ನವದೆಹಲಿ, ಆಗಸ್ಟ್ 14: ಭಾರತದಲ್ಲಿ ಸೆಮಿಕಂಡಕ್ಟರ್ ಉದ್ಯಮ (Semiconductor Industry) ಸ್ಥಾಪನೆಗೆ ಸರ್ಕಾರ ಮಾಡುವ ಪ್ರಯತ್ನಕ್ಕೆ ವಿಶ್ವದ ಹಲವು ದಿಗ್ಗಜ ಸಂಸ್ಥೆಗಳು ಆಸಕ್ತಿ ತೋರಿಸಿವೆ. ಅಮೆರಿಕದ ಪ್ರಮುಖ ಸೆಮಿಕಂಡಕ್ಟರ್ ಕಂಪನಿ ಮೈಕ್ರೋನ್, ತೈವಾನ್ ಮೂಲದ ಫಾಕ್ಸ್ಕಾನ್, ಭಾರತದ ವೇದಾಂತ ಮೊದಲಾದ ಹಲವು ಸಂಸ್ಥೆಗಳು ಭಾರತದಲ್ಲಿ ಸೆಮಿಕಂಡಕ್ಟರ್ ಘಟಕಗಳನ್ನು ತಯಾರಿಸಲು ಮುಂದಾಗಿವೆ. ಈ ರೇಸ್ನಲ್ಲಿ ಹೊಸ ಹೆಸರೊಂದು ಕೇಳಿಬಂದಿದ್ದು, ರಾಜಸ್ಥಾನ ಮೂಲದ ಸಹಸ್ರ ಸೆಮಿಕಂಡಕ್ಟರ್ ಸಂಸ್ಥೆ ಸೆಪ್ಟಂಬರ್ನೊಳಗೆ ಉತ್ಪಾದನೆ ಆರಂಭಿಸುವ ಸಾಧ್ಯತೆ ಇದೆ. ಇದು ನಿಜವಾದಲ್ಲಿ ಮೊದಲ ಮೇಡ್ ಇನ್ ಇಂಡಿಯಾ ಮೆಮೊರಿ ಚಿಪ್ ತಯಾರಿಸಿದ ಕೀರ್ತಿ ಸಹಸ್ರ ಸಂಸ್ಥೆಗೆ ಸಲ್ಲುತ್ತದೆ.
ಸಹಸ್ರ ಸೆಮಿಕಂಡಕ್ಟರ್ಸ್ನ ಸಿಇಒ ವರುಣ್ ಮನ್ವಾನಿ ಅವರ ಪ್ರಕಾರ ರಾಜಸ್ಥಾನದ ಭಿವಾಡಿ ಜಿಲ್ಲೆಯಲ್ಲಿರುವ ಘಟಕದಲ್ಲಿ ಸೆಪ್ಟಂಬರ್ನೊಳಗೆ ಅಥವಾ ಅಕ್ಟೋಬರ್ ಆರಂಭದಲ್ಲಿ ಮೆಮೊರಿ ಚಿಪ್ಗಳನ್ನು ಉತ್ಪಾದಿಸುವ ಕಾರ್ಯ ಶುರುವಾಗುತ್ತದೆ. ಭಿವಾಡಿಯಲ್ಲಿ ಸಂಸ್ಥೆಯ ಚಿಪ್ ಅಸೆಂಬ್ಲಿ, ಟೆಸ್ಟ್ ಮತ್ತು ಪ್ಯಾಕೇಜಿಂಗ್ ಘಟಕ ಇದ್ದು, ಅದರಲ್ಲಿ ಮೈಕ್ರೋಎಸ್ಡಿ ಕಾರ್ಡ್, ಚಿಪ್ ಆನ್ ಬೋರ್ಡ್ ಇತ್ಯಾದಿ ಮೂಲಭೂತವಾದ ಮೆಮೊರಿ ಪ್ರಾಡಕ್ಟ್ಗಳನ್ನು ಅಸೆಂಬಲ್ ಮಾಡುವ ಕಾರ್ಯ ನಡೆಯಲಿದೆ. ಮುಂದಿನ ದಿನಗಳಲ್ಲಿ ಬಹಳ ಬೇಡಿಕೆಯಲ್ಲಿರುವ ಇಂಟರ್ನಲ್ ಮೆಮೊರಿ ಚಿಪ್ ಇತ್ಯಾದಿ ಉತ್ಪನ್ನಗಳ ಪ್ಯಾಕೇಜಿಂಗ್ ಕಡೆ ಗಮನ ಹರಿಸಲಿದೆ ಸಹಸ್ರ ಸೆಮಿಕಂಡಕ್ಟರ್.
ಅಮೆರಿಕದ ಮೈಕ್ರೋನ್ ಸಂಸ್ಥೆ ಸೆಮಿಕಂಡಕ್ಟರ್ ಉತ್ಪನ್ನಗಳನ್ನು ಸ್ವಂತವಾಗಿ ನಿರ್ಮಿಸಬಲ್ಲುದು. ಇದು ಫಾಕ್ಸ್ಕಾನ್ ಸಂಸ್ಥೆ ಐಫೋನ್ ಅನ್ನು ಅಸೆಂಬಲ್ ಮಾಡುವ ರೀತಿಯಲ್ಲಿ ಸಹಸ್ರ ಸೆಮಿಕಂಡಕ್ಟರ್ ಬೇರೆ ಕಂಪನಿಗಳಿಂದ ಚಿಪ್ ಸಾಧನಗಳನ್ನು ತರಿಸಿಕೊಂಡು ತನ್ನ ಘಟಕದಲ್ಲಿ ಚಿಪ್ ಅಸೆಂಬ್ಲಿಂಗ್ ಮತ್ತು ಪ್ಯಾಕೇಜಿಂಗ್ ಕೆಲಸಗಳನ್ನು ಮಾತ್ರ ಮಾಡುತ್ತದೆ. ಸಹಸ್ರ ಸೆಮಿಕಂಡಕ್ಟರ್ ಜಪಾನ್, ಕೊರಿಯಾ, ಥಾಯ್ಲೆಂಡ್ ಇತ್ಯಾದಿ ದೇಶಗಳಿಂದ ಚಿಪ್ ಟೂಲ್ಗಳನ್ನು ತರಿಸಿಕೊಳ್ಳುತ್ತದೆ. ಡಿಸ್ಕೋ ಕಾರ್ಪ್, ಕುಲಿಕೆ, ಸೋಫ ಮೊದಲಾದ ಕಂಪನಿಗಳು ಇದರ ಸಪ್ಲೈ ಪಾರ್ಟ್ನರ್ಸ್ ಆಗಿವೆ.
ಇದನ್ನೂ ಓದಿ: ಬದಲಾಗಿದೆಯಾ ಭಾರತ? ಐಐಟಿ ಪದವೀಧರರು ವಿದೇಶಕ್ಕೆ ಗುಳೆ ಹೋಗುವ ಪರ್ವ ಮುಗಿಯಿತಾ?
ವಿವಿಧ ಕಾರ್ಪೊರೇಟ್ ಸಂಸ್ಥೆಗಳಿಗೆ ಚಿಪ್ ತಯಾರಿಸಿಕೊಡಲು ಸಹಸ್ರ ಸೆಮಿಕಂಡಕ್ಟರ್ ಸಂಸ್ಥೆಗೆ ಆರ್ಡರ್ ಬರುತ್ತಿವೆಯಂತೆ. ವಿದೇಶಗಳಿಂದಲೂ ಆರ್ಡರ್ ಬಂದರೆ ರಫ್ತು ಮಾಡಲು ಇದು ಅಣಿಯಾಗಿದೆ. ಈಗಾಗಲೇ ತನ್ನ ಘಟಕಗಳ ಸ್ಥಾಪನೆಗೆ 110 ಕೋಟಿ ರೂ ಹೂಡಿಕೆ ಮಾಡಿರುವ ಸಹಸ್ರ, ಮುಂದಿನ ಐದಾರು ವರ್ಷದಲ್ಲಿ 600 ಕೋಟಿ ರೂ ಹೂಡಿಕೆ ಮಾಡಲು ಯೋಜಸಿದೆ. ಸೆಮಿಕಂಡಕ್ಟರ್ ವ್ಯವಹಾರದಿಂದ ವರ್ಷಕ್ಕೆ 500 ಕೋಟಿ ರೂ ಆದಾಯ ಗಳಿಸುವ ಗುರಿಯಲ್ಲಿ ಸಹಸ್ರ ಇದೆ.
ಈ ಸಂಸ್ಥೆಯ ಉತ್ಪಾದನೆಗೆ ಸರ್ಕಾರದಿಂದ ಶೇ. 25ರಷ್ಟು ಧನಸಹಾಯ ಸಿಗುತ್ತದೆ. ಯೋಜನೆಯ ಶೇ. 50ರಷ್ಟು ವೆಚ್ಚವನ್ನು ಭರಿಸುವ ಸೆಮಿಕಂಡಕ್ಟರ್ ಪ್ರೋತ್ಸಾಹ ಯೋಜನೆಗೆ ಅರ್ಜಿ ಸಲ್ಲಿಸಲು ಸಹಸ್ರ ಪ್ರಯತ್ನಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ