ಮುಂಬೈ, ಅಕ್ಟೋಬರ್ 29: ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಗಳ ಪೈಕಿ ಇರುವ ಮುಕೇಶ್ ಅಂಬಾನಿ ಸಾಮ್ರಾಜ್ಯ ವರ್ಷವರ್ಷವೂ ವಿಸ್ತರಣೆ ಆಗುತ್ತಿದೆ. ರಿಲಾಯನ್ಸ್ ಫೈನಾನ್ಷಿಯಲ್ ಸರ್ವಿಸಸ್ ಮೂಲಕ ಇನ್ಷೂರೆನ್ಸ್ ಮತ್ತು ಹಣಕಾಸು ಸೇವೆಗೆ ಪೂರ್ಣಪ್ರಮಾಣದಲ್ಲಿ ಇಳಿದಿರುವ ರಿಲಾಯನ್ಸ್ ಇಂಡಸ್ಟ್ರೀಸ್ (Reliance Industries) ಇದೀಗ 1.3 ಲಕ್ಷಕೋಟಿ ರೂ ಮೊತ್ತದ ಕ್ರೆಡಿಟ್ ಕಾರ್ಡ್ ಮಾರುಕಟ್ಟೆಗೆ ಅಡಿ ಇಟ್ಟಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ರಿಲಾಯನ್ಸ್ ಎರಡು ಕ್ರೆಡಿಟ್ ಕಾರ್ಡ್ಗಳನ್ನು ಬಿಡುಗಡೆ ಮಾಡಲು ಹೊರಟಿದೆ. ರುಪೇ ನೆಟ್ವರ್ಕ್ನಲ್ಲಿ ಇರುವ ಈ ಕ್ರೆಡಿಟ್ ಕಾರ್ಡ್ ಅನ್ನು ಎಸ್ಬಿಐ ಬಿಡುಗಡೆ ಮಾಡಲಿದ್ದು, ರಿಲಾಯನ್ಸ್ ಎಸ್ಬಿಐ ಕಾರ್ಡ್ (Reliance SBI Card) ಎಂಬ ಬ್ರ್ಯಾಂಡಿಂಗ್ ಇರಲಿದೆ.
ಈ ಎರಡು ಕಾರ್ಡ್ಗಳನ್ನು ಎಸ್ಬಿಐ ತನ್ನ ವೆಬ್ ಪುಟವೊಂದರಲ್ಲಿ ಸ್ವಲ್ಪ ಸಮಯ ಪ್ರಕಟಿಸಿತ್ತು. ವರದಿ ಪ್ರಕಾರ ರಿಲಾಯನ್ಸ್ ಎಸ್ಬಿಐ ಕಾರ್ಡ್ನಲ್ಲಿ ಸಾಕಷ್ಟು ಇನ್ಸೆಂಟಿವ್ಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ. ರಿಲಾಯನ್ಸ್ ಇಂಡಸ್ಟ್ರೀಸ್ಗೆ ಸೇರಿದ ವಿವಿಧ ರೀಟೇಲ್ ಬಿಸಿನೆಸ್ಗಳಲ್ಲಿ ಈ ಕ್ರೆಡಿಟ್ ಕಾರ್ಡ್ಗಳಿಂದ ವಹಿವಾಟು ನಡೆಸಿದರೆ ಡಿಸ್ಕೌಂಟ್, ಕ್ಯಾಷ್ಬ್ಯಾಕ್, ರಿವಾರ್ಡ್ ಇತ್ಯಾದಿ ಸಿಗಲಿದೆ. ಜಿಯೋಮಾರ್ಟ್, ಆಜಿಯೋ, ಅರ್ಬನ್ ಲ್ಯಾಡರ್, ಟ್ರೆಂಡ್ಸ್ ಇತ್ಯಾದಿ ಕಡೆ ಡಿಸ್ಕೌಂಟ್ ನೀಡುವ ವೋಚರ್ಗಳು ಸಿಗುತ್ತವೆ.
ಇದನ್ನೂ ಓದಿ: Bank Holidays: ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ; ಕರ್ನಾಟಕದಲ್ಲಿ ಎಷ್ಟು?; ಇಲ್ಲಿದೆ ಪಟ್ಟಿ
ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಮಾರುಕಟ್ಟೆ ಗಣನೀಯವಾಗಿ ವೃದ್ಧಿಸುತ್ತಿದೆ. ಕಳೆದ ವರ್ಷ (2022) ಡೆಬಿಟ್ ಕಾರ್ಡ್ ಮೂಲಕ ನಡೆದ ಒಟ್ಟು ವಹಿವಾಟು ಮೊತ್ತ 53,000 ಕೋಟಿ ರೂ ಆಗಿತ್ತು. ಅದೇ ಅವಧಿಯಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಆದ ಒಟ್ಟು ವಹಿವಾಟು 1,33,000 ಕೋಟಿ ರೂ ಎನ್ನಲಾಗಿದೆ. ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಮಾರುಕಟ್ಟೆ ಸದ್ಯ ಬಹಳ ವೇಗದಲ್ಲಿ ಬೆಳೆಯುತ್ತಿದೆ. ಹೀಗಾಗಿ, ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಸಂಸ್ಥೆ ಸಕಾಲದಲ್ಲಿ ಈ ಕ್ಷೇತ್ರಕ್ಕೆ ಅಡಿ ಇಟ್ಟಿದೆ.
ಇದೇ ವೇಳೆ, ಜಿಯೋ ಫೈನಾನ್ಷಿಯಲ್ ಸರ್ವಿಸ್ ಸಂಸ್ಥೆಯಿಂದ ಡೆಬಿಟ್ ಕಾರ್ಡ್ ಕೂಡ ಹೊರಬರುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ