RBI: 2,000 ರೂ ನೋಟು ಇನ್ನೂ ಇದೆಯಾ? ಆರ್​ಬಿಐ ಕಚೇರಿಗೆ ಹೋಗದೇ ಹಣ ವಿನಿಮಯ ಸಾಧ್ಯ; ಇಲ್ಲಿದೆ ಮಾರ್ಗ

|

Updated on: Nov 23, 2023 | 7:23 PM

How To Exchange Rs 2,000 Notes: ಸರ್ಕಾರ 2,000 ರೂ ನೋಟನ್ನು ಚಲಾವಣೆಯಿಂದ ಹಿಂಪಡೆದ ಬಳಿಕ ಹೆಚ್ಚಿನ ನೋಟುಗಳು ಮರಳಿವೆ. ಈಗಲೂ ಕೂಡ ಶೇ. 2ಕ್ಕಿಂತ ಹೆಚ್ಚು ನೋಟು ವಿನಿಮಯ ಆಗಬೇಕಿದೆ. ಆರ್​ಬಿಐ ಕಚೇರಿಗಳಲ್ಲಿ ಮಾತ್ರ ಸದ್ಯಕ್ಕೆ ನೋಟು ವಿನಿಮಯಕ್ಕೆ ಅವಕಾಶ ಇರುವುದು. ಅನೇಕ ಆರ್​ಬಿಐ ಕಚೇರಿಗಳಲ್ಲಿ ಇದಕ್ಕಾಗಿ ಉದ್ದುದ್ದ ಕ್ಯೂ ಇರುವುದು ಕಂಡುಬಂದಿದೆ. ಇದೇ ವೇಳೆ, ಅಂಚೆ ಕಚೇರಿ ಮೂಲಕ 2,000 ರೂ ನೋಟು ವಿನಿಮಯ ಮಾಡಿಕೊಳ್ಳುವ ಅವಕಾಶದ ಬಗ್ಗೆ ಹೆಚ್ಚಿನ ಜನಕ್ಕೆ ತಿಳಿದಿಲ್ಲ.

RBI: 2,000 ರೂ ನೋಟು ಇನ್ನೂ ಇದೆಯಾ? ಆರ್​ಬಿಐ ಕಚೇರಿಗೆ ಹೋಗದೇ ಹಣ ವಿನಿಮಯ ಸಾಧ್ಯ; ಇಲ್ಲಿದೆ ಮಾರ್ಗ
2,000 ರೂ ನೋಟು
Follow us on

ಬೆಂಗಳೂರು, ನವೆಂಬರ್ 23: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಎರಡು ಸಾವಿರ ರೂ ಮುಖಬೆಲೆಯ ನೋಟನ್ನು (Rs 2,000 Note) ಚಲಾವಣೆಯಿಂದ ಹಿಂಪಡೆದಿತ್ತು. ಈ ನೋಟುಗಳ ವಿನಿಮಯಕ್ಕೆ ಕಾಲಾವಕಾಶ ವಿಸ್ತರಿಸಲಾಗುತ್ತಲೇ ಇದೆ. ಆದರೆ ಎಲ್ಲಾ ಬ್ಯಾಂಕುಗಳಲ್ಲಿ ನೋಟು ವಿನಿಮಯಕ್ಕೆ ಇದ್ದ ಅವಕಾಶ ಈಗ ತಪ್ಪಿದೆ. ಈಗ ಆರ್​ಬಿಐನ ವಿವಿಧ ಕಚೇರಿಗಳಲ್ಲಿ ಮಾತ್ರವೇ 2,000 ರೂ ನೋಟು ವಿನಿಮಯಕ್ಕೆ ಅವಕಾಶ ಇದೆ. ಚಲಾವಣೆಯಲ್ಲಿದ್ದ 2,000 ರೂ ನೋಟುಗಳ ಪೈಕಿ ಶೇ. 3ರಷ್ಟು ನೋಟು ಇನ್ನೂ ಹಿಂದಿರುಗಿಲ್ಲ. ಹೀಗಾಗಿ, ನೂರಾರು ಕೋಟಿ ರೂ ಮೊತ್ತದ ಈ ನೋಟುಗಳು ಬರಬೇಕಿದೆ. ಅವನ್ನು ಸಂಪೂರ್ಣವಾಗಿ ಮರಳಿ ಪಡೆಯಲು ಆರ್​ಬಿಐ ವಿವಿಧ ಮಾರ್ಗಗಳನ್ನು ಒದಗಿಸುತ್ತಿದೆ. ಇದೀಗ ಪೋಸ್ಟ್ ಆಫೀಸ್​ಗೆ ಹೋಗಿಯೂ ನೀವು ನೋಟು ವಿನಿಮಯ ಮಾಡಬಹುದು. ಅದರ ವಿವರ ಇಲ್ಲಿದೆ:

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿ ಆರ್​ಬಿಐನ ಶಾಖಾ ಕಚೇರಿ ಇದೆ. ದೇಶಾದ್ಯಂತ ಈ ರೀತಿ 19 ನಗರಗಳಲ್ಲಿ ಆರ್​ಬಿಐ ಕಚೇರಿಗಳಿವೆ. ಅಲ್ಲಿಗೆ ಹೋಗಿ 2,000 ರೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಒಮ್ಮೆಗೆ 10 ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಅಂದರೆ 20,000 ರೂ ಮೊತ್ತದವರೆಗಿನ ನೋಟುಗಳನ್ನು ಎಕ್ಸ್​ಚೇಂಜ್ ಮಾಡಿಕೊಳ್ಳಬಹುದು. ಈ ರೀತಿ ಮಾಡಲು ಆಧಾರ್ ಕಾರ್ಡ್ ದಾಖಲೆ ಸಲ್ಲಿಸುವುದು ಕಡ್ಡಾಯವಾಗಿದೆ.

ಒಂದು ವೇಳೆ, ಆರ್​ಬಿಐ ಕಚೇರಿಗೆ ಹೋಗಲು ಸಾಧ್ಯವಾಗದವರು ತಮ್ಮ ಸಮೀಪದ ಅಂಚೆ ಕಚೇರಿಗೆ ಹೋಗಿ ಪೋಸ್ಟ್ ಮೂಲಕವೂ ನೋಟು ವಿನಿಮಯ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಡಿಸೆಂಬರ್​ನಲ್ಲಿ ಬ್ಯಾಂಕುಗಳಿಗೆ 18 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ? 6 ದಿನ ಬ್ಯಾಂಕ್ ಮುಷ್ಕರದ ಬರೆ

ಈ ಪಟ್ಟಿಯಲ್ಲಿ ಯಾವುದಾದರೂ ಒಂದು ದಾಖಲೆ ಬೇಕು

  • ಆಧಾರ್ ಕಾರ್ಡ್
  • ಡ್ರೈವಿಂಗ್ ಲೈಸೆನ್ಸ್
  • ವೋಟರ್ ಐಡಿ
  • ಪಾಸ್​ಪೋರ್ಟ್
  • ನರೇಗಾ ಕಾರ್ಡ್
  • ಪ್ಯಾನ್ ಕಾರ್ಡ್
  • ಸರ್ಕಾರ ಯಾವುದೇ ಇಲಾಖೆಯಿಂದ ಒದಗಿಸಿದ ಗುರುತಿನ ಕಾರ್ಡ್

ಈ ಮೇಲಿನ ಯಾವುದಾದರೂ ಒಂದು ದಾಖಲೆಯ ಜೊತೆಗೆ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್ ಅಥವಾ ಪಾಸ್​ಬುಕ್​ನ ಮೊದಲ ಪುಟದ ಪ್ರತಿ ಇಟ್ಟುಕೊಂಡಿರಿ.

ಇದನ್ನೂ ಓದಿ: ರೂ 2,000 ನೋಟು ಇನ್ನೂ ಇವೆಯಾ?; ಕೆಲವೇ ಕಡೆ ನೋಟು ವಿನಿಮಯಕ್ಕೆ ಇನ್ನೂ ಇದೆ ಅವಕಾಶ; ಇಲ್ಲಿದೆ ಡೀಟೇಲ್ಸ್

2,000 ರೂ ನೋಟು ವಿನಿಮಯಕ್ಕೆ ಆರ್​ಬಿಐ ಒಂದು ಪ್ರತ್ಯೇಕ ಫಾರ್ಮ್ ರೂಪಿಸಿದೆ. ಆ ಫಾರ್ಮ್ ಭರ್ತಿ ಮಾಡಿ, ಮೇಲೆ ತಿಳಿಸಿದ ದಾಖಲೆಗಳನ್ನು ಅದರ ಜೊತೆ ಲಗತ್ತಿಸಿ, ಆರ್​ಬಿಐನ 19 ಇಷ್ಯೂ ಆಫೀಸ್​ಗಳಲ್ಲಿ ಯಾವುದಾದರೂ ಒಂದಕ್ಕೆ ಪೋಸ್ಟ್ ಮೂಲಕ ಕಳುಹಿಸಬೇಕು. ಈ ಅರ್ಜಿಗಳನ್ನು ಆರ್​ಬಿಐ ಕಚೇರಿಯಲ್ಲಿ ಪರಿಶೀಲಿಸಲಾಗುತ್ತದೆ. ಬಳಿಕ ನಿಗದಿತ ಬ್ಯಾಂಕ್ ಖಾತೆಗೆ ಅಷ್ಟು ಹಣವನ್ನು ಜಮೆ ಮಾಡಲಾಗುತ್ತದೆ.

ಆರ್​ಬಿಐ ಕಚೇರಿಗಳಲ್ಲಿ ಈಗ 2,000 ರೂ ನೋಟುಗಳ ವಿನಿಮಯಕ್ಕೆ ಕ್ಯೂ ಹೆಚ್ಚಿರುವುದರಿಂದ ಅಂಚೆ ಕಚೇರಿ ಮಾರ್ಗದ ಅವಕಾಶವನ್ನು ಒದಗಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ