ನವದೆಹಲಿ, ಫೆಬ್ರುವರಿ 7: ಆಂಧ್ರ ಮೂಲದ ಸತ್ಯ ನಾದೆಲ್ಲಾ (Satya Nadella) ಮೈಕ್ರೋಸಾಫ್ಟ್ ಸಿಇಒ ಆಗಿ 10 ವರ್ಷ ಆಗಿದೆ. ಅದು ನಿಜಕ್ಕೂ ಒಂದು ಮೈಲಿಗಲ್ಲು. ಆ್ಯಪಲ್ ಅನ್ನೂ ಮೀರಿಸಿ ವಿಶ್ವದಲ್ಲೇ ಅತಿ ಹೆಚ್ಚು ಮಾರ್ಕೆಟ್ ಕ್ಯಾಪ್ ಹೊಂದಿರುವ ಮೈಕ್ರೋಸಾಫ್ಟ್ (Microsoft) ಸಂಸ್ಥೆಗೆ 10 ವರ್ಷ ಸಿಇಒ ಆಗುವುದು ಬಹಳ ಕ್ಲಿಷ್ಟಕರ ಕೆಲಸ. ಅದರಲ್ಲೂ ಆ್ಯಪಲ್ನಂತಹ ಕಂಪನಿಯ ಪೈಪೋಟಿ ಹಾಗೂ ನಿರಂತರ ತಂತ್ರಜ್ಞಾನ ಆವಿಷ್ಕರಣೆಯ ಸ್ಪರ್ಧೆಗಳ ನಡುವೆ ಆ ಉನ್ನತ ಮಟ್ಟದಲ್ಲಿ ಹುದ್ದೆ ಹೊಂದುವುದು ಖಂಡಿತ ಸಾಮಾನ್ಯವಲ್ಲ. 1975ರಲ್ಲಿ ಸ್ಥಾಪನೆಯಾದ ಮೈಕ್ರೋಸಾಫ್ಟ್ಗೆ ಈವರೆಗೆ ಸತ್ಯ ನಾದೆಲ್ಲಾ ಸೇರಿ ಮೂವರು ಮಾತ್ರವೇ ಸಿಇಒ ಆಗಿರುವುದು. ಸಂಸ್ಥಾಪಕ ಬಿಲ್ ಗೇಟ್ಸ್, ಸ್ಟೀವ್ ಬಾಲ್ಮರ್ ಹಾಗೂ ಸತ್ಯ ನಾದೆಲ್ಲಾ ಈ ಸಂಸ್ಥೆಯ ಚುಕ್ಕಾಣಿ ಹಿಡಿದವರು. ಸ್ಟೀವ್ ಬಾಲ್ಮರ್ 14 ವರ್ಷ ಸಿಇಒ ಆಗಿದ್ದರು. ಸತ್ಯ ನಾದೆಲ್ಲಾ 2014ರಿಂದ ಸಿಇಒ ಆಗಿದ್ದಾರೆ.
ವಿಶ್ವದಲ್ಲಿ ಅತಿಹೆಚ್ಚು ಸಂಬಳ ಪಡೆಯುವ ಸಿಇಒಗಳ ಪೈಕಿ ಸತ್ಯ ನಾದೆಲ್ಲಾ ಒಬ್ಬರು. 2022ರಲ್ಲಿ ಒಂದು ವರ್ಷದಲ್ಲಿ ಅವರು 55 ಮಿಲಿಯನ್ ಡಾಲರ್ನಷ್ಟು ಸಂಬಳ ಪಡೆದಿದ್ದಾರೆ. ಅಂದರೆ ಒಂದು ವರ್ಷದಲ್ಲಿ ಬರೋಬ್ಬರಿ 456 ಕೋಟಿ ರೂನಷ್ಟು ಸಂಪಾದನೆ ಮಾಡಿದ್ದಾರೆ. 2023ರಲ್ಲಿ ಇವರ ಸಂಬಳ ತುಸು ಕಡಿಮೆ ಆಗಿದೆ. ನಾದೆಲ್ಲಾ ಅವರು 2023ರಲ್ಲಿ ಹೊಂದಿರುವ ಒಟ್ಟು ಮೈಕ್ರೋಸಾಫ್ಟ್ ಷೇರುಗಳ ಸಂಖ್ಯೆ 8,00,667 ಎನ್ನಲಾಗಿದೆ. ಅಂದರೆ ಇವರ ಬಳಿ 324 ಮಿಲಿಯನ್ ಡಾಲರ್ (2,694 ಕೋಟಿ ರೂ) ಮೌಲ್ಯದ ಷೇರುಸಂಪತ್ತು ಇದೆ.
ಇದನ್ನೂ ಓದಿ: ಕೇವಲ 15,000 ರೂ ಸಂಬಳ ಪಡೆಯುವ ಸಿಇಒ; ಜೀವನ ಹೇಗೆ ನಡೆಸ್ತಾರೆ ಕುನಾಲ್? ಎಂಥವರನ್ನೂ ಕರಗಿಸೀತು ಇವರ ಜೀವನ ಕಥೆ
ಸತ್ಯನಾದೆಲ್ಲಾ ಸಿಇಒ ಆದಾಗ ಮೈಕ್ರೋಸಾಫ್ಟ್ ಇದ್ದ ಷೇರುಬೆಲೆ 10 ವರ್ಷದಲ್ಲಿ 11 ಪಟ್ಟು ಬೆಳೆದಿದೆ. ಇವತ್ತು ಮೈಕ್ರೋಸಾಫ್ಟ್ನ ಒಂದು ಷೇರುಬೆಲೆ 405 ಡಾಲರ್ ಇದೆ. ಸಂಸ್ಥೆಯ ಒಟ್ಟು ಮಾರ್ಕೆಟ್ ಕ್ಯಾಪ್ ಅಥವಾ ಷೇರುಸಂಪತ್ತು 3.01 ಟ್ರಿಲಿಯನ್ ಡಾಲರ್ ಇದೆ.
ಹತ್ತು ವರ್ಷದ ಹಿಂದೆ ಯಾರಾದರೂ ಮೈಕ್ರೋಸಾಫ್ಟ್ ಷೇರಿನ ಮೇಲೆ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅದರ ಮೌಲ್ಯ 11 ಲಕ್ಷ ರೂ ಆಗಿರುತ್ತಿತ್ತು. ಅಷ್ಟು ಅಗಾಧವಾಗಿ ಷೇರುಬೆಲೆ ಹೆಚ್ಚಳವಾಗಿದೆ.
ಇದನ್ನೂ ಓದಿ: ‘ನಾವೇನು ಮಾಡಲು ಸಾಧ್ಯವಿಲ್ಲ’- ಪೇಟಿಎಂ ಸಿಇಒಗೆ ಖಚಿತ ಉತ್ತರ ಕೊಟ್ಟ ಆರ್ಬಿಐ ಮತ್ತು ಸರ್ಕಾರ
ಭಾರತಕ್ಕೆ ಎರಡು ದಿನದ ಭೇಟಿ ನೀಡಿರುವ ಮೈಕ್ರೋಸಾಫ್ಟ್ ಸಿಇಒ ಅವರು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಲ್ಲಿ ಭಾರತಕ್ಕೆ ನೆರವಾಗುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಭಾರತ ತನ್ನದೇ ಎಐ ಉತ್ಪನ್ನಗಳನ್ನು ತಯಾರಿಸಿ ಅವುಗಳನ್ನು ವಿಶ್ವಕ್ಕೆ ರಫ್ತು ಮಾಡಬೇಕು. ಆ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ನೆರವಾಗಲು ಬಯಸುತ್ತದೆ ಎಂದು ಸಂದರ್ಶನವೊಂದರಲ್ಲಿ ಸತ್ಯ ಹೇಳಿದ್ದಾರೆ.
ಇವತ್ತು ಮುಂಬೈನಲ್ಲಿರುವ ಸತ್ಯ ನಾದೆಲ್ಲಾ ಫೆಬ್ರುವರಿ 8, ನಾಳೆ ಬೆಂಗಳೂರಿಗೆ ಬರಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ