Vizhinjam Port: ಕೇರಳದಲ್ಲಿ ವಿಳಿಂಜಂ ಬಂದರು ಅನಾವರಣ; ಇದು ಭಾರತದ ಮೊದಲ ಟ್ರಾನ್ಸ್ಶಿಪ್ಮೆಂಟ್ ಹಬ್
Adani built Vizhinjam port unveiled in Thiruvananthapuram: ಅದಾನಿ ಪೋರ್ಟ್ಸ್ ಸಂಸ್ಥೆ ನಿರ್ಮಿಸಿದ ಮೊದಲ ಹಂತದ ವಿಳಿಂಜಮ್ ಬಂದರನ್ನು ಪ್ರಧಾನಿ ಮೋದಿ ಇಂದು ಶುಕ್ರವಾರ ಅಧಿಕೃತವಾಗಿ ಅನಾವರಣಗೊಳಿಸಿದ್ದಾರೆ. ಕೇರಳ ಸಿಎಂ ಪಿಣಾರಯಿ ವಿಜಯನ್, ಅದಾನಿ ಗ್ರೂಪ್ ಛೇರ್ಮನ್ ಗೌತಮ್ ಅದಾನಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎರಡನೇ ಹಂತದ ಯೋಜನೆಯ ಕಾಮಗಾರಿಗೂ ಮೋದಿ ಇಂದೇ ಚಾಲನೆ ನೀಡಿದ್ದಾರೆ. ವಿಳಿಂಜಮ್ ಪೋರ್ಟ್ ಭಾರತದ ಮೊದಲ ಜಾಗತಿಕ ಟ್ರಾನ್ಸ್ಶಿಪ್ಮೆಂಟ್ ಪೋರ್ಟ್ ಎನಿಸಿದೆ.

ತಿರುವನಂತಪುರಂ, ಮೇ 2: ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಅದಾನಿ ಗ್ರೂಪ್ ಸಂಸ್ಥೆ ಅಭಿವೃದ್ಧಿಪಡಿಸಿರುವ ವಿಳಿಂಜಮ್ ಬಂದರನ್ನು (Vizhinjam International Sea Port) ಪ್ರಧಾನಿ ನರೇಂದ್ರ ಮೋದಿ (Narendra Modi) ಅಧಿಕೃತವಾಗಿ ಅನಾವರಣಗೊಳಿಸಿದ್ದಾರೆ. ಈ ಐತಿಹಾಸಿಕ ಬಂದರಿನ ಮೊದಲ ಹಂತದ ಸೌಲಭ್ಯವನ್ನು ಪ್ರಧಾನಿಯವರು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಅದಾನಿ ಗ್ರೂಪ್ ಛೇರ್ಮನ್ ಗೌತಮ್ ಅದಾನಿ, ತಿರುನಂತಪುರಂ ಸಂಸದ ಶಶಿ ತರೂರ್ ಮೊದಲಾದವರು ಉಪಸ್ಥಿತರಿದ್ದರು. ಇದೀಗ ಎರಡನೇ ಹಂತದ ಬಂದರು ಯೋಜನೆಗೂ ಇವತ್ತೇ ಚಾಲನೆಯನ್ನು ನೀಡಿದ್ದಾರೆ ಪ್ರಧಾನಿ.
ಅದಾನಿ ಗ್ರೂಪ್ಗೆ ಸೇರಿದ ಅದಾನಿ ಪೋರ್ಟ್ಸ್ (ಎಪಿಎಸ್ಇಝಡ್) ಈ ಆಳ ನೀರಿನ ಬಂದರನ್ನು ಅಭಿವೃದ್ಧಿಪಡಿಸಿದೆ. ಸರ್ಕಾರ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ನಡೆದ ಈ ಯೋಜನೆಯ ವೆಚ್ಚ 8,867 ಕೋಟಿ ರೂ. ವಿಳಿಂಜಮ್ ಅಂತಾರಾಷ್ಟ್ರೀಯ ಬಂದರು ಭಾರತದ ಮೊದಲ ಟ್ರಾನ್ಸ್ಶಿಪ್ಮೆಂಟ್ ಪೋರ್ಟ್ ಆಗಿರುವುದು ವಿಶೇಷ. ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಹಡಗು ಸಾಗಣೆಯಲ್ಲಿ ಭಾರತಕ್ಕೆ ಒಂದು ಮಹತ್ವದ ಪಾತ್ರ ಸಿಕ್ಕಂತಾಗುತ್ತದೆ.
ಇದನ್ನೂ ಓದಿ: 11 ರಾಜ್ಯಗಳ 26 ಗ್ರಾಮೀಣ ಬ್ಯಾಂಕುಗಳ ವಿಲೀನ ಪೂರ್ಣ; ಕರ್ನಾಟಕದಲ್ಲಿ ಒಂದುಗೂಡಿದ ಬ್ಯಾಂಕುಗಳಿವು…
ಬಂದರು ಉದ್ಘಾಟನೆ ವೇಳೆ ಉಪಸ್ಥಿತರಿದ್ದ ಗೌತಮ್ ಅದಾನಿ ಅವರು ಈ ಯೋಜನೆ ಯಶಸ್ವಿಯಾಗಿ ನಡೆಯಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇರಳ ಮುಖ್ಯಮಂತ್ರಿ ಪಿಣಾರಯಿ ವಿಜಯನ್ ಅವರ ಬೆಂಬಲವನ್ನು ಸ್ಮರಿಸಿದ್ದಾರೆ.
Today, at Vizhinjam, history, destiny and possibility came together as a 30-year-old dream of Kerala became India’s gateway to the world.
We are proud to have built India’s first deep-sea automated port. A future global transshipment hub. This is a triumph of vision, resilience… pic.twitter.com/343mjcNcAB
— Gautam Adani (@gautam_adani) May 2, 2025
‘ಭಾರತದ ಮೊದಲ ಆಳ ಸಮುದ್ರದ ಆಟೊಮೇಟೆಡ್ ಪೋರ್ಟ್ ಅನ್ನು ನಿರ್ಮಿಸಿರುವುದು ನಮಗೆ ಹೆಮ್ಮೆಯ ಸಂಗತಿ. ಇದು ಭವಿಷ್ಯದ ಜಾಗತಿಕ ಟ್ರಾನ್ಸ್ಶಿಪ್ಮೆಂಟ್ ಹಬ್ ಆಗಿದೆ. ಕೇರಳದ 30 ವರ್ಷದ ಕನಸ್ಸು ನನಸಾದ ಐತಿಹಾಸಿಕ ಸಂದರ್ಭ ಇದು’ ಎಂದು ಗೌತಮ್ ಅದಾನಿ ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: 36 ತಿಂಗಳಲ್ಲಿ ಮೊದಲ ಬಾರಿಗೆ ಅಮೆರಿಕದ ಜಿಡಿಪಿ ಕುಸಿತ; ಇದು ಜಾಗತಿಕ ರಿಸಿಶನ್ನ ಮುನ್ಸೂಚನೆಯಾ?
ವಿಳಿಂಜಮ್ ಪೋರ್ಟ್ನ ಮೊದಲ ಹಂತದ ಯೋಜನೆಯಲ್ಲಿ ನಿರ್ಮಾಣವಾಗಿರುವ ಟರ್ಮಿನಲ್ 2024ರ ಜುಲೈನಲ್ಲೇ ಕಾರ್ಯಾಚರಣೆ ಆರಂಭ ಕಂಡಿತ್ತು. ಇಲ್ಲಿಯವರೆಗೆ 250 ಕಂಟೇನರ್ ಹಡಗುಗಳನ್ನು ಇದು ಆಕರ್ಷಿಸಿದೆ. 9,500 ಕೋಟಿ ರೂ ಹೆಚ್ಚುವರಿ ಹೂಡಿಕೆಯೂ ಹರಿದು ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದೇ ವೇಳೆ, ನರೇಂದ್ರ ಮೋದಿ ಅವರು ಎರಡನೇ ಹಂತದ ವಿಳಿಂಜಮ್ ಪೋರ್ಟ್ ಯೋಜನೆಗೆ ಇವತ್ತು ಚಾಲನೆ ಕೊಟ್ಟಿದ್ದಾರೆ.
ವಿಳಿಂಜಮ್ ಬಂದರಿನ ವಿಶೇಷತೆ ಏನು?
ಇದು ಭಾರತದ ಮೊದಲ ಟ್ರಾನ್ಸ್ಶಿಪ್ಮೆಂಟ್ ಪೋರ್ಟ್ ಎನಿಸಿದೆ. ಅಂದರೆ, ಒಂದು ದೇಶದ ಹಡಗು ಇಲ್ಲಿಗೆ ಬಂದು, ಅದರಲ್ಲಿನ ಸರಕುಗಳನ್ನು ಬೇರೊಂದು ಹಡಗಿಗೆ ವರ್ಗಾಯಿಸಲಾಗುತ್ತದೆ. ಇದೊಂದು ರೀತಿಯಲ್ಲಿ ಪ್ರಮುಖ ಹಡಗು ನಿಲ್ದಾಣವಾಗಿರುತ್ತದೆ.
ಉದಾಹರಣೆಗೆ, ಬೆಂಗಳೂರಿನ ವಿವಿಧ ಪ್ರದೇಶಗಳಿಂದ ಸಿಟಿ ಬಸ್ಗಳು ಮೆಜೆಸ್ಟಿಕ್ಗೆ ಹೋಗುತ್ತವೆ. ಅಲ್ಲಿಂದ ಜನರು ಬೇರೆ ಬೇರೆ ಕಡೆ ಹೋಗುವ ಬಸ್ಸುಗಳಿರುವ ಕೆಎಸ್ಸಾರ್ಟಿಸಿ ನಿಲ್ದಾಣಕ್ಕೆ ಅಥವಾ ರೈಲು ನಿಲ್ದಾಣಕ್ಕೆ ಹೋಗಿ ಅಲ್ಲಿಂದ ತಮಗೆ ಬೇಕಾದ ಊರು ತಲುಪಬಹುದು. ಅಂತೆಯೇ, ಹಡಗಿನಲ್ಲಿ ಸರಕುಗಳ ಸಾಗಾಟ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:07 pm, Fri, 2 May 25