ನವದೆಹಲಿ, ಸೆಪ್ಟೆಂಬರ್ 24: ಪ್ರಸಕ್ತ ಹಣಕಾಸು ವರ್ಷದಲ್ಲಿ (2024-25) ಭಾರತದ ಜಿಡಿಪಿ ಶೇ. 6.8ರಷ್ಟು ಬೆಳೆಯಬಹುದು ಎಂದು ಈ ಹಿಂದೆ ಮಾಡಿದ್ದ ಅಂದಾಜನ್ನು ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಈಗಲೂ ಪುನರುಚ್ಚರಿಸಿದೆ. ಮುಂದಿನ ಹಣಕಾಸು ವರ್ಷದಲ್ಲಿ (2025-26) ಜಿಡಿಪಿ ಶೇ. 6.9ರಷ್ಟು ಹೆಚ್ಚಬಹುದು ಎಂದು ಅಂದಾಜು ಮಾಡಿದೆ. ಇದೇ ವೇಳೆ, ಅಕ್ಟೋಬರ್ನಲ್ಲಿ ನಡೆಯಲಿರುವ ಆರ್ಬಿಐನ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಎಸ್ ಅಂಡ್ ಪಿ ನಿರೀಕ್ಷಿಸಿದೆ.
‘ಭಾರತದಲ್ಲಿ ಜೂನ್ ಅಂತ್ಯದ ಕ್ವಾರ್ಟರ್ನಲ್ಲಿ ಜಿಡಿಪಿ ಬೆಳವಣಿಗೆ ಸ್ವಲ್ಪ ಮಂದಗೊಂಡಿದೆ. ಅಧಿಕ ಬಡ್ಡಿದರಗಳಿಂದಾಗಿ ನಗರ ಪ್ರದೇಶಗಳಲ್ಲಿ ಬಳಕೆ ಕಡಿಮೆ ಆಗಿರುವುದು ಇದಕ್ಕೆ ಕಾರಣ. ಇಡೀ ವರ್ಷದಲ್ಲಿ ಶೇ. 6.8ರಷ್ಟು ಜಿಡಿಪಿ ಬೆಳೆಯಬಹುದು ಎನ್ನುವ ನಮ್ಮ ನಿರೀಕ್ಷೆಯ ದಿಕ್ಕಿನಲ್ಲೇ ಜೂನ್ ಕ್ವಾರ್ಟರ್ನಲ್ಲಿ ಆರ್ಥಿಕ ಬೆಳವಣಿಗೆ ಆಗಿದೆ,’ ಎಂದು ಎಸ್ ಅಂಡ್ ಪಿ ವಿವರಣೆ ನೀಡಿದೆ.
ಇದನ್ನೂ ಓದಿ: ಭಾರತದ ಶಕ್ತಿ..! ಅಮೆರಿಕದ ಸಹಭಾಗಿತ್ವದಲ್ಲಿ ಮೊದಲ ರಾಷ್ಟ್ರೀಯ ಭದ್ರತಾ ಸೆಮಿಕಂಡಕ್ಟರ್ ಫ್ಯಾಬ್ ಘಟಕ
ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಪ್ರಕಾರ ಆರ್ಬಿಐ ಬಡ್ಡಿದರ ಕಡಿತಗೊಳಿಸಬಯಸಿದರೂ ಆಹಾರ ಬೆಲೆ ಏರಿಕೆಯು ಅದನ್ನು ತಡೆಯುತ್ತಿದೆ. ಈ ಆಹಾರ ವಸ್ತುಗಳ ಬೆಲೆ ಏರಿಕೆ ಕಡಿಮೆ ಆಗದೇ ಹೋದರೆ ಹಣದುಬ್ಬರವನ್ನು ಶೇ. 4ಕ್ಕೆ ತಂದು ನಿಲ್ಲಿಸುವುದು ಕಷ್ಟವಾಗುತ್ತದೆ. ಆದಾಗ್ಯೂ ಅಕ್ಟೋಬರ್ನಿಂದಲೇ ಆರ್ಬಿಐ ಬಡ್ಡಿದರ ಕಡಿತ ಶುರುವಿಟ್ಟುಕೊಳ್ಳಬಹುದು. ಈ ಹಣಕಾಸು ವರ್ಷ ಮುಗಿಯುವುದರೊಳಗೆ ಎರಡು ಬಾರಿ ಬಡ್ಡಿದರ ಕಡಿತಗೊಳಿಸಬಹುದು ಎಂದಿದೆ.
ಈ ಹಣಕಾಸು ವರ್ಷದಲ್ಲಿ ಹಣದುಬ್ಬರ ಸರಾಸರಿಯಾಗಿ ಶೇ. 4.5ರಷ್ಟಿರಬಹುದು ಎಂಬುದು ಎಸ್ ಅಂಡ್ ಪಿ ಅಂದಾಜು. ಆರ್ಬಿಐ ಬಡ್ಡಿದರ ಬದಲಾಯಿಸಿ ವರ್ಷದ ಮೇಲಾಗಿದೆ. ಹಣದುಬ್ಬರ ಶೇ. 4ರ ಆಸುಪಾಸಿನಲ್ಲಿ ಸ್ಥಿರ ಆಗುವವರೆಗೂ ಬಡ್ಡಿದರ ಪರಿಷ್ಕರಿಸುವ ಗೋಜಿಗೆ ಹೋಗೋದಿಲ್ಲ ಎನ್ನುವಂತಹ ಸುಳಿವನ್ನು ಆರ್ಬಿಐ ನೀಡಿದೆ. ಕೆಲ ತಿಂಗಳಿಂದ ಹಣದುಬ್ಬರ ದರ ಶೇ. 5ರ ಮಟ್ಟಕ್ಕಿಂತ ಕೆಳಗೇ ಇದೆ. ಇಲ್ಲಿ ಆಹಾರವಸ್ತುಗಳ ಬೆಲೆ ಏರಿಕೆ ಆಗದೇ ಹೋಗಿದ್ದರೆ ಹಣದುಬ್ಬರ ಶೇ. 4ಕ್ಕೆ ಬಂದು ಇಳಿಯುವ ಸಾಧ್ಯತೆ ಇತ್ತು ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: ಶಂಖ್ ಏರ್; ಭಾರತದಲ್ಲಿ ಪದಾರ್ಪಣೆ ಮಾಡಲಿದೆ ಹೊಸ ಏರ್ಲೈನ್ಸ್ ಸಂಸ್ಥೆ
ಇನ್ನೊಂದೆಡೆ ಅಮೆರಿಕದಲ್ಲಿದ್ದ ಹಣದುಬ್ಬರ ದರ ತಹಬದಿಗೆ ಬಂದಿದೆ. ಅಲ್ಲಿನ ಫೆಡರಲ್ ರಿಸರ್ವ್ ನಿರೀಕ್ಷೆ ಮೀರಿ 50 ಮೂಲಾಂಕಗಳಷ್ಟು ಬಡ್ಡಿದರ ಕಡಿಮೆಗೊಳಿಸಿತ್ತು. ಆರ್ಬಿಐ ಕೂಡ ದರ ಕಡಿತದ ನಿರ್ಧಾರ ಕೈಗೊಳ್ಳುತ್ತದಾ ಎನ್ನುವ ಕುತೂಹಲ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ