Onion Shocker: ಈರುಳ್ಳಿ ಬೆಲೆ ಏರಿಕೆ ತಡೆಯಲು ಸರ್ಕಾರ ಕ್ರಮ; ಕನಿಷ್ಠ ರಫ್ತು ದರ ನಿಗದಿ
Minimum Export Price Fixed: ದೇಶಾದ್ಯಂತ ಈರುಳ್ಳಿ ಬೆಲೆ ಈಗಾಗಲೇ ಕಿಲೋಗೆ 50 ರೂಗಿಂತ ಹೆಚ್ಚಿನ ಮಟ್ಟದಲ್ಲಿದೆ. ವರದಿಗಳ ಪ್ರಕಾರ ದೀಪಾವಳಿ ಹಬ್ಬದ ವೇಳೆಗೆ ಈರುಳ್ಳಿ ಬೆಲೆ ಶತ ರೂಪಾಯಿ ಗಡಿ ದಾಟುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈರುಳ್ಳಿ ಕೊರತೆ ಸೃಷ್ಟಿಯಾಗಿ ಬೆಲೆ ಕೈಮೀರಿ ಹೋಗದಂತೆ ತಡೆಯಲು ಈರುಳ್ಳಿಗೆ ರಫ್ತು ಬೆಲೆ ನಿಗದಿ ಮಾಡಲಾಗಿದೆ. ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲೇ ಅತಿಹೆಚ್ಚು ಈರುಳ್ಳಿ ಬೆಳೆಯುವುದು. ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಭಾರತದ ಶೇ. 60ಕ್ಕಿಂತ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ.
ನವದೆಹಲಿ, ಅಕ್ಟೋಬರ್ 29: ಈರುಳ್ಳಿ ಬೆಲೆ ಹೆಚ್ಚಳವನ್ನು ನಿಯಂತ್ರಿಸಲು ಸರ್ಕಾರ ಕನಿಷ್ಠ ರಫ್ತು ಬೆಲೆ (minimum export price) ನಿಗದಿ ಮಾಡಿದೆ. ಈರುಳ್ಳಿಯ ಕನಿಷ್ಠ ರಫ್ತು ಬೆಲೆ ಟನ್ಗೆ 800 ಡಾಲರ್ ನಿಗದಿ ಮಾಡಿದೆ. ಅಂದರೆ, ಟನ್ಗೆ 66,000 ರೂನಷ್ಟು ಕನಿಷ್ಠ ರಫ್ತು ಬೆಲೆ ಇದೆ. ಇದು ಡಿಸೆಂಬರ್ 31ರವರೆಗೂ ಇರಲಿದೆ. ದೇಶಾದ್ಯಂತ ಈರುಳ್ಳಿ ಬೆಲೆ ಈಗಾಗಲೇ ಕಿಲೋಗೆ 50 ರೂಗಿಂತ ಹೆಚ್ಚಿನ ಮಟ್ಟದಲ್ಲಿದೆ. ವರದಿಗಳ ಪ್ರಕಾರ ದೀಪಾವಳಿ ಹಬ್ಬದ ವೇಳೆಗೆ ಈರುಳ್ಳಿ ಬೆಲೆ ಶತ ರೂಪಾಯಿ ಗಡಿ ದಾಟುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈರುಳ್ಳಿ ಕೊರತೆ ಸೃಷ್ಟಿಯಾಗಿ ಬೆಲೆ ಕೈಮೀರಿ ಹೋಗದಂತೆ ತಡೆಯಲು ಈರುಳ್ಳಿಗೆ ರಫ್ತು ಬೆಲೆ ನಿಗದಿ ಮಾಡಲಾಗಿದೆ.
ರಾಜಧಾನಿ ದೆಹಲಿಯಲ್ಲಿ ರೀಟೆಲ್ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕಿಲೋಗೆ 80 ರೂವರೆಗೂ ಮಾರಾಟವಾಗುತ್ತಿದೆ. ಮದರ್ ಡೈರಿ ಸಂಸ್ಥೆ ದೆಹಲಿ ಎನ್ಸಿಆರ್ ಪ್ರದೇಶದಲ್ಲಿ ಹೊಂದಿರುವ ತನ್ನ 400 ಸಫಲ್ ರೀಟೇಲ್ ಸ್ಟೋರ್ಗಳಲ್ಲಿ ಈರುಳ್ಳಿಯನ್ನು 67 ರೂಗೆ ಮಾರುತ್ತಿದೆ. ಬಿಗ್ ಬ್ಯಾಸ್ಕೆಟ್ ಇತ್ಯಾದಿ ಇಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲೂ ಈರುಳ್ಳಿ ಬೆಲೆ 67 ರೂ ಇದೆ.
ಇದನ್ನೂ ಓದಿ: ದೀಪಾವಳಿಗೆ ಕಣ್ಣೀರು ತರಿಸಲಿದೆ ಈರುಳ್ಳಿ: ಪೂರೈಕೆ ಕೊರತೆಯಿಂದ ಬೆಲೆ ಹೆಚ್ಚಳ, ಕೆಜಿಗೆ 100 ರೂ. ಗಡಿ ದಾಟುವ ಸಾಧ್ಯತೆ
ಬೆಂಗಳೂರಿನಲ್ಲೂ ಈರುಳ್ಳಿ ಬೆಲೆ 60 ರೂಗಿಂತ ಹೆಚ್ಚು ಇದೆ. ದೀಪಾವಳಿ ಹಬ್ಬದ ವೇಳೆಗೆ ಇದು 100 ರೂ ಗಡಿದಾಟಬಹುದು ಎನ್ನಲಾಗಿದೆ. ಈರುಳ್ಳಿ ಆವಕ ಕಡಿಮೆ ಆಗಿರುವುದು ಇದಕ್ಕೆ ಕಾರಣ. ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಸೀಸನ್ ವೇಳೆ ದಿನಕ್ಕೆ 70ರಿಂದ 75 ಈರುಳ್ಳಿ ಮೂಟೆಗಳು ಬರುತ್ತಿದ್ದವು. ಈಗ 50 ಮೂಟೆಗಿಂತ ಕಡಿಮೆ ಈರುಳ್ಳಿ ಬರುತ್ತಿದೆ.
ಚಿಕ್ಕಮಗಳೂರಿನಲ್ಲಿ ಮಳೆ ಕೊರತೆಯಿಂದ ಈರುಳ್ಳಿ ಫಸಲು ಕಡಿಮೆ ಆಗಿದೆ. ಧಾರವಾಡ ಮತ್ತಿತರ ಕಡೆಯೂ ಮಳೆ ಇಲ್ಲದ ಕಾರಣ ಈರುಳ್ಳಿ ಇಳುವರಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲೇ ಅತಿಹೆಚ್ಚು ಈರುಳ್ಳಿ ಬೆಳೆಯುವುದು. ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಭಾರತದ ಶೇ. 60ಕ್ಕಿಂತ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ.
ಇದನ್ನೂ ಓದಿ: ಸಹಸ್ರ ಸಾಧನೆ; ಸೆಮಿಕಂಡಕ್ಟರ್ ಮೆಮೊರಿ ಚಿಪ್ ತಯಾರಿಸಿದ ಮೊದಲ ಭಾರತೀಯ ಕಂಪನಿ ಎಂಬ ದಾಖಲೆ
ಭಾರತದ ಒಟ್ಟಾರೆ ಈರುಳ್ಳಿ ಉತ್ಪಾದನೆಯಲ್ಲಿ ಮಹಾರಾಷ್ಟ್ರ ರಾಜ್ಯವೊಂದರದ್ದೇ ಶೇ. 30ರಷ್ಟಿದೆ. ಆದರೆ, ಈ ಬಾರಿ ಮಹಾರಾಷ್ಟ್ರದಲ್ಲಿ ಈರುಳ್ಳಿ ಆವಕ ಬಹಳ ಕಡಿಮೆ ಇದೆ. ಹೀಗಾಗಿ, ಜನಸಾಮಾನ್ಯರಿಗೆ ಕಷ್ಟವಾಗಿದೆ. ಡಿಸೆಂಬರ್ವರೆಗೂ ಈ ಕಷ್ಟಕರ ಸ್ಥಿತಿ ಇರಲಿದ್ದು, ಹೊಸ ಈರುಳ್ಳಿ ಆವಕ ಆಗುವವರೆಗೂ ಈರುಳ್ಳಿ ಬೆಲೆ ಏರಿಕೆ ನಿಯಂತ್ರಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಿನ ಕೆಲಸ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ