ನವದೆಹಲಿ, ನವೆಂಬರ್ 12: ಗ್ರಾಹಕ ಬೆಲೆ ಅನುಸೂಚಿ ಆಧಾರಿತ ರೀಟೇಲ್ ಹಣದುಬ್ಬರ ಅಕ್ಟೋಬರ್ ತಿಂಗಳಲ್ಲಿ ಸಖತ್ ಏರಿಕೆ ಆಗಿದೆ. ಸರ್ಕಾರ ಇಂದು ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 2024ರ ಅಕ್ಟೋಬರ್ ತಿಂಗಳಲ್ಲಿ ರೀಟೇಲ್ ಹಣದುಬ್ಬರ ಶೇ. 6.21 ಆಗಿದೆ. ಇದು ಕಳೆದ 14 ತಿಂಗಳಲ್ಲೇ ಅತಿ ಹೆಚ್ಚು ಬೆಲೆ ಏರಿಕೆ ದರ ಎನಿಸಿದೆ. ಆರ್ಬಿಐ ನಿಗದಿ ಮಾಡಿಕೊಂಡಿದ್ದ ಹಣದುಬ್ಬರ ತಾಳಿಕೆ ಮಿತಿಯಾದ ಶೇ. 6 ಅನ್ನೂ ದಾಟಿ ಇದು ಹೊರ ಹೋಗಿದೆ. ಆಹಾರವಸ್ತುಗಳ ಬೆಲೆ ಏರಿಕೆಯೇ ಈ ಬಾರಿಯೂ ವಿಲನ್ ಎನಿಸಿದೆ. ಆಹಾರ ಹಣದುಬ್ಬರ ಅಕ್ಟೋಬರ್ನಲ್ಲಿ ಶೇ. 10.87ರಷ್ಟಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ 5.49ರಷ್ಟಿತ್ತು. ಅಕ್ಟೋಬರ್ನಲ್ಲಿ ಇದು ಇನ್ನಷ್ಟು ಏರಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ ಶೇ. 6ರ ಮಿತಿಯನ್ನೂ ದಾಟಿ ಹೋಗುತ್ತದೆಂದು ಆರ್ಬಿಐ ಕೂಡ ಅಂದಾಜು ಮಾಡಿರಲಿಲ್ಲ. ಬ್ಲೂಮ್ಬರ್ಗ್ ಸಂಸ್ಥೆ ನಡೆಸಿದ ಪೋಲ್ನಲ್ಲಿ ಹಲವು ಆರ್ಥಿಕ ತಜ್ಞರು ಅಂದಾಜು ಮಾಡಿದ ಹಣದುಬ್ಬರ ದರವು ಸರಾಸರಿಯಾಗಿ ಶೇ. 5.9ರಷ್ಟಿತ್ತು.
ಇದನ್ನೂ ಓದಿ: ಡಿ. 21-22ರಂದು ನಿರ್ಮಲಾ ಸೀತಾರಾಮನ್ರಿಂದ ಬಜೆಟ್ ಪೂರ್ವಭಾವಿ ಸಮಾಲೋಚನೆ, ಜಿಎಸ್ಟಿ ಕೌನ್ಸಿಲ್ ಸಭೆ
ಕಳೆದ ಬಾರಿಯ ಎಂಪಿಸಿ ಸಭೆಯಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣದುಬ್ಬರ ನಿಯಂತ್ರಿಸುವುದು ತಮ್ಮ ಪ್ರಮುಖ ಆದ್ಯತೆ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದರು. ಹಣದುಬ್ಬರ ನಿಯಂತ್ರಣ ಮೀರಿ ಏರಿದರೆ ಬಡ್ಡಿದರ ಇಳಿಸದೇ ಇರುವ ನಿರ್ಧಾರಕ್ಕೂ ಆರ್ಬಿಐ ಸಿದ್ಧ ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದ್ದರು.
ಅಕ್ಟೋಬರ್ಗೆ ಮುಂಚೆ ಕೆಲ ತಿಂಗಳುಗಳಿಂದ ರೀಟೇಲ್ ಹಣದುಬ್ಬರವು ಆರ್ಬಿಐನ ತಾಳಿಕೆ ಮಿತಿಯಾದ ಶೇ. 2ರಿಂದ 6ರ ಶ್ರೇಣಿಯಲ್ಲೇ ಇತ್ತು. ಕೆಲ ತಿಂಗಳಿಂದ ಆಹಾರ ಬೆಲೆ ಹೆಚ್ಚೇ ಇದ್ದರೂ ಹಣದುಬ್ಬರವು ಮಿತಿ ಮೀರಿ ಹೋಗಿರಲಿಲ್ಲ. ಈ ಬಾರಿ ಅದು ಅಂಕೆ ತಪ್ಪಿ ಮೇಲೇರಿದೆ.
ಇದನ್ನೂ ಓದಿ: ಭಾರತದಿಂದ ಸೋಲಾರ್ ಪಿವಿ ಮಾಡ್ಯೂಲ್ಗಳ ರಫ್ತು ಎರಡು ವರ್ಷದಲ್ಲಿ 23 ಪಟ್ಟು ಹೆಚ್ಚಳ
ಭಾರತೀಯ ಕೈಗಾರಿಕಾ ವಲಯದ ಉತ್ಪಾದನೆ ಸೆಪ್ಟೆಂಬರ್ ತಿಂಗಳಲ್ಲಿ ಶೇ. 3.1ರಷ್ಟು ಹೆ್ಚಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಐಐಪಿ ಆಧಾರಿತವಾದ ಈ ಉತ್ಪಾದನಾ ದರ ಆಗಸ್ಟ್ ತಿಂಗಳಲ್ಲಿ ಮೈನಸ್ ಶೇ. 0.1ರಷ್ಟಿತ್ತು. ಸೆಪ್ಟೆಂಬರ್ನಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಆದರೆ, 2023ರ ಸೆಪ್ಟೆಂಬರ್ ತಿಂಗಳಲ್ಲಿ ಕೈಗಾರಿಕಾ ಉತ್ಪನ್ನವು ಶೇ. 6.4ರಷ್ಟು ಬೆಳೆದಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:39 pm, Tue, 12 November 24