ಶಂಖ್ ಏರ್; ಭಾರತದಲ್ಲಿ ಪದಾರ್ಪಣೆ ಮಾಡಲಿದೆ ಹೊಸ ಏರ್ಲೈನ್ಸ್ ಸಂಸ್ಥೆ
Shankh Air in India: ಶರ್ವಣ್ ವಿಶ್ವಕರ್ಮ ಎನ್ನುವ ಯುವ ಉದ್ಯಮಿಯೊಬ್ಬರು ಸ್ಥಾಪಿಸಿರುವ ಶಂಖ್ ಏವಿಯೇಶನ್ ಪ್ರೈ ಲಿ ಸಂಸ್ಥೆಗೆ ವಿಮಾನ ಹಾರಾಟ ಸೇವೆ ಆರಂಭಿಸಲು ಕೇಂದ್ರ ವಿಮಾನಯಾನ ಸಚಿವಾಲಯ ಒಪ್ಪಿಗೆ ನೀಡಿದೆ. ಡಿಜಿಸಿಎ ಅನುಮೋದನೆ ದೊರೆತ ಬಳಿಕ ಶಂಖ್ ಏರ್ನಿಂದ ಸೇವೆ ಆರಂಭವಾಗಬಹುದು. ಶಂಖ್ ಏರ್ ಉತ್ತರಪ್ರದೇಶವನ್ನು ಕೇಂದ್ರವನ್ನಾಗಿಸಿಕೊಂಡು ಕಾರ್ಯಾಚರಿಸಬಹುದು.
ನವದೆಹಲಿ, ಸೆಪ್ಟೆಂಬರ್ 24: ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಒಂದರ ಹಿಂದೆ ಒಂದು ಕಂಪನಿಗಳು ಸಂಕಷ್ಟಕ್ಕೆ ಸಿಲುಕುತ್ತಿರುವ ಮಧ್ಯೆ ಹೊಸ ಕಂಪನಿಗಳು ಜನ್ಮ ತಾಳುವುದು ಮುಂದುವರಿದಿದೆ. ಇದೀಗ ಶಂಖ್ ಏರ್ ಎಂಬ ಏರ್ಲೈನ್ ಸಂಸ್ಥೆಗೆ ಕೇಂದ್ರ ವಿಮಾನಯಾನ ಸಚಿವಾಲಯ ಅನುಮೋದನೆ ನೀಡಿದೆ. ವಿಮಾನಯಾನ ಮಹಾ ನಿರ್ದೇಶನಾಲಯದಿಂದ (ಡಿಸಿಸಿಎ) ಒಪ್ಪಿಗೆ ಮುದ್ರೆ ಪಡೆದ ಬಳಿಕ ಶಂಖ್ ಏರ್ ವಿಮಾನ ಹಾರಾಟ ಕಾರ್ಯಾರಂಭಿಸಬಹುದು.
ಉತ್ತರ ಪ್ರದೇಶ ಮೂಲದ ಶಂಖ್ ಏರ್, ಆ ರಾಜ್ಯದ ಮೊದಲ ಶ್ಕೆಡ್ಯೂಲ್ಡ್ ಏರ್ಲೈನ್ ಎನಿಸಿದೆ. ದೇಶಾದ್ಯಂತ ಪ್ರಮುಖ ನಗರಗಳ ಮಧ್ಯೆ ಇದು ಕಾರ್ಯಾಚರಿಸಲಿದೆ. ಅಂತರರಾಜ್ಯ ಮಾತ್ರವಲ್ಲದೆ, ರಾಜ್ಯದೊಳಗಿನ ಪ್ರಮುಖ ಮಾರ್ಗಗಳಿಗೆ ಇದು ಸೇವೆ ನೀಡಲಿದೆ.
ಶಂಖ್ ಏರ್ ಸಂಸ್ಥೆಗೆ ವಿಮಾನ ಹಾರಾಟ ನಡೆಸಲು ಮೂರು ವರ್ಷಗಳಿಗೆ ನಿರಾಕ್ಷೇಪಣ ಪತ್ರ (ಎನ್ಒಸಿ) ನೀಡಲಾಗಿದೆ. ಹಾಗೆಯೇ, ವಿದೇಶೀ ನೇರ ಹೂಡಿಕೆಯ ನಿಯಮಗಳು, ಸೆಬಿ ನಿಬಂಧನೆಗಳು ಸೇರಿದಂತೆ ವಿವಿಧ ಕಾನೂನುಗಳಿಗೆ ಬದ್ಧವಾಗಿರಬೇಕು ಎನ್ನುವ ಷರತ್ತನ್ನು ಶಂಖ್ ಏರ್ಗೆ ನೀಡಾಗಿದೆ. ಆ ಷರತ್ತಿನ ಮೇರೆಗೆ ನಾಗರಿಕ ವಿಮಾನ ಯಾನ ಸಚಿವಾಲಯದಿಂದ ಅನುಮೋದನೆಯ ಪತ್ರ ನೀಡಲಾಗಿದೆ.
ಇದನ್ನೂ ಓದಿ: ಭಾರತದ ಶಕ್ತಿ..! ಅಮೆರಿಕದ ಸಹಭಾಗಿತ್ವದಲ್ಲಿ ಮೊದಲ ರಾಷ್ಟ್ರೀಯ ಭದ್ರತಾ ಸೆಮಿಕಂಡಕ್ಟರ್ ಫ್ಯಾಬ್ ಘಟಕ
ಶರ್ವಣ್ ವಿಶ್ವಕರ್ಮ ಅವರಿಂದ ಸ್ಥಾಪಿತವಾಗಿರುವ ಶಂಖ್ ಏವಿಯೇಶನ್ ಪ್ರೈ ಲಿ ಸಂಸ್ಥೆ ಬೋಯಿಂಗ್ 737-800 ಎನ್ಜಿ ವಿಮಾನಗಳನ್ನು ಸೇವೆಗೆ ಬಳಸಲಿದೆ. ಕಡಿಮೆ ಬೆಲೆಗೆ ವಿಮಾನ ಸೇವೆ ನೀಡುವ ಗುರಿ ಇದೆ. ಅದರ ವೆಬ್ಸೈಟ್ನಲ್ಲಿ ಇರುವ ಮಾಹಿತಿ ಪ್ರಕಾರ ಉತ್ತರಪ್ರದೇಶದೊಳಗಿನ ವಿವಿಧ ಪ್ರದೇಶಗಳ ಕನೆಕ್ಟಿವಿಟಿಗೆ ಹೆಚ್ಚಿನ ಆದ್ಯತೆ ಇರುತ್ತದೆ. ಹಾಗೆಯೇ ದೇಶದ ಬೇರೆ ಬೇರೆ ಪ್ರಮುಖ ನಗರಗಳಿಗೂ ಸೇವೆ ವ್ಯಾಪಿಸಲಿದೆ. ಹೆಚ್ಚು ಬೇಡಿಕೆ ಇದ್ದರೂ ಸಾಕಷ್ಟು ಕನೆಕ್ಟಿವಿಟಿ ಇಲ್ಲದ ಪ್ರದೇಶಗಳ ನಡುವೆ ವಿಮಾನ ಹಾರಾಟಕ್ಕೆ ಇದು ಪ್ರಾಮುಖ್ಯತೆ ನೀಡಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ