ಸಣ್ಣ ಪುಟ್ಟ ಐಪಿಒಗಳು ಗೋಲ್ಮಾಲಾ? ಎಸ್ಎಂಇಗಳಿಂದ ಶೇ. 15 ಕಮಿಷನ್ ತಗೊಳ್ಳೋ ಐ ಬ್ಯಾಂಕುಗಳಿಂದ ಖೆಡ್ಡಾ? ಸೆಬಿ ತನಿಖೆ
SME IPOs: 250 ಕೋಟಿ ರೂವರೆಗೆ ವಾರ್ಷಿಕ ವಹಿವಾಟು ಇರುವ ಎಸ್ಎಂಇಗಳ ಐಪಿಒಗಳನ್ನು ಖರೀದಿಸಲು ಜನರು ಯಾಕೆ ಮುಗಿಬೀಳುತ್ತಿದ್ದಾರೆ ಎಂಬ ರಹಸ್ಯ ಬೆಳಕಿಗೆ ಬಂದಿದೆ. ಕಳೆದ ಕೆಲ ತಿಂಗಳಿಂದಲೂ ತನಿಖೆ ನಡೆಸುತ್ತಿರುವ ಸೆಬಿ ಈ ರಹಸ್ಯ ಪತ್ತೆ ಹಚ್ಚಿದೆ. ಎಸ್ಎಂಇಗಳ ಐಪಿಒ ವೇಳೆ ಇನ್ವೆಸ್ಟ್ಮೆಂಟ್ ಬ್ಯಾಂಕುಗಳು ಮತ್ತು ಕೆಲ ರೀಟೇಲ್ ಹೂಡಿಕೆದಾರರು ಸೇರಿ ವಿವಿಧ ಕೆಟಗರಿಗಳಲ್ಲಿ ಭಾರೀ ಸಂಖ್ಯೆಯಲ್ಲಿ ಬಿಡ್ಗಳನ್ನು ಸಲ್ಲಿಸಿ ಇತರ ಹೂಡಿಕೆದಾರರನ್ನು ಆಕರ್ಷಿಸುತ್ತಿವೆ ಎನ್ನಲಾಗುತ್ತಿದೆ.
ನವದೆಹಲಿ, ಸೆಪ್ಟೆಂಬರ್ 24: ಬಂಡವಾಳ ಸಂಗ್ರಹಣೆಗೆ ಪ್ರಾಥಮಿಕ ಮಾರುಕಟ್ಟೆಯಾಗಿರುವ ಐಪಿಒಗಳು ಈಗ ಷೇರು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್ನಲ್ಲಿವೆ. ಕೆಲವೇ ಕೋಟಿ ರೂ ವಹಿವಾಟು ಇರುವ, ಮುರುಕಲು ಕಟ್ಟಡದಲ್ಲಿ ಕಚೇರಿ, ಗೋದಾಮು ಹೊಂದಿರುವ ಕಂಪನಿಗಳೆಲ್ಲಾ ಐಪಿಒಗಳಲ್ಲಿ ನಿರೀಕ್ಷೆಮೀರಿದ ರೀತಿಯಲ್ಲಿ ಬಂಡವಾಳ ಸಂಗ್ರಹಿಸುತ್ತಿರುವುದನ್ನು ಕಾಣಬಹುದು. ಈ ಎಸ್ಎಂಇ ಸಂಸ್ಥೆಗಳ ಐಪಿಒಗಳು ಯಾಕಿಷ್ಟು ಸೂಪರ್ ಹಿಟ್ ಆಗುತ್ತಿವೆ ಎಂದು ಯಾರಿಗಾದರೂ ಅಚ್ಚರಿ ಅನಿಸಬಹುದು. ಅದಕ್ಕೆ ಉತ್ತರವೋ ಎಂಬಂತೆ ಸೆಬಿ ಸಂಸ್ಥೆ ಐಪಿಒ ದಂದೆಯಲ್ಲಿ ಹೊಸ ಹಗರಣವನ್ನು ಹುಡುಕುತ್ತಿದೆ. ಆರು ಇನ್ವೆಸ್ಟ್ಮೆಂಟ್ ಬ್ಯಾಂಕುಗಳನ್ನು ಸೆಬಿ ತನಿಖೆ ನಡೆಸುತ್ತಿದೆ.
ಎಸ್ಎಂಇಗಳಿಂದ ಸಿಕ್ಕಾಪಟ್ಟೆ ಕಮಿಷನ್ ಪಡೆಯುತ್ತಿರುವ ಬ್ಯಾಂಕುಗಳು
ಷೇರು ಮಾರುಕಟ್ಟೆಯ ನಿಯಂತ್ರಕ ಸಂಸ್ಥೆಯಾದ ಸೆಬಿ ಈ ವರ್ಷಾರಂಭದಿಂದಲೇ ಕೈಗೊಂಡಿರುವ ತನಿಖೆಯಲ್ಲಿ ಇನ್ವೆಸ್ಟ್ಮೆಂಟ್ ಬ್ಯಾಂಕುಗಳ ಪಾತ್ರವೇನು ಎಂಬ ಸುಳಿವು ಸಿಕ್ಕಿದೆಯಂತೆ. ಮನಿಕಂಟ್ರೋಲ್ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ, ಕನಿಷ್ಠ ಆರು ಸಣ್ಣ ಇನ್ವೆಸ್ಟ್ಮೆಂಟ್ ಬ್ಯಾಂಕುಗಳು ಸಣ್ಣ ಕಂಪನಿಗಳ ಐಪಿಒಗೆ ಭಾರೀ ಮೊತ್ತದ ಕಮಿಷನ್ ಪಡೆಯುತ್ತಿರುವುದು ತಿಳಿದುಬಂದಿದೆ. ಎಸ್ಎಂಇಗಳು ಐಪಿಒ ಮೂಲಕ ಸಂಗ್ರಹಿಸುವ ಬಂಡವಾಳದಲ್ಲಿ ಶೇ. 15ರಷ್ಟು ಶುಲ್ಕವನ್ನು ಈ ಬ್ಯಾಂಕುಗಳು ಪಡೆಯುತ್ತಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಈ ವರ್ಷ ಜಿಡಿಪಿ ಹೆಚ್ಚಳ ಶೇ. 6.8; ಮುಂದಿನ ಸಭೆಯಲ್ಲೇ ಆರ್ಬಿಐನಿಂದ ಬಡ್ಡಿ ಇಳಿಕೆ: ಎಸ್ ಅಂಡ್ ಪಿ ನಿರೀಕ್ಷೆ
ಸಾಮಾನ್ಯವಾಗಿ ಐಪಿಒ ಮೊತ್ತದ ಶೇ. 1ರಿಂದ 3ರಷ್ಟು ಕಮಿಷನ್ ಅನ್ನು ಬ್ಯಾಂಕುಗಳು ಪಡೆಯುತ್ತವೆ. ಇಲ್ಲಿ ಶೇ. 15ರಷ್ಟು ಕಮಿಷನ್ ಬಹಳ ಹೆಚ್ಚಾಗಿದೆ. ಇದಕ್ಕೆ ದುಬಾರಿ ಶುಲ್ಕಕ್ಕೆ ಬದಲಾಗಿ ಈ ಬ್ಯಾಂಕುಗಳು ಐಪಿಒಗೆ ಬೇಡಿಕೆ ಹೆಚ್ಚುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತವೆ. ಯಾವುದೇ ಐಪಿಒನಲ್ಲಿ ಅದು ಎಷ್ಟು ಬಾರಿ ಸಬ್ಸ್ಕೈಬ್ ಆಗಿದೆ ಎಂಬುದನ್ನು ಸಾಮಾನ್ಯ ರೀಟೇಲ್ ಹೂಡಿಕೆದಾರರು ಗಮನಿಸಿ, ಆ ಬಳಿಕ ಐಪಿಒಗೆ ಅರ್ಜಿ ಸಲ್ಲಿಸುವುದುಂಟು. ಈ ಹಂತದಲ್ಲಿ ಇನ್ವೆಸ್ಟ್ಮೆಂಟ್ ಬ್ಯಾಂಕುಗಳು ಕರಾಮತ್ತು ತೋರುವುದು.
ಸಂಯೋಜಿತ ರೀತಿಯಲ್ಲಿ ಬಿಡ್ಗಳನ್ನು ಹಾಕುತ್ತಾರೆ…
ಎಸ್ಎಂಇಗಳ ಐಪಿಒ ವೇಳೆ ಐ ಬ್ಯಾಂಕುಗಳು ಮತ್ತು ಕೆಲ ಹೂಡಿಕೆದಾರರು ಜೊತೆಯಾಗಿ ಸೇರಿಕೊಂಡು ಎಚ್ಎನ್ಐ (ಶ್ರೀಮಂತರು) ಮತ್ತು ಸಾಮಾನ್ಯ ರೀಟೇಲ್ ಹೂಡಿಕೆದಾರರ ಕೆಟಗರಿಗಳಲ್ಲಿ ಭಾರೀ ಸಂಖ್ಯೆಯಲ್ಲಿ ಬಿಡ್ ಸಲ್ಲಿಸುತ್ತಾರೆ. ಅಧಿಕ ಸಂಖ್ಯೆಯಲ್ಲಿ ಸಬ್ಸ್ಕ್ರಿಪ್ಷನ್ಸ್ ಆಗಿದೆ ಎಂದು ಬಿಂಬಿಸಲು ಮಾತ್ರವೇ ಈ ಬಿಡ್ಡಿಂಗ್ ನಡೆದಿರುತ್ತದೆ. ಇತರ ಅಮಾಯಕ ರಿಟೇಲ್ ಹೂಡಿಕೆದಾರರು ಆಕರ್ಷಿತರಾಗಿ ಐಪಿಒ ಸಬ್ಸ್ಕ್ರಿಪ್ಷನ್ಗೆ ಮುಂದಾಗಬಹುದು. ಅಲಾಟ್ಮೆಂಟ್ ಸಮಯಕ್ಕಾಗಲೀ ಈ ನಕಲಿ ಬಿಡ್ಗಳು ಕ್ಯಾನ್ಸಲ್ ಆಗುತ್ತವೆ. ಅಮಾಯಕ ಹೂಡಿಕೆದಾರರು ಬೇಡದ ಷೇರುಗಳನ್ನು ಪಡೆದು ನಷ್ಟ ಅನುಭವಿಸಬೇಕಾಗಬಹುದು.
ಎಸ್ಎಂಇಗಳ ಐಪಿಒ ಸೆಬಿ ನಿಯಂತ್ರಣದಲ್ಲಿಲ್ಲ…
ಐದು ಕೋಟಿ ರೂನಿಂದ ಹಿಡಿದು 250 ಕೋಟಿ ರೂ ವಾರ್ಷಿಕ ವಹಿವಾಟು ಇರುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳನ್ನು ಎಸ್ಎಂಇಗಳೆಂದು ವರ್ಗೀಕರಿಸಲಾಗುತ್ತದೆ. ದೊಡ್ಡ ಗಾತ್ರದ ಸಂಸ್ಥೆಗಳು ಐಪಿಒಗೆ ಅರ್ಜಿ ಸಲ್ಲಿಸಿದರೆ ಅದಕ್ಕೆ ಸೆಬಿಯಿಂದ ಅನುಮೋದನೆ ಪಡೆಯಬೇಕಾಗುತ್ತದೆ. ಎಸ್ಎಂಇಗಳದ್ದಾದರೆ ಷೇರು ವಿನಿಮಯ ಕೇಂದ್ರಗಳೇ ಓಕೆ ಅಂದರೆ ಸಾಕು.
ಇದನ್ನೂ ಓದಿ: ಭಾರತದ ಶಕ್ತಿ..! ಅಮೆರಿಕದ ಸಹಭಾಗಿತ್ವದಲ್ಲಿ ಮೊದಲ ರಾಷ್ಟ್ರೀಯ ಭದ್ರತಾ ಸೆಮಿಕಂಡಕ್ಟರ್ ಫ್ಯಾಬ್ ಘಟಕ
ಭಾರೀ ಬಂಡವಾಳ ಸಂಗ್ರಹಿಸುತ್ತಿರುವ ಎಸ್ಎಂಇಗಳು…
2023-24ರ ಹಣಕಾಸು ವರ್ಷದಲ್ಲಿ 205 ಸಣ್ಣ ಕಂಪನಿಗಳು ಪ್ರಾಥಮಿಕ ಮಾರುಕಟ್ಟೆಯಲ್ಲಿ (ಐಪಿಒ) 6,000 ಕೋಟಿ ರೂ ಬಂಡವಾಳ ಸಂಗ್ರಹಿಸುವಲ್ಲಿ ಯಶಸ್ವಿಯಾಗಿವೆ. ಹಿಂದಿನ ವರ್ಷದಲ್ಲಿ ಸಣ್ಣ ಸಂಸ್ಥೆಗಳಿಗೆ ಸಿಕ್ಕಿದ್ದು 2,200 ಕೋಟಿ ರೂ ಬಂಡವಾಳ ಮಾತ್ರ. ಅಂದರೆ ಬಂಡವಾಳ ಸಂಗ್ರಹ ಶೇ. 125ರಷ್ಟು ಹೆಚ್ಚಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ