Sahara Group: ಸಹರಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ಡಿಮ್ಯಾಟ್, ಬ್ಯಾಂಕ್ ಖಾತೆ ಮುಟ್ಟುಗೋಲಿಗೆ ಸೆಬಿ ಆದೇಶ

| Updated By: Ganapathi Sharma

Updated on: Dec 26, 2022 | 6:38 PM

ಸಹರಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್​, ಸುಬ್ರತಾ ರಾಯ್ ಮತ್ತು ಇತರರ ಖಾತೆಗಳಿಂದ ಹಣ ವಿತ್​ಡ್ರಾ ಮಾಡಲು ಅವಕಾಶ ನೀಡಬಾರದು ಎಂದು ಎಲ್ಲ ಬ್ಯಾಂಕ್​ಗಳು, ಠೇವಣಿದಾರರು, ಮ್ಯೂಚುವಲ್ ಫಂಡ್ ಕಂಪನಿಗಳಿಗೆ ಸೆಬಿ ನಿರ್ದೇಶನ ನೀಡಿದೆ.

Sahara Group: ಸಹರಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ಡಿಮ್ಯಾಟ್, ಬ್ಯಾಂಕ್ ಖಾತೆ ಮುಟ್ಟುಗೋಲಿಗೆ ಸೆಬಿ ಆದೇಶ
ಸೆಬಿ (ಸಾಂದರ್ಭಿಕ ಚಿತ್ರ)
Follow us on

ನವದೆಹಲಿ: ಮಾರುಕಟ್ಟೆ ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿ ಸಹರಾ ಗ್ರೂಪ್ (Sahara Group) ಮುಖ್ಯಸ್ಥ ಸುಬ್ರತಾ ರಾಯ್ (Subrata Roy) ಮತ್ತು ಇತರರ ಡಿಮ್ಯಾಟ್ ಹಾಗೂ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಸೋಮವಾರ ಆದೇಶಿಸಿದೆ. ಪರಿವರ್ತಿಸಬಹುದಾದ ಸಾಲಪತ್ರಗಳ ವಿತರಣೆಯ ಸಂದರ್ಭ ನಿಯಮಗಳಲ್ಲಿ ಉಲ್ಲಂಘನೆ ಮಾಡಿದ ಆರೋಪಕ್ಕೆ ಸಂಬಂಧಿಸಿ 6.42 ಕೋಟಿ ರೂ. ವಸೂಲಿ ಮಾಡುವುದಕ್ಕಾಗಿ ಸೆಬಿ ಈ ಕ್ರಮ ಕೈಗೊಂಡಿದೆ. ಸಹರಾ ಇಂಡಿಯಾ ರಿಯಲ್​ ಎಸ್ಟೇಟ್ ಕಾರ್ಪೊರೇಷನ್ (ಈಗ ಸಹರಾ ಕಮಾಡಿಟಿ ಸರ್ವೀಸಸ್ ಕಾರ್ಪೊರೇಷನ್), ಸುಬ್ರತಾ ರಾಯ್, ಅಶೋಕ್ ರಾಯ್ ಚೌಧರಿ, ರವಿ ಶಂಕರ್ ದುಬೆ, ವಂದನಾ ಭಾರ್ಗವ ಅವರಿಂದ ಬಡ್ಡಿ ಸಹಿತ 6.42 ಕೋಟಿ ವಸೂಲಿ ಮಾಡುವಂತೆ ಸೆಬಿ ಆದೇಶಿಸಿದೆ.

ಸಹರಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್​, ಸುಬ್ರತಾ ರಾಯ್ ಮತ್ತು ಇತರರ ಖಾತೆಗಳಿಂದ ಹಣ ವಿತ್​ಡ್ರಾ ಮಾಡಲು ಅವಕಾಶ ನೀಡಬಾರದು ಎಂದು ಎಲ್ಲ ಬ್ಯಾಂಕ್​ಗಳು, ಠೇವಣಿದಾರರು, ಮ್ಯೂಚುವಲ್ ಫಂಡ್ ಕಂಪನಿಗಳಿಗೆ ಸೆಬಿ ನಿರ್ದೇಶನ ನೀಡಿದೆ. ಆದರೆ, ಹಣ ಕ್ರೆಡಿಟ್ ಮಾಡಲು ಅವಕಾಶ ನೀಡಿದೆ. ಲಾಕರ್​​ಗಳು ಸೇರಿದಂತೆ ಎಲ್ಲ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿದೆ.

ಇದನ್ನೂ ಓದಿ: Bank Holidays; ಜನವರಿಯಲ್ಲಿ ಬ್ಯಾಂಕ್​ಗಳಿಗೆ 11 ದಿನ ರಜೆ; ಇಲ್ಲಿದೆ ಪಟ್ಟಿ

ಸಹರಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್​, ಸುಬ್ರತಾ ರಾಯ್ ಮತ್ತು ಇತರರಿಗೆ 6 ಕೋಟಿ ರೂ. ದಂಡ ವಿಧಿಸಿ ಜೂನ್​ನಲ್ಲಿ ಸೆಬಿ ಆದೇಶ ನೀಡಿತ್ತು. 2008-09ರಲ್ಲಿ ಪರಿವರ್ತಿಸಬಹುದಾದ ಐಚ್ಛಿಕ ಸಾಲಪತ್ರಗಳ ವಿತರಣೆಯ ಸಂದರ್ಭ ಎಸಗಿರುವ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಸಾಲಪತ್ರಗಳ ವಿತರಣೆ ಸಂದರ್ಭ ಸಹರಾ ಗ್ರೂಪ್ ಮತ್ತು ಇತರರು ಹೂಡಿಕೆದಾರರ ಹಿತ ಕಾಯುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಸೆಬಿ ಹೇಳಿದೆ.

ಪರಿವರ್ತಿಸಬಹುದಾದ ಐಚ್ಛಿಕ ಸಾಲಪತ್ರಗಳ ವಿತರಣೆಯ ಸಂದರ್ಭದಲ್ಲಿ ಅದರ ಸಂಭಾವ್ಯ ಅಪಾಯಗಳು ಮತ್ತು ಸಮಸ್ಯೆಗಳ ಬಗ್ಗೆ ಹೂಡಿಕೆದಾರರಿಗೆ ಸಹರಾ ಗ್ರೂಪ್ ಸಮರ್ಪಕ ಮಾಹಿತಿ ನೀಡಿಲ್ಲ. ಅಸಮರ್ಪಕ ಮತ್ತು ವಂಚನೆಯ ವ್ಯಾಪಾರ ಪದ್ಧತಿಗಳ ನಿಷೇಧ ನಿಯಮ ಉಲ್ಲಂಘಿಸಿ ಕಂಪನಿ ವ್ಯವಹಾರ ನಡೆಸಿತ್ತು ಎಂದು ಸೆಬಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ