
ನವದೆಹಲಿ, ಫೆಬ್ರುವರಿ 8: ಭಾರತದ ಎಐ ಸ್ಟಾರ್ಟಪ್ ಸರ್ವಮ್ ಎಐ (Sarvam AI) ಇದೀಗ ಹೊಸ ಹೊಸ ಮಲ್ಟಿಮೋಡಲ್ ಎಐ ಮಾಡಲ್ವೊಂದನ್ನು ಅನಾವರಣಗೊಳಿಸಿದೆ. ಸರ್ವಮ್ ವಿಶನ್ (Sarvam Vision) ಎಂದು ಕರೆಯಲಾಗಿರುವ ಈ ಮಾಡಲ್ ಭಾರತೀಯ ಭಾಷೆಗಳಲ್ಲಿ ಡಾಕ್ಯುಮೆಂಟ್ ಇಂಟೆಲಿಜೆನ್ಸ್, ಆಪ್ಟಿಕಲ್ ಕ್ಯಾರೆಕ್ಟರ್ ರೆಗಗ್ನಿಶನ್ (ಒಸಿಆರ್) ಮತ್ತು ವಿಶುವಲ್ ಲ್ಯಾಂಗ್ವೇಜ್ ಗ್ರಹಿಕೆಯ (Visual Language Understanding) ಪರಿಣಿತಿ ಹೊಂದಿದೆ. ಅಂದರೆ, ಭಾರತೀಯ ಭಾಷೆಗಳ ವಿಡಿಯೋ, ಪಠ್ಯ ಮತ್ತು ದಾಖಲೆಗಳನ್ನು ಇದು ಗ್ರಹಿಸಿ, ನಿಮಗೆ ಬೇಕಾದ ಹೂರಣವಾಗಿ ಸಿದ್ದಪಡಿಸಬಲ್ಲುದು.
ಇದರ ಡಾಕ್ಯುಮೆಂಟ್ ಇಂಟೆಲಿಜೆನ್ಸ್ ಸಾಮರ್ಥ್ಯ ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ. ಚ್ಯಾಟ್ಜಿಪಿಟಿ 5.2, ಜೆಮಿನಿ 3 ಪ್ರೋ ಇತ್ಯಾದಿ ವಿಶ್ವದ ಶಕ್ತಿಶಾಲಿ ಎಐ ಮಾಡಲ್ಗಳನ್ನು ಮೀರಿಸುವ ಮಟ್ಟಿಗೆ ಇದರ ಡಾಕ್ಯುಮೆಂಟ್ ಇಂಟೆಲಿಜೆನ್ಸ್ ಸಾಮರ್ಥ್ಯ ಇದೆ. ಭಾರತದ ಹೆಚ್ಚಿನ ಸಾಂಪ್ರದಾಯಿಕ ಜ್ಞಾನವು ಭೌತಿಕ ದಾಖಲೆಗಳು, ಸ್ಕ್ಯಾನ್ ಆದ ಪ್ರತಿಗಳು ಇತ್ಯಾದಿಗಳ ರೂಪದಲ್ಲಿವೆ. ಇವುಗಳಲ್ಲಿರುವ ಪಠ್ಯವನ್ನು ಹೆಕ್ಕಿ ತೆಗೆಯುವ ಕೆಲಸವನ್ನು ಸರ್ವಮ್ ಎಐ ನಿರಾಯಾಸವಾಗಿ ಮಾಡಬಲ್ಲುದು.
ಇದನ್ನೂ ಓದಿ: ಭಾರತೀಯರ ಇಂಧನ ಭದ್ರತೆಗೆ ಮೊದಲ ಆದ್ಯತೆ; ವಿದೇಶಾಂಗ ಸಚಿವಾಲಯ ಸ್ಪಷ್ಟನೆ
ಭಾರತೀಯ ಭಾಷೆಗಳ ಪಠ್ಯವನ್ನು ಸರ್ವಮ್ ಎಐನಷ್ಟು ಕರಾರುವಾಕ್ಕಾಗಿ ವಿಶ್ವದ ಯಾವುದೇ ಮಾಡಲ್ಗಳು ಓದಲಾಗಿಲ್ಲ ಎಂದು ಹೇಳಲಾಗುತ್ತಿದೆ. ಕನ್ನಡವೂ ಸೇರಿದಂತೆ 22 ಭಾರತೀಯ ಭಾಷೆಗಳಲ್ಲಿ ಇದು ಪರಿಣಿತಿ ಹೊಂದಿದೆ. ಪಠ್ಯ ಮತ್ತು ದೃಶ್ಯಗಳಲ್ಲಿರುವ ವಿಚಾರಗಳನ್ನು ಇದು ಹೆಚ್ಚು ನಿಖರವಾಗಿ ಗ್ರಹಿಸಬಲ್ಲುದು.
ಸರ್ವಮ್ ಎಐ ಆವಿಷ್ಕಾರಗಳನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರಶಂಸಿಸಿದ್ದಾರೆ. ‘ದೇಶೀಯ ಮಾಡಲ್ ನಿರ್ಮಿಸುವ ತಂತ್ರಗಾರಿಕೆಯು ಫಲಕೊಡುತ್ತಿದೆ. ನಮ್ಮ ಎಐ ಮಿಷನ್ನ ಭಾಗವಾಗಿ ಸರ್ವಂ ಬಿಡುಗಡೆ ಮಾಡಿದ ಸುಧಾರಿತ ಮಾಡಲ್ ಅನ್ನು ಕಟು ಟೀಕಾಕಾರರೂ ಪ್ರಶಂಸಿಸುತ್ತಿದ್ದಾರೆ. ಈ ಮಧ್ಯೆ ನಮ್ಮ ಬುದ್ಧಿವಂತ ಯುವ ಎಂಜಿನಿಯರುಗಳು ಮೆಟೀರಿಯಲ್ ಸೈನ್ಸ್, ಹೆಲ್ತ್ಕೇರ್ ಮತ್ತು ಸೈಬರ್ಸೆಕ್ಯೂರಿಟಿ ಕ್ಷೇತ್ರದಲ್ಲಿ ನಾವೀನ್ಯತೆ ಸಾಧಿಸಲು ಕೆಲಸ ಮಾಡುತ್ತಿದ್ದು, ಅದನ್ನು ಇಡೀ ವಿಶ್ವವೇ ಆದರಿಸುವಂತಾಗುತ್ತದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರು ಟ್ವೀಟ್ ಮಾಡಿದ್ದಾರೆ.
ವರ್ಷದ ಹಿಂದೆ ಸರ್ವಮ್ ಎಐನ ಮೂಲ ಮಾಡಲ್ ಬಿಡುಗಡೆಯಾದಾಗ ಕಟುವಾಗಿ ಟೀಕಿಸಿದ್ದ ವ್ಯಕ್ತಿಯೊಬ್ಬರು ಈಗ ಸರ್ವಮ್ನ ಅಡ್ವಾನ್ಸ್ಡ್ ಮಾಡಲ್ ಕಂಡು ಬೆರಗಾಗಿದ್ದಾರೆ. ತಾನು ಸರ್ವಮ್ ಬಗ್ಗೆ ಆಗ ಹೇಳಿದ್ದು ತಪ್ಪಾಗಿದೆ ಎಂದು ಹೇಳಿ, ಸರ್ವಮ್ ಅದೆಷ್ಟು ಉಪಯುಕ್ತ ಮಾಡಲ್ ಆಗಿ ರೂಪುಗೊಂಡಿದೆ ಎಂಬುದನ್ನು ವಿವರಿಸಿದ್ದಾರೆ. ವೈಷ್ಣವ್ ಅವರು ಆ ವ್ಯಕ್ತಿಯ ಆ ಟ್ವೀಟ್ ಅನ್ನು ಪ್ರಸ್ತಾಪಿಸಿದ್ದಾರೆ.
ಅಶ್ವಿನಿ ವೈಷ್ಣವ್ ಅವರ ಟ್ವೀಟ್
Our sovereign model strategy is delivering results.
Even the most critical reviewers are praising the technologically advanced model released by Sarvam as a part of our AI mission.
In parallel, our smart young engineers are working on innovations in materials science,… https://t.co/PA8zR4xq9d
— Ashwini Vaishnaw (@AshwiniVaishnaw) February 8, 2026
ಇದನ್ನೂ ಓದಿ: ಭಾರತ ಯಾವುದೇ ದೇಶದಿಂದ ತೈಲ ಖರೀದಿಸಲು ಸ್ವತಂತ್ರವಾಗಿದೆ, ವೆನೆಜುವೆಲಾದ ತೈಲ ಖರೀದಿ ಕುರಿತು ರಷ್ಯಾ ಮಾತು
‘ವರ್ಷದ ಹಿಂದೆ ಅವರ ಬಗ್ಗೆ (ಸರ್ವಮ್ ಎಐ) ನಾನು ಬರೆದಾಗ, ಸಣ್ಣ ಭಾರತೀಯ ಭಾಷಾ ಮಾಡಲ್ಗಳನ್ನು ಟ್ರೈನ್ ಮಾಡುವ ರೀತಿ ತಪ್ಪಿದೆ ಎನಿಸಿತ್ತು. ಆದರೆ, ಪೂರ್ಣ ಪರಿವರ್ತನೆಯೇ ಮಾಡಿಬಿಟ್ಟಿದ್ದಾರೆ. ಇಂಡಿಕ್ ಲ್ಯಾಂಗ್ವೇಜ್ಗಳಿಗೆ ಇವರ ಪಠ್ಯದಿಂದ ಮಾತು, ಮಾತಿನಿಂದ ಪಠ್ಯ, ಒಸಿಆರ್ ಮಾಡಲ್ಗಳು ಅತ್ಯುತ್ತಮ ಎನಿಸಿವೆ. ಬೆಲೆಯೂ ಕಡಿಮೆ ಇದೆ. ವೆಬ್ಸೈಟ್ ಕೂಡ ಸುಂದರವಾಗಿದೆ. ಬಳಕೆಗೆ ಸುಲಭವಿದೆ’ ಎಂದು ಡೀಡಿ ಹೆಸರಿನ ಆ ವ್ಯಕ್ತಿ ಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:36 am, Sun, 8 February 26