೈಸ್‌ಜೆಟ್‌ನಂತಹ ಸಂಸ್ಥೆಗಳು ಈಗಾಗಲೇ ಕಾರ್ಯಾಚರಣೆಯಿಂದ ಹಿಂದೆ ಸರಿದಿದ್ದು, ಪ್ರಸ್ತುತ ಸ್ಟಾರ್ ಏರ್ (Star Air) ಮಾತ್ರ ಏಕೈಕ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದೆ. ವಿಜಿಎಫ್ ಫಂಡಿಂಗ್ ನಿಂತರೆ ಇದು ವಿಮಾನ ಹಾರಾಟ ಮುಂದುವರಿಸುತ್ತದಾ ಎನ್ನುವುದು ಯಕ್ಷ ಪ್ರಶ್ನೆ.
ಪಂಜಾಬ್‌ನ ಬಟಿಂಡಾ ವಿಮಾನ ನಿಲ್ದಾಣದಲ್ಲೂ ಇದೇ ರೀತಿಯ ಪರಿಸ್ಥಿತಿ ಎದುರಾಗಿದ್ದು, ಮೂರು ವರ್ಷಗಳ ಒಪ್ಪಂದ ಮುಗಿದ ಬಳಿಕ ಅಲಯನ್ಸ್ ಏರ್ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ. ಒಮ್ಮೆ ಸರ್ಕಾರಿ ಧನಸಹಾಯ ಅಥವಾ ಸಬ್ಸಿಡಿ ನಿಂತರೆ, ಆ ಮಾರ್ಗಗಳು ಆರ್ಥಿಕವಾಗಿ ಲಾಭದಾಯಕವಾಗದಿದ್ದರೆ ವಿಮಾನಯಾನ ಸಂಸ್ಥೆಗಳು ಅಲ್ಲಿಂದ ನಿರ್ಗಮಿಸುವುದು ಸಾಮಾನ್ಯವಾಗಿದೆ.
ಕಲಬುರಗಿ ವಿಮಾನ ನಿಲ್ದಾಣದ ಉದಾಹರಣೆಯಂತೆ, ಪ್ರಯಾಣಿಕರ ದಟ್ಟಣೆ ಹಾಗೂ ಆಕ್ಯುಪೆನ್ಸಿ ಉತ್ತಮವಾಗಿದ್ದರೂ ಸಹ ವಿಮಾನಯಾನ ಕಂಪನಿಗಳು ಹೆಚ್ಚಿನ ವಿಮಾನಗಳನ್ನು ಅಥವಾ ಹೊಸ ಮಾರ್ಗಗಳನ್ನು ಆರಂಭಿಸಲು ಹಿಂದೇಟು ಹಾಕುತ್ತಿವೆ. ಸಣ್ಣ ವಿಮಾನಗಳ ನಿರ್ವಹಣಾ ವೆಚ್ಚ ಮತ್ತು ಸಿಬ್ಬಂದಿ ಕೊರತೆಯೇ ಇದಕ್ಕೆ ಮುಖ್ಯ ಕಾರಣ.
ಇದನ್ನೂ ಓದಿ: ಎನ್ವಿಡಿಯಾ ಸಿಇಒ ಸ್ಥಾನಕ್ಕೆ ಹಲವರ ಹೆಸರು ಪರಿಗಣನೆಯಲ್ಲಿ; ಭಾರತ ಮೂಲದ ಮೂವರ ಹೆಸರೂ ಪಟ್ಟಿಯಲ್ಲಿ
ಸರ್ಕಾರವು ಪ್ರಾದೇಶಿಕ ವಿಮಾನ ನಿಲ್ದಾಣಗಳನ್ನು ಉತ್ತೇಜಿಸಲು 2026ರ ಮಾರ್ಚ್‌ನಲ್ಲಿ ‘ಮಾರ್ಪಡಿಸಿದ ಉಡಾನ್’ (Modified UDAN) ಯೋಜನೆಗೆ ಅನುಮೋದನೆ ನೀಡಿದ್ದು, ಸಬ್ಸಿಡಿ ಅವಧಿಯನ್ನು 3 ವರ್ಷದಿಂದ 5 ವರ್ಷಕ್ಕೆ ವಿಸ್ತರಿಸಲು ಚಿಂತಿಸಲಾಗಿದೆ. ಆದರೆ, ಶಾಶ್ವತವಾದ ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಪ್ರಾದೇಶಿಕ ವಲಯಕ್ಕೆ ದೊಡ್ಡ ಸವಾಲಾಗಿ ಉಳಿದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ