Note exchange: ಛಿದ್ರವಾದ, ವಿರೂಪಗೊಂಡ ನೋಟನ್ನು ಏನು ಮಾಡಬೇಕು? ಇಲ್ಲಿದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉತ್ತರ
ಬ್ಯಾಂಕ್ಗಳ ಎಟಿಎಂಗಳಲ್ಲಿ ಹರಿದ ನೋಟು ಅಥವಾ ವಿರೂಪಗೊಂಡ ನೋಟು ಸಿಕ್ಕರೆ ಏನು ಮಾಡಬೇಕು ಎಂಬ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿವರಣೆ ನೀಡಿದೆ.
ಯಾವುದೇ ಬ್ಯಾಂಕ್ ಆಗಿದ್ದರೂ ಛಿದ್ರಗೊಂಡ ಮತ್ತು ವಿರೂಪವಾದಂಥ ನೋಟುಗಳು ಗ್ರಾಹಕರಿಗೆ ಸಿಗುವುದು ಸಾಮಾನ್ಯ. ಕೆಲವೊಮ್ಮೆ ನಕಲಿ ನೋಟುಗಳು ಬರುತ್ತವೆ ಎಂಬ ಬಗ್ಗೆಯೂ ದೂರುಗಳಿವೆ. ಆದ್ದರಿಂದಲೇ ಗ್ರಾಹಕರಿಗೆ ಯಾವುದೇ ಸಮಸ್ಯೆ ಆಗಬಾರದು ಎಂದು ಬ್ಯಾಂಕ್ಗಳು ನಿಯಮಗಳನ್ನು ರೂಪಿಸಿವೆ. ಎಸ್‌ಬಿಐ ಗ್ರಾಹಕರೊಬ್ಬರು ಎಟಿಎಂನಿಂದ ಪ್ಲಾಸ್ಟಿಕ್ ಅಂಟಿರುವ ನೋಟು ಸಿಕ್ಕಿರುವ ಬಗ್ಗೆ ದೂರು ನೀಡಿದ್ದರು. ಇದಕ್ಕೆ ಶೀಘ್ರವಾಗಿ ಪ್ರತಿಕ್ರಿಯೆ ನೀಡಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು, ತನ್ನ ಎಟಿಎಂಗಳಲ್ಲಿ ಈ ರೀತಿ ಆಗುವುದಿಲ್ಲ. ಆದರೆ ಇದು ಯಾವುದೇ ಗ್ರಾಹಕರಿಗೆ ಸಂಭವಿಸಿದಲ್ಲಿ, ಅವರು ಎಸ್ಬಿಐನ ಯಾವುದೇ ಶಾಖೆಯಿಂದ ನೋಟನ್ನು ಬದಲಾಯಿಸಬಹುದು ಎಂದಿತ್ತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಒಂದು ಟ್ವೀಟ್ನಲ್ಲಿ ತಿಳಿಸಿರುವ ಪ್ರಕಾರ, ಕರೆನ್ಸಿ ನೋಟ್ ಅನ್ನು ಎಟಿಎಂನಲ್ಲಿ ಇಡುವ ಮೊದಲು ಹೈಟೆಕ್ ಯಂತ್ರದಿಂದ ವಿಂಗಡಿಸಲಾಗುತ್ತದೆ. ಆದ್ದರಿಂದ ಎಟಿಎಂನಲ್ಲಿ ಛಿದ್ರಗೊಂಡ ಅಥವಾ ವಿರೂಪವಾದ ನೋಟುಗಳು ಬರುವುದು ಅಸಾಧ್ಯ. ಹಾಗೊಂದು ವೇಳೆ ಬಂದಲ್ಲಿ, ಅದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಶಾಖೆಯಿಂದ ಬದಲಾಯಿಸಬಹುದು.
ನೋಟುಗಳ ವಿಂಗಡಣೆ ಹೇಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ನೋಟುಗಳನ್ನು ಎಟಿಎಂಗೆ ಹಾಕುವ ಮೊದಲಿಗೆ ವಿಂಗಡಣೆ ಮಾಡುತ್ತದೆ. ಇದನ್ನು ಸಿಡಿಎಂ ಯಂತ್ರ ಮತ್ತು ನೋಟು ಕಳುಹಿಸುವ ಯಂತ್ರ ಎಂದು ಕರೆಯಲಾಗುತ್ತದೆ. ಈ ಯಂತ್ರಗಳ ಮೂಲಕವಾಗಿ ಛಿದ್ರಗೊಂಡಥದ್ದು ಮತ್ತು ನಕಲಿ ನೋಟುಗಳು ಹೊರ ಬಂದುಬಿಡುತ್ತದೆ. ಇದರ ಹೊರತಾಗಿಯೂ ಛಿದ್ರಗೊಂಡ ನೋಟುಗಳ ಬಗ್ಗೆ ಆಗಾಗ ದೂರುಗಳು ಬರುತ್ತವೆ. ಎಟಿಎಂಗಳಲ್ಲಿ ನೋಟುಗಳನ್ನು ಹಾಕುವ ಜವಾಬ್ದಾರಿಯುತ ಏಜೆನ್ಸಿಗಳು ಇಂತಹ ತಪ್ಪುಗಳನ್ನು ಮಾಡುತ್ತವೆ ಎಂದು ಬ್ಯಾಂಕ್ ಹೇಳುತ್ತದೆ. ಎಸ್‌ಬಿಐ ತನ್ನ ಎಟಿಎಂ ಬಗ್ಗೆ ಇಂತಹ ಸಮರ್ಥನೆ ನೀಡುತ್ತದೆ. ಆದರೆ ಆಗಾಗ ದೂರುಗಳು ಬರುತ್ತಲೇ ಇರುತ್ತವೆ.
ನೋಟು ಕಳುಹಿಸುವ ಯಂತ್ರ ಎಂದರೇನು? ನೋಟು ಕಳುಹಿಸುವ ಯಂತ್ರವನ್ನು ಬಳಸಿ ನೋಟುಗಳನ್ನು ಬಹಳ ಸೂಕ್ಷ್ಮವಾಗಿ ಕಳಿಸಲಾಗುತ್ತದೆ. ಈ ಯಂತ್ರದಲ್ಲಿ ಕಟ್ಟುಗಳಲ್ಲಿ ನೋಟುಗಳನ್ನು ಹಾಕಲಾಗುತ್ತದೆ. ಇದರಿಂದಾಗಿ ನೋಟು ಕಳುಹಿಸುವ ಯಂತ್ರವು ತಪ್ಪಾದ ನೋಟುಗಳನ್ನು ವಿಂಗಡಣೆ ಮಾಡಿ, ಬೇರ್ಪಡಿಸುತ್ತದೆ. ನಕಲಿ ನೋಟುಗಳನ್ನು ಸಹ ಈ ಯಂತ್ರದ ಮೂಲಕ ವಿಂಗಡಿಸಲಾಗುತ್ತದೆ. ನಗದು ಠೇವಣಿ ಯಂತ್ರದಲ್ಲೂ ಈ ರೀತಿಯದ್ದು ಇರುತ್ತದೆ. ನೀವು ಯಂತ್ರದ ಮೂಲಕ ಹಣವನ್ನು ಠೇವಣಿ ಇಟ್ಟಿದ್ದಲ್ಲಿ ಇದನ್ನು ನೋಡಿರಬಹುದು. ನೋಟುಗಳನ್ನು ಸಂಗ್ರಹಿಸುವಾಗ ಯಂತ್ರವು ಕೆಲವು ನೋಟುಗಳನ್ನು ತಿರಸ್ಕರಿಸುತ್ತದೆ. ಆದರೆ ನೋಟು ನಕಲಿಯೋ ಅಥವಾ ವಿರೂಪವೋ ಆಗಿರುವುದಿಲ್ಲ. ಅದಕ್ಕೆ ಕಾರಣ ಏನೆಂದರೆ, ನೋಟು ಎಲ್ಲಿಂದಲಾದರೂ ಮಡಿಸಿದರೆ ಯಂತ್ರವು ಅದನ್ನು ಸ್ವೀಕರಿಸುವುದಿಲ್ಲ. ನಂತರ ಮತ್ತೆ ಅದನ್ನು ಸರಿಪಡಿಸಿ, ಪ್ರಯತ್ನಿಸಿದಲ್ಲಿ ನೋಟಿನ ಯಂತ್ರದಲ್ಲಿ ಸ್ವೀಕಾರವಾಗುತ್ತದೆ.
ನೀವು ತಪ್ಪಾದ ನೋಟನ್ನು ಪಡೆದರೆ ಏನು ಮಾಡಬೇಕು ಎಟಿಎಂನಿಂದ ತಪ್ಪು ನೋಟು ಹೊರಬಂದರೆ ಏನು ಮಾಡಬೇಕೆಂದು ಎಸ್‌ಬಿಐ ತನ್ನ ಗ್ರಾಹಕರಿಗೆ ತಿಳಿಸಿದೆ. ಯಾವುದೇ ಬ್ಯಾಂಕ್ ವಿರೂಪಗೊಳಿಸಿದ ನೋಟುಗಳನ್ನು ವಿನಿಮಯ ಮಾಡಲು ನಿರಾಕರಿಸುವಂತಿಲ್ಲ ಎಂಬುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿ. ಅಂತಹ ನೋಟುಗಳನ್ನು ಯಾವುದೇ ಹತ್ತಿರದ ಶಾಖೆಯಿಂದ ವಿನಿಮಯ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಆ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವುದು ಅನಿವಾರ್ಯ ಏನಲ್ಲ. ಇನ್ನೊಂದು ಆಯ್ಕೆ ಅಂದರೆ ಹರಿದ ನೋಟನ್ನು ನಿಮ್ಮ ಅಥವಾ ಇನ್ನೊಬ್ಬರ ಖಾತೆಗೆ ಜಮಾ ಮಾಡಬಹುದು. ಆರ್‌ಬಿಐ ನಿರ್ದೇಶನದ ಪ್ರಕಾರ ಯಾವುದೇ ಬ್ಯಾಂಕ್ ಅದನ್ನು ನಿರಾಕರಿಸುವಂತಿಲ್ಲ. ಇನ್ನು ಯಾವ ನೋಟಿನ ಸಂಖ್ಯೆಯು ಗೊತ್ತಾಗುವುದಿಲ್ಲವೋ ಅದನ್ನು ಮಾತ್ರ ಬ್ಯಾಂಕ್ ತೆಗೆದುಕೊಳ್ಳುವುದಿಲ್ಲ. ಛಿದ್ರವಾದ, ಸುಟ್ಟ ಅಥವಾ ಕತ್ತರಿಸಿರುವ, ನೋಟಿನ ಸಂಖ್ಯೆ ಕಣ್ಮರೆಯಾಗಿದ್ದಲ್ಲಿ ಅಂಥ ನೋಟುಗಳನ್ನು ಮಾತ್ರ ಬ್ಯಾಂಕ್ ಅದನ್ನು ತೆಗೆದುಕೊಳ್ಳಲು ನಿರಾಕರಿಸಬಹುದು.
ದೂರು ನೀಡುವುದು ಹೇಗೆ? ಕೆಲವೊಮ್ಮೆ ಎಟಿಎಂನಿಂದ ಹಣ ಹೊರಬರುವುದಿಲ್ಲ, ಆದರೆ ಹಣವನ್ನು ಖಾತೆಯಿಂದ ಡೆಬಿಟ್ (ಕಡಿತ) ಮಾಡಲಾಗುತ್ತದೆ. ಹಣವನ್ನು ಕಡಿತಗೊಳಿಸಿದ ಸಂದೇಶವೂ ಫೋನ್‌ನಲ್ಲಿ ಬರುತ್ತದೆ. ಆದರೆ ಹಣವು ಎಟಿಎಂನಿಂದ ಹೊರಬರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ತಕ್ಷಣವೇ ಬ್ಯಾಂಕ್ಗೆ ದೂರು ನೀಡಬೇಕು. ಇದಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ಮಾರ್ಗವನ್ನು ಸೂಚಿಸಿದೆ. ಎಸ್‌ಬಿಐನಿಂದ crcf.sbi.co.in/ccf ಎಂಬ ಇಮೇಲ್ ವಿಳಾಸವನ್ನು ನೀಡಿದೆ. ಇದರ ಮೂಲಕವಾಗಿ ಗ್ರಾಹಕರು ಎಟಿಎಂ ಮತ್ತು ಹಣ ಹಿಂಪಡೆಯುವುದಕ್ಕೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಬಹುದು.
ದೂರು ಪಡೆಯಲು ಎಸ್‌ಬಿಐ ಟೋಲ್-ಫ್ರೀ ಸಂಖ್ಯೆಗಳನ್ನು ನೀಡಿದೆ. ಅದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ. ನಿಮಗೆ ಅಗತ್ಯಬಿದ್ದಾಗ ಅದಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು. ಟೋಲ್ ಫ್ರೀ ಸಂಖ್ಯೆ 080-26599990 ಅನ್ನು ಸ್ಟೇಟ್ ಬ್ಯಾಂಕ್ ನೀಡಿದೆ. ಇದು ಎಸ್‌ಬಿಐ ಎಟಿಎಂ ಕಾರ್ಡ್ ಸಹಾಯವಾಣಿ ಸಂಖ್ಯೆ. ಗ್ರಾಹಕರು ಬಯಸಿದಲ್ಲಿ contactcentre@sbi.co.inಗೆ ಮೇಲ್ ಮಾಡಬಹುದು.
ಇದನ್ನೂ ಓದಿ: SBI ATM: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 873 ಎಟಿಎಂಗಳಿಗೆ ಬಾಗಿಲು
(State Bank Of India explainer about how to exchange mutilated or soiled currency notes with banks)