ರೀಟೇಲ್ ಹಣದುಬ್ಬರ ಶೇ. 5.49ಕ್ಕೆ ಏರಿಕೆ; ಇದು 9 ತಿಂಗಳಲ್ಲೇ ಗರಿಷ್ಠ ಮಟ್ಟ

|

Updated on: Oct 14, 2024 | 6:29 PM

Retail inflation at 5.49pc in 2024 September: ಸಿಪಿಐ ಆಧಾರಿತ ಹಣದುಬ್ಬರ ಸೆಪ್ಟೆಂಬರ್ ತಿಂಗಳಲ್ಲಿ ಶೇ. 5.49ರಷ್ಟಿದೆ ಎಂಬುದು ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿದೆ. ಹಿಂದಿನ ತಿಂಗಳಲ್ಲಿ ಹಣದುಬ್ಬರ ಶೇ. 3.65 ಇತ್ತು. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಹಣದುಬ್ಬರ ಶೇ. 5.02 ಇತ್ತು. ಬೇಸ್ ವರ್ಷದಲ್ಲಿ ಆಗಿರುವ ಬದಲಾವಣೆ ಮತ್ತು ಆಹಾರ ವಸ್ತುಗಳ ಬೆಲೆ ಏರಿಕೆಯು ಹಣದುಬ್ಬರ ಅಧಿಕ ಇರಲು ಕಾರಣವಾಗಿದೆ.

ರೀಟೇಲ್ ಹಣದುಬ್ಬರ ಶೇ. 5.49ಕ್ಕೆ ಏರಿಕೆ; ಇದು 9 ತಿಂಗಳಲ್ಲೇ ಗರಿಷ್ಠ ಮಟ್ಟ
ಹಣದುಬ್ಬರ
Follow us on

ನವದೆಹಲಿ, ಅಕ್ಟೋಬರ್ 14: ಗ್ರಾಹಕ ಬೆಲೆ ಅನುಸೂಚಿ ಆಧಾರಿತ ರೀಟೇಲ್ ಹಣದುಬ್ಬರ ಸೆಪ್ಟೆಂಬರ್ ತಿಂಗಳಲ್ಲಿ ಶೇ. 5.49ಕ್ಕೆ ಏರಿದೆ. ಆಗಸ್ಟ್ ತಿಂಗಳಲ್ಲಿ ಕೇವಲ ಶೇ. 3.65ರಷ್ಟು ಇದ್ದ ಹಣದುಬ್ಬರ ಇಷ್ಟೊಂದು ಏರಲು ಪ್ರಮುಖವಾಗಿ ಕಾರಣವಾಗಿರುವುದು ಆಹಾರ ಬೆಲೆಗಳಲ್ಲಿನ ಹೆಚ್ಚಳವಾಗಿದೆ. ಹಿಂದಿನ ವರ್ಷದಲ್ಲಿ, 2023 ಸೆಪ್ಟೆಂಬರ್ ತಿಂಗಳಲ್ಲಿ ರೀಟೇಲ್ ಹಣದುಬ್ಬರ ಶೇ. 5.02 ಇತ್ತು. ಈ ವರ್ಷ ಅದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಹಣದುಬ್ಬರ ಇದೆ. 2023ರ ಡಿಸೆಂಬರ್​ನಲ್ಲಿ ಹಣದುಬ್ಬರ ಶೇ. 5.69ರಷ್ಟಿತ್ತು. ಅದಾದ ಬಳಿಕ ಅತಿಹೆಚ್ಚು ಹಣದುಬ್ಬರ ಇದಾಗಿದೆ.

ಸರ್ಕಾರವು ಹಣದುಬ್ಬರ ಲೆಕ್ಕಾಚಾರಕ್ಕೆ ಆಧಾರ ವರ್ಷವಾಗಿ 2012 ಬದಲು 2024 ಅನ್ನು ನಿಗದಿ ಮಾಡಿದೆ. ಇದರಿಂದ ಹಣದುಬ್ಬರ ಅಧಿಕವಾಗಿ ವ್ಯಕ್ತವಾಗುಗುತ್ತಿದೆ. ಹಾಗೆಯೇ, ಪ್ರತಿಕೂಲ ಹವಾಮಾನದಿಂದಾಗಿ ಆಹಾರ ಬೆಲೆಗಳು ಹೆಚ್ಚಿನ ಮಟ್ಟದಲ್ಲಿದ್ದರಿಂದ ಸೆಪ್ಟೆಂಬರ್ ತಿಂಗಳಲ್ಲಿ ಹಣದುಬ್ಬರ ಹೆಚ್ಚಿರಬಹುದು ಎಂಬ ಅಂದಾಜು ಇತ್ತು. ಹೀಗಾಗಿ, ಇದು ತೀರಾ ಅನಿರೀಕ್ಷಿತವಲ್ಲ. ಹಣದುಬ್ಬರವನ್ನು ಶೇ. 4ಕ್ಕೆ ಕಟ್ಟಿ ನಿಲ್ಲಿಸುವುದು ಆರ್​ಬಿಐನ ಗುರಿಯಾಗಿದೆ. ಈ ನಿಟ್ಟಿನಲ್ಲಿ ಹಣದುಬ್ಬರ ತಾಳಿಕೆ ಮಿತಿಯಾಗಿ ಶೇ. 2ರಿಂದ 6 ಅನ್ನು ನಿಗದಿ ಮಾಡಿದೆ. ಸದ್ಯ ಸೆಪ್ಟೆಂಬರ್ ತಿಂಗಳ ಹಣದುಬ್ಬರ ಈ ತಾಳಿಕೆ ಮಿತಿಯಲ್ಲೇ ಇದೆ.

ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಶೇ. 5.87, ನಗರ ಭಾಗದಲ್ಲಿ ಶೇ. 5.05ರಷ್ಟಿದೆ. ಆಹಾರವಸ್ತು ಗುಂಪಿನ ಹಣದುಬ್ಬರ ಶೇ. 9.24ಕ್ಕೆ ಏರಿದೆ. ಆಗಸ್ಟ್​ನಲ್ಲಿ ಇದು ಶೇ. 5.66 ಇತ್ತು. 2023ರ ಸೆಪ್ಟೆಂಬರ್​ನಲ್ಲಿ ಶೇ. 6.62 ಇತ್ತು.

ಇದನ್ನೂ ಓದಿ: 3ಜಿ, 4ಜಿಯಲ್ಲಿ ಹಿಂದುಳಿದಿದ್ದ ಭಾರತ ಈಗ 6ಜಿಯಲ್ಲಿ ಸೂಪರ್​ಫಾಸ್ಟ್; ಜಾಗತಿಕ ದೈತ್ಯ ದೇಶಗಳಿಗೆ ಭಾರತದಿಂದ ಪೈಪೋಟಿ

ಈಗ ಹಣದುಬ್ಬರ ಮೇಲ್ಮಟ್ಟಕ್ಕೆ ಹೋಗಿರುವುದರಿಂದ ಡಿಸೆಂಬರ್​ನಲ್ಲಿ ಸಭೆ ನಡೆಸಲಿರುವ ಆರ್​ಬಿಐ ಎಂಪಿಸಿ ಸಮಿತಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲ ಹುಟ್ಟಿಸಿದೆ. ಡಿಸೆಂಬರ್​ನಲ್ಲಿ ಆರ್​ಬಿಐ ಬಡ್ಡಿದರ ಇಳಿಸುವ ಸಾಧ್ಯತೆ ಇದೆ. ಆದರೆ, ಹಣದುಬ್ಬರ ವಿಚಾರವು ಆರ್​ಬಿಐ ಕೈ ಕಟ್ಟಿಹಾಕಿದರೂ ಅಚ್ಚರ ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ