ಭಾರತದ ಶಕ್ತಿ..! ಅಮೆರಿಕದ ಸಹಭಾಗಿತ್ವದಲ್ಲಿ ಮೊದಲ ರಾಷ್ಟ್ರೀಯ ಭದ್ರತಾ ಸೆಮಿಕಂಡಕ್ಟರ್ ಫ್ಯಾಬ್ ಘಟಕ
Shakti semiconductor fab unit in India: ಭಾರತದಲ್ಲಿ ಮುಂದಿನ ವರ್ಷ ರಾಷ್ಟ್ರೀಯ ಭದ್ರತಾ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕ ಆರಂಭವಾಗಲಿದೆ. ಅಮೆರಿಕ ಸಹಭಾಗಿತ್ವದಲ್ಲಿ ರೂಪುಗೊಳ್ಳುತ್ತಿರುವ ಈ ಯೂನಿಟ್ನಿಂದ ಅಮೆರಿಕ ಹಾಗೂ ಅದರ ಮಿತ್ರ ದೇಶಗಳ ಮಿಲಿಟರಿಗಳಿಗೆ ಚಿಪ್ಗಳು ಪೂರೈಕೆ ಆಗಲಿದೆ. ಈ ಘಟಕದಲ್ಲಿ ಇನ್ಫ್ರಾರೆಡ್, ಗ್ಯಾಲಿಯಂ ನೈಟ್ರೇಡ್, ಸಿಲಿಕಾನ್ ಕಾರ್ಬೈಡ್ ಸೆಮಿಕಂಡಕ್ಟರ್ ಚಿಪ್ಗಳು ತಯಾರಾಗಲಿದ್ದು, ಭಾರತದ ಮಿಲಿಟರಿಗೂ ಇದರ ಸರಬರಾಜು ಆಗುತ್ತದೆ.
ನವದೆಹಲಿ, ಸೆಪ್ಟೆಂಬರ್ 24: ಅಮೆರಿಕದ ಸಹಭಾಗಿತ್ವದಲ್ಲಿ ಭಾರತದಲ್ಲಿ ನ್ಯಾಷನಲ್ ಸೆಕ್ಯೂರಿಟಿ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕ ಸ್ಥಾಪನೆ ಆಗಲಿದೆ. ಶಕ್ತಿ ಹೆಸರಿನ ಈ ಫ್ಯಾಬ್ ಯೂನಿಟ್ 2025ರಿಂದ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಇದು ಭಾರತದ ಮೊದಲ ಸೆಕ್ಯೂರಿಟಿ ಸೆಮಿಕಂಡಕ್ಟರ್ ಫ್ಯಾಬ್ ಯೂನಿಟ್ ಆಗಲಿದೆ. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಈ ಯೋಜನೆ ಮುನ್ನಡೆಸಲಿದೆ. ಭಾರತ್ ಸೆಮಿ, 3rdiTech, ಯುಎಸ್ ಸ್ಪೇಸ್ ಫೋರ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಯೂನಿಟ್ ರೂಪುಗಳ್ಲಲಿದೆ.
ಈ ಘಟಕದಲ್ಲಿ ಇನ್ಫ್ರಾರೆಡ್, ಗ್ಯಾಲಿಯಂ ನೈಟ್ರೇಡ್ ಮತ್ತು ಸಿಲಿಕಾನ್ ಕಾರ್ಬೈಡ್ ಸೆಮಿಕಂಡಕ್ಟರ್ ಚಿಪ್ಗಳನ್ನು ಪ್ರಮುಖವಾಗಿ ತಯಾರಿಸಲಾಗುತ್ತದೆ. ಅಮೆರಿಕದ ಸೇನಾ ಪಡೆ ಹಾಗೂ ಅಮೆರಿಕದ ಮಿತ್ರ ದೇಶಗಳ ಮಿಲಿಟರಿಗಳಿಗೆ ಈ ಚಿಪ್ಗಳನ್ನು ಸರಬರಾಜು ಮಾಡಲಾಗುತ್ತದೆ. ಭಾರತದ ಸೇನಾ ಪಡೆಗಳಿಗೂ ಇಲ್ಲಿಂದಲೇ ಚಿಪ್ಗಳನ್ನು ಸರಬರಾಜು ಮಾಡಬಹುದು.
ಈ ಫ್ಯಾಬ್ ಘಟಕ ನಿರ್ಮಾಣದಲ್ಲಿ ಭಾಗಿಯಾಗಿರುವ 3rdiTech (ಥರ್ಡ್ ಐ ಟೆಕ್) ಸಂಸ್ಥೆ ಭಾರತದ ಸ್ಟಾರ್ಟಪ್ ಆಗಿದೆ. ವಿನಾಯಕ್ ದಾಲ್ಮಿಯಾ ಮತ್ತು ವೃಂದಾ ಕಪೂರ್ ಎಂಬಿಬ್ಬರು ಯುವ ಉದ್ಯಮಿಗಳು ಸ್ಥಾಪಿಸಿದ ಈ ಸ್ಟಾರ್ಟಪ್ ಜೊತೆ ಅಮೆರಿಕದ ರಕ್ಷಣಾ ಕ್ಷೇತ್ರದ ದಿಗ್ಗಜವಾಗಿರುವ ಜನರಲ್ ಅಟಾಮಿಕ್ಸ್ ಸಹಭಾಗಿತ್ವ ಹೊಂದುತ್ತಿದೆ. ಇದೊಂದೇ ಅಲ್ಲ, ಇನ್ನೂ ಹಲವಾರು ಯೋಜನೆಗಳಲ್ಲಿ ಇವೆರಡೂ ಸಂಸ್ಥೆಗಳು ಜೊತೆಯಾಗಿವೆ.
ಇದನ್ನೂ ಓದಿ: ಇಪಿಎಫ್ಒ ಅಪ್ಡೇಟ್ಸ್; ಜುಲೈ ತಿಂಗಳಲ್ಲಿ ಹೊಸ ದಾಖಲೆ; ಕರ್ನಾಟಕ ಸೇರಿ 5 ರಾಜ್ಯಗಳಲ್ಲೇ ಅತಿಹೆಚ್ಚು ಹೊಸ ಸದಸ್ಯರು
ಭಾರತವು ಸೆಮಿಕಂಡಕ್ಟರ್ ಚಿಪ್ ತಯಾರಿಕೆ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲು ಪ್ರಯತ್ನಿಸುತ್ತಿರುವ ಹೊತ್ತಲ್ಲೇ ಶಕ್ತಿ ಸೆಮಿಕಂಡಕ್ಟರ್ ಫ್ಯಾಬ್ ಯೋಜನೆ ರೂಪುಗೊಳ್ಳುತ್ತಿದೆ. ಇದು ಭಾರತದ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ದೊಡ್ಡ ಮಟ್ಟದಲ್ಲಿ ಪುಷ್ಟಿ ಕೊಡುವ ನಿರೀಕ್ಷೆ ಇದೆ. ರಕ್ಷಣಾ ಕ್ಷೇತ್ರದಂತಹ ಸೂಕ್ಷ್ಮ ವಿಚಾರದಲ್ಲಿ ಭಾರತದ ಬಗ್ಗೆ ಅಮೆರಿಕ ವಿಶ್ವಾಸ ಹೊಂದಿರುವುದೂ ಕೂಡ ಗಮನಾರ್ಹ ಸಂಗತಿ. ಇದು ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಇನ್ನೊಂದು ಹಂತ ಮೇಲೆ ಕೊಂಡೊಯ್ದಂತಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ