ಫೋನ್ ಪೇ, ಗೂಗಲ್ ಪೇಯನ್ನು ಬೈಪಾಸ್ ಮಾಡುವ ಹೊಸ ಯುಪಿಐ ಪ್ಲಗಿನ್; ಆನ್ಲೈನ್ ವರ್ತಕರಿಗೊಂದು ಹೊಸ ಸೌಲಭ್ಯ
UPI Plugin: ಸ್ವಿಗ್ಗಿ, ಮಿನ್ತ್ರಾ ಇತ್ಯಾದಿ ಆನ್ಲೈನ್ ವರ್ತಕರಿಗೆ ಗ್ರಾಹಕರಿಂದ ಸುಲಭವಾಗಿ ಪೇಮೆಂಟ್ ಆಗಲು ಅನುವಾಗುವಂತೆ ಎನ್ಪಿಸಿಐ ಹೊಸ ಯುಪಿಐ ಪ್ಲಗಿನ್ ಅಥವಾ ಎಸ್ಡಿಕೆ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ.
ನವದೆಹಲಿ, ಆಗಸ್ಟ್ 7: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ (NPCI) ಸಂಸ್ಥೆ ಯುಪಿಐನಲ್ಲಿ ಹೊಸ ಆವಿಷ್ಕಾರ ತಂದಿದೆ. ಇದು ಸ್ವಿಗ್ಗಿ, ಜೊಮಾಟೊ, ಮಿಂತ್ರಾ ಇತ್ಯಾದಿ ಇಕಾಮರ್ಸ್ ಕಂಪನಿಗಳಿಗೆ ಹೊಸ ಪೇಮೆಂಟ್ ಅವಕಾಶ ಮಾಡಿಕೊಡುತ್ತದೆ. ಈ ಕಂಪನಿಗಳು ಗ್ರಾಹಕರಿಂದ ಹಣ ಪಡೆಯಲು ಪೇಮೆಂಟ್ ಆ್ಯಪ್ಗಳಿಗೆ ಕಳುಹಿಸುವ ಬದಲು ತಮ್ಮಲ್ಲೇ ನೇರವಾಗಿ ಹಣಪಾವತಿಗೆ ಅವಕಾಶ ಕೊಡುತ್ತದೆ ಹೊಸ ಯುಪಿಐ ಆವಿಷ್ಕಾರ. ಇದು ಮರ್ಚೆಂಟ್ ಸಾಫ್ಟ್ವೇರ್ ಡೆವಲಪ್ಮೆಂಟ್ ಕಿಟ್ ಅಥವಾ ಯುಪಿಐ ಪ್ಲಗ್ಗಿನ್ ಆಗಿರುವ ಈ ಹೊಸ ಉತ್ಪನ್ನವು ಇಕಾಮರ್ಸ್ ಕಂಪನಿಗಳಿಗೆ ತಮ್ಮದೇ ಪ್ರತ್ಯೇಕ ವರ್ಚುವಲ್ ಪೇಮೆಂಟ್ ವಿಳಾಸ (Virtual Payment Address) ನೀಡುತ್ತದೆ. ಇದನ್ನು ಬಳಸಿ ತಮ್ಮದೇ ಪ್ಲಾಟ್ಫಾರ್ಮ್ನೊಳಗೆಯೇ ಗ್ರಾಹಕರಿಂದ ಪೇಮೆಂಟ್ ಪಡೆಯಲು ಸಾಧ್ಯವಾಗುತ್ತದೆ.
ಈಗಿರುವ ವ್ಯವಸ್ಥೆಯಲ್ಲಿ, ಸ್ವಿಗ್ಗಿ ಆ್ಯಪ್ಗೆ ಹೋಗುವ ಗ್ರಾಹಕ ಹಣಪಾವತಿಸಲು ಯುಪಿಐ ಪೇಮೆಂಟ್ ಎಂಬ ಆಯ್ಕೆ ಆರಿಸಿಕೊಂಡರೆ, ಅವರು ಗೂಗಲ್ ಪೇ, ಫೋನ್ ಪೇನಂತರ ಪೇಮೆಂಟ್ ಆ್ಯಪ್ಗೆ ಹೋಗಬೇಕಾಗುತ್ತದೆ. ಅಲ್ಲಿ ಹಣ ಪಾವತಿಸಿದ ಬಳಿಕ ವಾಪಸ್ ಸ್ವಿಗ್ಗಿ ಪ್ಲಾಟ್ಫಾರ್ಮ್ಗೆ ಮರಳುತ್ತಾರೆ. ಈ ಸಂದರ್ಭದಲ್ಲಿ ಕೆಲ ಬಾರಿ ಪೇಮೆಂಟ್ ವೈಫಲ್ಯದ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಎನ್ಪಿಸಿಐ ಈಗ ಹೊಸ ಯುಪಿಐ ಪ್ಲಗ್ಗಿನ್ ಅನ್ನು ಆವಿಷ್ಕರಿಸಿರುವುದು ತಿಳಿದುಬಂದಿದೆ. ಈ ಪ್ಲಗ್ಗಿನ್ ಅನ್ನು ಸ್ವಿಗ್ಗಿ ತನ್ನ ಪೇಮೆಂಟ್ ಆಪ್ಷನ್ ಆಗಿ ಬಳಸಬಹುದು. ಪೇಮೆಂಟ್ ಆ್ಯಪ್ಗೆ ರೀಡೈರೆಕ್ಟ್ ಆಗುವ ಬದಲು ಸ್ವಿಗ್ಗಿ ಪ್ಲಾಟ್ಫಾರ್ಮ್ನಲ್ಲಿಯೇ ಇರುವ ಯುಪಿಐ ಪ್ಲಗಿನ್ ಅಥವಾ ಎಸ್ಡಿಕೆ ಮೂಲಕ ಗ್ರಾಹಕನಿಂದ ಹಣ ಪಾವತಿ ಮಾಡಿಸಿಕೊಳ್ಳಬಹುದು.
ಇದನ್ನೂ ಓದಿ: ಫಿಕ್ಸೆಡ್ ಡೆಪಾಸಿಟ್ ಇದೆಯಾ? ಬಹಳ ಸುಲಭವಾಗಿ ಮತ್ತು ತೀರಾ ಕಡಿಮೆ ಬಡ್ಡಿಗೆ ಸಿಗುತ್ತೆ ಸಾಲ
ಪೇಮೆಂಟ್ ಗೇಟ್ವೇ ಮತ್ತು ಪ್ರೋಸಸಿಂಗ್ ಕಂಪನಿಗಳಾದ ರೇಜರ್ಪೇ, ಜಸ್ಪೇ, ಪೇಟಿಎಂ ಈಗಾಗಲೇ ತಮ್ಮ ವರ್ತಕರಿಗೆ ಇಂಥದ್ದೊಂದು ಯುಪಿಐ ಪ್ಲಗಿನ್ ಅಥವಾ ಎಸ್ಡಿಕೆ ಬಳಕೆಗೆ ಅವಕಾಶ ಕೊಟ್ಟಿದೆ.
ಫೋನ್ ಪೇ, ಗೂಗಲ್ ಪೇಗೆ ಕಷ್ಟ?
ಒಂದು ವೇಳೆ ಯುಪಿಐ ಪೇಮೆಂಟ್ಗೆ ಎನ್ಪಿಸಿಐ ರೂಪಿಸಿರುವ ಸಾಫ್ಟ್ವೇರ್ ಡೆವಲಪ್ಮೆಂಟ್ ಕಿಟ್ ಅನ್ನು ವರ್ತಕರು ಬಳಸತೊಡಗಿದರೆ ಹೆಚ್ಚು ಹಾನಿಯಾಗುವುದು ಫೋನ್ ಪೇ ಮತ್ತು ಗೂಗಲ್ ಪೇಗೆ. ಇವೆರಡು ಕೂಡ ಭಾರತದ ಅತಿದೊಡ್ಡ ಪೇಮೆಂಟ್ ಆ್ಯಪ್ಗಳಾಗಿವೆ. ಸ್ವಿಗ್ಗಿ, ಮಿನ್ತ್ರಾ ಇತ್ಯಾದಿ ದೊಡ್ಡ ವರ್ತಕರು ಕೈಬಿಟ್ಟುಹೋದರೆ ಇವುಗಳ ಮಾರುಕಟ್ಟೆ ಹಿಡಿತ ಕಡಿಮೆ ಆಗಬಹುದು.
ಫೋನ್ ಪೇ ಮುಖ್ಯಸ್ಥರ ಪ್ರತಿಕ್ರಿಯೆ
ಫೋನ್ ಪೇ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಸಿಟಿಒ ರಾಹುಲ್ ಚಾರಿ ಕಳೆದ ತಿಂಗಳು ಈ ಹೊಸ ಯುಪಿಐ ಆವಿಷ್ಕಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.
‘ಯುಪಿಐ ಪ್ಲಗಿನ್ ಮಾಡಲ್ನಿಂದ ಪೇಮೆಂಟ್ ಯಶಸ್ಸಿನ ಪ್ರಮಾಣ ಉತ್ತಮಗೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪೇಮೆಂಟ್ ವ್ಯವಸ್ಥೆಯ ಜವಾಬ್ದಾರಿಯು ಪೇಮೆಂಟ್ ಆ್ಯಪ್ ಬದಲು ಪ್ರಾಯೋಜಿತ ಬ್ಯಾಂಕ್ ಮತ್ತು ವರ್ತಕರ ಆ್ಯಪ್ಗೆ ವರ್ಗವಾಗುತ್ತದೆ ಅಷ್ಟೇ. ವರ್ತಕರಿಗೆ ಇದು ಹೆಚ್ಚು ಹೊರೆ ತರುತ್ತದೆ. ಇದರಿಂದ ಅವರು ತಮ್ಮ ಮುಖ್ಯ ವ್ಯವಹಾರದತ್ತ ಗಮನ ಕೊಡಲು ಆಗದೇಹೋಗಬಹುದು’ ಎಂದು ರಾಹುಲ್ ಚಾರಿ ತಮ್ಮ ಬ್ಲಾಗ್ವೊಂದರಲ್ಲಿ ಬರೆದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ