US Economy: 36 ತಿಂಗಳಲ್ಲಿ ಮೊದಲ ಬಾರಿಗೆ ಅಮೆರಿಕದ ಜಿಡಿಪಿ ಕುಸಿತ; ಇದು ಜಾಗತಿಕ ರಿಸಿಶನ್ನ ಮುನ್ಸೂಚನೆಯಾ?
US economy contracts by 0.3% in Q1 of 2025: ಅಮೆರಿಕದ ಆರ್ಥಿಕತೆ 2025ರ ಮೊದಲ ಕ್ವಾರ್ಟರ್ನಲ್ಲಿ ಕುಸಿತ ಕಂಡಿದೆ. ಜಿಡಿಪಿ ದರ ಮೈನಸ್ 0.3 ಪ್ರತಿಶತಕ್ಕೆ ಇಳಿದಿದೆ. ಟ್ಯಾರಿಫ್ ಭಯದಲ್ಲಿ ಆಮದು ಗಣನೀಯವಾಗಿ ಹೆಚ್ಚಾಗಿದ್ದು ಈ ಕುಸಿತಕ್ಕೆ ಒಂದು ಕಾರಣವೆನಿಸಿದೆ. ಹಾಗೆಯೇ, ಅಮೆರಿಕದಲ್ಲಿ ಗ್ರಾಹಕ ವೆಚ್ಚ ಕಡಿಮೆಗೊಂಡಿರುವುದೂ ಕುಸಿತಕ್ಕೆ ಮತ್ತೊಂದು ಕಾರಣ ಎನ್ನಲಾಗಿದೆ.

ವಾಷಿಂಗ್ಟನ್, ಮೇ 1: ಟ್ಯಾರಿಫ್ ಕಾರ್ಮೋಡಗಳ ಮಧ್ಯೆ ಅಮೆರಿಕದ ಆರ್ಥಿಕತೆ (US economy) ಅನಿರೀಕ್ಷಿತ ರೀತಿಯಲ್ಲಿ ಪತನ ಕಂಡಿದೆ. ಈ ವರ್ಷದ ಮೊದಲ ಕ್ವಾರ್ಟರ್ ಆದ ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ (2025 Q1) ಅಮೆರಿಕದ ಜಿಡಿಪಿ ಬಹಳ ಮಂದವಾಗಿಯಾದರೂ ಏರಿಕೆ ಆಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ನಿನ್ನೆ ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಆರ್ಥಿಕತೆ ಬೆಳೆಯುವುದರ ಬದಲು ಕುಂಠಿತಗೊಂಡಿದೆ. ಮೊದಲ ಕ್ವಾರ್ಟರ್ನಲ್ಲಿ ಶೇ. 0.3ರಷ್ಟು ಆರ್ಥಿಕತೆ ಕುಸಿದಿದೆ. ಅಂದರೆ, ಜಿಡಿಪಿ ಬೆಳವಣಿಗೆ ದರ ಮೈನಸ್ 0.3 ಪ್ರತಿಶತದಷ್ಟು ಇದೆ. 2022ರ ವರ್ಷದ ಮೊದಲ ಕ್ವಾರ್ಟರ್ನಲ್ಲೂ ಅಮೆರಿಕದ ಜಿಡಿಪಿ ದರ ಮೈನಸ್ಗೆ ಇಳಿದಿತ್ತು. ಅದಾದ ಬಳಿಕ ಈ ಸ್ಥಿತಿ ಬಂದಿದ್ದು ಇದೇ ಮೊದಲು.
ಅಮೆರಿಕದ ಜಿಡಿಪಿ ಕುಸಿದಿದ್ದು ಯಾಕೆ?
ಅಮೆರಿಕದ ಆರ್ಥಿಕತೆ ಮೊದಲ ಕ್ವಾರ್ಟರ್ನಲ್ಲಿ ಕುಸಿತ ಕಾಣಲು ಪ್ರಮುಖ ಕಾರಣ ಟ್ಯಾರಿಫ್. ಡೊನಾಲ್ಡ್ ಟ್ರಂಪ್ ಅವರು ಟ್ಯಾರಿಫ್ ಹೇರಿಕೆ ಮಾಡುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಅಲ್ಲಿನ ವ್ಯಾಪಾರಿಗಳು, ಉದ್ಯಮಗಳು ಒಮ್ಮೆಲೇ ಸಾಕಷ್ಟು ಆಮದು ಮಾಡಿಕೊಂಡಿದ್ದಾರೆ. ಹಿಂದಿನ ಕ್ವಾರ್ಟರ್ನಲ್ಲಿ ಆಮದು ಪ್ರಮಾಣ ಶೇ. 1.9ರಷ್ಟು ಕಡಿಮೆಗೊಂಡಿತ್ತು. ಆದರೆ, 2025ರ ಮೊದಲ ಕ್ವಾರ್ಟರ್ನಲ್ಲಿ ಆಮದು ಶೇ. 41.3ರಷ್ಟು ಏರಿಕೆ ಆಗಿದೆ.
ಇನ್ನೊಂದೆಡೆ, ರಫ್ತು ಏರಿಕೆ ಆಗಿದ್ದು ಶೇ. 1.8ರಷ್ಟು ಮಾತ್ರ. ಇದರಿಂದಾಗಿ, ಅಮೆರಿಕದ ಟ್ರೇಡ್ ಡೆಫಿಸಿಟ್ ಸಿಕ್ಕಾಪಟ್ಟೆ ಹಿಗ್ಗಿ ಹೋಗಿದೆ.
ಇದನ್ನೂ ಓದಿ: ಪಾಕಿಸ್ತಾನದ ಅತಿದೊಡ್ಡ ಬ್ಯುಸಿನೆಸ್ ಸಾಮ್ರಾಜ್ಯ ಅಲ್ಲಿಯ ಸೇನೆಯದ್ದು; ಯುದ್ಧ ಗೆಲ್ಲದಿದ್ದರೂ ವ್ಯಾಪಾರದಲ್ಲೇನೂ ಹಿಂದಿಲ್ಲ
ಗ್ರಾಹಕ ವೆಚ್ಚವೂ ಇಳಿಮುಖ
ಅಮೆರಿಕದ ಜಿಡಿಪಿ ದರ ಮೈನಸ್ಗೆ ಹೋಗಲು ಗ್ರಾಹಕ ವೆಚ್ಚ ಕಡಿಮೆಗೊಂಡಿದ್ದೂ ಮತ್ತೊಂದು ಕಾರಣ ಎಂದು ಹೇಳಲಾಗಿದೆ. ಅಮೆರಿಕದ ವಾಣಿಜ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 2024ರ ಡಿಸೆಂಬರ್ ಕ್ವಾರ್ಟರ್ನಲ್ಲಿ ಗ್ರಾಹಕ ವೆಚ್ಚ ಅಥವಾ ಕನ್ಸೂಮರ್ ಸ್ಪೆಂಡಿಂಗ್ ದರ ಶೇ. 4 ಇತ್ತು. ಇದು ಈಗ ಶೇ. 1.8 ಮಾತ್ರವೇ ಇರುವುದು. ಗ್ರಾಹಕ ವೆಚ್ಚವೇ ಅಮೆರಿಕದ ಆರ್ಥಿಕತೆಗೆ ಶೇ. 70ರಷ್ಟು ಬಲ ನೀಡುವುದು. ಇದು ಕಡಿಮೆಗೊಂಡಿರುವುದು ಜಿಡಿಪಿ ಕುಸಿತಕ್ಕೆ ಎಡೆ ಮಾಡಿಕೊಟ್ಟಿದೆ.
ಅಮೆರಿಕ ಆರ್ಥಿಕ ಹಿಂಜರಿತಕ್ಕೆ ಸಿಲುಕುತ್ತದಾ?
ಸತತ ಎರಡು ಕ್ವಾರ್ಟರ್ಗಳಲ್ಲಿ ಆರ್ಥಿಕ ಬೆಳವಣಿಗೆ ನೆಗಟಿವ್ ಆಗಿದ್ದಾಗ ಆ ಆರ್ಥಿಕತೆಯು ರಿಸಿಶನ್ ಅಥವಾ ಹಿಂಜರಿತಕ್ಕೆ ಸಿಲುಕಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಅಮೆರಿಕದಲ್ಲಿ ಹಿಂಜರಿತ ಸ್ಥಿತಿಗೆ ಬೇರೆ ಮಾಪನ ಬಳಸುತ್ತಾರೆ. ಅಲ್ಲಿ ಗ್ರಾಹಕ ವೆಚ್ಚ ಸಾಕಷ್ಟು ಕಡಿಮೆ ಆಗಿದ್ದರೆ ಅದು ಆರ್ಥಿಕ ಹಿಂಜರಿತ ಸಂಕೇತ ಎಂದು ಭಾವಿಸಲಾಗುತ್ತದೆ. ಹಾಗೆಯೇ, ಆರ್ಥಿಕ ಚಟುವಟಿಕೆ ವಿವಿಧ ಸೆಕ್ಟರ್ಗಳಲ್ಲಿ ಕೆಲ ತಿಂಗಳ ಕಾಲ ಇಳಿಮುಖವಾಗಿದ್ದರೆ ಆಗ ಅದು ಆರ್ಥಿಕ ಹಿಂಜರಿತ ಎನಿಸಬಹುದು.
ಇದನ್ನೂ ಓದಿ: ನೂರು ವರ್ಷದ ಹಿಂದೆ 1 ರುಪಾಯಿಗೆ 10 ಡಾಲರ್; ನಂತರ ಭಾರತ ಎಡವಿದ್ದೆಲ್ಲಿ, ಅಮೆರಿಕ ಗೆದ್ದಿದ್ದೆಲ್ಲಿ?
ಜೆಪಿ ಮಾರ್ಗನ್ ಎನ್ನುವ ಬ್ಯಾಂಕಿಂಗ್ ಸಂಸ್ಥೆಯು 2025ರ ಕೊನೆಯಲ್ಲಿ ಅಮೆರಿಕ ಆರ್ಥಿಕ ಹಿಂಜರಿತಕ್ಕೆ ಒಳಗಾಗುವ ಸಾಧ್ಯತೆ ಶೇ. 60ರಷ್ಟಿದೆ ಎಂದು ಅಂದಾಜು ಮಾಡಿದೆ. ಒಂದು ವೇಳೆ, ಅಮೆರಿಕವು ಆರ್ಥಿಕ ಹಿಂಜರಿತಕ್ಕೆ ಒಳಗಾಗದಲ್ಲಿ ಅದು ಜಾಗತಿಕ ಆರ್ಥಿಕ ಹಿಂಜರಿತದ ಸ್ಥಿತಿಗೆ ಎಡೆ ಮಾಡಿಕೊಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








