
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು (ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ ಅಥವಾ MCLR) 10 ಮೂಲಾಂಶದಷ್ಟು ಹೆಚ್ಚಳ ಮಾಡಿದೆ. ಎಲ್ಲ ಅವಧಿಯ ಸಾಲಗಳಿಗೆ ಇದು ಅನ್ವಯವಾಗಲಿದೆ. ಪರಿಣಾಮವಾಗಿ ಸಾಲಗಳ ಮೇಲಿನ ಇಎಂಐ ಮೊತ್ತ ಹೆಚ್ಚಾಗಲಿದೆ. ಆರ್ಬಿಐ ರೆಪೊ ದರ ಹೆಚ್ಚಳ ಮಾಡಿದ ಕೆಲವೇ ದಿನಗಳಲ್ಲಿ ಎಸ್ಬಿಐ ಈ ಕ್ರಮ ಕೈಗೊಂಡಿದೆ. ವಾಹನ, ಗೃಹ ಸಾಲ ತೆಗೆದುಕೊಂಡವರಿಗೆ ಹೊರೆ ಇನ್ನಷ್ಟು ಹೆಚ್ಚಾಗಲಿದೆ. ಪರಿಷ್ಕೃತ ಬಡ್ಡಿ ದರ ಇಂದಿನಿಂದಲೇ (15 February) ಅನ್ವಯವಾಗಲಿದೆ.
ಒಂದು ದಿನದ ಎಂಸಿಎಲ್ಆರ್ ದರವನ್ನು 10 ಮೂಲಾಂಶ ಹೆಚ್ಚಿಸಿ ಶೇ 7.85ರಿಂದ ಶೇ 7.95ಕ್ಕೆ ನಿಗದಿಪಡಿಸಲಾಗಿದೆ. ಒಂದು ತಿಂಗಳ ಎಂಸಿಎಲ್ಆರ್ ದರವನ್ನು 10 ಮೂಲಾಂಶ ಹೆಚ್ಚಿಸಿ ಶೇ 8ರಿಂದ ಶೇ 8.10ಕ್ಕೆ ನಿಗದಿಪಡಿಸಲಾಗಿದೆ. ಮೂರು ತಿಂಗಳ ಎಂಸಿಎಲ್ಆರ್ ದರವನ್ನು ಶೇ 8ರಿಂದ ಶೇ 8.10ಕ್ಕೆ ಹೆಚ್ಚಿಸಲಾಗಿದೆ. ಆರು ತಿಂಗಳ ಎಂಸಿಎಲ್ಆರ್ ದರವನ್ನು ಶೇ 8.30ರಿಂದ ಶೇ 8.40ಕ್ಕೆ ಹೆಚ್ಚಿಸಲಾಗಿದೆ. ಒಂದು ವರ್ಷದ ಅವಧಿಯ ಬಡ್ಡಿ ದರವನ್ನು ಶೇ 8.40ಯಿಂದ ಶೇ 8.50ಕ್ಕೆ ಹೆಚ್ಚಿಸಲಾಗಿದೆ. ಎರಡು ವರ್ಷಗಳ ಅವಧಿಯ ಎಂಸಿಎಲ್ಆರ್ ಅನ್ನು ಶೇ 8.50ರಿಂದ ಶೇ 8.60ಕ್ಕೆ, ಮೂರು ವರ್ಷದ ಎಂಸಿಎಲ್ಆರ್ ಅನ್ನು ಶೇ 8.60ರಿಂದ ಶೇ 8.70ಕ್ಕೆ ಹೆಚ್ಚಿಸಲಾಗಿದೆ.
ಬ್ಯಾಂಕೊಂದು ಗ್ರಾಹಕರಿಗೆ ನೀಡುವ ಸಾಲಕ್ಕೆ ನಿಗದಿಪಡಿಸುವ ಕನಿಷ್ಠ ಬಡ್ಡಿ ದರವನ್ನು ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ ಅಥವಾ ಎಂಸಿಎಲ್ಆರ್ ಎಂದು ಕರೆಯಲಾಗುತ್ತದೆ. ಬ್ಯಾಂಕ್ಗಳಲ್ಲಿ ವಿವಿಧ ಸಾಲಗಳಿಗೆ ವಿವಿಧ ಪ್ರಮಾಣದ ಬಡ್ಡಿ ದರ ನಿಗದಿಯಾಗಿರುತ್ತದೆ. ಅದೇ ರೀತಿ ಕನಿಷ್ಠ ಬಡ್ಡಿ ದರವೊಂದೂ ನಿಗದಿಯಾಗಿರುತ್ತದೆ. ಕ್ರೆಡಿಟ್ ಸ್ಕೋರ್ ಹಾಗೂ ಇತರ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಬ್ಯಾಂಕ್ಗಳು ಕಡಿಮೆ ಬಡ್ಡಿ ದರದ ಆಫರ್ಗಳನ್ನು ಗ್ರಾಹಕರಿಗೆ ನೀಡುತ್ತವೆ. ಆದರೆ, ಈ ಕನಿಷ್ಠ ಬಡ್ಡಿ ದರಕ್ಕಿಂತ ಕಡಿಮೆ ಬಡ್ಡಿಯ ಆಫರ್ ನೀಡಲಾಗುವುದಿಲ್ಲ. ಹೀಗಾಗಿ ಎಂಸಿಎಲ್ಆರ್ ಅನ್ನು ಸರಳವಾಗಿ ಕನಿಷ್ಠ ಬಡ್ಡಿ ದರ ಎನ್ನಬಹುದು.
ಸಾಲ ಪಡೆದವರು, ಇಎಂಐ ಪಾವತಿಸುವವರಿಗೆ ಎಂಸಿಎಲ್ಆರ್ ಹೆಚ್ಚಳದಿಂದ ಪರಿಣಾಮವಾಗಲಿದೆ. ಮುಂದಿನ ಅವಧಿಯಿಂದ ಹೆಚ್ಚು ಮೊತ್ತದ ಇಎಂಐ ಪಾವತಿಸಬೇಕಾಗಲಿದೆ. ಆರ್ಬಿಐ ರೆಪೊ ದರ ಹೆಚ್ಚಿಸಿರುವುದರಿಂದ ಬ್ಯಾಂಕ್ ಆಫ್ ಬರೋಡ, ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿವೆ. ಇದರಿಂದ ಈ ಎಲ್ಲ ಬ್ಯಾಂಕ್ಗಳ ಗ್ರಾಹಕರಿಗೆ ಇಎಂಐ ದುಬಾರಿಯಾಗಲಿದೆ.