ಸೆಬಿ ನಿರ್ಧಾರಗಳು… ಎಫ್ಪಿಐ ವಿವರ ಸಲ್ಲಿಕೆ ಮಿತಿ ಹೆಚ್ಚಳ; ಮುಂಗಡ ಶುಲ್ಕ ಮಿತಿ ಹೆಚ್ಚಳ; ಉನ್ನತ ಮಟ್ಟದ ಸಮಿತಿ ರಚನೆ
SEBI board key decisions: ಫಾರೀನ್ ಪೋರ್ಟ್ಫೋಲಿಯೋ ಹೂಡಿಕೆದಾರರು ಸಮಗ್ರ ಮಾಹಿತಿ ಘೋಷಣೆ ಮಾಡಲು ಇರುವ ಮಿತಿಯನ್ನು 25,000 ಕೋಟಿ ರೂನಿಂದ 50,000 ಕೋಟಿ ರೂಗೆ ಏರಿಸಲಾಗಿದೆ. ನೂತನ ಸೆಬಿ ಛೇರ್ಮನ್ ತುಹಿನ್ ಕಾಂತ ಪಾಂಡೆ ನೇತೃತ್ವದಲ್ಲಿ ನಡೆದ ಸೆಬಿ ಮಂಡಳಿ ಸಭೆಯಲ್ಲಿ ಕೆಲ ಪ್ರಮುಖ ಕ್ರಮಗಳಿಗೆ ಅನುಮೋದನೆ ಸಿಕ್ಕಿದೆ. ಸೆಬಿ ಸದಸ್ಯರ ಆಸ್ತಿಪಾಸ್ತಿ ವಿವರ, ಹಿತಾಸಕ್ತಿ ಸಂಘರ್ಷ ಪ್ರಕರಣಗಳ ಪರಾಮರ್ಶೆಗೆ ಉನ್ನತ ಮಟ್ಟದ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

ನವದೆಹಲಿ, ಮಾರ್ಚ್ 24: ಭಾರತದಲ್ಲಿ ಹೂಡಿಕೆ ಮಾಡುವ ವಿದೇಶೀ ಪೋರ್ಟ್ಫೋಲಿಯೋ ಇನ್ವೆಸ್ಟರ್ಗಳಿಗೆ (ಎಫ್ಪಿಐ) ಗ್ರ್ಯಾನುಲಾರ್ ಡಿಸ್ಕ್ಲೋಶರ್ ಮಾಡಬೇಕಾದ ಮಿತಿಯನ್ನು (Granular disclosure threshold) 25,000 ಕೋಟಿ ರೂನಿಂದ 50,000 ಕೋಟಿ ರೂಗೆ ಏರಿಸಲಾಗಿದೆ. ಷೇರು ಮಾರುಕಟ್ಟೆಯ ನಿಯಂತ್ರಕ ಸಂಸ್ಥೆಯಾದ ಸೆಬಿಯ ಮಂಡಳಿ ಮಾರ್ಚ್ 24ಕ್ಕೆ ಈ ನಿಯಮ ಬದಲಾವಣೆಗೆ ಅನುಮೋದನೆ ನೀಡಿದೆ. ಈ ಕ್ರಮದಿಂದ ವಿದೇಶೀ ಹೂಡಿಕೆದಾರರಿಗೆ (FPI- Foreign Portfolio Investors) ಅನುಕೂಲವಾಗಲಿದೆ. ವಿದೇಶೀ ಹೂಡಿಕೆಗಳಿಗೆ ಪುಷ್ಟಿ ಸಿಗುವ ನಿರೀಕ್ಷೆ ಇದೆ. ‘ಕ್ಯಾಷ್ ಈಕ್ವಿಟಿ ಮಾರ್ಕೆಟ್ನಲ್ಲಿ ಟ್ರೇಡಿಂಗ್ ಪ್ರಮಾಣ 2022-23ಕ್ಕೆ ಹೋಲಿಸಿದರೆ 2024-25ರಲ್ಲಿ ಬಹಳ ಹೆಚ್ಚಿದೆ. ಆಗ ನಿಗದಿ ಮಾಡಿದ್ದ ಗ್ರ್ಯಾನುಲಾರ್ ಡಿಸ್ಕ್ಲೋಷರ್ ಮಿತಿಯನ್ನು ಹೆಚ್ಚಿಸಬೇಕೆನ್ನುವ ಪ್ರಸ್ತಾಪಕ್ಕೆ ಮಂಡಳಿಯು ಅನುಮೋದನೆ ನೀಡಿದೆ’ ಎಂದು ಸೆಬಿ ಹೇಳಿದೆ.
ಏನಿದು ಗ್ರ್ಯಾನುಲಾರ್ ಡಿಸ್ಕ್ಲೋಶರ್?
ಗ್ರಾನುಲಾರ್ ಡಿಸ್ಕ್ಲೋಶರ್ ಎಂಬುದು ಎಫ್ಪಿಐಗಳಿಗೆ ರೂಪಿಸಲಾಗಿರುವ ಒಂದು ನಿಯಮ. ಹಣಕಾಸು ಮಾರುಕಟ್ಟೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಇದನ್ನು ತರಲಾಗಿದೆ. ಎಫ್ಪಿಐಗಳು ತಮ್ಮ ಮಾಲಕತ್ವ ಯಾರದ್ದು, ತಮ್ಮ ಹೂಡಿಕೆಗಳಿಂದ ಯಾರಿಗೆ ಲಾಭ, ಎಲ್ಲೆಲ್ಲಿ ಹೂಡಿಕೆ ಮಾಡಲಾಗಿದೆ ಇತ್ಯಾದಿ ಸಮಗ್ರ ವಿವರ ಸಲ್ಲಿಸುವುದನ್ನೇ ಗ್ರ್ಯಾನುಲಾರ್ ಡಿಸ್ಕ್ಲೋಶರ್ ಎನ್ನುವುದು.
2022-23ರಲ್ಲಿ ಈ ನಿಯಮ ತರಲಾಯಿತು. 25,000 ಕೋಟಿ ರೂಗಿಂತ ಹೆಚ್ಚಿನ ಮೊತ್ತ ಹೂಡಿಕೆ ಮಾಡಿರುವ ಎಫ್ಪಿಐಗಳು ಈ ಗ್ರ್ಯಾನುಲಾರ್ ಡಿಸ್ಕ್ಲೋಷರ್ ಮಾಡಬೇಕೆನ್ನಲಾಗಿತ್ತು. ಈಗ ಅದನ್ನು 50,000 ಕೋಟಿ ರೂಗೆ ಏರಿಸಲಾಗಿದೆ. ಅಂದರೆ, ಐವತ್ತು ಸಾವಿರ ಕೋಟಿ ರೂಗಿಂತ ಹೆಚ್ಚಿನ ಹೂಡಿಕೆಗಳನ್ನು ಮಾಡಿರುವ ವಿದೇಶೀ ಹೂಡಿಕೆದಾರರು ಈ ಸಮಗ್ರ ವಿವರದ ವರದಿ ಸಲ್ಲಿಸುವ ಕಟ್ಟುಪಾಡು ಇರುತ್ತದೆ.
ಇದನ್ನೂ ಓದಿ: ಠೇವಣಿ, ಡಿವಿಡೆಂಡ್, ಬಾಡಿಗೆ ಇತ್ಯಾದಿ ಆದಾಯಗಳಿಗೆ ಹೊಸ ಟಿಡಿಎಸ್ ದರ; ಏಪ್ರಿಲ್ 1ರಿಂದ ಜಾರಿ
ಸೆಬಿ ಸದಸ್ಯರ ಹಿತಾಸಕ್ತಿ ಸಂಘರ್ಷ ಪ್ರಕರಣ ಪರಾಮರ್ಶೆಗೆ ಉನ್ನತ ಮಟ್ಟದ ಸಮಿತಿ
ಸೆಬಿಯ ಸದಸ್ಯರು ಮತ್ತು ಅಧಿಕಾರಿಗಳ ಹಿತಾಸಕ್ತಿ ಸಂಘರ್ಷ ಪ್ರಕರಣಗಳಿದ್ದರೆ ಮತ್ತು ಅವರು ತಮ್ಮ ಆಸ್ತಿ, ಹೂಡಿಕೆ, ಸಾಲ ಇತ್ಯಾದಿ ಘೋಷಣೆಗಳನ್ನು ಪರಾಮರ್ಶಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ಸ್ಥಾಪಿಸಲು ಸೆಬಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಹಿಂದಿನ ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಅವರ ವಿರುದ್ಧ ಇದೇ ರೀತಿಯ ಗುರುತರ ಆರೋಪಗಳು ಬಂದ ಹಿನ್ನೆಲೆಯಲ್ಲಿ ಸೆಬಿಯ ಈ ಕ್ರಮ ಗಮನಾರ್ಹ ಎನಿಸಿದೆ. ನೂತನ ಸೆಬಿ ಛೇರ್ಮನ್ ತುಹಿನ್ ಕಾಂತ ಪಾಂಡೆ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿರುವುದು ಸ್ಪಷ್ಟವಾಗಿದೆ.
ಈ ಪ್ರಸ್ತಾಪಿತ ಉನ್ನತ ಮಟ್ಟದ ಸಮಿತಿಯಲ್ಲಿ ವಿವಿಧ ವಲಯಗಳ ತಜ್ಞರು ಇರಲಿದ್ದಾರೆ. ಯಾರ್ಯಾರು ಈ ಸಮಿತಿಯಲ್ಲಿ ಇರುತ್ತಾರೆ ಎಂಬುದನ್ನು ಸದ್ಯದಲ್ಲೇ ಬಹಿರಂಗಪಡಿಸುವ ನಿರೀಕ್ಷೆ ಇದೆ. ಈ ಸಮಿತಿ ರಚನೆ ಆದ ಬಳಿಕ ಮೂರು ತಿಂಗಳಲ್ಲಿ ಅದು ತನ್ನ ಶಿಫಾರಸುಗಳನ್ನು ಸೆಬಿ ಮಂಡಳಿಗೆ ನೀಡುತ್ತದೆ.
ಇದನ್ನೂ ಓದಿ: 2,000 ರೂ ಒಳಗಿನ ಯುಪಿಐ ಪಾವತಿ: 1,500 ಕೋಟಿ ರೂ ಇನ್ಸೆಂಟಿವ್ ಸ್ಕೀಮ್ಗೆ ಸಂಪುಟ ಅನುಮೋದನೆ; ಏನಿದು ಯೋಜನೆ? ಯಾರಿಗೆ ಅನುಕೂಲ?
ಹೂಡಿಕೆ ಸಲಹೆಗಾರರಿಗೆ ಒಂದು ವರ್ಷದವರೆಗೆ ಮುಂಗಡ ಶುಲ್ಕ ಪಡೆಯಲು ಅವಕಾಶ
ಮತ್ತೊಂದು ಮಹತ್ವದ ನಿರ್ಧಾರದಲ್ಲಿ ಸೆಬಿ ಮಂಡಳಿಯು ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ ಮತ್ತು ರಿಸರ್ಚ್ ಅನಾಲಿಸ್ಟ್ಗಳಿಗೆ ಹೆಚ್ಚು ಮುಂಗಡ ಶುಲ್ಕ ಪಡೆಯಲು ಅವಕಾಶ ಕೊಟ್ಟಿದೆ. ಇವರುಗಳು ಒಂದು ವರ್ಷದವರೆಗೆ ಅಡ್ವಾನ್ಸ್ ಫೀಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಸದ್ಯ ಇರುವ ನಿಯಮಗಳ ಪ್ರಕಾರ ಹೂಡಿಕೆ ಸಲಹೆಗಾರರು ಎರಡು ಕ್ವಾರ್ಟರ್ಗಳವರೆಗೆ (6 ತಿಂಗಳು) ಮುಂಗಡವಾಗಿ ಶುಲ್ಕ ಪಡೆಯಬಹುದು. ಇನ್ನು, ಸಂಶೋಧನಾ ವಿಶ್ಲೇಷಕರು ಅಥವಾ ರಿಸರ್ಚ್ ಅನಾಲಿಸ್ಟ್ಗಳು ಒಂದು ಕ್ವಾರ್ಟರ್ವರೆಗೆ (3 ತಿಂಗಳು) ಮಾತ್ರ ಅಡ್ವಾನ್ಸ್ ಫೀಸ್ ಸಂಗ್ರಹಿಸಬಹುದು. ಈಗ ಬದಲಾದ ನಿಯಮದಲ್ಲಿ ಹೂಡಿಕೆ ಸಲಹೆಗಾರರು ಮತ್ತು ರಿಸರ್ಚ್ ಅನಾಲಿಸ್ಟ್ಗಳಿಬ್ಬರೂ ಕೂಡ ಒಂದು ವರ್ಷ ಮುಂಗಡವಾಗಿ ಶುಲ್ಕ ಪಡೆಯುವ ಅವಕಾಶ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:54 pm, Mon, 24 March 25