Paytm: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಛೇರ್ಮನ್ ಸ್ಥಾನದಿಂದ ವಿಜಯ್ ಶೇಖರ್ ಶರ್ಮಾ ಹೊರಕ್ಕೆ; ಬ್ಯಾಂಕ್ ಮಂಡಳಿ ಪುನಾರಚನೆ
Vijay Shekhar Sharma Steps down as Paytm Payments Bank Chairman: ವಿವಾದಕ್ಕೆ ಸಿಲುಕಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಛೇರ್ಮನ್ ಸ್ಥಾನದಿಂದ ಅದರ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಹೊರಬಿದ್ದಿದ್ದಾರೆ. ಶೀಘ್ರದಲ್ಲೇ ಹೊಸ ಛೇರ್ಮನ್ ನೇಮಕಾತಿಗೆ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆ ಇದೆ. ಇದೇ ವೇಳೆ, ಪೇಮೆಂಟ್ಸ್ ಬ್ಯಾಂಕ್ನ ನಿರ್ದೇಶಕರ ಮಂಡಳಿಯ ಪುನಾರಚನೆ ಆಗಿದೆ. ಇತ್ತೀಚೆಗಷ್ಟೇ ಕೆಲ ಹೊಸ ನಿರ್ದೇಶಕರ ನೇಮಕವಾಗಿದೆ.
ನವದೆಹಲಿ, ಫೆಬ್ರುವರಿ 27: ಆರ್ಬಿಐನಿಂದ ನಿರ್ಬಂಧಕ್ಕೊಳಗಾಗಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ (PPBL- Paytm Payments Bank Ltd) ಛೇರ್ಮನ್ ಸ್ಥಾನದಿಂದ ವಿಜಯ್ ಶೇಖರ್ ಶರ್ಮಾ ಕೆಳಗಿಳಿದಿದ್ದಾರೆ. ಈ ಬ್ಯಾಂಕ್ನ ನಿರ್ದೇಶಕರ ಮಂಡಳಿಯ ಪುನಾರಚನೆ ಕೂಡ ಆಗಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಛೇರ್ಮನ್ ಶ್ರೀನಿವಾಸನ್ ಶ್ರೀಧರ್, ನಿವೃತ್ತ ಐಎಎಸ್ ಅಧಿಕಾರಿ ದೇಬೇಂದ್ರನಾಥ್ ಸಾರಂಗಿ, ಬ್ಯಾಂಕ್ ಆಫ್ ಬರೋಡಾದ ಮಾಜಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಶೋಕ್ ಕುಮಾರ್ ಗರ್ಗ್, ನಿವೃತ್ತ ಐಎಎಸ್ ಅಧಿಕಾರಿ ರಜನಿ ಸೇಖ್ರಿ ಸಿಬಲ್ ಅವರು ಸ್ವತಂತ್ರ ನಿರ್ದೇಶಕರಾಗಿ ಇತ್ತೀಚೆಗೆ ಸೇರಿರುವುದನ್ನು ಪೇಟಿಎಂ ಸಂಸ್ಥೆ ತನ್ನ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ.
ಈ ಮೇಲಿನ ವ್ಯಕ್ತಿಗಳು ಇತ್ತೀಚೆಗೆ ಸ್ವತಂತ್ರ ನಿರ್ದೇಶಕರಾಗಿ ಮಂಡಳಿಗೆ ಸೇರ್ಪಡೆಯಾಗಿದ್ದಾರೆ. ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ನ ಮಾಜಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅರವಿಂದ್ ಕುಮಾರ್ ಜೈನ್ ಅವರು ಈ ಹಿಂದಿನಿಂದಲೇ ಬ್ಯಾಂಕ್ನ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಬ್ಯಾಂಕ್ನ ಎಂಡಿ ಮತ್ತು ಸಿಇಒ ಸುರೀಂದರ್ ಚಾವ್ಲಾ ಕೂಡ ಮಂಡಳಿಯ ಸದಸ್ಯರಾಗಿದ್ದಾರೆ. ಬ್ಯಾಂಕ್ನ ಮುಂದಿನ ಛೇರ್ಮನ್ ನೇಮಕ ಮಾಡಲು ಪ್ರಕ್ರಿಯೆ ಆರಂಭಿಸುವುದಾಗಿ ಬ್ಯಾಂಕ್ ತನ್ನ ಫೈಲಿಂಗ್ನಲ್ಲಿ ತಿಳಿಸಿದೆ.
ಇದನ್ನೂ ಓದಿ: ನಗದು ಹಣದ ಹರಿವು ಬಹಳ ಇಳಿಕೆ; ಇದು ಎರಡು ಸಾವಿರ ರೂ ನೋಟು ಚಲಾವಣೆ ಹಿಂಪಡೆದಿದ್ದರ ಪರಿಣಾಮವಾ?
ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಎಕ್ಸಿಕ್ಯೂಟಿವ್ ಹುದ್ದೆಯಿಂದ ಕೆಳಗೆ ಇಳಿದರೂ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಭವಿಷ್ಯ ಏನು ಎಂಬುದು ಮಸುಕು ಮಸುಕಾಗಿದೆ. ಪೇಮೆಂಟ್ಸ್ ಬ್ಯಾಂಕ್ನ ಉದ್ಯೋಗಿಯೊಬ್ಬರು ಅತಂತ್ರ ಭವಿಷ್ಯದ ಭಯದಿಂದ ಆತ್ಮಹತ್ಯೆ ಮಾಡಿಕೊಂಡಂಥ ವಿಷಾದಕರ ಘಟನೆ ಮೊನ್ನೆ ಸಂಭವಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್ಬಿಐ ಕಠಿಣ ಕ್ರಮ ಯಾಕೆ?
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯಾವುದೇ ಹೊಸ ಠೇವಣಿ ಪಡೆಯದಂತೆ ಮತ್ತು ಬ್ಯಾಂಕಿಂಗ್ ಚಟುವಟಿಕೆ ನಡೆಸದಂತೆ ರಿಸರ್ವ್ ಬ್ಯಾಂಕ್ ನಿರ್ಬಂಧ ಹಾಕಿದೆ. ಸರಿಯಾದ ಕೆವೈಸಿ ಕ್ರಮಗಳನ್ನು ಅನುಸರಿಸಿಲ್ಲ ಎಂಬುದು ಪ್ರಮುಖ ಕಾರಣ. ಅಂದರೆ, ಬಹಳಷ್ಟು ನಕಲಿ ಖಾತೆಗಳು ಸೃಷ್ಟಿಯಾಗಿವೆ. ಪೇಮೆಂಟ್ಸ್ ಬ್ಯಾಂಕ್ ಖಾತೆದಾರರ ಹಣದ ಹರಿವಿನ ಲೆಕ್ಕ ಸಿಗದಂತೆ ಆಗಿದೆ ಎಂಬುದು ಆರ್ಬಿಐನ ಆಕ್ಷೇಪ. ಈ ನಿಟ್ಟಿನಲ್ಲಿ ಪೇಮೆಂಟ್ಸ್ ಬ್ಯಾಂಕ್ಗೆ ಆರ್ಬಿಐ ಈ ಹಿಂದೆಯೇ ಸಾಕಷ್ಟು ಬಾರಿ ಎಚ್ಚರಿಕೆ ನೀಡಿತ್ತು. ಆದರೂ ಬ್ಯಾಂಕ್ ಸರಿಯಾಗಿ ಸ್ಪಂದಿಸಿರಲಿಲ್ಲ.
ಇದನ್ನೂ ಓದಿ: ಈ ಮೀಟಿಂಗ್, ಉಚ್ಚಾಟನೆ ಇವೆಲ್ಲಾ ಬೋಗಸ್, ಈಗಲೂ ನಾನೇ ಸಿಇಒ ಎಂದ ಬೈಜು ರವೀಂದ್ರನ್
ಇನ್ನೊಂದು ಪ್ರಮುಖ ಕಾರಣವೆಂದರೆ, ಪೇಟಿಎಂ ಸಂಸ್ಥೆ ಮತ್ತು ಪೇಮೆಂಟ್ಸ್ ಬ್ಯಾಂಕ್ ಒಂದಕ್ಕೊಂದು ಥಳುಕು ಹಾಕಿಕೊಂಡಿರುವುದು. ಅಂದರೆ ಪೇಮೆಂಟ್ಸ್ ಬ್ಯಾಂಕ್ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪೇಟಿಎಂಗೆ ಹೆಚ್ಚಿನ ಬೆಂಬಲ ನೀಡುತ್ತದೆ. ಇದು ಆರ್ಬಿಐನ ಬ್ಯಾಂಕಿಂಗ್ ನಿಯಮಕ್ಕೆ ವಿರುದ್ಧವಾದುದು. ಈ ವಿಚಾರದಲ್ಲೂ ಆರ್ಬಿಐ ಈ ವಿಚಾರದಲ್ಲೂ ಬ್ಯಾಂಕ್ಗೆ ಎಚ್ಚರಿಕೆಗಳನ್ನು ನೀಡಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ