ಕ್ಯಾಲಿಫೋರ್ನಿಯಾ: ಅಮೆರಿಕದ ರೋಬೋ ವಾಹನ ಕಂಪನಿ ನ್ಯೂರೋ (Nuro) ತಾನು 340 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿರುವುದಾಗಿ (Layoffs) ಹೇಳಿದೆ. 340 ಎಂದರೆ ನ್ಯೂರೋದ ಶೇ. 30ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಸಂಸ್ಥೆಯ ವೆಚ್ಚ ತಗ್ಗಿಸಲು ಮತ್ತು ಬಂಡವಾಳ ಹರಿವು ಹೆಚ್ಚು ಕಾಲದವರೆಗೂ ಉಳಿಯಲು ಅನುವಾಗುವಂತೆ ಲೇ ಆಫ್ ಕ್ರಮ ಕೈಗೊಳ್ಳುತ್ತಿದೆ ನ್ಯೂರೋ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮುಖ್ಯಕಚೇರಿ ಹೊಂದಿರುವ ನ್ಯೂರೋ 2022ರ ನವೆಂಬರ್ನಲ್ಲಿ ಶೇ. 20ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡಿತ್ತು. ಒಟ್ಟು 300 ಮಂದಿ ಆಗ ಕೆಲಸ ಕಳೆದುಕೊಂಡಿದ್ದರು. ಈಗ ನಡೆಯುತ್ತಿರುವ ಲೇ ಆಫ್ ಸಂಖ್ಯೆ ಸೇರಿಸಿದರೆ ಶೇ 50ರಷ್ಟು ಉದ್ಯೋಗಿಗಳು ನ್ಯೂರೋದಲ್ಲಿ ಕೆಲಸ ಕಳೆದುಕೊಂಡಾಗುತ್ತದೆ. ನವೆಂಬರ್ಗೆ ಮುಂಚೆ ನ್ಯೂರೋದಲ್ಲಿ 1,200ಕ್ಕೂ ಹೆಚ್ಚು ಉದ್ಯೋಗಿಗಳಿದ್ದರು. ಅವರ ಪೈಕಿ 650 ಮಂದಿಗೆ ಕೆಲಸ ಹೋಗಿದೆ.
ಈಗ ಎರಡನೇ ಸುತ್ತಿನಲ್ಲಿ ಕೆಲಸ ಕಳೆದುಕೊಳ್ಳಲಿರುವ ಉದ್ಯೋಗಿಗಳಿಗೆ ನುರೋ ಕಂಪನಿ 12 ವಾರಗಳ ಸಂಬಳ ಮೊತ್ತದಷ್ಟು ಪರಿಹಾರ ನೀಡಲಿದೆ. 2 ವರ್ಷಕ್ಕಿಂತ ಹೆಚ್ಚು ಅನುಭವಿ ಉದ್ಯೋಗಿಗಳಿಗೆ 2 ಹೆಚ್ಚುವರಿ ವಾರಗಳ ಸಂಬಳ ಸಿಗಲಿದೆಯಂತೆ. ಜೊತೆಗೆ ಟಾರ್ಗೆಟ್ ಬೋನಸ್ನ ಶೇ. 62.5ರಷ್ಟು ಮೊತ್ತವನ್ನೂ ಕೊಡಲಾಗುವುದು ಎಂದು ಕಂಪನಿ ಹೇಳಿದೆ.
ಡೇವ್ ಫರ್ಗುಸನ್ ಮತ್ತು ಜಿಯಾಜುನ್ ಝು ಎಂಬಿಬ್ಬರು ಸೇರಿ ಸ್ಥಾಪಿಸಿದ ಕಂಪನಿ ನ್ಯೂರೋ. ಚಾಲಕರಹಿತವಾಗಿ ಸ್ವಯಂಚಾಲಿತವಾಗಿ ಚಲಿಸುವ ವಾಹನಗಳನ್ನು ಈ ಕಂಪನಿ ತಯಾರಿಸುತ್ತದೆ. ಆರ್3 ಎಂಬ ಅತ್ಯಾಧುನಿಕ ಮತ್ತು ಮೂರನೇ ತಲೆಮಾರಿನ ಡೆಲಿವರಿ ರೋಬೋದ ತಯಾರಿಕೆಯಲ್ಲಿ ಇದು ತೊಡಗಿಸಿಕೊಂಡಿದೆ. ಸದ್ಯಕ್ಕೆ ಅದರ ತಯಾರಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಸಾಕಷ್ಟು ಫಂಡಿಂಗ್ ಪಡೆದಿರುವ ಸಂಸ್ಥೆ ಈ ಹಣವನ್ನು ಅಧ್ಯಯನ ಮತ್ತು ಸಂಶೋಧನೆಗೆ ವಿನಿಯೋಗಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಆರ್3 ತಯಾರಿಕೆ ವಿಳಂಬಗೊಂಡಿದೆ. ಈಗ ಉದ್ಯೋಗಕಡಿತದಿಂದ ಇನ್ನಷ್ಟು ವೆಚ್ಚ ಉಳಿತಾಯವಾಗಲಿದ್ದು, ಅದರಿಂದ ಸಂಸ್ಥೆ ಹೆಚ್ಚು ಶಕ್ತಿಯುತಗೊಳ್ಳಬಹುದು ಎಂದು ಅದು ನಿರೀಕ್ಷಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ