ಜಿಎಸ್ಟಿ ಕಲೆಕ್ಷನ್ ಏಪ್ರಿಲ್ನಲ್ಲಿ 2.37 ಲಕ್ಷ ರೂ; ಹೊಸ ದಾಖಲೆ ಬರೆದ ತೆರಿಗೆ ಸಂಗ್ರಹ; ಕರ್ನಾಟಕ ಟಾಪ್-2
GST collections in 2025 April: 2025ರ ಏಪ್ರಿಲ್ ತಿಂಗಳಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿ ಒಟ್ಟು 2.37 ಲಕ್ಷ ಕೋಟಿ ರೂ ಜಿಎಸ್ಟಿ ಸಂಗ್ರಹವಾಗಿದೆ. ರೀಫಂಡ್ಗಳನ್ನು ಕಳೆದರೆ ಸರ್ಕಾರಕ್ಕೆ 2.09 ಲಕ್ಷ ಕೋಟಿ ರೂ ಜಿಎಸ್ಟಿ ಉಳಿದಿದೆ. ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಏಪ್ರಿಲ್ನಲ್ಲಿ ದಾಖಲೆಯ ಜಿಎಸ್ಟಿ ಸಿಕ್ಕಿದೆ. ಮಹಾರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ 41,000 ಕೋಟಿ ರೂಗೂ ಅಧಿಕ ಜಿಎಸ್ಟಿ ಸಿಕ್ಕಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ತಮಿಳುನಾಡನ್ನು ಹರ್ಯಾಣ ಹಿಂದಿಕ್ಕಿದೆ.

ನವದೆಹಲಿ, ಮೇ 02: ಸರಕು ಮತ್ತು ಸೇವಾ ತೆರಿಗೆ ಸಂಗ್ರಹ (GST collections) 2025ರ ಏಪ್ರಿಲ್ ತಿಂಗಳಲ್ಲಿ 2.37 ಲಕ್ಷ ಕೋಟಿ ರೂನಷ್ಟಾಗಿರುವುದು ತಿಳಿದುಬಂದಿದೆ. ಇಲ್ಲಿಯವರೆಗೆ ಯಾವುದೇ ತಿಂಗಳಲ್ಲಿ ಕಂಡ ಅತಿಹೆಚ್ಚು ತೆರಿಗೆ ಸಂಗ್ರಹ ಇದಾಗಿದೆ. ಆ ಮಟ್ಟಿಗೆ ಇದು ಹೊಸ ದಾಖಲೆ. ಹಿಂದಿನ ತಿಂಗಳಲ್ಲಿ (2025ರ ಮಾರ್ಚ್) 1.96 ಲಕ್ಷ ರೂ ಜಿಎಸ್ಟಿ ಸಂಗ್ರಹವಾಗಿತ್ತು. ಹಿಂದಿನ ವರ್ಷದ ಏಪ್ರಿಲ್ನಲ್ಲಿ (2024ರದ್ದು) 2.10 ಲಕ್ಷ ರೂ ಜಿಎಸ್ಟಿ ಸಿಕ್ಕಿತ್ತು. ಈ ಬಾರಿ ಎಲ್ಲಾ ದಾಖಲೆ ಧೂಳೀಪಟವಾಗಿದೆ. ರೀಫಂಡ್ ಕಳೆದು 2.09 ಲಕ್ಷ ಕೋಟಿ ರೂ ನಿವ್ವಳ ಜಿಎಸ್ಟಿ ಹರಿದುಬಂದಿದೆ.
ಕಳೆದ ಆರೇಳು ತಿಂಗಳಿಂದ ಜಿಎಸ್ಟಿ ಸಂಗ್ರಹ ಗಣನೀಯವಾಗಿ ಏರಿಕೆ ಆಗುತ್ತಾ ಬಂದಿದೆ. ಅಕ್ಟೋಬರ್ನಿಂದ ಮಾರ್ಚ್ವರೆಗಿನ ಆರು ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ಪ್ರತೀ ತಿಂಗಳೂ 1.73 ಲಕ್ಷ ಕೋಟಿ ರೂನಿಂದ 1.96 ಲಕ್ಷ ಕೋಟಿ ರೂವರೆಗೆ ಆಗಿರುವುದು ಅಂಕಿ ಅಂಶದಿಂದ ಗೊತ್ತಾಗುತ್ತದೆ. ಸಾಮಾನ್ಯವಾಗಿ ಹಣಕಾಸು ವರ್ಷದ ಕೊನೆಯ ತಿಂಗಳು ಹಾಗೂ ಆರಂಭಿಕ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ಹೆಚ್ಚಿರುತ್ತದೆ.
ಇದನ್ನೂ ಓದಿ: 11 ರಾಜ್ಯಗಳ 26 ಗ್ರಾಮೀಣ ಬ್ಯಾಂಕುಗಳ ವಿಲೀನ ಪೂರ್ಣ; ಕರ್ನಾಟಕದಲ್ಲಿ ಒಂದುಗೂಡಿದ ಬ್ಯಾಂಕುಗಳಿವು…
2025 ಏಪ್ರಿಲ್ನಲ್ಲಿ ಅತಿಹೆಚ್ಚು ಜಿಎಸ್ಟಿ ಸಂಗ್ರಹವಾದ ರಾಜ್ಯಗಳ ಪಟ್ಟಿ
ಒಟ್ಟು ಜಿಎಸ್ಟಿ ಸಂಗ್ರಹ: 2.37 ಲಕ್ಷ ಕೋಟಿ ರೂ
- ಮಹಾರಾಷ್ಟ್ರ: 41,645 ಕೋಟಿ ರೂ
- ಕರ್ನಾಟಕ: 17,815 ಕೋಟಿ ರೂ
- ಗುಜರಾತ್: 14,970 ಕೋಟಿ ರೂ
- ಹರ್ಯಾಣ: 14,057 ಕೋಟಿ ರೂ
- ತಮಿಳುನಾಡು: 13,831 ಕೋಟಿ ರೂ
- ಉತ್ತರಪ್ರದೇಶ: 13,600 ಕೋಟಿ ರೂ
- ದೆಹಲಿ: 8,260 ಕೋಟಿ ರೂ
- ಪಶ್ಚಿಮ ಬಂಗಾಳ: 8,188 ಕೋಟಿ ರೂ
- ತೆಲಂಗಾಣ: 6,983 ಕೋಟಿ ರೂ
- ರಾಜಸ್ಥಾನ್: 6,228 ಕೋಟಿ ರೂ
- ಒಡಿಶಾ: 6,174 ಕೋಟಿ ರೂ
- ಮಧ್ಯಪ್ರದೇಶ: 5,302 ಕೋಟಿ ರೂ
- ಆಂಧ್ರಪ್ರದೇಶ: 4,686 ಕೋಟಿ ರೂ
- ಜಾರ್ಖಂಡ್: 4,167 ಕೋಟಿ ರೂ
- ಛತ್ತೀಸ್ಗಡ: 4,135 ಕೋಟಿ ರೂ
- ಕೇರಳ: 3,436 ಕೋಟಿ ರೂ
- ಪಂಜಾಬ್: 3,104 ಕೋಟಿ ರೂ
ಏಪ್ರಿಲ್ ತಿಂಗಳಲ್ಲಿ ಒಟ್ಟು ಜಿಎಸ್ಟಿ ಸಂಗ್ರಹ 2.37 ಲಕ್ಷ ಕೋಟಿ ರೂ ಇದ್ದರೂ, ರೀಫಂಡ್ಗಳನ್ನು ಕಳೆದು ಉಳಿಯುವ ನಿವ್ವಳ ಜಿಎಸ್ಟಿ ಸಂಗ್ರಹ 2.09 ಲಕ್ಷ ಕೋಟಿ ರೂ.
ಇದನ್ನೂ ಓದಿ: ಒಂದು ರೂಗೆ ಚಿಕಿತ್ಸೆ, 11,000 ವೈದ್ಯರಿಗೆ ಕೆಲಸ; ಡಾ. ಪ್ರತಾಪ್ ರೆಡ್ಡಿ ಲಕ್ಷ ಕೋಟಿ ರೂ ಸಾಮ್ರಾಜ್ಯದ ಕಥೆ
ಮೇ ತಿಂಗಳಲ್ಲಿ ಕಡಿಮೆ ಜಿಎಸ್ಟಿ ಸಂಗ್ರಹ ಸಾಧ್ಯತೆ
ಏಪ್ರಿಲ್ನಲ್ಲಿ ದಾಖಲೆಯ ಜಿಎಸ್ಟಿ ಸಂಗ್ರಹ ಆಗಿರುವುದು ಭಾರತದ ಆರ್ಥಿಕತೆಯ ಆರೋಗ್ಯದ ಸಂಕೇತವಾಗಿದೆ ಎಂಬುದು ಇವೈ ಇಂಡಿಯಾದ ಟ್ಯಾಕ್ಸ್ ಪಾರ್ಟ್ನರ್ ಸೌರಭ್ ಅಗರ್ವಾಲ್ ಹೇಳುತ್ತಾರೆ. ಅವರ ಪ್ರಕಾರ, ಮುಂಬರುವ ದಿನಗಳಲ್ಲಿ ಜಾಗತಿಕ ಆರ್ಥಿಕ ಅನಿಶ್ಚಿತ ಪರಿಸ್ಥಿತಿ ಇರುವುದರಿಂದ ಮೇ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ತುಸು ತಗ್ಗಬಹುದು. ಒಟ್ಟಾರೆ ಭಾರತದ ಆರ್ಥಿಕತೆ ಆಶಾಭಾವನೆ ಮೂಡಿಸುತ್ತದೆ ಎನ್ನುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








