ಮೇ 1ರಿಂದ ಎಟಿಎಂ ಟ್ರಾನ್ಸಾಕ್ಷನ್ ಶುಲ್ಕಗಳ ಏರಿಕೆ; ಮಿತಿಮೀರಿದರೆ ತೆರಬೇಕಾದ ಬೆಲೆ ಎಷ್ಟು ಗೊತ್ತಾ?
New ATM transaction fees from May 1st: ಎಟಿಎಂಗಳಲ್ಲಿ ಕ್ಯಾಷ್ ಪಡೆಯುವುದು, ಬ್ಯಾಲನ್ಸ್ ಪರಿಶೀಲನೆ ಮಾಡುವುದು ಇತ್ಯಾದಿ ಟ್ರಾನ್ಸಾಕ್ಷನ್ಗೆ ಒಂದು ಮಿತಿ ಇರುತ್ತದೆ. ಒಂದು ತಿಂಗಳಲ್ಲಿ ಸ್ವಂತ ಬ್ಯಾಂಕ್ನ ಎಟಿಎಂಗಳಲ್ಲಿ 5 ಟ್ರಾನ್ಸಾಕ್ಷನ್ ಮಾಡಬಹುದು. ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ 3 ಟ್ರಾನ್ಸಾಕ್ಷನ್ ಮಾಡಬಹುದು. ಈ ಮಿತಿ ಮೀರಿದರೆ ಟ್ರಾನ್ಸಾಕ್ಷನ್ ಶುಲ್ಕ ತೆರಬೇಕಾಗುತ್ತದೆ. ಕ್ಯಾಷ್ ವಿತ್ಡ್ರಾಯಲ್ಗೆ ಟ್ರಾನ್ಸಾಕ್ಷನ್ ಫೀ ಅನ್ನು 23 ರೂಗೆ ಏರಿಸಲಾಗಿದೆ.

ನೀವು ಹೆಚ್ಚೆಚ್ಚು ಬಾರಿ ಎಟಿಎಂ ಬಳಕೆ ಮಾಡುತ್ತಿರುವಿರಾದರೆ ಈ ಸುದ್ದಿಯನ್ನು ತಪ್ಪದೇ ಓದಬೇಕು. ಎಟಿಎಂ ಟ್ರಾನ್ಸಾಕ್ಷನ್ ಶುಲ್ಕಗಳು (ATM transaction fees) ಪರಿಷ್ಕರಣೆಗೊಂಡಿದ್ದು, ಹೊಸ ದರಗಳು ಮೇ 1ರಿಂದ ಚಾಲನೆಗೆ ಬರಲಿವೆ. ನಿಗದಿತ ಸಂಖ್ಯೆಗಿಂತ ಹೆಚ್ಚು ಬಾರಿ ನೀವು ಎಟಿಎಂ ಬಳಸಿದರೆ ನಿರ್ದಿಷ್ಟ ಶುಲ್ಕ ಪಾವತಿಸಬೇಕು. ಮೇ 1ರಿಂದ ಈ ಶುಲ್ಕ 2 ರೂನಷ್ಟು ಹೆಚ್ಚಳವಾಗಲಿದೆ. ಕ್ಯಾಷ್ ವಹಿವಾಟು ಮಿತಿ ಮೀರಿದರೆ ಪ್ರತೀ ವಹಿವಾಟಿಗೆ ಇದ್ದ ಶುಲ್ಕವನ್ನು 21 ರೂನಿಂದ 23 ರೂಗೆ ಹೆಚ್ಚಿಸಲಾಗಿದೆ. ಆರ್ಬಿಐ ಮಾರ್ಚ್ 28ರಂದು ಈ ಸಂಬಂಧ ಸುತ್ತೋಲೆ ಹೊರಡಿಸಿ, ಹೊಸ ಎಟಿಎಂ ವಹಿವಾಟು ಶುಲ್ಕಗಳು ಮೇ 1ರಿಂದ ಜಾರಿಗೆ ಬರುತ್ತದೆ ಎಂದು ತಿಳಿಸಿತ್ಉ.
ಎಟಿಎಂ ವಹಿವಾಟು ಮಿತಿ ಎಷ್ಟಿದೆ?
ಆರ್ಬಿಐ ಆಗಾಗ್ಗೆ ಎಟಿಎಂ ವಹಿವಾಟು ಶುಲ್ಕಗಳನ್ನು ಪರಿಷ್ಕರಿಸುತ್ತಿರುತ್ತದೆ. ಸದ್ಯದ ಪರಿಷ್ಕರಣೆ ಪ್ರಕಾರ ಮೆಟ್ರೋ ನಗರಗಳಲ್ಲಿ ಜನರು ತಮ್ಮ ಕಾರ್ಡ್ನ ಬ್ಯಾಂಕುಗಳ ಎಟಿಎಂಗಳಲ್ಲಿ ಯಾವುದೇ ಶುಲ್ಕ ಇಲ್ಲದೇ ಒಂದು ತಿಂಗಳಲ್ಲಿ ಐದು ಬಾರಿ ವಹಿವಾಟು ನಡೆಸಬಹುದು. ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ ಫ್ರೀ ಟ್ರಾನ್ಸಾಕ್ಷನ್ 3ಕ್ಕೆ ನಿಗದಿ ಮಾಡಲಾಗಿದೆ. ಈ ಸಂಖ್ಯೆ ಮೀರಿದರೆ ಆಗ ಶುಲ್ಕ ಜಾರಿಗೆ ಬರುತ್ತದೆ. ಇಲ್ಲಿ ವಹಿವಾಟು ಎಂದರೆ ಹಣ ವಿತ್ಡ್ರಾ ಆಗಿರಬಹುದು, ಬ್ಯಾಲನ್ಸ್ ಪರಿಶೀಲನೆ ಆಗಿರಬಹುದು, ಪಿನ್ ಬದಲಾವಣೆ ಇರಬಹುದು.
ಇನ್ನು, ಮೆಟ್ರೋ ಅಲ್ಲದ ನಗರಗಳಲ್ಲಾದರೆ ಸ್ವಂತ ಬ್ಯಾಂಕ್ ಎಟಿಎಂಗಳಲ್ಲಿ 5 ಮತ್ತು ಬೇರೆ ಬ್ಯಾಂಕ್ ಎಟಿಎಂಗಳಲ್ಲಿ 5 ವಹಿವಾಟುಗಳನ್ನು ಶುಲ್ಕ ರಹಿತವಾಗಿ ಮಾಡಬಹುದು.
ಇದನ್ನೂ ಓದಿ: ಇಂಡಸ್ಇಂಡ್ ಬ್ಯಾಂಕ್: ಸಿಇಒ ದಿಢೀರ್ ರಾಜೀನಾಮೆ; ಹೊಸ ತಂಡ ರಚನೆಗೆ ಆರ್ಬಿಐ ಅನುಮತಿ
ಎಟಿಎಂ ವಹಿವಾಟಿಗೆ ಶುಲ್ಕ ಯಾಕೆ?
ಎಟಿಎಂ ಸ್ಥಾಪಿಸಿ ಅದಕ್ಕೆ ಹಣ ತುಂಬಿ ಮೇಂಟೇನ್ ಮಾಡಲು ಬ್ಯಾಂಕುಗಳಿಗೆ ಒಂದಷ್ಟು ವೆಚ್ಚವಾಗುತ್ತದೆ. ಬ್ಯಾಂಕ್ ಕಚೇರಿಗಳಲ್ಲಿ ಜನದಟ್ಟನೆ ತಪ್ಪಿಸಲು ಮತ್ತು ಜನರಿಗೆ ಬ್ಯಾಂಕಿಂಗ್ ಕೆಲಸ ಸುಲಭಗೊಳಿಸಲು ಈ ಎಟಿಎಂಗಳು ಸಹಾಯಕವಾಗುತ್ತವೆ. ಇದನ್ನು ನಿರ್ವಹಿಸಲು ಆಗುವ ಖರ್ಚನ್ನು ಭರಿಸಲು ಬ್ಯಾಂಕುಗಳು ಇಂಟರ್ಚೇಂಜ್ ಫೀ ವಿಧಿಸುತ್ತವೆ.
ಅಂದರೆ, ಒಂದು ಬ್ಯಾಂಕ್ನ ಗ್ರಾಹಕ ಬೇರೊಂದು ಬ್ಯಾಂಕ್ನ ಎಟಿಎಂ ಬಳಸಿದಾಗ, ಆತನ ಬ್ಯಾಂಕು ಒಂದು ಕ್ಯಾಷ್ ವಹಿವಾಟಿಗೆ 17 ರೂ ಇಂಟರ್ಚೇಂಜ್ ಫೀ ನೀಡಬೇಕು. ಬ್ಯಾಲನ್ಸ್ ಪರಿಶೀಲನೆ ಇತ್ಯಾದಿ ಹಣಕಾಸೇತರ ವಹಿವಾಟಿಗೆ 6 ರೂ ಶುಲ್ಕ ತೆರಬೇಕು. ಗ್ರಾಹಕರ ಹಿತದೃಷ್ಟಿಯಿಂದ ಬ್ಯಾಂಕುಗಳು ತಿಂಗಳಿಗೆ ನಿರ್ದಿಷ್ಟ ಸಂಖ್ಯೆಯಲ್ಲಿ ಶುಲ್ಕ ರಹಿತ ವಹಿವಾಟಿಗೆ ಅನುಮತಿಸುತ್ತವೆ.
ಇದನ್ನೂ ಓದಿ: 2025ರ ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 13 ದಿನ, ಕರ್ನಾಟಕದಲ್ಲಿ 7 ದಿನ ರಜೆ; ಇಲ್ಲಿದೆ ಪಟ್ಟಿ
ಇಂಟರ್ಚೇಂಜ್ ಫೀ 17 ರೂ ಇದ್ದರೂ ಹೆಚ್ಚಿನ ಬ್ಯಾಂಕುಗಳು ಫ್ರೀಟ್ರಾನ್ಸಾಕ್ಷನ್ ಹೊರೆ ತಗ್ಗಿಸಲು 23 ರೂ ಶುಲ್ಕವನ್ನು ಗ್ರಾಹಕರಿಂದ ಪಡೆಯುತ್ತವೆ. ಅದು ಫ್ರೀ ಟ್ರಾನ್ಸಾಕ್ಷನ್ ಮಿತಿಯನ್ನು ಮೀರಿದಾಗ ಮಾತ್ರ. ಕೆಲ ಬ್ಯಾಂಕುಗಳು ನಾನ್ ಫೈನಾನ್ಷಿಯಲ್ ಟ್ರಾನ್ಸಾಕ್ಷನ್ಗಳಿಗೆ ಶುಲ್ಕ ಪಡೆಯುವುದಿಲ್ಲ. ಕೆಲ ಬ್ಯಾಂಕುಗಳು 11 ರೂ ಶುಲ್ಕ ಪಡೆಯುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








