Salaried Class: ವೇತನದಾರರ ಉದ್ಯೋಗ ನಷ್ಟದ ಚೇತರಿಕೆಯಲ್ಲಿ ತೀವ್ರ ಸ್ವರೂಪದ ನಿಧಾನ

| Updated By: Srinivas Mata

Updated on: Sep 24, 2021 | 7:58 PM

ವೇತನದಾರ ವರ್ಗದ ಉದ್ಯೋಗ ನಷ್ಟದಿಂದ ಚೇತರಿಸಿಕೊಳ್ಳುವ ವೇಗವು ತೀವ್ರತರವಾಗಿ ನಿಧಾನವಾಗಿದೆ ಎಂದು ಸಿಎಂಐಇ ಅಧ್ಯಯನದಿಂದ ತಿಳಿದುಬಂದಿದೆ.

Salaried Class: ವೇತನದಾರರ ಉದ್ಯೋಗ ನಷ್ಟದ ಚೇತರಿಕೆಯಲ್ಲಿ ತೀವ್ರ ಸ್ವರೂಪದ ನಿಧಾನ
ಪ್ರಾತಿನಿಧಿಕ ಚಿತ್ರ
Follow us on

ಕೊವಿಡ್-19 ನಿರ್ಬಂಧಗಳಿಂದಾಗಿ ಅಡಚಣೆಗಳಾದ ನಂತರ ಉದ್ಯೋಗದಲ್ಲಿ ಚೇತರಿಕೆಯು ವೇತನ ಪಡೆಯುವ ವರ್ಗಕ್ಕೆ “ತೀವ್ರ ಸ್ವರೂಪದಲ್ಲಿ ನಿಧಾನವಾಗಿದೆ”. ಆದರೂ ಹಲವಾರು ವಲಯಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಪ್ರಕಾರ, ವೇತನ ಪಡೆಯುವ ವರ್ಗದಲ್ಲಿ ಉದ್ಯೋಗ ನಷ್ಟವು ಹೆಚ್ಚಿನ ಪ್ರಮಾಣದಲ್ಲಿದೆ. “ವೇತನದ ಉದ್ಯೋಗಗಳಲ್ಲಿನ ಚೇತರಿಕೆಯು ಕೊವಿಡ್-19ರ ಎರಡನೇ ಅಲೆಯಿಂದ ಪ್ರಭಾವಿತವಾಗಿಲ್ಲ. ಆದರೆ ಈ ಉದ್ಯೋಗಗಳಲ್ಲಿ ಚೇತರಿಕೆಯು ತೀವ್ರವಾಗಿ ನಿಧಾನವಾಗುತ್ತಿದೆ,” ಎಂದು CMIEಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಮಹೇಶ್ ವ್ಯಾಸ್ ತಮ್ಮ ವಿಶ್ಲೇಷಣೆಯಲ್ಲಿ ಹೇಳಿದ್ದಾರೆ. 2021ರ ಆಗಸ್ಟ್​ನಲ್ಲಿ ವೇತನ ಪಡೆಯುವ ವರ್ಗದ ಉದ್ಯೋಗವು 2019-20ರಲ್ಲಿ ಇದ್ದುದಕ್ಕಿಂತ 57 ಲಕ್ಷ ಕಡಿಮೆಯಾಗಿದೆ. ಇದರಲ್ಲಿ 88 ಲಕ್ಷ ವೇತನದ ಉದ್ಯೋಗ ನಷ್ಟ ಮತ್ತು ಉದ್ಯಮಿಗಳಿಗೆ 20 ಲಕ್ಷ ಉದ್ಯೋಗ ನಷ್ಟವನ್ನು ಒಳಗೊಂಡಿದೆ. ಆದರೂ ಕೃಷಿ ಕ್ಷೇತ್ರದಲ್ಲಿನ ಉದ್ಯೋಗದಲ್ಲಿ 47 ಲಕ್ಷ ಹೆಚ್ಚಳ ಮತ್ತು ದೈನಂದಿನ ಕೂಲಿ ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳ ಉದ್ಯೋಗದಲ್ಲಿ 7 ಲಕ್ಷ ಹೆಚ್ಚಳದಿಂದ ಉದ್ಯೋಗ ನಷ್ಟವು ಭಾಗಶಃ ಚೇತರಿಸಿತು, ಎಂದು CMIE ಡೇಟಾ ತೋರಿಸಿದೆ.

ವ್ಯಾಸ್ ಪ್ರಕಾರ, ಈ ಚೇತರಿಕೆಯು ನೌಕರರು ಮತ್ತು ಉದ್ಯಮಿಗಳ ಮಧ್ಯೆ ತಾರತಮ್ಯವನ್ನು ಸ್ಪಷ್ಟವಾಗಿಸುತ್ತಿದೆ. ರಾಜ್ಯಗಳಾದ್ಯಂತ ಅನ್‌ಲಾಕ್‌ ಮಾಡಿದ ನಂತರ ಹಲವಾರು ವಲಯಗಳು ಕ್ರಮೇಣ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದರೂ ಲಾಕ್‌ಡೌನ್ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡ ವೇತನದ ನೌಕರರು ಅದೇ ಉದ್ಯೋಗಗಳಿಗೆ ಮರಳಲು ಸಾಧ್ಯವಾಗಿಲ್ಲ. ವೇತನದ ಉದ್ಯೋಗಿಗಳಿಗೆ ಇದೇ ರೀತಿಯ ಪರ್ಯಾಯ ಉದ್ಯೋಗವನ್ನು ಹುಡುಕುವುದು ಕಷ್ಟ. “ಈ ಉದ್ಯೋಗ ನಷ್ಟಗಳು ಹೆಚ್ಚಿನ ಕುಟುಂಬಗಳ ಒತ್ತಡವನ್ನು ಸೃಷ್ಟಿಸುವ ನಿರೀಕ್ಷೆಯಿದೆ. ವೇತನದ ಉದ್ಯೋಗಗಳು ಉತ್ತಮ ಸಂಬಳದ ಕೆಲಸಗಳಾಗಿವೆ. ಮತ್ತು ಆದ್ದರಿಂದ ಈ ಉದ್ಯೋಗಗಳಲ್ಲಿ ಹೆಚ್ಚಿನ ನಷ್ಟವು ಒಟ್ಟಾರೆ ಬೇಡಿಕೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ,” ಎಂದು ವ್ಯಾಸ್ ತಮ್ಮ ವಿಶ್ಲೇಷಣೆಯಲ್ಲಿ ಗಮನಿಸಿದ್ದಾರೆ.

8.6 ಕೋಟಿ ಉದ್ಯೋಗಗಳ ಸೇರ್ಪಡೆ
2019-20ರಲ್ಲಿ ಉದ್ಯೋಗದ ವಿಷಯದಲ್ಲಿ ಸುಮಾರು 8.6 ಕೋಟಿ ಉದ್ಯೋಗಗಳನ್ನು ಸಂಬಳದ ವರ್ಗಕ್ಕೆ ಸೇರಿಸಲಾಗಿದೆ. ಇದು ಕೊವಿಡ್ -19 (ಏಪ್ರಿಲ್-ಜೂನ್ 2020) ಮೊದಲ ಅಲೆಯ ಸಮಯದಲ್ಲಿ 7 ಕೋಟಿಗೆ ಕುಸಿಯಿತು. ಆದರೂ ಕೊವಿಡ್-19 ಸಾಂಕ್ರಾಮಿಕದ ಎರಡನೇ ಅಲೆಯ ಸಮಯದಲ್ಲಿ (2021ರ ಏಪ್ರಿಲ್-ಜೂನ್) ವೇತನ ಪಡೆಯುವ ವರ್ಗದ ಉದ್ಯೋಗಗಳು 7.6 ಕೋಟಿಗೆ ಏರಿದೆ ಎಂದು CMIE ಡೇಟಾ ತಿಳಿಸಿದೆ.

“ಕೊವಿಡ್ -19 ಎರಡನೇ ಅಲೆಯ ಸಂದರ್ಭದಲ್ಲಿ ವೇತನದ ಉದ್ಯೋಗಗಳ ಸ್ಥಿತಿಯು ಸಮಾಧಾನಕರವಾಗಿದೆ. ಆದರೆ ಅವುಗಳಲ್ಲಿ ನಿಧಾನವಾಗಿ ಚೇತರಿಸಿಕೊಳ್ಳುವುದು ಕಳವಳಕಾರಿಯಾಗಿದೆ,” ಎಂದು ವ್ಯಾಸ್ ಹೇಳಿದ್ದಾರೆ. CMIE ಡೇಟಾ ಪ್ರಕಾರ, ಕಾರ್ಮಿಕ ಮಾರುಕಟ್ಟೆ ಚೇತರಿಕೆಯು ಗ್ರಾಮೀಣ ಮಾರುಕಟ್ಟೆಗಳ ಪರವಾಗಿದೆ. 2019-20 ಮತ್ತು ಆಗಸ್ಟ್ 2021ರ ನಡುವೆ 37 ಲಕ್ಷ ಉದ್ಯೋಗಗಳು ಭಾರತದ ನಗರ ಭಾಗಗಳಲ್ಲಿ ಕಳೆದುಹೋಗಿವೆ. ಕೊವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ನಗರ ಪ್ರದೇಶದ ಭಾರತವು ಶೇ 65ರಷ್ಟು ಉದ್ಯೋಗ ನಷ್ಟವನ್ನು ಅನುಭವಿಸಿದ್ದು, ಇದು ಎಲ್ಲ ಉದ್ಯೋಗಗಳಲ್ಲಿ ಕೇವಲ ಶೇ 32ರಷ್ಟಿದೆ ಎಂದು CMIE ವಿಶ್ಲೇಷಣೆಯಲ್ಲಿ ಸೇರಿಸಲಾಗಿದೆ.

ನಿರುದ್ಯೋಗ ದರ ಕುಸಿತ
ಮತ್ತೊಂದೆಡೆ, ಗ್ರಾಮೀಣ ಭಾಗದ ಭಾರತವು ಕೇವಲ 19 ಲಕ್ಷ ಉದ್ಯೋಗಗಳನ್ನು ಕಳೆದುಕೊಂಡಿದೆ. ಮತ್ತು 2019-20 ಮತ್ತು 2021ರ ಆಗಸ್ಟ್ ಮಧ್ಯೆ 46 ಲಕ್ಷ ಹೆಚ್ಚುವರಿ ಕಾರ್ಮಿಕ ಬಲವನ್ನು ಸೇರಿಸಿಕೊಳ್ಳುವ ಮೂಲಕ ಕೃಷಿ ಕ್ಷೇತ್ರವು ಉದ್ಯೋಗ ಸಂರಕ್ಷಕನಾಯಿತು. ಅದೇ ಅವಧಿಯಲ್ಲಿ ಭಾರತದ ಗ್ರಾಮೀಣ ಭಾಗದಲ್ಲಿ 65 ಲಕ್ಷ ಕೃಷಿಯೇತರ ಉದ್ಯೋಗಗಳನ್ನು ಕಳೆದುಕೊಂಡಿತು. CMIE ವಿಶ್ಲೇಷಣೆಯ ಪ್ರಕಾರ, ಸೆಪ್ಟೆಂಬರ್ ಮೊದಲ ಮೂರು ವಾರಗಳಲ್ಲಿ ಲಭ್ಯವಿರುವ ಡೇಟಾವನ್ನು ಆಧರಿಸಿ, ಕಾರ್ಮಿಕ ಮಾರುಕಟ್ಟೆ ಸೂಚಕಗಳು ಸುಧಾರಿಸುತ್ತಿರುವಾಗ ಕಾರ್ಮಿಕ ಭಾಗವಹಿಸುವಿಕೆ ದರ ಸ್ಥಿರವಾಗುತ್ತಿದೆ ಮತ್ತು ನಿರುದ್ಯೋಗ ದರವು ಕುಸಿಯುತ್ತಿದೆ.

ಇದನ್ನೂ ಓದಿ: Unemployment in India | ಕೊರೊನಾ ಭೀಕರತೆಗೆ ಮತ್ತೆ 70 ಲಕ್ಷ ಜನರಿಗೆ ಉದ್ಯೋಗ ನಷ್ಟ; ನಿರುದ್ಯೋಗ ದರ 4 ತಿಂಗಳ ಗರಿಷ್ಠ

(Salary Class Job Loss Recovery Very Slow According To CMIE Study)