ರಷ್ಯನ್ ತೈಲ, ಕಲ್ಲಿದ್ದಲು ಖರೀದಿ: ಭಾರತವನ್ನು ಹಿಂದಿಕ್ಕಿದ ಟರ್ಕಿ

Russian fuel exports, India's share come down in 2025 December: ಬೇರೆ ಬೇರೆ ಕಾರಣಕ್ಕೆ ಡಿಸೆಂಬರ್ ತಿಂಗಳಲ್ಲಿ ಭಾರತದಿಂದ ರಷ್ಯನ್ ತೈಲ ಖರೀದಿ ಕಡಿಮೆ ಆಗಿದೆ. ಸಿಆರ್​ಇಎ ವರದಿ ಪ್ರಕಾರ ನವೆಂಬರ್​ಗೆ ಹೋಲಿಸಿದರೆ ಡಿಸೆಂಬರ್​ನಲ್ಲಿ ರಷ್ಯಾದಿಂದ ಭಾರತವು ಮಾಡಿದ ತೈಲ ಖರೀದಿಯಲ್ಲಿ ಶೇ. 29ರಷ್ಟು ತಗ್ಗಿದೆ. ರಷ್ಯಾದ ಪಳೆಯುಳಿಕೆ ಇಂಧನವನ್ನು ಅತಿಹೆಚ್ಚು ಖರೀದಿಸಿದ ದೇಶಗಳ ಪಟ್ಟಿಯಲ್ಲಿ ಚೀನಾ ನಂತರದ ಸ್ಥಾನ ಭಾರತದ ಬದಲು ಟರ್ಕಿ ಇದೆ.

ರಷ್ಯನ್ ತೈಲ, ಕಲ್ಲಿದ್ದಲು ಖರೀದಿ: ಭಾರತವನ್ನು ಹಿಂದಿಕ್ಕಿದ ಟರ್ಕಿ
ಕಚ್ಛಾ ತೈಲ

Updated on: Jan 14, 2026 | 4:39 PM

ನವದೆಹಲಿ, ಜನವರಿ 14: ಭಾರತವು ರಷ್ಯಾದಿಂದ ತೈಲ ಪಡೆಯುತ್ತಿರುವುದು (Russian Oil) ಡಿಸೆಂಬರ್​ನಲ್ಲಿ ಗಣನೀಯವಾಗಿ ಕಡಿಮೆ ಆಗಿದೆ. ನವೆಂಬರ್​ಗೆ ಹೋಲಿಸಿದರೆ ರಷ್ಯನ್ ತೈಲ ಖರೀದಿಯಲ್ಲಿ ಶೇ. 29ರಷ್ಟು ಇಳಿಮುಖವಾಗಿದೆ. ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಅಂಡ್ ಕ್ಲೀನ್ ಏರ್ (ಸಿಆರ್​ಇಎ) ಸಂಸ್ಥೆಯ ಇತ್ತೀಚಿನ ವರದಿಯಲ್ಲಿ ಈ ಅಂಕಿಅಂಶಗಳಿವೆ. ಡಿಸೆಂಬರ್ ತಿಂಗಳಲ್ಲಿ ಭಾರತದ ಒಟ್ಟಾರೆ ಕಚ್ಛಾ ತೈಲ (crude oil) ಆಮದು ಹೆಚ್ಚಾದರೂ ರಷ್ಯನ್ ತೈಲ ಆಮದಿನಲ್ಲಿ ಕಡಿಮೆ ಆಗಿರುವುದು ಗಮನಾರ್ಹ.

ರಿಲಾಯನ್ಸ್​ನ ಜಾಮ್​ನಗರ್ ರಿಫೈನರಿಯು ಡಿಸೆಂಬರ್ ತಿಂಗಳಲ್ಲಿ ರಷ್ಯನ್ ತೈಲ ಖರೀದಿಯಲ್ಲಿ ಶೇ. 49ರಷ್ಟು ಕಡಿಮೆಗೊಳಿಸಿದೆ. ಇತರ ಭಾರತೀಯ ರಿಫೈನರಿಗಳೂ ಕೂಡ ಆಮದು ತಗ್ಗಿಸಿವೆ. ಕೆಪ್ಲರ್ ವರದಿ ಪ್ರಕಾರ ನವೆಂಬರ್​ನಲ್ಲಿ ಭಾರತೀಯ ರಿಫೈನರಿಗಳು 1.8 ಮಿಲಿಯನ್ ಬ್ಯಾರಲ್​ನಷ್ಟು ಕಚ್ಛಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿದ್ದವು. ಡಿಸೆಂಬರ್​ನಲ್ಲಿ ಈ ಆಮದು 1.2 ಮಿಲಿಯನ್ ಬ್ಯಾರಲ್​ಗೆ ಇಳಿಕೆ ಆಗಿದೆ.

ಇದನ್ನೂ ಓದಿ: ರಫ್ತು ಸಜ್ಜಿತ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ನಂ. 1; ಕರ್ನಾಟಕದ ಸ್ಥಾನವೆಷ್ಟು?

ರಷ್ಯನ್ ತೈಲ ಖರೀದಿಯಲ್ಲಿ ಭಾರತವನ್ನು ಹಿಂದಿಕ್ಕಿದ ಟರ್ಕಿ

ರಷ್ಯಾದಿಂದ ಅತಿಹೆಚ್ಚು ಪಳೆಯುಳಿಕೆ ಇಂಧನ (Fossil Fuel) ಖರೀದಿಯಲ್ಲಿ ಚೀನಾ ನಂತರ ಭಾರತ ಇತ್ತು. ಇದೀಗ ಟರ್ಕಿ ದೇಶವು ಭಾರತವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ. ಸಿಆರ್​ಇಎ ವರದಿ ಪ್ರಕಾರ ಭಾರತವು ರಷ್ಯಾದಿಂದ 24,150 ಕೋಟಿ ರೂ ಮೌಲ್ಯದಷ್ಟು ಪಳೆಯುಳಿಕೆ ಇಂಧನವನ್ನು ಖರೀದಿ ಮಾಡಿತ್ತು.

ಇಲ್ಲಿ ಪಳೆಯುಳಿಕೆ ಇಂಧನ ಅಥವಾ ಫಾಸಿಲ್ ಫುಯೆಲ್ ಎಂದರೆ ಕಚ್ಛಾ ತೈಲ, ಕಲ್ಲಿದ್ದಲು ಒಳಗೊಳ್ಳುತ್ತವೆ. ರಷ್ಯಾದಿಂದ ಭಾರತ ಖರೀದಿಸಿರುವ ಪಳೆಯುಳಿಕೆ ಇಂಧನದಲ್ಲಿ ಶೇ 78ರಷ್ಟು ಕಚ್ಛಾ ತೈಲವೇ ಇದೆ. 18,900 ಕೋಟಿ ರೂ ಮೌಲ್ಯದ ತೈಲವನ್ನು ಭಾರತವು ರಷ್ಯಾದಿಂದ ಡಿಸೆಂಬರ್​ನಲ್ಲಿ ಆಮದು ಮಾಡಿಕೊಂಡಿದೆ. ಕಲ್ಲಿದ್ದಲು 4,450 ಕೋಟಿ ರೂ, ತೈಲ ಉತ್ಪನ್ನಗಳು 860 ಕೋಟಿ ರೂ ಮೌಲ್ಯದಷ್ಟನ್ನು ಭಾರತ ಆಮದು ಮಾಡಿಕೊಂಡಿದೆ.

ಇದನ್ನೂ ಓದಿ: ಇನ್ನು 10-20 ವರ್ಷ ಮಾತ್ರ ಮನುಷ್ಯರು ಕೆಲಸ ಮಾಡಬೇಕಾಗಬಹುದು: ಇಲಾನ್ ಮಸ್ಕ್ ಹೀಗ್ಯಾಕಂದ್ರು ಗೊತ್ತಾ?

ರಷ್ಯಾದಿಂದ ರಫ್ತಾಗುವ ಒಟ್ಟೂ ಪಳೆಯುಳಿಕೆ ಇಂಧನದಲ್ಲಿ ಚೀನಾದ ಪಾಲು ಶೇ. 48ರಷ್ಟಿದೆ. 63,000 ಕೋಟಿ ರೂ ಮೌಲ್ಯದ ಆಮದು ಚೀನಾದಿಂದ ಆಗುತ್ತದೆ. ನಂತರದ ಸ್ಥಾನ ಟರ್ಕಿ ಮತ್ತು ಭಾರತದ್ದು. ಯೂರೋಪಿಯನ್ ಯೂನಿಯನ್ ಶೇ 11ರಷ್ಟು ಆಮದು ಮಾಡಿಕೊಳ್ಳುತ್ತದೆ. ರಷ್ಯಾದಿಂದ ಇಯು ಹೆಚ್ಚಾಗಿ ಎಲ್​ಎನ್​ಜಿ ಮತ್ತು ಪೈಪ್​ಲೈನ್ ಗ್ಯಾಸ್ ಅನ್ನು ಅತಿಹೆಚ್ಚು ಖರೀದಿ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ