ನವದೆಹಲಿ, ಆಗಸ್ಟ್ 7: ಭಾರತದ ಅಗ್ರಗಣ್ಯ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎನಿಸಿದ ಎಸ್ಬಿಐ ತನ್ನ ನಿರುಪಯುಕ್ತ ಸಾಲಗಳನ್ನು (Bad Loan Accounts) ತ್ಯಜಿಸಲು ಹೊರಟಿದೆ. ವಸೂಲಾತಿ ಆಗದೇ ಉಳಿದಿರುವ ಸಾಲಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರಲು ನಿರ್ಧರಿಸಿದೆ. ದಿ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ 96,000 ಕೋಟಿ ರೂಗೂ ಹೆಚ್ಚು ಮೌಲ್ಯದ ಕೆಟ್ಟ ಸಾಲಗಳನ್ನು ಎಆರ್ಸಿ ಕಂಪನಿಗಳಿಗೆ ಎಸ್ಬಿಐ ಮಾರಲಿರುವುದು ತಿಳಿದುಬಂದಿದೆ. ಈ ಕೆಟ್ಟಸಾಲಗಳು ಅನಿಲ್ ಅಂಬಾನಿ ಬೆಂಬಲಿತ ಕಂಪನಿಗಳು, ವಿಡಿಯೋಕಾನ್, ಜೇಪೀ ಮೊದಲಾದ ಸಂಸ್ಥೆಗಳಿಗೆ ಸೇರಿದ್ದಾಗಿದೆ. ಇವುಗಳ ಸಾಲದ ವಿವರವನ್ನು ಆಸ್ತಿ ಮರುರಚನೆ ಸಂಸ್ಥೆಗಳಿಗೆ (ARC- Asset Reconstruction Company) ಎಸ್ಬಿಐ ರವಾನಿಸಿದೆ. ಇದನ್ನು ಖರೀದಿಸಲು ಆಸಕ್ತಿ ಇದ್ದರೆ ವ್ಯಕ್ತಪಡಿಸಲು ಆಹ್ವಾನಿಸಲಾಗಿದೆ.
ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಎಸ್ಬಿಐ ಮಾರಲಿರುವ 331 ಲೋನ್ ಅಕೌಂಟ್ಗಳಲ್ಲಿ 96,278 ಕೋಟಿ ರೂ ಸಾಲ ಬಾಕಿ ಉಳಿದಿರುವುದು ತಿಳಿದುಬಂದಿದೆ. ಈ ಬಗ್ಗೆ ಎಸ್ಬಿಐನಿಂದ ಅಧಿಕೃತ ಮಾಹಿತಿ ಹೊರಬಂದಿಲ್ಲ.
ಇದನ್ನೂ ಓದಿ: Forex: ಭಾರತದ ವಿದೇಶ ವಿನಿಮಯ ಮೀಸಲು ನಿಧಿ ಎಷ್ಟು ಉಪಯುಕ್ತ? ಭವಿಷ್ಯದ ದಿನಗಳು ಹೇಗಿವೆ?
ಬ್ಯಾಂಕ್ನಿಂದ ಪಡೆದ ಸಾಲ ವಸೂಲಾತಿ ಆಗದೇ ಉಳಿದಿದ್ದರೆ ಅದು ಎನ್ಪಿಎ ಅಥವಾ ನಿರುಪಯುಕ್ತ ಸಾಲ ಎಂದು ವರ್ಗೀಕೃತವಾಗುತ್ತದೆ. ಈ ಸಾಲಗಳನ್ನು ಬ್ಯಾಂಕ್ನ ಆದಾಯ ಭಾಗದಿಂದ ತೆಗೆದುಹಾಕಿ ಪ್ರತ್ಯೇಕವಾಗಿಡಲಾಗುತ್ತದೆ.
ಬಳಿಕ ಈ ಸಾಲವನ್ನು ಬೇರೆ ಬೇರೆ ಮಾರ್ಗಗಳಿಂದ ವಸೂಲಿ ಮಾಡಲು ಬ್ಯಾಂಕ್ ಪ್ರಯತ್ನಿಸಬಹುದು. ಇದು ಸಾಧ್ಯ ಇಲ್ಲ ಎನಿಸಿದಾಗ ಎಆರ್ಸಿ ಕಂಪನಿಗಳಿಗೆ ಈ ಸಾಲಗಳನ್ನು ಮಾರಿ ಕೈತೊಳೆದುಕೊಳ್ಳಬಹುದು.
ಇದನ್ನೂ ಓದಿ: ವೆಹಿಕಲ್ ಇನ್ಷೂರೆನ್ಸ್; ಬಹಳ ಸುಲಭವಾದ ಕ್ಯಾಷ್ಲೆಸ್ ಕ್ಲೈಮ್ ಸೆಟಲ್ಮೆಂಟ್ ಸೌಲಭ್ಯ ಬಳಸಿ
ಎಆರ್ಸಿ ಅಥವಾ ಅಸೆಟ್ ರೀಕನ್ಸ್ಟ್ರಕ್ಷನ್ ಕಂಪನಿಗಳು ಬ್ಯಾಂಕ್ನ ಕೆಟ್ಟ ಸಾಲವನ್ನು ಪಡೆಲು ಕೆಲವಾರು ಕಾರಣಗಳಿವೆ. ರಿಸ್ಕ್ ಇದ್ದರೂ ಈ ಸಾಲವನ್ನು ಬಹಳ ಕಡಿಮೆ ಬೆಲೆಗೆ ಖರೀದಿಸಬಹುದು. ತನ್ನ ಸ್ವಂತ ಸಾಮರ್ಥ್ಯದ ಮೇಲೆ ಈ ಸಾಲವನ್ನು ವಸೂಲಿ ಮಾಡಲು ಯಶಸ್ವಿಯಾದರೆ ಒಳ್ಳೆಯ ಲಾಭ ಸಿಗುತ್ತದೆ. ಭಾರತದಲ್ಲಿ ಆರ್ಬಿಐ ಮಾನ್ಯತೆ ಪಡೆದ 29 ಎಆರ್ಸಿ ಕಂಪನಿಗಳಿವೆ. ಈ ಪೈಕಿ ಬಹುತೇಕ ಎಆರ್ಸಿಗಳು ಮುಂಬೈ ಮತ್ತು ದೆಹಲಿಯಲ್ಲಿ ಇವೆ. ಬೆಂಗಳೂರಿನಲ್ಲಿ ಎಎನ್ಎ ಎಂಬ ಕಂಪನಿ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ