ನವದೆಹಲಿ, ಫೆಬ್ರುವರಿ 27: ಭಾರತದಲ್ಲಿ ಸದ್ಯದಲ್ಲೇ ಅಗ್ಗದ ದರದಲ್ಲಿ 5ಜಿ ಸ್ಮಾರ್ಟ್ಫೋನ್ಗಳು ಸಿಗಲಿವೆ. ಅಮೆರಿಕದ ಪ್ರಮುಖ ಚಿಪ್ ತಯಾರಕ ಕಂಪನಿ ಎನಿಸಿದ ಕ್ವಾಲ್ಕಾಮ್ (Qualcomm) ಭಾರತೀಯ ಮಾರುಕಟ್ಟೆಗೆ ಹೊಸ ಚಿಪ್ಸೆಟ್ ಬಿಡುಗಡೆ ಮಾಡಲು ಯೋಜಿಸಿದೆ. ಅಗ್ಗದ ದರದ ಈ ಚಿಪ್ಸೆಟ್ನಿಂದಾಗಿ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ ತಯಾರಿಸಲು ಸಾಧ್ಯವಾಗುತ್ತದೆ. ಕ್ವಾಲ್ಕಾಮ್ ಜೊತೆ ಒಪ್ಪಂದ ಮಾಡಿಕೊಂಡಿರುವ ರಿಲಾಯನ್ಸ್ ಜಿಯೋ (Reliance Jio) ಸದ್ಯದಲ್ಲೇ 5ಜಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲಿದೆ. ವರದಿ ಪ್ರಕಾರ, ಈ ವರ್ಷಾಂತಕ್ಕೆ ಜಿಯೋ ಫೋನ್ಗಳು ಬರಲಿವೆ. ಇದರ ಬೆಲೆ 99 ಡಾಲರ್ಗಿಂತ ಕಡಿಮೆ ಎನ್ನಲಾಗಿದೆ. ಅಂದರೆ 8,500 ರೂಗಿಂತ ಕಡಿಮೆ ಬೆಲೆಗೆ 5ಜಿ ಜಿಯೋ ಸ್ಮಾರ್ಟ್ಫೋನ್ಗಳು ಭಾರತದಲ್ಲಿ ಸಿಗುವ ನಿರೀಕ್ಷೆ ಇದೆ.
ಕ್ವಾಲ್ಕಾಮ್ನಿಂದ ತಯಾರಾಗುವ ಚಿಪ್ ಮೂಲಕ ಅಗ್ಗದ ಬೆಲೆಯಲ್ಲಿ ಶಕ್ತಿಶಾಲಿ ಪ್ರೋಸಸರ್ ಸಿದ್ಧವಾಗಲಿದೆ. 5ಜಿ ನೆಟ್ವರ್ಕ್ನಲ್ಲಿ ಗೀಗಾಬಿಟ್ ಸ್ಪೀಡ್ ತರಲು ಈ ಆಕ್ಟಿಕೆಕ್ಚರ್ನಿಂದ ಸಾಧ್ಯ ಎನ್ನಲಾಗಿದೆ.
2022ರ ಆಗಸ್ಟ್ ತಿಂಗಳಲ್ಲಿ ನಡೆದ ರಿಲಾಯನ್ಸ್ ಇಂಡಸ್ಟ್ರೀಸ್ನ 45ನೇ ವಾರ್ಷಿಕ ಮಹಾಸಭೆಯಲ್ಲಿ ಮುಕೇಶ್ ಅಂಬಾನಿ ಅವರು ರಿಲಾಯನ್ಸ್ ಜಿಯೋ ಮತ್ತು ಕ್ವಾಲ್ಕಾಮ್ ನಡುವಿನ ಒಪ್ಪಂದದ ಬಗ್ಗೆ ಮಾತನಾಡಿದ್ದರು. ಭಾರತದಲ್ಲಿ 5ಜಿ ಉತ್ಪನ್ನಗಳನ್ನು ತಯಾರಿಸಿ, ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೆ ರಫ್ತು ಮಾಡುವ ಯೋಜನೆ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದರು.
ಇದನ್ನೂ ಓದಿ: ಸರ್ಕಾರದಿಂದ ಸಿಎನ್ಎಪಿ ಅಸ್ತ್ರ; ಟ್ರೂಕಾಲರ್ಗೆ ಇದು ಮಾರಕಾಸ್ತ್ರವಾ? ಟೆಲಿಕಾಂ ಕಂಪನಿಗಳಿಗೂ ತಲೆನೋವು
ಕ್ವಾಲ್ಕಾಮ್ ಅಮೆರಿಕದ ಪ್ರಮುಖ ಚಿಪ್ ಮೇಕರ್ ಆಗಿದೆ. ಭಾರತದಲ್ಲಿ ಇದರ ಆರ್ ಅಂಡ್ ಡಿ ಕೇಂದ್ರಗಳಿವೆ. ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ನೋಯಿಡಾದಲ್ಲಿ ಇದರ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳಿವೆ. ಚೆನ್ನೈನಲ್ಲಿ 177 ಕೋಟಿ ರೂ ಹೂಡಿಕೆಯಲ್ಲಿ ಚಿಪ್ ಡಿಸೈನ್ ಸೆಂಟರ್ ತೆರೆಯಲು ಕ್ವಾಲ್ಕಾಮ್ ಸಿದ್ಧವಾಗಿದೆ.
ರಿಲಾಯನ್ಸ್ ಜಿಯೋದ ಚುಕ್ಕಾಣಿ ಮುಕೇಶ್ ಅಂಬಾನಿ ಬಳಿ ಇದೆಯಾದರೂ ಅವರ ಹಿರಿಯ ಮಗ ಆಕಾಶ್ ಅಂಬಾನಿ ಜಿಯೋದ ಭವಿಷ್ಯದ ನಾಯಕನಾಗಿ ಬೆಳೆಯುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Tue, 27 February 24