ನವದೆಹಲಿ, ಜುಲೈ 1: ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು (Rs 2,000 notes) ಆರ್ಬಿಐ ಹಿಂಪಡೆದು 13 ತಿಂಗಳ ಮೇಲಾಯಿತು. ಇಲ್ಲಿಯವರೆಗೆ (ಜೂನ್ 28) ಶೇ. 97.87ರಷ್ಟು ನೋಟುಗಳು ಆರ್ಬಿಐಗೆ ಮರಳಿವೆ. ಇದು ರಿಸರ್ವ್ ಬ್ಯಾಂಕ್ ಪ್ರಕಟಪಡಿಸಿದ ಮಾಹಿತಿಯಾಗಿದೆ. ಆರ್ಬಿಐ 2023ರ ಮೇ 19ರಂದು 2,000 ರೂ ನೋಟನ್ನು ಚಲಾವಣೆಯಿಂದ ಹಿಂಪಡೆಯಿತು. ಆಗ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿದ್ದ ಎರಡು ಸಾವಿರ ರೂ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯ 3.56 ಲಕ್ಷ ಕೋಟಿ ರೂ. ಈ ಪೈಕಿ ಬಹುಭಾಗದ ನೋಟು ಮರಳಿವೆ. ಇನ್ನೂ ಬರದೇ ಉಳಿದುಕೊಂಡಿರುವ ನೋಟುಗಳ ಮೌಲ್ಯ 7,581 ಕೋಟಿ ರೂ ಎನ್ನಲಾಗಿದೆ.
ಆರ್ಬಿಐ ಪ್ರತೀ ತಿಂಗಳು ವರದಿ ಪ್ರಕಟಿಸುತ್ತದೆ. ಕಳೆದ ತಿಂಗಳ ವರದಿಯಲ್ಲಿ ಅದು ನೀಡಿದ ಮಾಹಿತಿಗೆ ಹೋಲಿಸಿದರೆ ಇನ್ನೂ ವಾಪಸ್ ಆಗದ 2,000 ರೂ ನೋಟುಗಳ ಪ್ರಮಾಣ ಶೇ. 2.29ರಷ್ಟು ಕಡಿಮೆ ಆಗಿದೆ. ಮೇ ತಿಂಗಳಲ್ಲಿ 7,755 ಕೋಟಿ ರೂ ಮೌಲ್ಯದ ಎರಡು ಸಾವಿರ ರೂ ನೋಟುಗಳು ಚಲಾವಣೆಯಲ್ಲಿ ಇದ್ದವು. ಈಗ ಅದರ ಪ್ರಮಾಣ 7,581 ಕೋಟಿ ರೂಗೆ ಇಳಿದಿದೆ.
ಎರಡು ಸಾವಿರ ರೂ ನೋಟುಗಳನ್ನು ಆರ್ಬಿಐ ಚಲಾವಣೆಯಿಂದ ಮಾತ್ರವೇ ಹಿಂತೆಗೆದುಕೊಂಡಿರುವುದು. ಈ ನೋಟುಗಳು ಈಗಲೂ ಸಿಂಧುವೇ. ಆದರೆ, ಚಲಾವಣೆ ಆಗುವುದಿಲ್ಲ. ಅಂದರೆ, ಅದನ್ನು ಬಳಸಿ ಖರೀದಿ, ಪಾವತಿ ಇತ್ಯಾದಿ ಹಣದ ವಹಿವಾಟು ಆಗುವುದಿಲ್ಲ. ಅದನ್ನು ಆರ್ಬಿಐಗೆ ಮರಳಿಸಿದರೆ ಆ ಮೊತ್ತದ ಬೇರೆ ನೋಟುಗಳನ್ನು ಪಡೆಯಬಹುದು.
ಇತ್ತೀಚಿನವರೆಗೂ ಎರಡು ಸಾವಿರ ರೂ ನೋಟುಗಳನ್ನು ಎಲ್ಲಾ ಬ್ಯಾಂಕುಗಳಲ್ಲಿ ಮರಳಿಸುವ ಅವಕಾಶ ಇತ್ತು. ಈಗ ಆರ್ಬಿಐನ 19 ಇಷ್ಯೂ ಆಫೀಸ್ಗಳಲ್ಲಿ ಮಾತ್ರವೇ ನೋಟುಗಳನ್ನು ಹಿಂದಿರುಗಿಸಬಹುದು. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಆರ್ಬಿಐ ಕಚೇರಿಯೂ ಇದರಲ್ಲಿ ಒಂದು.
ಇದನ್ನೂ ಓದಿ: ಕಾರ್ಡ್ ಇಲ್ಲದೇ ಎಟಿಎಂನಲ್ಲಿ ಹಣ ವಿತ್ಡ್ರಾ ಹೇಗೆ ಮಾಡುವುದು? ಇಲ್ಲಿದೆ ಮಾರ್ಗೋಪಾಯ
ಕರ್ನಾಟಕದ ಬೇರೆ ಭಾಗದಲ್ಲಿರುವ ಜನರು ನೋಟು ಮರಳಿಸಲು ಬೆಂಗಳೂರಿಗೆ ಬರುವುದು ಕಷ್ಟವಾಗಬಹುದು. ಅಂಥವರು ಅಂಚೆ ಕಚೇರಿ ಸಹಾಯ ಪಡೆಯಬಹುದು. ಆರ್ಬಿಐನ ಯಾವುದಾದರೂ ಇಷ್ಯೂ ಆಫೀಸ್ನ ವಿಳಾಸವನ್ನು ನಮೂದಿಸಿ, ಲಕೋಟೆಯಲ್ಲಿ ನೋಟುಗಳನ್ನಿಟ್ಟು ಪೋಸ್ಟ್ ಮಾಡಬಹುದು. ಅದರಲ್ಲಿ ಬ್ಯಾಂಕ್ ಅಕೌಂಟ್ ಅನ್ನು ನಮೂದಿಸುವುದನ್ನು ಮರೆಯಬೇಡಿ. ಆ ಪತ್ರ ಆರ್ಬಿಐ ಕಚೇರಿ ತಲುಪಿದ ಬಳಿಕ ನೋಟುಗಳ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ