ಹೂಡಿಕೆ ಮಾಂತ್ರಿಕ ವಾರನ್ ಬಫೆಟ್ ನಿವೃತ್ತಿ ನಿರ್ಧಾರ; ಬರ್ಕ್ಶೈರ್ ಹಾಥವೇ ಚುಕ್ಕಾಣಿ ಗ್ರೆಗ್ ಆಬೆಲ್ ಕೈಸೇರುವ ಸಾಧ್ಯತೆ
Warren Buffett to retire from Berkshire administration: ವಿಶ್ವದ ಶ್ರೀಮಂತರಲ್ಲೊಬ್ಬರಾದ ವಾರನ್ ಬಫೆಟ್ ಅವರು ಬರ್ಕ್ಶೈರ್ ಹಾಥವೇ ಗ್ರೂಪ್ನ ಸಿಇಒ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ವರ್ಷಾಂತ್ಯದಲ್ಲಿ ಗ್ರೆಗ್ ಆಬೆಲ್ ಅವರು ಸಿಇಒ ಆಗುವ ಸಮಯ ಬಂದಿದೆ ಎಂದು ವಾರನ್ ಬಫೆಟ್ 62 ವರ್ಷದ ಆಬೆಲ್ ಹೆಸರನ್ನು ಸೂಚಿಸಿದ್ದಾರೆ.

ನವದೆಹಲಿ, ಮೇ 4: ವಿಶ್ವದ ಅತಿದೊಡ್ಡ ಹೂಡಿಕೆದಾರ ಎನಿಸಿರುವ ವಾರನ್ ಬಫೆಟ್ (Warren Buffett) ಅವರು ಬರ್ಕ್ಶೈರ್ ಹಾಥವೇ ಬ್ಯುನಿಸೆಸ್ ಗ್ರೂಪ್ನ (Berkshire Hathaway business group) ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಅವರು ತಮ್ಮ ಕಂಪನಿಯಿಂದ ನಿವೃತ್ತರಾಗಲಿದ್ದಾರೆ. ಈ ವಿಚಾರವನ್ನು ಅವರೇ ಘೋಷಿಸಿದ್ದಾರೆ. ವಿಶ್ವದ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ ಬರ್ಕ್ಶೈರ್ ಹಾಥವೇ ಗ್ರೂಪ್ಗೆ ಮುಂದಿನ ಮುಖ್ಯಸ್ಥರಾಗಲು ಗ್ರೆಗ್ ಆಬೆಲ್ (Greg Abel) ಅವರ ಹೆಸರನ್ನು ವಾರನ್ ಬಫೆಟ್ ಶಿಫಾರಸು ಮಾಡಿದ್ದಾರೆ.
‘ಬರ್ಕ್ಶೈರ್ ಹಾಥವೇ ಬ್ಯುಸಿನೆಸ್ ಗ್ರೂಪ್ಗೆ ಗ್ರೆಗ್ ಅವರು ಈ ವರ್ಷಾಂತ್ಯದಲ್ಲಿ ಸಿಇಒ ಆಗುವ ಸಮಯ ಬಂದಿದೆ. ನನ್ನ ಶಿಫಾರಸನ್ನು ನಿರ್ದೇಶಕ ಮಂಡಳಿ ಒಮ್ಮತದಿಂದ ಅಂಗೀಕರಿಸಬಹುದು ಎಂದು ಭಾವಿಸಿದ್ದೇನೆ’ ಎಂದು ಅಮೆರಿಕದ ಒಮಾಹದಲ್ಲಿ ನಡೆದ ವಾರ್ಷಿಕ ಷೇರುದಾರರ ಸಭೆಯಲ್ಲಿ ವಾರನ್ ಬಫೆಟ್ ತಿಳಿಸಿದ್ದಾರೆ.
ಇದನ್ನೂ ಓದಿ: ಆಮದು, ಬಂದರು, ಅಂಚೆ ನಿರ್ಬಂಧ… ಪಾಕಿಸ್ತಾನ ವಿರುದ್ಧ ಒಂದೇ ದಿನ ಭಾರತದಿಂದ 3 ಕ್ರಮ
ಬರ್ಕ್ಶೈರ್ ಹಾಥವೇ ಬ್ಯುಸಿನೆಸ್ ಗ್ರೂಪ್ನ ಸಿಇಒ ಸ್ಥಾನಕ್ಕೆ 62 ವರ್ಷದ ಗ್ರೆಗ್ ಆಬೆಲ್ ಅವರ ಹೆಸರನ್ನು ವಾರನ್ ಬಫೆಟ್ ಹಲವು ವರ್ಷಗಳ ಹಿಂದೆಯೇ ಸೂಚಿಸಿದ್ದರು.
ಒಂದು ವೇಳೆ ವರ್ಷಾಂತ್ಯದಲ್ಲಿ ವಾರನ್ ಬಫೆಟ್ ಅವರು ಸಿಇಒ ಸ್ಥಾನದಿಂದ ಕೆಳಗಿಳಿದರೂ ಕಂಪನಿಯಲ್ಲಿ ಸಲಹೆಗಾರರಾಗಿ ಸ್ವಲ್ಪ ಕಾಲ ಮುಂದುವರಿಯಬಹುದು.
ಇದನ್ನೂ ಓದಿ: ಕೇರಳದಲ್ಲಿ ವಿಳಿಂಜಂ ಬಂದರು ಅನಾವರಣ; ಇದು ಭಾರತದ ಮೊದಲ ಟ್ರಾನ್ಸ್ಶಿಪ್ಮೆಂಟ್ ಹಬ್
ಹೂಡಿಕೆ ಮಾಂತ್ರಿಕ ವಾರನ್ ಬಫೆಟ್
ವಾರನ್ ಬಫೆಟ್ ಅವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಬಹಳ ಹೆಸರುವಾಸಿಯಾದವರು. ಅರವತ್ತರ ದಶಕದಲ್ಲಿ ಅವರು ಬರ್ಕ್ಶೈರ್ ಹಾಥವೇ ಕಂಪನಿಯನ್ನು ಸ್ಥಾಪಿಸಿದ್ದರು. ಆಗ ಮೊದಲಿಗೆ ಅದು ಜವಳಿ ಕಂಪನಿಯಾಗಿತ್ತು. ಈಗ 200ಕ್ಕೂ ಹೆಚ್ಚು ಬೇರೆ ಬೇರೆ ಬ್ಯುಸಿನೆಸ್ಗಳುಳ್ಳ ಬೃಹತ್ ಗ್ರೂಪ್ ಆಗಿ ಬೆಳೆದಿದೆ. ಇದರ ಮೌಲ್ಯ ಬರೋಬ್ಬರಿ ಒಂದು ಟ್ರಿಲಿಯನ್ ಡಾಲರ್ ಇದೆ. ವಾರನ್ ಬಫೆಟ್ ವೈಯಕ್ತಿಕವಾಗಿ 168.2 ಬಿಲಿಯನ್ ಡಾಲರ್ ಮೌಲ್ಯದ ಶ್ರೀಮಂತಿಕೆ ಹೊಂದಿದ್ದಾರೆ. ವಿಶ್ವದ ಅಗ್ರಗಣ್ಯ ಶ್ರೀಮಂತರಲ್ಲಿ ಅವರೂ ಇದ್ದಾರೆ.
ವಾರನ್ ಬಫೆಟ್ ಅವರಿಗೆ ಮೂವರು ಮಕ್ಕಳಿದ್ದಾರೆ. ಆದರೂ ಕೂಡ ಹೊರಗಿನ ವ್ಯಕ್ತಿಯನ್ನು ತಮ್ಮ ಉದ್ಯಮ ಸಾಮ್ರಾಜ್ಯದ ಜವಾಬ್ದಾರಿಗೆ ವಾರಸುದಾರರಾಗಿ ಮಾಡಿರುವುದು ಗಮನಾರ್ಹ. ಅವರ ಎರಡನೇ ಮಗ ಹೋವೀ ಬಫೆಟ್ ಅವರು ಮೂರು ದಶಕದಿಂದಲೂ ಕಂಪನಿಯಲ್ಲಿ ಇದ್ದಾರೆ. ವಾರನ್ ಬಫೆಟ್ ನಿರ್ಗಮನದ ಬಳಿಕ ಅವರು ನಾನ್ ಎಕ್ಸಿಕ್ಯೂಟಿವ್ ಛೇರ್ಮನ್ ಆಗಲಿದ್ದಾರೆ. ಕಂಪನಿಯ ದೃಷ್ಟಿಕೋನ ಈಗ ಹೇಗಿದೆಯೋ ಅದೇ ರೀತಿ ಮುಂದುವರಿಸಿಕೊಂಡು ಹೋಗುವ ಹೊಣೆಗಾರಿಕೆಯನ್ನು ಅವರು ಹೊಂದಿರುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:47 pm, Sun, 4 May 25




