ಟಾಟಾ ಟೆಲಿ ಬಿಜಿನೆಸ್ ಸರ್ವೀಸಸ್ ಲಿಮಿಟೆಡ್ ಅನ್ನು ಈ ಹಿಂದೆ ಟಾಟಾ ಟೆಲಿ ಸರ್ವೀಸಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು. ಆರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಸ್ಟಾಕ್ ಬೆಲೆಯಲ್ಲಿ ಶೇ 538ರಷ್ಟು ತೀವ್ರ ಏರಿಕೆ ಆಗಿದೆ. ಈ ಪೆನ್ನಿ ಸ್ಟಾಕ್‌ನ ಬೆಲೆ 20, ಮೇ 2021ರಂದು 12.55 ರುಪಾಯಿ ಇತ್ತು. ಇದೀಗ 80.55 ರೂಪಾಯಿಯಷ್ಟಿದೆ. ಈ ಏರಿಕೆಯ ಮೇಲೆ ಸವಾರಿ ಮಾಡುತ್ತಾ ಹೂಡಿಕೆದಾರರಿಗೆ ಈ ಅವಧಿಯಲ್ಲಿ ತಮ್ಮ ಹೂಡಿಕೆಯ ಮೇಲೆ ಆರು ಪಟ್ಟು ಹೆಚ್ಚು ರಿಟರ್ನ್ಸ್ ಪಡೆದಿದ್ದಾರೆ. ಮೇ 20ರಂದು (12.55 ರೂಪಾಯಿ ಇದ್ದಾಗ) ಈ ಷೇರುಗಳಲ್ಲಿ 50,000 ರೂಪಾಯಿ ಹೂಡಿಕೆ ಮಾಡಿದ್ದರೆ ಅದು ಈಗ 3.18 ಲಕ್ಷ ರೂಪಾಯಿ ಆಗುತ್ತಿತ್ತು. ಒಂದು ವೇಳೆ ಆ ಸಮಯದಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ 6.37 ಲಕ್ಷ ರೂಪಾಯಿ ಆಗಿರುತ್ತಿತ್ತು. ಆದರೆ ಜುಲೈನಲ್ಲಿ 34.45 ರೂಪಾಯಿಗೆ ಕುಸಿದು, ಸ್ವಲ್ಪ ಕರೆಕ್ಷನ್ ಕಂಡಿತು. ಅದರ ನಂತರ ಅಕ್ಟೋಬರ್‌ವರೆಗೆ 35 ರಿಂದ 37 ರೂಪಾಯಿ ವ್ಯಾಪ್ತಿಯಲ್ಲಿ ಉಳಿಯಿತು. ಈ ಅವಧಿಯ ನಂತರ ಮತ್ತೆ ತೀವ್ರ ಏರಿಕೆ ಕಂಡಿದೆ.
ಜುಲೈ 28ರಂದು 1 ಲಕ್ಷ ರೂಪಾಯಿ ಈ ಕಂಪೆನಿಯ ಷೇರಿನಲ್ಲಿ ಹೂಡಿಕೆ ಮಾಡಿದ್ದರೂ (ಷೇರಿನ ಬೆಲೆ 34.45 ರೂಪಾಯಿ ಇದ್ದಾಗ) ಅದು ಈಗ 2.32 ಲಕ್ಷ ರೂಪಾಯಿ ಆಗುತ್ತಿತ್ತು. ಈ ಮಧ್ಯೆ 50,000 ರೂಪಾಯಿ ಹೂಡಿಕೆ ಮಾಡಿದ್ದರೂ 1.16 ಲಕ್ಷ ರೂಪಾಯಿಗೆ ಬೆಳೆದಿರುತ್ತದೆ. ಅಂದರೆ ಹಣವು ಕೇವಲ 3 ತಿಂಗಳಲ್ಲಿ ದ್ವಿಗುಣಗೊಂಡಿರುತ್ತದೆ. ಮೇ ಅಂತ್ಯದಲ್ಲಿ, ಟಾಟಾ ಸನ್ಸ್ ಟಾಟಾ ಟೆಲಿ ಬಿಜಿನೆಸ್ ಸರ್ವಿಸಸ್ (ಟಿಟಿಬಿಎಸ್) ಎಂಬ ಹೊಸ ಅವತಾರದಲ್ಲಿ ಟಾಟಾ ಟೆಲಿಸರ್ವೀಸಸ್ ಅನ್ನು ಪುನಶ್ಚೇತನಗೊಳಿಸಿದೆ ಎಂದು ವರದಿಗಳು ಸೂಚಿಸಿದವು. ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸೇವೆ ಸಲ್ಲಿಸುತ್ತದೆ. ಅದರ ನಂತರ ಷೇರುಗಳು ತೀವ್ರವಾಗಿ ಏರಿತು.
2020ರಲ್ಲಿ ಟಾಟಾ ಸನ್ಸ್ ಟಾಟಾ ಟೆಲಿಯಲ್ಲಿ ತನ್ನ 28,600 ಕೋಟಿ ರೂಪಾಯಿ ಹೂಡಿಕೆಯನ್ನು ರದ್ದುಗೊಳಿಸಿತ್ತು. ಅದರ ಗ್ರಾಹಕ ಮೊಬೈಲ್ ಕಾರ್ಯಾಚರಣೆಗಳನ್ನು ಜುಲೈ 2019ರಲ್ಲಿ ಭಾರ್ತಿ ಏರ್‌ಟೆಲ್‌ಗೆ ವರ್ಗಾಯಿಸಲಾಗಿದೆ ಎಂದು ಮಾಧ್ಯಮದಲ್ಲಿ ಈ ಹಿಂದೆ ವರದಿ ಆಗಿತ್ತು. ಕೇರ್ ರೇಟಿಂಗ್‌ನ ಇತ್ತೀಚಿನ ವರದಿಯು ತನ್ನ ದೀರ್ಘಾವಧಿಯ ಮತ್ತು ಅಲ್ಪಾವಧಿಯ ಬ್ಯಾಂಕ್ ಸೌಲಭ್ಯ ಮತ್ತು ಕಂಪೆನಿಯ ಸಾಧನಗಳ ಮೇಲೆ ತನ್ನ ರೇಟಿಂಗ್ ಅನ್ನು ಪುನರುಚ್ಚರಿಸಿದೆ. ಅದರ ಪ್ರವರ್ತಕ ಟಾಟಾ ಸನ್ಸ್‌ನ ನಿರಂತರ ಬೆಂಬಲವು ಮುಂದಿನ 12 ತಿಂಗಳವರೆಗೆ ನಗದಿನಲ್ಲಿ ಯಾವುದೇ ಕೊರತೆಯನ್ನು ಹೊಂದಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ರೇಟಿಂಗ್ ಏಜೆನ್ಸಿ ಹೇಳಿದೆ. FY21 ನಂತರ ಗ್ರಾಹಕ ಮೊಬೈಲ್ ವ್ಯವಹಾರದ ವಿಭಜನೆಯ ನಂತರ ಘಟಕದ ಕಾರ್ಯನಿರ್ವಹಣೆಯ ಕಾರ್ಯಕ್ಷಮತೆಯ ಸುಧಾರಣೆಯನ್ನು ಕೇರ್ ಗಮನಿಸಿದೆ ಎಂದು ಅದು ಹೇಳಿದೆ.
ಇದನ್ನೂ ಓದಿ: 20 ವರ್ಷದ ಹಿಂದೆ ರಾಯಲ್ ಎನ್ಫೀಲ್ಡ್ ಬೈಕ್ ಬದಲಿಗೆ ಈ ಕಂಪೆನಿ ಷೇರು ಖರೀದಿಸಿದ್ದರೆ ಇವತ್ತಿಗೆ ಎಷ್ಟು ಕೋಟಿ ಗೊತ್ತೆ?