ಭಾರತದ ಚಿಲ್ಲರೆ ಹಣದುಬ್ಬರ ದರವು ಜುಲೈ ತಿಂಗಳಲ್ಲಿ ಶೇ 5.59 ಆಗಿದ್ದು, ಕಳೆದ ತಿಂಗಳು ಜೂನ್ನಲ್ಲಿ ಇದ್ದ ಶೇ 6.26ಕ್ಕಿಂತ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ. ಇದರಿಂದಾಗಿ ಕೇಂದ್ರ ಬ್ಯಾಂಕ್ನ ಮೇಲೆ ಇದ್ದ ಒತ್ತಡ ಕಡಿಮೆ ಆದಂತಾಗಿದೆ. ಮೇ ಹಾಗೂ ಜೂನ್ ತಿಂಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಗದಿ ಮಾಡಿಕೊಂಡಿದ್ದ ಗುರಿಗಿಂತ, ಅಂದರೆ ಶೇ 6ಕ್ಕಿಂತ ಮೇಲಿತ್ತು. ಸಾಂಖ್ಯಿಕ ಕಚೇರಿ ದತ್ತಾಂಶದ ಪ್ರಕಾರವಾಗಿ, ಪ್ರೊಟೀನ್ ಪದಾರ್ಥಗಳಾದ ಮೊಟ್ಟೆ, ತೈಲಗಳು ಮತ್ತು ಇತರ ವಸ್ತುಗಳು ಬೆಲೆ ಏರಿಕೆಯಾದರೂ ಆಹಾರ ಹಣದುಬ್ಬರ ದರವು ಜುಲೈನಲ್ಲಿ ಶೇ 3.96ಕ್ಕೆ ಇಳಿಕೆ ಆಗಿದೆ. ಇಂಧನ ಹಣದುಬ್ಬರ ಶೇ 12.38ರಷ್ಟಿದ್ದು, ಸೇವಾ ಹಣದುಬ್ಬರ ಜುಲೈ ಶೇ 6.71ರಷ್ಟಿತ್ತು. ಕೇಂದ್ರ ಬ್ಯಾಂಕ್ ಕಳೆದ ಶುಕ್ರವಾರದಂದು ಘೋಷಣೆ ಮಾಡಿದಂತೆ, ಸತತವಾಗಿ ಏಳನೇ ಬಾರಿ ಬಡ್ಡಿ ದರವನ್ನು ಯಥಾ ಸ್ಥಿತಿಯಲ್ಲಿ ಉಳಿಸಿಕೊಂಡಿದೆ.
ಕೊವಿಡ್ ಬಿಕ್ಕಟ್ಟಿನಿಂದಾಗಿ ಎದುರಾಗಿರುವ ಆರ್ಥಿಕ ಸವಾಲನ್ನು ಮೆಟ್ಟಿ ನಿಲ್ಲುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಣಕಾಸು ನೀತಿ ಸಮಿತಿ ಸದಸ್ಯರಲ್ಲೇ ಈ ದರದ ಬಗ್ಗೆ ಭಿನ್ನ ಅಭಿಪ್ರಾಯಗಳು ಇದ್ದ ಹೊರತಾಗಿಯೂ ಹಣದುಬ್ಬರದ ಪರಿಣಾಮದ ಮಧ್ಯೆಯೂ ಬಡ್ಡಿ ದರ ಯಥಾ ಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರೆಪೋ ದರವನ್ನು ಶೇ 4ರಲ್ಲಿ ಹಾಗೇ ಮುಂದುವರಿಸಿದೆ. ಇನ್ನು ಈ ನೀತಿಯನ್ನು 5-1ರ ಮತದಲ್ಲಿ ಒಪ್ಪಿಕೊಳ್ಳಲಾಗಿದೆ. ಸದಸ್ಯರಾದ ಜಯಂತ್ ವರ್ಮಾ ತಮ್ಮ ಅಭಿಪ್ರಾಯ ಭೇದವನ್ನು ತಿಳಿಸಿದ್ದಾರೆ.
ನಿರೀಕ್ಷೆ ಮಾಡಿದಂತೆಯೇ, ಆರ್ಬಿಐನಿಂದ ಹಣದುಬ್ಬರ ಅಂದಾಜನ್ನು ಈ ಹಣಕಾಸು ವರ್ಷಕ್ಕೆ ಸರಾಸರಿ ಶೇ 5.7 ಎಂದು ತಿಳಿಸಲಾಗಿದೆ. ಅದು ಈ ಹಿಂದೆ ಅಂದಾಜು ಮಾಡಿದ್ದ ಶೇ 5.1ಕ್ಕಿಂತ ಹೆಚ್ಚು. ಈಗಿನ ಹಣದುಬ್ಬರ ದರವು ತಾತ್ಕಾಲಿಕವಾಗಿ ಪೂರೈಕೆ ಸಮಸ್ಯೆಯಿಂದ ಉದ್ಭವ ಆಗಿರುವುದು ಎಂದು ನೋಡಲಾಗುತ್ತಿದೆ. ಹಣದುಬ್ಬರ ಏರಿಕೆ ಒಂದು ಕಡೆ ಇರುವುದು ಹೌದಾದರೂ ಬೆಳವಣಿಗೆಯು ಕೇಂದ್ರ ಬ್ಯಾಂಕ್ನ ಆದ್ಯತೆ ಆಗಿದೆ. ಕೊರೊನಾ ಮೂರನೇ ಅಲೆಯ ಆತಂಕದ ಮಧ್ಯೆಯೂ ಬೆಳವಣಿಗೆ ದರದ ಅಂದಾಜನ್ನು ಆರ್ಬಿಐ ಶೇ 9.5 ಎಂದಿರಿಸಿಕೊಂಡಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದಂತೆ, ದೇಶೀಯ ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಬರುತ್ತಿವೆ. ಈಗಲೂ ಚೇತರಿಕೆಗೆ ನೀತಿ ನಿರೂಪಕರ ಬೆಂಬಲ ಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: Repo Rate: ಆರ್ಬಿಐ ರೆಪೋ ದರ ಶೇ 4 ಹಾಗೂ ರಿವರ್ಸ್ ರೆಪೋ ದರ ಶೇ 3.35ರಲ್ಲಿ ಮುಂದುವರಿಕೆ
(Retail Inflation In July Eased At 5.59 Percent Which Is Less Than RBI Tolerance Level)