ನವದೆಹಲಿ, ಏಪ್ರಿಲ್ 27: ಭಾರತದ್ದೇ ಸ್ವಂತ ಎಐ ಪರಿಸರ (AI ecosystem) ನಿರ್ಮಿಸುವತ್ತ ಸರ್ಕಾರ ಮತ್ತೊಂದು ಪ್ರಮುಖ ಹೆಜ್ಜೆ ಇರಿಸಿದೆ. ಎಐ ಫೌಂಡೇಶನ್ ಮಾಡಲ್ವೊಂದನ್ನು (AI Foundation Model) ಸೃಷ್ಟಿಸಲು ಸರ್ವಮ್ ಎಐ (Sarvam AI) ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಕೇಂದ್ರ ಐಟಿ ಸಚಿವ ಡಾ. ಅಶ್ವಿನಿ ವೈಷ್ಣವ್ ನಿನ್ನೆ ಶನಿವಾರ ಹೇಳಿದ್ದಾರೆ. ಚ್ಯಾಟ್ಜಿಟಿಪಿ ತರಹದ ಎಐ ಎಲ್ಎಲ್ಎಂ ಅನ್ನು ಸೃಷ್ಟಿಸಲು ಭಾರತಕ್ಕೆ ಬಹಳ ಕಷ್ಟ ಎಂದು ಓಪನ್ಎಐ ಸಿಇಒ ಸ್ಯಾಮ್ ಆಲ್ಟ್ಮ್ಯಾನ್ ಹೇಳಿದ ಹಿನ್ನೆಲೆಯಲ್ಲಿ ಭಾರತದ ಈ ನಡೆ ಗಮನಾರ್ಹ ಎನಿಸಿದೆ.
ಎಐ ಫೌಂಡೇಶನ್ ಮಾಡಲ್ ನಿರ್ಮಾಣಕ್ಕೆ ಸರ್ಕಾರ ನೀಡಿದ ಆಹ್ವಾನಕ್ಕೆ ಉದ್ಯಮ ವಲಯದಿಂದ ಭರ್ಜರಿ ಸ್ಪಂದನೆ ಸಿಕ್ಕಿದೆ. 67 ಪ್ರಸ್ತಾಪಗಳು ಸರ್ಕಾರಕ್ಕೆ ಸಲ್ಲಿಕೆಯಾದುವಂತೆ. ಅದರಲ್ಲಿ ಕೆಲವನ್ನು ಸರ್ಕಾರ ಆಯ್ಕೆ ಮಾಡುತ್ತಿದೆ. ಸರ್ವಮ್ ಎಐಗೆ ಮೊದಲು ಅನುಮತಿ ಸಿಕ್ಕಿದೆ. ನಿನ್ನೆ ಇಸಿಎಂಎಸ್ ಸ್ಕೀಮ್ಗೆ ಮಾರ್ಗಸೂಚಿ ಬಿಡುಗಡೆ ಮಾಡುವಾಗ ಕೇಂದ್ರ ಸಚಿವರು ಈ ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ 2-3 ಸ್ಟಾರ್ಟಪ್ಗಳಿಗೆ ಅನುಮತಿ ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ: ಭಾರತ, ಜಪಾನ್ ಜಿಡಿಪಿಯನ್ನೂ ಮೀರಿಸಿದ ಈ ಒಂದು ರಾಜ್ಯದ ಆರ್ಥಿಕತೆ
ಲಾರ್ಜ್ ಲ್ಯಾಂಗ್ವೇಜ್ ಮಾಡಲ್ ಅಥವಾ ಎಲ್ಎಲ್ಎಂ ಎಂಬುದು ಫೌಂಡೇಶನ್ ಮಾಡಲ್ನ ಒಂದು ವಿಧ ಅಷ್ಟೇ. ಎಲ್ಎಲ್ಎಂಗಳು ಪಠ್ಯಗಳ ಮೇಲೆ ಟ್ರೈನ್ ಆಗಿರುವ ಎಐ ಮಾಡಲ್ಗಳಾಗಿವೆ. ಇವು ಪಠ್ಯ ಆಧಾರಿತ ಡಾಟಾ ಜನರೇಟ್ ಮಾಡುತ್ತವೆ. ಮನುಷ್ಯರ ಭಾಷೆಯನ್ನು ಅರಿತು ಸಂವಾದ ನಡೆಸಬಲ್ಲುವು. ಚ್ಯಾಟ್ಜಿಪಿಟಿ, ಜೆಮಿನಿ ಎಐ ಇತ್ಯಾದಿ ಇದಕ್ಕೆ ಉದಾಹರಣೆ.
ಎಐ ಫೌಂಡೇಶನ್ ಮಾಡಲ್ನಲ್ಲಿ ಪಠ್ಯ ಮಾತ್ರವಲ್ಲ, ಇಮೇಜ್, ಆಡಿಯೋ, ವಿಡಿಯೋ ಅಥವಾ ಇನ್ನೂ ಬಹು ವಿಧವಾದ ದತ್ತಾಂಶಗಳಲ್ಲಿ ಟ್ರೈನ್ ಮಾಡಲಾಗುತ್ತದೆ. ಇವು ಮಲ್ಟಿಮೋಡಲ್ ಮಾಡಲ್ ಆಗಿರುತ್ತವೆ. ವಿವಿಧ ಭಾವಚಿತ್ರ, ಶಬ್ದ, ದೃಶ್ಯಗಳನ್ನು ಗ್ರಹಿಸಿ, ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಚ್ಯಾಟ್ ಜಿಪಿಟಿ 4ವಿ, ಜೆಮಿನಿ 1.5 ಇತ್ಯಾದಿಯನ್ನು ಫೌಂಡೇಶನ್ ಮಾಡಲ್ಗಳೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: 2026ರೊಳಗೆ ಅಮೆರಿಕದ ಮಾರುಕಟ್ಟೆಗೆ ಶೇ. 100 ಮೇಡ್ ಇನ್ ಇಂಡಿಯಾ ಐಫೋನ್: ಆ್ಯಪಲ್ ಗುರಿ
ವಿವೇಕ್ ರಾಘವನ್ ಮತ್ತು ಪ್ರತ್ಯುಶ್ ಕುಮಾರ್ ಅವರು 2023ರ ಜುಲೈನಲ್ಲಿ ಸ್ಥಾಪಿಸಿದ ಕಂಪನಿ ಸರ್ವಮ್ ಎಐ. ಇದು ಎಐ ಮಾಡಲ್ಗಳನ್ನು ಟ್ರೈನ್ ಮಾಡಲು ಬೇಕಾದ ಅವಿಷ್ಕಾರಗಳನ್ನು ಮಾಡುವ ಕಂಪನಿ. ನಂದನ್ ನಿಲೇಕಣಿ ಹೂಡಿಕೆ ಮಾಡಿರುವ ಎಐ ಫಾರ್ ಭಾರತ್ ಎನ್ನುವ ಸಂಸ್ಥೆಯಲ್ಲಿ ವಿವೇಕ್ ಮತ್ತು ಪ್ರತ್ಯೂಶ್ ಕೆಲಸ ಮಾಡಿ ಅನುಭವ ಹೊಂದಿದ್ದವರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:44 pm, Sun, 27 April 25