ಎಟಿಎಂನಲ್ಲಿ ಬ್ಯಾಲನ್ಸ್ ಪರಿಶೀಲಿಸಿದರೂ ಶುಲ್ಕವೇ; ಮೇ 1ರಿಂದ ಇಂಟರ್ಚೇಂಜ್ ಫೀಸ್ ಹೆಚ್ಚಳ
New ATM interchange fee structure explained: ಎಟಿಎಂನಲ್ಲಿ ಕ್ಯಾಷ್ ವಿತ್ಡ್ರಾಯಲ್ಗೆ ಇಂಟರ್ಚೇಂಜ್ ಶುಲ್ಕ 17 ರೂನಿಂದ 19 ರೂಗೆ ಏರಿಕೆ ಆಗಲಿದೆ. ಬ್ಯಾಲನ್ಸ್ ಪರಿಶೀಲನೆಯಂತಹ ನಾನ್ ಫೈನಾನ್ಷಿಯಲ್ ಟ್ರಾನ್ಸಾಕ್ಷನ್ಗೆ ಇಂಟರ್ಚೇಂಜ್ ಫೀ 6ರಿಂದ 7 ರೂಗೆ ಹೆಚ್ಚಿಸಲಾಗುತ್ತಿದೆ. ಈ ಹೆಚ್ಚಳಕ್ಕೆ ಆರ್ಬಿಐ ಅನುಮೋದನೆ ನೀಡಿದ್ದು ಮೇ 1ರಿಂದ ಹೊಸ ದರಗಳು ಚಾಲನೆಗೆ ಬರಲಿವೆ.

ನವದೆಹಲಿ, ಮಾರ್ಚ್ 28: ನೀವು ಪದೇ ಪದೇ ಎಟಿಎಂ ಬಳಸುವವರಾಗಿದ್ದರೆ ಇನ್ಮುಂದೆ ಹುಷಾರಾಗಿರಿ. ಎಟಿಎಂ ಇಂಟರ್ಚೇಂಜ್ ದರಗಳು (ATM Interchange Fees) ಹೆಚ್ಚಾಗಲಿವೆ. ಶುಲ್ಕಗಳ ಹೆಚ್ಚಳಕ್ಕೆ ಆರ್ಬಿಐ ಅನುಮೋದನೆ ನೀಡಿದೆ. ಮೇ 1ರಿಂದ ಹೊಸ ಶುಲ್ಕಗಳು ಜಾರಿಗೆ ಬರಲಿವೆ. ಬೇರೆ ಬ್ಯಾಂಕ್ಗಳ ಎಟಿಎಂಗಳಲ್ಲಿ ನಿಗದಿ ಮಾಡಿದ ಮಿತಿಗಿಂತ ಹೆಚ್ಚು ಸಂಖ್ಯೆಯಲ್ಲಿ ವಹಿವಾಟು ಮಾಡಿದರೆ ಆಗ ಪ್ರತೀ ಹೆಚ್ಚುವರಿ ವಹಿವಾಟಿಗೂ ಶುಲ್ಕ ವಿಧಿಸಲಾಗುತ್ತದೆ. ಕ್ಯಾಷ್ ಹಿಂಪಡೆಯುವ ವಹಿವಾಟು ಶುಲ್ಕವನ್ನು ಎರಡು ರೂನಷ್ಟು ಹೆಚ್ಚಿಸಲಾಗಿದೆ. ಬ್ಯಾಲನ್ಸ್ ಪರಿಶೀನೆ, ಸ್ಟೇಟ್ಮೆಂಟ್ ಪಡೆಯುವುದು ಇತ್ಯಾದಿ ಹಣಕಾಸು ಅಲ್ಲದ ವಹಿವಾಟಿಗೆ ಶುಲ್ಕವನ್ನು ಒಂದು ರೂನಷ್ಟು ಏರಿಸಲಾಗಿದೆ.
ಎಟಿಎಂ ಶುಲ್ಕ 17 ರೂನಿಂದ 19 ರೂಗೆ ಏರಿಕೆ
ಎಲ್ಲಾ ಎಟಿಎಂಗಳಲ್ಲೂ ಯಾವುದೇ ಬ್ಯಾಂಕ್ನ ಎಟಿಎಂ ಬಳಸಲು ಅವಕಾಶ ಇರುತ್ತದೆ. ಹೀಗಾಗಿ, ಬಹಳ ಜನರು ಕಣ್ಣಿಗೆ ಸಿಕ್ಕ ಎಟಿಎಂಗೆ ಹೋಗಿ ಹಣ ವಿತ್ಡ್ರಾ ಮಾಡುವುದುಂಟು. ಆದರೆ, ಬೇರೆ ಬ್ಯಾಂಕ್ನ ಎಟಿಎಂಗೆ ಹೋಗಿ ಕಾರ್ಡ್ ಬಳಸಲು ನಿರ್ಬಂಧಗಳಿವೆ. ಒಂದು ತಿಂಗಳಲ್ಲಿ ಸಾಮಾನ್ಯವಾಗಿ 3ರಿಂದ 5 ಬಾರಿ ಮಾತ್ರ ನೀವು ಬೇರೆ ಬ್ಯಾಂಕ್ ಎಟಿಎಂನಲ್ಲಿ ವಹಿವಾಟು ನಡೆಸಬಹುದು. ಅದನ್ನು ಮೀರಿದರೆ, ಆಗ ಆ ಬ್ಯಾಂಕ್ನವರು ನಿಮ್ಮ ಬ್ಯಾಂಕ್ಗೆ ಇಂಟರ್ಚೇಂಜ್ ಫೀ ವಿಧಿಸುತ್ತವೆ. ಆರ್ಬಿಐ ಇದೇ ಇಂಟರ್ಚೇಂಜ್ ಫೀ ಅನ್ನು ಈಗ ಹೆಚ್ಚಿಸಿರುವುದು.
ವಹಿವಾಟು ಸಂಖ್ಯೆ ಮಿತಿ ಮೀರಿದ ಬಳಿಕ ಪ್ರತಿಯೊಂದು ಕ್ಯಾಷ್ ವಿತ್ಡ್ರಾಯಲ್ಗೂ ಇಂಟರ್ಚೇಂಜ್ ಶುಲ್ಕ 17 ರೂನಿಂದ 19 ರೂಗೆ ಹೆಚ್ಚಿಸಲಾಗಿದೆ. ನಾನ್ ಫೈನಾನ್ಷಿಯಲ್ ಟ್ರಾನ್ಸಾಕ್ಷನ್ಗೆ ಶುಲ್ಕವನ್ನು 6 ರೂನಿಂದ 7 ರೂಗೆ ಹೆಚ್ಚಿಸಲಾಗಿದೆ. ಮೇ 1ರಿಂದ ಈ ಹೊಸ ದರಗಳು ಜಾರಿಗೆ ಬರುತ್ತವೆ.
ಎಟಿಎಂ ಬಳಕೆ: ಗ್ರಾಹಕರಿಂದ ಹೆಚ್ಚಿನ ಶುಲ್ಕ ವಸೂಲಿ
ಮೇಲಿನ ಪ್ಯಾರಾದಲ್ಲಿ ತಿಳಿಸಲಾಗಿರುವುದು ಒಂದು ಬ್ಯಾಂಕು ಮತ್ತೊಂದು ಬ್ಯಾಂಕ್ಗೆ ವಿಧಿಸುವ ಇಂಟರ್ಚೇಂಜ್ ಶುಲ್ಕ. ಗ್ರಾಹಕರಿಗೆ ಬ್ಯಾಂಕು ಇನ್ನೂ ಹೆಚ್ಚಿನ ಶುಲ್ಕ ವಿಧಿಸುತ್ತದೆ. ಉದಾಹರಣೆಗೆ, ಸದ್ಯ ಎಟಿಎಂ ಹಣ ವಿತ್ಡ್ರಾಯಲ್ಗೆ ಇಂಟರ್ಚೇಂಜ್ ಶುಲ್ಕವು 17 ರೂ ಇದೆ. ಆದರೆ, ಬಹುತೇಕ ಎಲ್ಲಾ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ 20-21 ರೂ ಶುಲ್ಕ ವಿಧಿಸುತ್ತವೆ.
ನಿಮ್ಮ ಪ್ರತಿಯೊಂದು ಎಟಿಎಂ ವಹಿವಾಟಿನಿಂದಲೂ ಬ್ಯಾಂಕ್ಗೆ ಹೊರೆ
ನೀವು ಪ್ರತೀ ಬಾರಿ ಬೇರೆ ಬ್ಯಾಂಕ್ ಎಟಿಎಂ ಬಳಸಿದಾಗ ನಿಮ್ಮ ಬ್ಯಾಂಕ್ ಇಂಟರ್ಚೇಂಜ್ ಶುಲ್ಕ ಪಾವತಿಸುತ್ತದೆ. ಗ್ರಾಹಕರಿಗೆ 3 ಬಾರಿ ಉಚಿತ ವಹಿವಾಟು ಇರುತ್ತದಾದರೂ ಬ್ಯಾಂಕ್ ಶುಲ್ಕ ಪಾವತಿಸಲೇಬೇಕಾಗುತ್ತದೆ. ಹೀಗಾಗಿ, ಉಚಿತ ವಹಿವಾಟು ಮಿತಿ ಮೀರಿದ ಬಳಿಕ ಗ್ರಾಹಕರಿಗೆ ಹೆಚ್ಚಿನ ಇಂಟರ್ಚೇಂಜ್ ಶುಲ್ಕವನ್ನು ಬ್ಯಾಂಕುಗಳು ವಿಧಿಸುತ್ತವೆ.
ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳನ್ನು ಒಂದೇ ಕ್ಲೇಮ್ಗೆ ಬಳಸಬಹುದಾ? ಇಲ್ಲಿದೆ ಮಾಹಿತಿ
ಈಗ ಆರ್ಬಿಐ ಈ ಇಂಟರ್ಚೇಂಜ್ ಶುಲ್ಕ ಹೆಚ್ಚಿಸಿರುವುದರಿಂದ ಬ್ಯಾಂಕುಗಳೂ ಕೂಡ ಗ್ರಾಹಕರಿಗೆ ಶುಲ್ಕ ಏರಿಸುತ್ತವೆ. ಕ್ಯಾಷ್ ವಿತ್ಡಾಯಲ್ಗೆ 23 ರೂ ಆಗಬಹುದು. ಬ್ಯಾಲನ್ಸ್ ಚೆಕಿಂಗ್ ಇತ್ಯಾದಿ ಹಣಕಾಸೇತರ ಟ್ರಾನ್ಸಾಕ್ಷನ್ಗೆ 8 ರೂ ಆಗಬಹುದು.
ಬ್ಯಾಂಕುಗಳು ಯಾಕೆ ಇಂಟರ್ಚೇಂಜ್ ಫೀ ವಿಧಿಸುತ್ತವೆ?
ಎಟಿಎಂಗಳನ್ನು ಸ್ಥಾಪಿಸಿ ನಿರ್ವಹಣೆ ಮಾಡಲು ಸಾಕಷ್ಟು ವೆಚ್ಚವಾಗುತ್ತದೆ. ಅದನ್ನು ಸರಿದೂಗಿಸಲು ಬ್ಯಾಂಕುಗಳು ಇಂಟರ್ಚೇಂಜ್ ಫೀಸ್ ವಸೂಲಿ ಮಾಡುತ್ತವೆ. ಕೆಲ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ತಮ್ಮದೇ ಬ್ಯಾಂಕ್ ಎಟಿಎಂಗಳಲ್ಲಿ ಎಷ್ಟು ಬೇಕಾದರೂ ವಹಿವಾಟು ನಡೆಸಲು ಅವಕಾಶ ನೀಡುತ್ತವೆ. ಇನ್ನೂ ಕೆಲ ಬ್ಯಾಂಕುಗಳು ತಮ್ಮ ಗ್ರಾಹಕರಿಗೂ ಮಿತಿ ಹಾಕುತ್ತವೆ. ಇವೆಲ್ಲವೂ ಕೂಡ ಎಟಿಎಂ ನಿರ್ವಹಣೆ ವೆಚ್ಚವನ್ನು ಸರಿದೂಗಿಸಲು ಕೈಗೊಳ್ಳಲಾಗುವ ಕ್ರಮ.
ಇದನ್ನೂ ಓದಿ: ಸಣ್ಣ ಸಾಲಗಳಿಗೆ ಹೆಚ್ಚುವರಿ ಶುಲ್ಕ ಬೇಡ; ಪಿಎಸ್ಎಲ್ ಗುರಿ ಮುಟ್ಟಬೇಕು: ಬ್ಯಾಂಕುಗಳಿಗೆ ಆರ್ಬಿಐ ತಾಕೀತು
ಎಟಿಎಂ ಬಳಕೆ: ಗ್ರಾಹಕರು ಏನು ಮಾಡಬೇಕು?
ಈಗ ಹೆಚ್ಚಿನವರ ಕೈಯಲ್ಲಿ ಸ್ಮಾರ್ಟ್ಫೋನ್ಗಳಿಗೆ. ಮೊಬೈಲ್ನಲ್ಲೇ ಅಕೌಂಟ್ ಬ್ಯಾಲನ್ಸ್ ಪರಿಶೀಲಿಸಬಹುದು. ಹೆಚ್ಚಿನ ಟ್ರಾನ್ಸಾಕ್ಷನ್ಸ್ ಮಾಡಬಹುದು. ಕ್ಯಾಷ್ ಬೇಕೆಂದರೆ ಬ್ಯಾಂಕಿಗೆ ಹೋಗಬೇಕು ಇಲ್ಲ ಎಟಿಎಂಗೋ ಹೋಗಬೇಕು. ಒಂದು ತಿಂಗಳಲ್ಲಿ ಒಮ್ಮೆಯೋ ಅಥವಾ ಎರಡು ಬಾರಿಯೋ ಮಾತ್ರ ಕ್ಯಾಷ್ ವಿತ್ಡ್ರಾಯಲ್ ಮಾಡಲು ನೀವೇ ಮಿತಿ ಹಾಕಿಕೊಳ್ಳಿ. ಅದೂ ಕ್ಯಾಷ್ ಅನಿವಾರ್ಯವಾಗಿದ್ದರೆ ಮಾತ್ರ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ