ಭಾರತದಲ್ಲಿ ನಡೆಯುವ ಮದುವೆ ಸಂಖ್ಯೆ ಚೀನಾಗಿಂತಲೂ ಹೆಚ್ಚು; ವಿವಾಹ ಉದ್ಯಮ ಅಮೆರಿಕದಕ್ಕಿಂತಲೂ ಎರಡು ಪಟ್ಟು ದೊಡ್ಡದು: ಜೆಫರೀಸ್ ವರದಿ
Indian wedding industry: ಭಾರತದ ಮದುವೆ ಉದ್ಯಮ ಬೃಹತ್ತಾಗಿದ್ದು 130 ಬಿಲಿಯನ್ ಡಾಲರ್ನಷ್ಟು ಬಿಸಿನೆಸ್ ಆಗುತ್ತದೆ. ಭಾರತದಲ್ಲಿ ಒಂದು ವರ್ಷದಲ್ಲಿ ಒಂದು ಕೋಟಿಯಷ್ಟು ಮದುವೆಗಳು ನಡೆಯುತ್ತವೆ. ಚೀನಾಗಿಂತಲೂ ಹೆಚ್ಚು ಮದುವೆ ಇಲ್ಲಾಗುತ್ತದೆ. ಅಮೆರಿಕದಲ್ಲಿರುವ ಮದುವೆ ಉದ್ಯಮಕ್ಕಿಂತ ಭಾರತದ್ದು ಎರಡು ಪಟ್ಟು ದೊಡ್ಡದಿದೆ. 10 ಲಕ್ಷ ಕೋಟಿ ರೂ ಗಾತ್ರದ ಉದ್ಯಮ ಮದುವೆಯದ್ದು.
ನವದೆಹಲಿ, ಜುಲೈ 1: ಭಾರತದಲ್ಲಿ ಮದುವೆಗೆ ಈಗಲೂ ಬಹಳ ಮುಖ್ಯ ಸ್ಥಾನ ಇದೆ. ಪ್ರತಿಯೊಬ್ಬ ವ್ಯಕ್ತಿ ಮತ್ತು ಕುಟುಂಬವು ಮದುವೆಯನ್ನು ಜೀವನದ ಅತ್ಯಂತ ವಿಶೇಷ ಸಂದರ್ಭಗಳಲ್ಲಿ ಒಂದೆಂದು ಪರಿಗಣಿಸುತ್ತಾರೆ. ಅವರವರ ಅನುಕೂಲತೆಗೆ ತಕ್ಕಂತೆ, ಮತ್ತು ಕೈಮೀರಿದಷ್ಟು ಹಣ ಖರ್ಚು ಮಾಡಿ ಮದುವೆ ಮಾಡುತ್ತಾರೆ. ವೈಯಕ್ತಿಕವಾಗಿ ಇದು ದುಂದುವೆಚ್ಚವಾದರೂ ಈ ಮದುವೆಗಳು ಒಂದು ದೊಡ್ಡ ಉದ್ದಿಮೆಯೇ ಆಗಿವೆ. ಬೇರೆ ಬೇರೆ ಉದ್ದಿಮೆಗಳಿಗೆ ಪರೋಕ್ಷವಾಗಿ ಪೋಷಣೆ ನೀಡುತ್ತಿವೆ. ಭಾರತದಲ್ಲಿರುವ ವಿವಾಹ ಉದ್ಯಮವು ಅಮೆರಿಕದ ವೆಡ್ಡಿಂಗ್ ಇಂಡಸ್ಟ್ರೀಸ್ಗಿಂತ ಎರಡು ಪಟ್ಟು ದೊಡ್ಡದಿದೆ. ಹಾಗಂತ ಜೆಫರೀಸ್ ಎಂಬ ಬ್ರೋಕರೇಜ್ ಸಂಸ್ಥೆ ಹೇಳಿದೆ. ಅದರ ಪ್ರಕಾರ ಭಾರತದ ವಿವಾಹ ಉದ್ಯಮದ ಗಾತ್ರ ಬರೋಬ್ಬರಿ 10 ಲಕ್ಷ ಕೋಟಿರೂನಷ್ಟಿದೆ.
ಎಷ್ಟು ಮದುವೆಗಳು ನಡೆಯುತ್ತವೆ?
ಒಂದು ವರ್ಷದಲ್ಲಿ ಭಾರತದಲ್ಲಿ 80 ಲಕ್ಷದಿಂದ ಒಂದು ಕೋಟಿಯಷ್ಟು ವಿವಾಹ ಸಮಾರಂಭಗಳು ನಡೆಯುತ್ತವೆ ಎಂದು ಜೆಫರೀಸ್ನ ವರದಿ ಹೇಳುತ್ತದೆ. ಚೀನಾದಲ್ಲಿ ನಡೆಯುವುದಕ್ಕಿಂತಲೂ ಹೆಚ್ಚು ಮದುವೆ ಭಾರತದಲ್ಲಿ ಆಗುತ್ತಿದೆ.
- ಭಾರತದಲ್ಲಿ ವರ್ಷಕ್ಕೆ 80 ಲಕ್ಷದಿಂದ 1 ಕೋಟಿ ಮದುವೆ
- ಚೀನಾದಲ್ಲಿ 70 ಲಕ್ಷದಿಂದ 80 ಲಕ್ಷ ಮದುವೆ
- ಅಮೆರಿಕದಲ್ಲಿ 20 ಲಕ್ಷದಿಂದ 25 ಲಕ್ಷ ಮದುವೆ ನಡೆಯುತ್ತವೆ.
ಇದನ್ನೂ ಓದಿ: ಕಾರ್ಡ್ ಇಲ್ಲದೇ ಎಟಿಎಂನಲ್ಲಿ ಹಣ ವಿತ್ಡ್ರಾ ಹೇಗೆ ಮಾಡುವುದು? ಇಲ್ಲಿದೆ ಮಾರ್ಗೋಪಾಯ
ಭಾರೀ ದೊಡ್ಡ ಉದ್ಯಮ
ಜೆಫರೀಸ್ ವರದಿ ಪ್ರಕಾರ ಭಾರತದಲ್ಲಿ ವಿವಾಹ ಉದ್ಯಮ ಪ್ರಮಾಣ 130 ಬಿಲಿಯನ್ ಡಾಲರ್ನಷ್ಟಿದೆ. ಚೀನಾಗಿಂತ ತುಸು ಹಿಂದಿದೆ. ಆದರೆ, ಅಮೆರಿಕದಲ್ಲಿರುವ ವೆಡ್ಡಿಂಗ್ ಇಂಡಸ್ಟ್ರೀಸ್ಗಿಂತ ಭಾರತದ್ದು ಎರಡು ಪಟ್ಟು ದೊಡ್ಡದಿದೆ. 130 ಬಿಲಿಯನ್ ಡಾಲರ್ ಎಂದರೆ ಸುಮಾರು 10 ಲಕ್ಷ ಕೋಟಿ ರೂ ಆಗುತ್ತದೆ.
- ಚೀನಾದ ಮದುವೆ ಉದ್ಯಮ ಗಾತ್ರ: 170 ಬಿಲಿಯನ್ ಡಾಲರ್
- ಭಾರತದ ಮದುವೆ ಉದ್ಯಮ ಗಾತ್ರ: 130 ಬಿಲಿಯನ್ ಡಾಲರ್
- ಅಮೆರಿಕದ ಮದುವೆ ಉದ್ಯಮ ಗಾತ್ರ: 70 ಬಿಲಿಯನ್ ಡಾಲರ್
ಒಂದು ವೇಳೆ ಮದುವೆ ಉದ್ಯಮವನ್ನು ರೀಟೇಲ್ ಕೆಟಗರಿಗೆ ಸೇರಿಸಿದರೆ ಅದು ಎರಡನೇ ಸ್ಥಾನ ಪಡೆಯುತ್ತದೆ. ಆಹಾರ ಮತ್ತು ದಿನಸಿ ಉದ್ಯಮ 681 ಬಿಲಿಯನ್ ಡಾಲರ್ ಇದೆ. ಅದು ಬಿಟ್ಟರೆ ರೀಟೇಲ್ ಕೆಟಗರಿಯಲ್ಲಿ ಮದುವೆ ಉದ್ಯಮವೇ ಅತಿದೊಡ್ಡದೆನಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:29 pm, Mon, 1 July 24