ಸಣ್ಣ ಸಾಲಗಳಿಗೆ ಹೆಚ್ಚುವರಿ ಶುಲ್ಕ ಬೇಡ; ಪಿಎಸ್ಎಲ್ ಗುರಿ ಮುಟ್ಟಬೇಕು: ಬ್ಯಾಂಕುಗಳಿಗೆ ಆರ್ಬಿಐ ತಾಕೀತು
RBI instructions to banks: ಆದ್ಯತಾ ವಲಯಗಳಲ್ಲಿ ನೀಡಲಾಗುವ ಸಣ್ಣ ಸಾಲಗಳಿಗೆ ಬ್ಯಾಂಕುಗಳಿಗೆ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವಂತಿಲ್ಲ ಎಂದು ಆರ್ಬಿಐ ಹೇಳಿದೆ. ಹೆಚ್ಚುವರಿ ಶುಲ್ಕ ಎಂದರೆ ಬಡ್ಡಿ ಹಾಗೂ ಪ್ರೋಸಸಿಂಗ್ ಶುಲ್ಕ ಹೊರತುಪಡಿಸಿ ಪಡೆಯಲಾಗುವ ಇತರ ಶುಲ್ಕಗಳಾಗಿವೆ. ಸಣ್ಣ ಸಾಲಗಾರರಿಗೆ ರಕ್ಷಣೆಯಾಗಿ ರಿಸರ್ವ್ ಬ್ಯಾಂಕ್ ಈ ಕ್ರಮ ಕೈಗೊಂಡಿದೆ.

ನವದೆಹಲಿ, ಮಾರ್ಚ್ 25: ಆದ್ಯತಾ ವಲಯಗಳಲ್ಲಿ ನೀಡಲಾಗುವ ಸಾಲಗಳಿಗೆ (Priority Sector Lending- PSL loans) ಬ್ಯಾಂಕುಗಳು ವಿಪರೀತ ಶುಲ್ಕಗಳನ್ನು (Excessive charges) ಹೇರುವಂತಿಲ್ಲ ಎಂದು ಆರ್ಬಿಐ ಸ್ಪಷ್ಟಪಡಿಸಿದೆ. ಅದರಲ್ಲೂ 50,000 ರೂವರೆಗಿನ ಸಣ್ಣ ಸಾಲಗಳಿಗೆ ಶುಲ್ಕಗಳ ಹೊರೆಯಾಗಬಾರದು ಎಂದು ರಿಸರ್ವ್ ಬ್ಯಾಂಕ್ ಬಹಳ ಸ್ಪಷ್ಟವಾಗಿ ಹೇಳಿದೆ. ಬಡ್ಡಿ ಮತ್ತು ಪ್ರೋಸಸಿಂಗ್ ಶುಲ್ಕ ಅಲ್ಲದೇ ಬ್ಯಾಂಕುಗಳು ಅಡ್ಮಿನಿಸ್ಟ್ರೇಶನ್ ಫೀಸ್, ಸರ್ವಿಸ್ ಫೀಸ್, ಇನ್ಸ್ಫೆಕ್ಷನ್ ಫೀಸ್ ಇತ್ಯಾದಿ ಶುಲ್ಕಗಳನ್ನು ವಿಧಿಸಬಹುದು. ಈ ಹೆಚ್ಚುವರಿ ಶುಲ್ಕಗಳನ್ನು ಸಣ್ಣ ಸಾಲಗಳಿಗೆ ವಿಧಿಸಬೇಡಿ ಎಂಬುದು ಆರ್ಬಿಐ ಮಾಡಿರುವ ಅಪ್ಪಣೆ.
ಆದ್ಯತಾ ವಲಯಗಳಲ್ಲಿನ ಸಣ್ಣ ಸಾಲಗಳಿಗೆ ಸಂಬಂಧಿಸಿದಂತೆ ಆರ್ಬಿಐ ಈ ಆದೇಶ ನೀಡಿದೆ. ಇಲ್ಲಿ ಕೃಷಿ ಸಾಲ, ಎಂಎಸ್ಎಂಇ ಸಾಲ, ರಫ್ತು ಉದ್ದಿಮೆಗಳಿಗೆ ಸಾಲ, ಶಿಕ್ಷಣ ಸಾಲ, ಗೃಹಸಾಲ, ನವೀಕರಣ ಇಂಧನ ಯೋಜನೆಗಳಿಗೆ ಸಾಲ, ದಲಿತರಿಗೆ ಸಾಲ, ಸಣ್ಣ ರೈತರಿಗೆ ಸಾಲ, ಕುಶಲಕರ್ಮಿಗಳಿಗೆ ಸಾಲ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಮುಂತಾದವು ಆದ್ಯತಾ ವಲಯಗಳ ಸಾಲಗಳ ಅಡಿ ಬರುತ್ತವೆ.
ಇದನ್ನೂ ಓದಿ: ಸರ್ಕಾರದಿಂದ ಎಸ್ಯುಸಿ ದರ ಮನ್ನಾ ಸಾಧ್ಯತೆ; ಏರ್ಟೆಲ್, ಜಿಯೋ, ವೊಡಾಫೋನ್ಗೆ ಸಾವಿರಾರು ಕೋಟಿ ರೂ ಉಳಿತಾಯ
ಎನ್ಬಿಎಫ್ಸಿಗಳಲ್ಲಿ ಚಿನ್ನಾಭರಣ ಅಡಮಾನ ಇಟ್ಟು ಪಡೆಯಲಾದ ಸಾಲಗಳನ್ನು ಬ್ಯಾಂಕುಗಳು ವರ್ಗಾಯಿಸಿಕೊಂಡರೆ, ಅಂಥವು ಆದ್ಯತಾ ವಲಯದ ಸಾಲವಾಗಿ ಪರಿಗಣಿಸಲಾಗುವುದಿಲ್ಲ ಎಂದು ಆರ್ಬಿಐ ಸ್ಪಷ್ಟಪಡಿಸಿದೆ. ಹಾಗೆಯೇ, ದೊಡ್ಡ ಕಾರ್ಪೊರೇಟ್ ಸಾಲ, ಪರ್ಸನಲ್ ಲೋನ್, ಗೋಲ್ಡ್ ಲೋನ್, ಕಾರ್ ಲೋನ್, ಐಷಾರಾಮಿ ಗೃಹ ಸಾಲ ಮೊದಲಾದವನ್ನು ಆದ್ಯತಾ ವಲಯ ಸಾಲಗಳೆಂದು ಪರಿಗಣಿಸಲಾಗುವುದಿಲ್ಲ.
ಆದ್ಯತಾ ವಲಯದ ಸಾಲಗಳಿಗೆ ಬ್ಯಾಂಕುಗಳು ಆದ್ಯತೆ ನೀಡಬೇಕು, ಇಲ್ಲದಿದ್ದರೆ…
ಬ್ಯಾಂಕುಗಳ ಶೇ. 40ರಷ್ಟು ಸಾಲಗಳು ಆದ್ಯತಾ ವಲಯಗಳಲ್ಲಿ ವಿತರಣೆ ಆಗಿರಬೇಕು ಎನ್ನುವ ಗುರಿಯನ್ನು ಆರ್ಬಿಐ ನೀಡಿದೆ. ಸಣ್ಣ ಉದ್ದಿಮೆ, ಕೃಷಿ, ಮೂಲಸೌಕರ್ಯ ಇತ್ಯಾದಿ ಆದ್ಯತಾ ಕ್ಷೇತ್ರಗಳಿಗೆ ಉತ್ತೇಜನ ನೀಡಲು ಈ ನಿಯಮ ಮಾಡಲಾಗಿದೆ. ಬ್ಯಾಂಕುಗಳು ಈ ಆದ್ಯತಾ ಸಾಲದ ಗುರಿಯನ್ನು ಈಡೇರಿಸುವುದು ಅವಶ್ಯಕ. ಈ ನಿಟ್ಟಿನಲ್ಲಿ ಗುರಿ ಎಷ್ಟು ಸಾಧನೆ ಆಗಿದೆ ಎನ್ನುವ ಮಾಹಿತಿಯನ್ನು ಪ್ರತೀ ಕ್ವಾರ್ಟರ್ನಲ್ಲೂ ಸಲ್ಲಿಸಬೇಕು ಎಂದು ಆರ್ಬಿಐ ಹೇಳಿದೆ.
ಇದನ್ನೂ ಓದಿ: ಸೆಬಿ ನಿರ್ಧಾರಗಳು… ಎಫ್ಪಿಐ ವಿವರ ಸಲ್ಲಿಕೆ ಮಿತಿ ಹೆಚ್ಚಳ; ಮುಂಗಡ ಶುಲ್ಕ ಮಿತಿ ಹೆಚ್ಚಳ; ಉನ್ನತ ಮಟ್ಟದ ಸಮಿತಿ ರಚನೆ
ಹಾಗೆಯೇ, ಆದ್ಯತಾ ವಲಯದ ಸಾಲಗಳ ಗುರಿಯನ್ನು ಮುಟ್ಟಲು ಒಂದು ಬ್ಯಾಂಕು ವಿಫಲವಾಗಿದ್ದೇ ಆದಲ್ಲಿ, ಆಗ ನಬಾರ್ಡ್ ಮತ್ತಿತರ ಸಂಸ್ಥೆಗಳು ಸ್ಥಾಪಿಸಿರುವ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಂತಹ ಹಣಕಾಸು ಯೋಜನೆಗಳಿಗೆ ಫಂಡಿಂಗ್ ಒದಗಿಸಬೇಕು ಎನ್ನುವ ನಿಯಮವನ್ನು ಆರ್ಬಿಐ ರೂಪಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:01 pm, Tue, 25 March 25