Forex: ಭಾರತದ ವಿದೇಶ ವಿನಿಮಯ ಮೀಸಲು ನಿಧಿ ಎಷ್ಟು ಉಪಯುಕ್ತ? ಭವಿಷ್ಯದ ದಿನಗಳು ಹೇಗಿವೆ?
Is Forex Reserves of India Sufficient? ಭಾರತದ ಫಾರೆಕ್ಸ್ ರಿಸರ್ವ್ಸ್ ನಿಧಿ 603 ಬಿಲಿಯನ್ ಡಾಲರ್ನಷ್ಟಿದೆ. ಇದು ಮುಂದಿನ ದಿನಗಳಲ್ಲಿ ಗಣನೀಯವಾಗಿ ವೃದ್ಧಿಸುವ ಸಾಧ್ಯತೆ ಇದೆ. ಹಾಗೆಯೇ, ಭಾರತದ ಕರೆಂಟ್ ಅಕೌಂಟ್ ಡೆಫಿಸಿಟ್ನ ಸಮಸ್ಯೆ ಕೂಡ ಕಡಿಮೆಯಾಗುವ ನಿರೀಕ್ಷೆ ಇದೆ.
ಭಾರತದ ಫಾರೆಕ್ಸ್ ರಿಸರ್ವ್ಸ್ ಅಥವಾ ವಿದೇಶ ವಿನಿಮಯ ಮೀಸಲು ನಿಧಿ (Forex Reserves) ಜುಲೈ 28ಕ್ಕೆ ಅಂತ್ಯಗೊಂಡ ವಾರದಲ್ಲಿ 3.2 ಬಿಲಿಯನ್ ಡಾಲರ್ ಕಡಿಮೆಗೊಂಡಿರುವುದು ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದಿದೆ. ಆದರೂ ಭಾರತದ ಫಾರೆಕ್ಸ್ ಮೀಸಲು ಸಂಪತ್ತು 600 ಬಿಲಿಯನ್ ಡಾಲರ್ ಮೇಲಿದೆ. ಜುಲೈ 14ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 600 ಬಿಲಿಯನ್ ಡಾಲರ್ ಮಟ್ಟ ಮುಟ್ಟಿತು. ಇದು 13 ತಿಂಗಳ ಬಳಿಕ ಈ ಮಟ್ಟ ಮುಟ್ಟಿದ್ದು ಅದೇ ಮೊದಲು. ಅದಾಗಿ ಸತತ ಎರಡು ತಿಂಗಳು ಫಾರೆಕ್ಸ್ ಮೀಸಲು ನಿಧಿ ಕಡಿಮೆಗೊಂಡರೂ ಈಗ 603.87 ಬಿಲಿಯನ್ ಡಾಲರ್ನಷ್ಟು ಫೋರೆಕ್ಸ್ ಸಂಪತ್ತು ಹೊಂದಿದೆ.
ಒಂದು ಅಂದಾಜು ಪ್ರಕಾರ 2024ರ ಮಾರ್ಚ್ನೊಳಗೆ ಭಾರತದ ಫಾರೆಕ್ಸ್ ರಿಸರ್ವ್ಸ್ ನಿಧಿ 650 ಬಿಲಿಯನ್ ಡಾಲರ್ ಮಟ್ಟ ಮುಟ್ಟುವ ಸಾಧ್ಯತೆ ಇದೆ. ಇದೆಲ್ಲವೂ ಸಣ್ಣ ಮೊತ್ತವಲ್ಲ. ಅತಿಹೆಚ್ಚು ಫಾರೆಕ್ಸ್ ಮೀಸಲು ನಿಧಿ ಹೊಂದಿದ ದೇಶಗಳಲ್ಲಿ ಭಾರತ ಈಗ ರಷ್ಯಾವನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಿದೆ. ಜಾಗತಿಕವಾಗಿ ಎಲ್ಲಾ ದೇಶಗಳು ಒಟ್ಟು ಹೊಂದಿರುವ ಫಾರೆಕ್ಸ್ ಮೀಸಲು ನಿಧಿ 14.1 ಟ್ರಿಲಿಯನ್ ಡಾಲರ್. ಇದು 2022ರ ಅಂಕಿ ಅಂಶ. ಈ ಮೊತ್ತದಲ್ಲಿ ಭಾರತದ ಪಾಲು ಶೇ. 4 ಇದೆ. ಮುಂದಿನ ಕೆಲ ವರ್ಷಗಳಲ್ಲಿ ಸ್ವಿಟ್ಜರ್ಲೆಂಡ್ನ ಫಾರೆಕ್ಸ್ ಮೀಸಲು ಸಂಪತ್ತನ್ನು ಭಾರತ ಹಿಂದಿಕ್ಕಿ 3ನೇ ಸ್ಥಾನಕ್ಕೆ ಏರುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: ಭಾರತದ ಜೊತೆ ಗಡಿತಂಟೆಗೆ ಬಂದು ಚೀನಾ ಅನುಭವಿಸಿದ ನಷ್ಟ ಎಷ್ಟು ಗೊತ್ತಾ? ಇಲ್ಲಿದೆ ಅದರ ಆಫ್ಟರ್ ಎಫೆಕ್ಟ್ಸ್
ಫಾರೆಕ್ಸ್ ಮೀಸಲು ನಿಧಿ ಯಾಕೆ ಮುಖ್ಯ?
ಫಾರೆಕ್ಸ್ ಮೀಸಲು ನಿಧಿ ಹಣಕಾಸು ಸ್ಥಿರತೆ ಸಾಧಿಸಲು ಬಹಳ ಮುಖ್ಯ. ಬಾಹ್ಯ ವ್ಯಾಪಾರ ಮತ್ತು ಬಂಡವಾಳ ಹರಿವನ್ನು ಅನುವು ಮಾಡಿಕೊಡಲು ಇದು ಸಾಕಷ್ಟು ಪ್ರಮಾಣದಲ್ಲಿ ಇರಬೇಕು. ಬ್ಯಾಲನ್ಸ್ ಆಫ್ ಪೇಮೆಂಟ್, ಅಥವಾ ಬಾಹ್ಯ ಸಾಲದ ಪಾವತಿಗೆ ಅನುವು ಮಾಡಿಕೊಡಲು ಇದು ಬೇಕು. ಹಾಗೆಯೇ, ಹೆಚ್ಚುವರಿ ಡಾಲರ್ಗಳನ್ನು ಖರೀದಿಸಿ ರುಪಾಯಿ ಮೌಲ್ಯ ಸ್ಥಿರತೆಗೆ ಸಹಾಯವಾಗಲು ಇದು ಬೇಕು.
ಮುಂದಿನ ದಿನಗಳು ಆಶಾದಾಯಕ?
ಭಾರತದ ಆರ್ಥಿಕತೆಯ ಪ್ರಮುಖ ಸಮಸ್ಯೆ ಎಂದರೆ ಅದರ ಕರೆಂಟ್ ಅಕೌಂಟ್ ಕೊರತೆ. ಇದು ಮೊದಲಿಂದಲೂ ಭಾರತವನ್ನು ಕಾಡುತ್ತಾ ಬಂದಿರುವ ಸಮಸ್ಯೆಯೂ ಹೌದು. ರಫ್ತಿಗಿಂತ ಆಮದು ಪ್ರಮಾಣ ಹೆಚ್ಚಾಗಿದ್ದರೆ ಅದು ಚಾಲ್ತಿ ಖಾತೆ ಕೊರತೆಯ ಸ್ಥಿತಿ ನಿರ್ಮಿಸುತ್ತದೆ. ಪೆಟ್ರೋಲ್, ಎಲೆಕ್ಟ್ರಾನಿಕ್ಸ್ ಇತ್ಯಾದಿ ವಸ್ತುಗಳನ್ನು ಭಾರತ ಆಮದು ಮಾಡಿಕೊಳ್ಳುವುದು ಅನಿವಾರ್ಯ. ಇವು ಹೆಚ್ಚಿನ ಪ್ರಮಾಣದಲ್ಲಿ ಆಮದಾಗುವುದರಿಂದ ಈ ಸಮಸ್ಯೆ.
ಇದನ್ನೂ ಓದಿ: Semiconductor: ಅಮೆರಿಕದ ಅಪ್ಲೈಡ್ ಮೆಟೀರಿಯಲ್ಸ್ನ ಗ್ಲೋಬಲ್ ಸಪ್ಲಯರ್ ಕಂಪನಿಗಳು ಭಾರತಕ್ಕೆ ಬರಲು ಸಜ್ಜು
ಈಗ ಭಾರತದಲ್ಲಿ ಹಸಿರು ಇಂಧನ ಅಥವಾ ಎಲೆಕ್ಟ್ರಿಕ್ ಹಾಗೂ ಇತರ ಪರ್ಯಾಯ ಇಂದನದ ಬೆಳವಣಿಗೆಗೆ ಮುಂದಾಗಿದ್ದು, ಪೆಟ್ರೋಲ್ ಆಮದನ್ನು ಕ್ರಮೇಣವಾಗಿ ಕಡಿಮೆ ಮಾಡುವ ಯೋಜನೆಯಲ್ಲಿದೆ.
ಚೀನಾ ಪ್ಲಸ್ ಒನ್ ಎಂಬ ಜಾಗತಿಕ ಸೂತ್ರಕ್ಕೆ ಭಾರತವನ್ನೂ ಒಳಗೊಳ್ಳಲಾಗಿದ್ದು, ಎಲೆಕ್ಟ್ರಾನಿಕ್ಸ್, ರಾಸಾಯನಿಕ ಕ್ಷೇತ್ರದಲ್ಲಿ ಭಾರತದಲ್ಲಿ ತಯಾರಿಕಾ ಘಟಕಗಳ ಸ್ಥಾಪನೆ ಹೆಚ್ಚೆಚ್ಚು ಆಗುತ್ತಿದೆ.
ಭಾರತದ ಸೇವಾ ಕ್ಷೇತ್ರದಿಂದ ರಫ್ತು ಹೆಚ್ಚೆಚ್ಚು ಆಗುತ್ತಿದೆ. ಇದರಿಂದ ಕರೆಂಟ್ ಅಕೌಂಟ್ ಡೆಫಿಸಿಟ್ ಕಡಿಮೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ